ಸಾಮಾಜಿಕ ನ್ಯಾಯ ಎಂದು ಹೇಳಿಕೊಂಡು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೀರ್ ಸಾದಕ್ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಆರೋಪಿಸಿದರು.
ಮೈಸೂರು (ಅ.28): ಸಾಮಾಜಿಕ ನ್ಯಾಯ ಎಂದು ಹೇಳಿಕೊಂಡು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೀರ್ ಸಾದಕ್ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತರು ಮತ್ತು ಹಿಂದುಳಿದವರನ್ನು ತುಳಿಯುತ್ತ ಬಂದ ಸಿದ್ದರಾಮಯ್ಯ ಅವರು, ಮೀರ್ ಸಾದಕ್‌ತನ ಪ್ರದರ್ಶಿಸಿದ್ದಾರೆ. ಹಿಂದುಳಿದ ವರ್ಗಗಳ ನಾಯಕರ ಬಗ್ಗೆ ಅಸೂಯೆ ಪಡುವ ಅವರು ನನ್ನನ್ನು ದಡ್ಡ, ಪೆದ್ದ ಎಂದು ಹೇಳಿದ್ದಾರೆ. ಅವರ ಮಾತಿಗೆ ಹೇಗೆ ಪ್ರತಿಕ್ರಿಯಿಸಬೇಕು ಗೊತ್ತಾಗುತ್ತಿಲ್ಲ. ಒಟ್ಟಾರೆ ಸಿದ್ದರಾಮಯ್ಯ ಅವಕಾಶವಾದಿ ರಾಜಕೀಯ ಮಾಡಿಕೊಂಡು ಬಂದಿದ್ದಾರೆ ಎಂದರು.
ದಲಿತ ರಾಜಕಾರಣಿಗಳಾದ ಎಂ.ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್, ವಿ. ಶ್ರೀನಿವಾಸಪ್ರಸಾದ್, ಹಿಂದುಳಿದ ವರ್ಗದ ಎಚ್. ವಿಶ್ವನಾಥ್ ಅವರನ್ನು ತುಳಿಯುತ್ತಿದ್ದಾರೆ. ರಾಯಚೂರಿನಲ್ಲಿ ಗೊಲ್ಲ ಸಮುದಾಯದವರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ಬಂದಾಗ ಅವಕಾಶ ನೀಡದೆ ಕಳುಹಿಸಿದ್ದಾರೆ. ಹಿಂದುಳಿದ ವರ್ಗದವರಿಗೆ ನ್ಯಾಯ ಕೊಡಿಸಲು ಸಾಧ್ಯವಾಗದ ಇವರು ಬೊಬ್ಬೆ ಮಾತನಾಡುತ್ತಿದ್ದಾರೆ. ಪ.ಜಾತಿ, ಪ.ಪಂಗಡಕ್ಕೆ ಇತರೆ ಜಾತಿಯಿಂದ ಸೇರಿಸುವ ಮತ್ತು ಒಳ ಮೀಸಲಾತಿ ನೀಡುವ ವಿಷಯದಲ ಕುಲಶಾಸ್ತ್ರೀಯ ಅಧ್ಯಯನ ನಡೆಸಿ ವರದಿ ಪಡೆಯುವ ತನಕ ಯಾವುದೇ ತೀರ್ಮಾನ ಕೈಗೊಳ್ಳಲಾಗದು ಎಂದು ಹೇಳಿದರು.
ನ.20ಕ್ಕೆ ಬಳ್ಳಾರಿಯಲ್ಲಿ ಬಿಜೆಪಿ ಬೃಹತ್ ಎಸ್‌ಟಿ ಸಮಾವೇಶ: ಸಚಿವ ಶ್ರೀರಾಮುಲು
ಒಳ ಮೀಸಲಾತಿಯ ವಿಚಾರದಲ್ಲಿ ಸರ್ಕಾರ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ. ಮೊದಲು ಕುಲ ಶಾಸ್ತ್ರೀಯ ಅಧ್ಯಯನದ ವರದಿ ಬರಬೇಕು. ನಂತರ ತೀರ್ಮಾನಿಸಲಾಗುವುದು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಹರ್ಷಿ ವಾಲ್ಮೀಕಿ ಜಯಂತಿ, ಸರ್ಕಾರಿ ರಜಾ ದಿನವನ್ನಾಗಿ ಘೋಷಿಸುವ ಜತೆಗೆ ಪ. ವರ್ಗಗಳ ಕಲ್ಯಾಣ ಸಚಿವಾಲಯ ಸ್ಥಾಪಿಸಲಾಯಿತು. ಪರಿವಾರ, ತಳವಾರ ಸಮುದಾಯವನ್ನು ಪ.ಪಂಗಡಕ್ಕೆ ಸೇರಿಸಲಾಯಿತು. ಅಂತೆಯೇ ಮೀಸಲಾತಿ ಪ್ರಮಾಣವನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಲಾಯಿತು. ಇದು ರಾಜಕೀಯವಾಗಿ ಐತಿಹಾಸಿಕ ತೀರ್ಮಾನ ಎಂದು ಅವರು ಬಣ್ಣಿಸಿದರು.
ಮುಂದೆ ರಾಜಕೀಯದಲ್ಲಿ ಇರ್ತೇನೋ, ಇಲ್ವೋ..?: ಸಚಿವ ಶ್ರೀರಾಮುಲು
ಹಿಂದುಳಿದ ವರ್ಗದ ನಾಯಕ ಎಂದು ಬೊಬ್ಬೆ ಹೊಡೆಯದೆ, ಕಾಲಾಹರಣ ಮಾಡದೆ, ಇಚ್ಛಾಶಕ್ತಿ ಪ್ರದರ್ಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರದ್ದು ಐತಿಹಾಸಿಕ ನಿಲುವು. ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಏಕ ಸದಸ್ಯ ಆಯೋಗ ರಚಿಸಿದ್ದು ಸಮ್ಮಿಶ್ರ ಸರ್ಕಾರದ, ಅದನ್ನು ಮುಂದುವರೆಸಿದ್ದು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಂದರು. ಆಯೋಗ ನೀಡಿದ ವರದಿ ಅನುಷ್ಠಾನಗೊಳಿಸಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಎಂಬುದನ್ನು ಸಿದ್ದರಾಯ್ಯ ಅರಿಯಬೇಕು ಎಂದರು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮೇಯರ್ ಶಿವಕುಮಾರ್, ಜಂಗಲ್ ಲಾಡ್ಜಸ್ ಮಾಜಿ ಅಧ್ಯಕ್ಷ ಎಂ. ಅಪ್ಪಣ್ಣ ಇದ್ದರು.