ಪ್ರಧಾನಿ ನರೇಂದ್ರ ಮೋದಿ ಮಂಗಳೂರು ಭೇಟಿ ಕರಾವಳಿ ಬಿಜೆಪಿ ಪಾಲಿಗೆ ಅಕ್ಷರಶಃ ಬೂಸ್ಟರ್ ಡೋಸ್ ಆಗಿ ಕೆಲಸ ಮಾಡಿದೆ. ಪ್ರಧಾನಿ ಮೋದಿ ಬಂದುಹೋದ ಮರುದಿನದಿಂದಲೇ ಬಿಜೆಪಿ ಮುಖಂಡರು, ಕಾರ್ಯಕರ್ತರು ಮೈಕೊಡವಿ ಎದ್ದಿದ್ದು, ನೇರವಾಗಿ ಫೀಲ್ಡ್‌ಗೆ ಇಳಿದಿದ್ದಾರೆ. ಶುಕ್ರವಾರ ಮಂಗಳೂರಿನ ಸರ್ಕಾರಿ ಕಾರ್ಯಕ್ರಮದಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ ಪದೇ ಪದೇ ಡಬಲ್ ಎಂಜಿನ್ ಸರ್ಕಾರದ ಸಾಧನೆಯನ್ನು ಪ್ರಸ್ತಾಪಿಸಿದ್ದರು
ಆತ್ಮಭೂಷಣ್
ಮಂಗಳೂರು (ಸೆ.5) : ಪ್ರಧಾನಿ ನರೇಂದ್ರ ಮೋದಿ ಮಂಗಳೂರು ಭೇಟಿ ಕರಾವಳಿ ಬಿಜೆಪಿ ಪಾಲಿಗೆ ಅಕ್ಷರಶಃ ಬೂಸ್ಟರ್ ಡೋಸ್ ಆಗಿ ಕೆಲಸ ಮಾಡಿದೆ. ಪ್ರಧಾನಿ ಮೋದಿ ಬಂದುಹೋದ ಮರುದಿನದಿಂದಲೇ ಬಿಜೆಪಿ ಮುಖಂಡರು, ಕಾರ್ಯಕರ್ತರು ಮೈಕೊಡವಿ ಎದ್ದಿದ್ದು, ನೇರವಾಗಿ ಫೀಲ್ಡ್‌ಗೆ ಇಳಿದಿದ್ದಾರೆ. ಶುಕ್ರವಾರ ಮಂಗಳೂರಿನ ಸರ್ಕಾರಿ ಕಾರ್ಯಕ್ರಮದಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ ಪದೇ ಪದೇ ಡಬಲ್ ಎಂಜಿನ್ ಸರ್ಕಾರದ ಸಾಧನೆಯನ್ನು ಪ್ರಸ್ತಾಪಿಸಿದ್ದರು. ಈ ಮೂಲಕ ಮುಂಬರುವ ಚುನಾವಣೆಗೆ ಸಜ್ಜಾಗುವಂತೆ ಪರೋಕ್ಷ ಸಂದೇಶ ರವಾನಿಸಿದ್ದರು. ಇದರ ಬೆನ್ನಿಗೇ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿ ಬೂತ್‌ಗೆ ತೆರಳಿ ‘ಪೇಜ್ ಸಮಿತಿ’ ರಚನೆಗೆ ಧುಮುಕಿದ್ದಾರೆ. ಮುಂಬರುವ ಅಸೆಂಬ್ಲಿ ಚುನಾವಣೆಗೆ ಕರಾವಳಿಯಲ್ಲಿ ಈಗಿಂದಲೇ ಪಕ್ಷ ಸಂಘಟನೆಯನ್ನು ಬಲಿಷ್ಠಗೊಳಿಸಲು ತೀರ್ಮಾನಿಸಿದ್ದಾರೆ. ಮತ್ತೊಮ್ಮೆ ಪಕ್ಷ ಸಂಘಟನೆಯ ಮಾದರಿ ಸಂದೇಶ ಇಡೀ ದೇಶಕ್ಕೆ ಕರಾವಳಿಯಿಂದ ತಲುಪುವಂತೆ ಪ್ರಯತ್ನಿಸಲಾಗುತ್ತಿದೆ.
ಏನಿದು ಪೇಜ್ ಸಮಿತಿ?:
ಕಳೆದ ಲೋಕಸಭಾ ಚುನಾವಣೆ ವೇಳೆ ಅಂದಿನ ಬಿಜೆಪಿ ಅಧ್ಯಕ್ಷ ಅಮಿತ್ ಶಾ(Amit Shash) ಸೂಚನೆ ಮೇರೆಗೆ ಗೆಲವಿಗೆ ಪೇಜ್ ಪ್ರಮುಖ್ ತಂತ್ರವನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗಿತ್ತು. ಇದು ಕರಾವಳಿಯಲ್ಲಿ ಒಂದೆರಡು ಕಡೆ ಹೊರತುಪಡಿಸಿ ಬಿಜೆಪಿ(BJP)ಗೆ ಅತ್ಯಂತ ಭರ್ಜರಿ ಗೆಲುವು ತಂದುಕೊಟ್ಟಿತ್ತು. ಈ ಬಾರಿ ಅಸೆಂಬ್ಲಿ ಚುನಾವಣೆಗೆ ಪೇಜ್ ಪ್ರಮುಖ್‌ನ್ನು ವಿಕೇಂದ್ರೀಕರಣಗೊಳಿಸಿ ಪೇಜ್ ಸಮಿತಿಯನ್ನು ರಚಿಸುವಂತೆ ವರಿಷ್ಠರು ಸೂಚನೆ ನೀಡಿದ್ದಾರೆ. ಇದು ಪ್ರತಿ ಬೂತ್‌ನಲ್ಲಿ ಬಿಜೆಪಿಗೆ ಇನ್ನಷ್ಟುಮತಗಳನ್ನು ತಂದುಕೊಡುವುದಲ್ಲದೆ, ಮತಗಳನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಲಿದೆ.
Karnataka Politics: ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಜ್ಜಾಗುವಂತೆ ಮೋದಿ ಪರೋಕ್ಷ ಸೂಚನೆ?
ಏನಿದು ಪೇಜ್ ಸಮಿತಿ ಕಲ್ಪನೆ?:
ಪೇಜ್ ಪ್ರಮುಖ್(Page Pramukh) ಎಂದರೆ ಒಂದು ಮತದಾರರ ಪಟ್ಟಿಯ ಒಂದು ಪುಟಕ್ಕೆ ಒಬ್ಬ ಪ್ರಮುಖ. ಆತ ಆ ಪಟ್ಟಿಯಲ್ಲಿರುವ ಸರಿಸುಮಾರು 30 ಮತದಾರರನ್ನು ಸಂಪರ್ಕಿಸಿ ಪಕ್ಷಕ್ಕೆ ಮತ ಹಾಕಿಸುವಂತೆ ಪ್ರಯತ್ನಿಸಬೇಕು. ಇದು ಕಳೆದ ಬಾರಿ ಬಿಜೆಪಿಯ ಯಶಸ್ವಿ ಪ್ರಯೋಗ. ಆದರೆ ಪೇಜ್ ಸಮಿತಿಯಲ್ಲಿ ಐವರು ಇರುತ್ತಾರೆ. ಇಲ್ಲಿ ಒಬ್ಬೊಬ್ಬರಿಗೆ ತಲಾ 6 ಮತದಾರರನ್ನು ಸಂಪರ್ಕಿಸುವ ಹೊಣೆ ನೀಡಲಾಗಿದೆ. ಸಾಮಾನ್ಯವಾಗಿ ಒಂದು ಅಸೆಂಬ್ಲಿ ಕ್ಷೇತ್ರದ ಪ್ರತಿಯೊಂದು ಮತಗಟ್ಟೆಯ ಮತದಾರರ ಪಟ್ಟಿಯಲ್ಲಿ 30ರಿಂದ 40ವರೆಗೆ ಪುಟಗಳಿರುತ್ತದೆ. ಒಂದು ಪುಟದಲ್ಲಿ ಸುಮಾರು 30 ಮತದಾರರು. ಇದುವರೆಗೆ ಈ 30 ಮಂದಿ ಮತದಾರರನ್ನು ಒಬ್ಬರೇ ಪೇಜ್ ಪ್ರಮುಖ್ ನೋಡಿಕೊಳ್ಳುತ್ತಿದ್ದರು. ಇನ್ನು ಪೇಜ್ ಪ್ರಮುಖ್ ಅಲ್ಲದೆ ಇತರೆ ಐದು ಮಂದಿ ಪೇಜ್ ಸಮಿತಿ ಪ್ರಮುಖರು ನೇಮಕಗೊಳ್ಳುವುದರಿಂದ ಒಟ್ಟು 30 ಮಂದಿಗೆ ತಲಾ 6 ಮಂದಿ ಮತದಾರರ ಬಗ್ಗೆ ಗಮನ ನೀಡಲಿದ್ದಾರೆ. ದ.ಕ.ಜಿಲ್ಲೆಯಲ್ಲಿ 1,861 ಬೂತ್‌ಗಳಿದ್ದು, ಎಲ್ಲ ಬೂತ್‌ಗಳ ಮತದಾರರ ಪಟ್ಟಿಗೆ ಪೇಜ್ ಸಮಿತಿ ರಚನೆ ಶೀಘ್ರವೇ ಪೂರ್ಣಗೊಳ್ಳಲಿದೆ.
ಜನತೆಗೆ ಯೋಜನೆ ತಲುಪಿಸಿ, ರಾಜಕೀಯ ಲಾಭ ಪಡೀರಿ: ಪ್ರಧಾನಿ ಮೋದಿ
ಈ ಬಾರಿ ಪೇಜ್ ಸಮಿತಿ ಮಾಡುವ ಮೂಲಕ ಬೂತ್ ಮಟ್ಟದಲ್ಲೇ ಪಕ್ಷದ ಮತವನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡಲಿದ್ದೇವೆ. ಇದಕ್ಕೆ ಈಗಾಗಲೇ ಕಾರ್ಯೋನ್ಮುಖರಾಗಿದ್ದೇವೆ. ಎಲ್ಲ ಕಡೆಗಳಿಗೆ ದ.ಕ. ಮಾದರಿಯಾಗುವಂತೆ ಸಂಘಟಿಸಲಿದ್ದೇವೆ.
-ಸುದರ್ಶನ್ ಮೂಡುಬಿದಿರೆ, ಅಧ್ಯಕ್ಷ, ದ.ಕ. ಬಿಜೆಪಿ