ಬಳ್ಳಾರಿ: ಗಣಿ ನಾಡಲ್ಲಿ ಕಾಂಗ್ರೆಸ್‌ ಟಿಕೆಟ್‌ಗೇ ಹೆಚ್ಚು ಕಾದಾಟ..!

By Kannadaprabha News  |  First Published Dec 10, 2022, 12:00 AM IST

ಬಿಜೆಪಿಯಲ್ಲಿ ಸ್ಪರ್ಧಿಗಳು ಈಗಾಗಲೇ ಬಹುತೇಕ ನಿಶ್ಚಿತ, ಪ್ರಮುಖ ನಾಯಕರಿಲ್ಲದೆ ಬಡವಾದ ಜೆಡಿಎಸ್‌, ಟಿಕೆಟ್‌ಗಿಲ್ಲ ಆಸಕ್ತಿ, ಬಳ್ಳಾರಿ ಗ್ರಾಮೀಣದಿಂದ ಶ್ರೀರಾಮುಲು ಸ್ಪರ್ಧಿಸುವ ವದಂತಿ, ರಾಮುಲುಗೆ ಟಿಕೆಟ್‌ ಸಿಗದಿದ್ದರೆ ಸಣ್ಣ ಫಕೀರಪ್ಪ ಆಕಾಂಕ್ಷಿ. 


ಮಂಜುನಾಥ ಕೆ.ಎಂ

ಬಳ್ಳಾರಿ(ಡಿ.10): 1999ರಲ್ಲಿ ಸೋನಿಯಾ ಗಾಂಧಿ ಹಾಗೂ ಸುಷ್ಮಾ ಸ್ವರಾಜ್‌ ನಡುವಿನ ಸ್ಪರ್ಧೆಯಿಂದಾಗಿ ರಾಷ್ಟ್ರದ ಗಮನ ಸೆಳೆದಿದ್ದ ಬಳ್ಳಾರಿ ಜಿಲ್ಲೆ ಗಣಿದಣಿಗಳ ರಾಜಕಾರಣಕ್ಕೆ ಹೆಸರುವಾಸಿ. ಒಂದು ಕಾಲದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಜಿದ್ದಾಜಿದ್ದಿಗೆ ಕಾರಣವಾಗುತ್ತಿದ್ದ ಬಳ್ಳಾರಿಯಲ್ಲಿ ಜೆಡಿಎಸ್‌ ನಿಧಾನವಾಗಿ ಮೂಲೆಗೆ ಸರಿದು ಅದರ ಜಾಗವನ್ನು ಬಿಜೆಪಿ ಆಕ್ರಮಿಸಿಕೊಂಡಿದೆ.

Tap to resize

Latest Videos

undefined

ಜಿಲ್ಲೆಯಲ್ಲಿ ಜೆಡಿಎಸ್‌ ಸಂಘಟನಾತ್ಮಕವಾಗಿ ಸೊರಗಿದೆ. ಗಣಿ ಧಣಿ ಜನಾರ್ದನ ರೆಡ್ಡಿ, ಶ್ರೀರಾಮುಲು ಅವರಿಂದಾಗಿ ಜಿಲ್ಲೆಯಲ್ಲೀಗ ಬಿಜೆಪಿ ಸಂಘಟನಾತ್ಮಕವಾಗಿ ಬಲಿಷ್ಠವಾಗಿದೆ. ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿದ್ದು, ಬಳ್ಳಾರಿ ನಗರ ಹೊರತುಪಡಿಸಿ ಉಳಿದವು ಪರಿಶಿಷ್ಟಪಂಗಡಕ್ಕೆ ಮೀಸಲಾಗಿವೆ. ಕಳೆದ ಚುನಾವಣೆಯಲ್ಲಿ ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಪಡೆದರೆ, ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆದ್ದು ಶಾಸಕರಾಗಿದ್ದಾರೆ. ಬಿಜೆಪಿಯಲ್ಲಿ ಸಚಿವ ಬಿ. ಶ್ರೀರಾಮುಲು, ಶಾಸಕ ಜಿ. ಸೋಮಶೇಖರ ರೆಡ್ಡಿ ವರ್ಚಸ್ಸಿನ ನಾಯಕರು ಎನಿಸಿಕೊಂಡಿದ್ದರೆ, ಕಾಂಗ್ರೆಸ್‌ನಲ್ಲಿ ಮಾಜಿ ಎಂಎಲ್‌ಸಿ ಕೆ.ಸಿ.ಕೊಂಡಯ್ಯ, ಮಾಜಿ ಸಚಿವ ಎಂ.ದಿವಾಕರಬಾಬು, ಗ್ರಾಮೀಣ ಶಾಸಕ ನಾಗೇಂದ್ರ ಪ್ರಮುಖ ರಾಜಕೀಯ ನಾಯಕರು. ದಲಿತ, ವಾಲ್ಮೀಕಿ, ಲಿಂಗಾಯತ ಹಾಗೂ ಕುರುಬ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ದಲಿತ ಮತಗಳು ನಿರ್ಣಾಯಕ ಎನಿಸಿವೆ.

ಜನಾರ್ಧನ ರೆಡ್ಡಿ ರಾಜಕೀಯ ಎಂಟ್ರಿಗೆ ಭಾರಿ ಮುನ್ನಡೆ: 4 ಕೋರ್ಟ್ ಕೇಸ್‌ ರದ್ದು

ಬಳ್ಳಾರಿ ನಗರ ಕ್ಷೇತ್ರ: ಕಾಂಗ್ರೆಸ್‌ನಲ್ಲಿ ಟಿಕೆಟ್‌ ಪೈಪೋಟಿ

ಗಣಿದಣಿ ಜನಾರ್ದನ ರೆಡ್ಡಿ ಅವರ ಸೋದರ, ಬಿಜೆಪಿಯ ಜಿ.ಸೋಮಶೇಖರ ರೆಡ್ಡಿ ಬಳ್ಳಾರಿ ನಗರ ಕ್ಷೇತ್ರದ ಹಾಲಿ ಶಾಸಕರು. ಈ ಬಾರಿಯ ಚುನಾವಣೆಯಲ್ಲಿ ಈವರೆಗೆ ಸೋಮಶೇಖರ ರೆಡ್ಡಿ ಹೊರತುಪಡಿಸಿ ಬಿಜೆಪಿಯಲ್ಲಿ ಬೇರಿನ್ಯಾವ ಆಕಾಂಕ್ಷಿಗಳ ಹೆಸರೂ ಕೇಳಿ ಬರುತ್ತಿಲ್ಲ. ಹೀಗಾಗಿ ಸೋಮಶೇಖರ ರೆಡ್ಡಿ ಅವರೇ ಬಿಜೆಪಿಯಿಂದ ಸ್ಪರ್ಧಿಸುವುದು ಖಚಿತ. ಆದರೆ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ಪುತ್ರ ಭರತ್‌ ರೆಡ್ಡಿ, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪನವರ ಪುತ್ರ ಅಲ್ಲಂ ಪ್ರಶಾಂತ್‌, ಡಿ.ಕೆ.ಶಿವಕುಮಾರ್‌ ಆಪ್ತ ಜೆ.ಎಸ್‌.ಆಂಜಿನೇಯಲು, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಮಹ್ಮದ್‌ ರಫೀಕ್‌, ಉದ್ಯಮಿ ಸುನೀಲ್‌ ರಾವೂರ್‌ ಸೇರಿದಂತೆ 15ಕ್ಕೂ ಹೆಚ್ಚು ಆಕಾಂಕ್ಷಿಗಳು ಪಕ್ಷದಲ್ಲಿದ್ದಾರೆ. ಜೆಡಿಎಸ್‌ನಿಂದ ಈವರೆಗೆ ಯಾವುದೇ ಹೆಸರು ಹೊರಬಿದ್ದಿಲ್ಲ. ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ನೋಡಿಕೊಂಡು ಜೆಡಿಎಸ್‌ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರೀಕ್ಷೆ ಇದೆ.

ಸಂಡೂರು ಕ್ಷೇತ್ರ: ನಾಲ್ಕನೇ ಗೆಲುವಿನ ತವಕದಲ್ಲಿರೋ ತುಕಾರಾಂ

ಸಂಡೂರು ವಿಧಾನಸಭಾ ಕ್ಷೇತ್ರದ ಮತದಾರರು ಸಂಪ್ರದಾಯದಂತೆ ಕಾಂಗ್ರೆಸ್‌ ಕೈ ಹಿಡಿಯುತ್ತಲೇ ಬಂದಿದ್ದಾರೆ. 2008, 2013 ಹಾಗೂ 2018ರಲ್ಲಿ ಈ.ತುಕಾರಾಂ ಅವರು ಕಾಂಗ್ರೆಸ್‌ನಿಂದ ಸತತ ಮೂರು ಬಾರಿ ಗೆದ್ದು ಶಾಸಕರಾಗಿದ್ದಾರೆ. ಈ ಬಾರಿಯೂ ಕಾಂಗ್ರೆಸ್‌ನಿಂದ ತುಕಾರಾಂ ಹೊರತುಪಡಿಸಿ ಬೇರೆ ಯಾರದೇ ಹೆಸರು ಗಟ್ಟಿದನಿಯಲ್ಲಿ ಕೇಳುತ್ತಿಲ್ಲ. ಹೀಗಾಗಿ ಅವರೇ ಮತ್ತೊಮ್ಮೆ ಕಾಂಗ್ರೆಸ್‌ನಿಂದ ಕಣಕ್ಕಿಳಿಯುವುದು ಪಕ್ಕಾ. ಆದರೆ, ಬಿಜೆಪಿಯಿಂದ ಈ ಬಾರಿ ದಿವಾಕರ್‌, ಯಲ್ಲಪ್ಪ, ಗಂಡಿ ಮಾರೆಪ್ಪ, ಕಾಡ್‌ ರಘು ಆಕಾಂಕ್ಷಿತರು. ಇನ್ನು ಜೆಡಿಎಸ್‌ನಲ್ಲಿ ಸೋಮಪ್ಪ ಅವರು ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

ಸಿರುಗುಪ್ಪ ಕ್ಷೇತ್ರ: ಮತ್ತೆ ಬಿಜೆಪಿ-ಕಾಂಗ್ರೆಸ್‌ ನಡುವೆ ಪೈಪೋಟಿ

ಬಳ್ಳಾರಿ ಜಿಲ್ಲೆಯ ಬತ್ತದ ಸಿರಿ ಎಂದೇ ಖ್ಯಾತವಾಗಿರುವ ಸಿರುಗುಪ್ಪ ಕ್ಷೇತ್ರದಲ್ಲಿ ಈ ಹಿಂದಿನಿಂದಲೂ ಕಾಂಗ್ರೆಸ್‌ ಮೇಲುಗೈ ಸಾಧಿಸಿಕೊಂಡೇ ಬಂದಿತ್ತು. ಆದರೆ ಕಳೆದ ಚುನಾವಣೆಯಲ್ಲಿ ಕ್ಷೇತ್ರ ಬಿಜೆಪಿ ಪಾಲಾಗಿದೆ. ಬಿಜೆಪಿಯ ಎಂ.ಎಸ್‌.ಸೋಮಲಿಂಗಪ್ಪ ಕ್ಷೇತ್ರದ ಹಾಲಿ ಶಾಸಕ. ಈ ಬಾರಿ ಬಿಜೆಪಿಯಲ್ಲಿ ಸೋಮಲಿಂಗಪ್ಪ ಹೊರತಾಗಿ ಯಾವುದೇ ಪ್ರಮುಖ ಆಕಾಂಕ್ಷಿಗಳ ಹೆಸರು ಕೇಳಿಬರುತ್ತಿಲ್ಲ. ಕಾಂಗ್ರೆಸ್‌ನಲ್ಲಿ ಕಳೆದ ಬಾರಿ ಸೋಲುಂಡಿದ್ದ ಮುರಳೀಕೃಷ್ಣ, ಮಾಜಿ ಶಾಸಕ ನಾಗರಾಜ್‌, ನರೇಂದ್ರ ಸಿಂಹ, ವೀರಣ್ಣ, ಕಗ್ಗಲ್‌ ವೀರೇಶಪ್ಪ ಆಕಾಂಕ್ಷಿತರು. ಆಪ್‌ ಪಕ್ಷದಿಂದ ಕಣಕ್ಕಿಳಿಯಲು ಜಿ.ಪಂ. ಮಾಜಿ ಸದಸ್ಯ ದರಪ್ಪ ನಾಯಕ ಸಿದ್ಧರಾಗಿದ್ದಾರೆ. ಜೆಡಿಎಸ್‌ ನಡೆ ಇನ್ನೂ ನಿಗೂಢವಾಗಿದೆ.

Assembly election: ಪಿಟಿಪಿ ಹ್ಯಾಟ್ರಿಕ್‌ ಕನಸಿಗೆ ಬ್ರೇಕ್‌ ಹಾಕುವದೇ ಕಮಲ?

ಕಂಪ್ಲಿ ಕ್ಷೇತ್ರ: ಗಣೇಶ್‌- ಸುರೇಶ್‌ ಬಾಬು ಫೈಟ್‌

2004ರ ವರೆಗೆ ಕುರುಗೋಡು ವಿಧಾನಸಭಾ ಕ್ಷೇತ್ರವಾಗಿತ್ತು. ಕ್ಷೇತ್ರ ಪುನರ್‌ವಿಂಗಡಣೆಯಿಂದಾಗಿ ಈ ಕ್ಷೇತ್ರ ಕಂಪ್ಲಿ ವಿಧಾನಸಭಾ ಕ್ಷೇತ್ರವಾಗಿ ಬದಲಾಯಿತು. 2004ರ ವರೆಗೆ ಈ ಕ್ಷೇತ್ರದಲ್ಲಿ ಹೆಚ್ಚು ಬಾರಿ ಗೆಲುವು ದಾಖಲಿಸಿದವರು ಕಾಂಗ್ರೆಸ್‌ ಅಭ್ಯರ್ಥಿಗಳು. ಕಾಂಗ್ರೆಸ್‌ನ ಜೆ.ಎನ್‌.ಗಣೇಶ್‌ ಹಾಲಿ ಶಾಸಕ. ಕಳೆದ ಚುನಾವಣೆಯಲ್ಲಿ ಗಣೇಶ್‌ ವಿರುದ್ಧ ಬಿಜೆಪಿ ಅಭ್ಯರ್ಥಿ ಸುರೇಶ್‌ಬಾಬು ಸೋಲುಂಡಿದ್ದರು. ಈ ಬಾರಿ ಕಾಂಗ್ರೆಸ್‌ನಿಂದ ಗಣೇಶ್‌ ಜತೆಗೆ ಬಿ.ನಾರಾಯಣಪ್ಪ ಹಾಗೂ ರಾಜುನಾಯಕ್‌ ಕೂಡ ಆಕಾಂಕ್ಷಿತರು. ಬಿಜೆಪಿಯಿಂದ ಬಹುತೇಕ ಸುರೇಶ ಬಾಬು ಸ್ಪರ್ಧಿಸಬಹುದು. ಜೆಡಿಎಸ್‌ನಿಂದ ಈವರೆಗೆ ಯಾರೂ ಟಿಕೆಟ್‌ಗಾಗಿ ಪ್ರಮುಖರ ಹೆಸರು ಕೇಳಿಬಂದಿಲ್ಲ. ಕಾಂಗ್ರೆಸ್‌-ಬಿಜೆಪಿ ನಡುವೇ ಜಿದ್ದಾಜಿದ್ದಿ ನಡೆಯಲಿದೆ.

ಬಳ್ಳಾರಿ ಗ್ರಾಮೀಣ ಕ್ಷೇತ್ರ: ಶ್ರೀರಾಮುಲು-ನಾಗೇಂದ್ರ ಕದನ ಕುತೂಹಲ

2018ರಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬಿ.ನಾಗೇಂದ್ರ ಈ ಕ್ಷೇತ್ರದಲ್ಲಿ ಗೆದ್ದು ಶಾಸಕರಾಗಿದ್ದಾರೆ. ಸದ್ಯ ಈ ಬಾರಿಯ ಚುನಾವಣೆಯಲ್ಲಿ ಹಾಲಿ ಶಾಸಕ ಬಿ.ನಾಗೇಂದ್ರ, ಅಸುಂಡಿ ಹೊನ್ನೂರಪ್ಪ ಕಾಂಗ್ರೆಸ್‌ನ ಪ್ರಬಲ ಆಕಾಂಕ್ಷಿಗಳು. ಬಿಜೆಪಿಯಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರ ಹೆಸರು ಕೇಳಿ ಬರುತ್ತಿದೆಯಾದರೂ ಅದಿನ್ನೂ ಖಚಿತವಾಗಿಲ್ಲ. 2008ರಲ್ಲಿ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಅಸ್ತಿತ್ವ ಪಡೆದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಶ್ರೀರಾಮುಲು ಗೆಲುವು ಸಾಧಿಸಿದ್ದರಲ್ಲದೆ, 2013ರಲ್ಲಿ ಬಿಎಸ್‌ಆರ್‌ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರು. ಆ ಬಳಿಕ 2018ರ ಚುನಾವಣೆಯಲ್ಲಿ ಅವರು ಚಿತ್ರದುರ್ಗದ ಮೊಳಕಾಲ್ಮುರು ಮತ್ತು ಬಾಗಲಕೋಟೆಯ ಬಾದಾಮಿ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಬಾದಾಮಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸೋತು ಮೊಳಕಾಲ್ಮುರಲ್ಲಿ ಗೆದ್ದಿದ್ದರು. ಶ್ರೀರಾಮುಲು ಅವರು ಕ್ಷೇತ್ರದಲ್ಲಿ ಕಳೆದ ಕೆಲ ಸಮಯದಿಂದ ಹೆಚ್ಚಾಗಿ ಓಡಾಡುತ್ತಿದ್ದು, ಈ ಬಾರಿ ಅವರೇ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಒಂದು ವೇಳೆ ಶ್ರೀರಾಮುಲಿಗೆ ಟಿಕೆಟ್‌ ಕೈ ತಪ್ಪಿದರೆ, ಸಣ್ಣ ಫಕ್ಕೀರಪ್ಪ ಟಿಕೆಟ್‌ಗಾಗಿ ಎದುರು ನೋಡುತ್ತಿದ್ದಾರೆ. ಜೆಡಿಎಸ್‌ನಿಂದ ಜೋಳದರಾಶಿ ತಿಮ್ಮಪ್ಪ ಅವರ ಹೆಸರು ಟಿಕೆಟ್‌ಗಾಗಿ ಕೇಳಿಬರುತ್ತಿದೆ.

click me!