ಜಮ್ಮು ಕಾಶ್ಮೀರದಲ್ಲಿ ಉಗ್ರರು ತೆಪ್ಪಗಾಗಿ ಶಾಂತಿ ನೆಲೆಸಿರುವುದಕ್ಕೆ ಕಾರಣ ಮೋದಿ ಆಡಳಿತ: ವಿಜಯೇಂದ್ರ

Published : Mar 12, 2023, 07:59 AM IST
ಜಮ್ಮು ಕಾಶ್ಮೀರದಲ್ಲಿ ಉಗ್ರರು ತೆಪ್ಪಗಾಗಿ ಶಾಂತಿ ನೆಲೆಸಿರುವುದಕ್ಕೆ ಕಾರಣ ಮೋದಿ ಆಡಳಿತ: ವಿಜಯೇಂದ್ರ

ಸಾರಾಂಶ

ಆರ್ಟಿಕಲ್‌ 370 ಕಾಂಗ್ರೆಸ್‌ ಪಕ್ಷದ ಪಾಪದ ಕೂಸಾಗಿದ್ದು, ಲಕ್ಷಾಂತರ ಯೋಧರನ್ನು ಬಲಿತೆಗೆದುಕೊಂಡಿತ್ತು. ಇಂತಹ ಮಾರಕ ಕಾಯ್ದೆಯನ್ನು ರದ್ದುಗೊಳಿಸಿ, ಅಲ್ಲಿ ಶಾಂತಿಯನ್ನು ನೆಲೆಸುವಂತೆ ಮಾಡಿದ್ದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಹೇಳಿದರು.

ಶಿವಮೊಗ್ಗ (ಮಾ.12) : ಆರ್ಟಿಕಲ್‌ 370 ಕಾಂಗ್ರೆಸ್‌ ಪಕ್ಷದ ಪಾಪದ ಕೂಸಾಗಿದ್ದು, ಲಕ್ಷಾಂತರ ಯೋಧರನ್ನು ಬಲಿತೆಗೆದುಕೊಂಡಿತ್ತು. ಇಂತಹ ಮಾರಕ ಕಾಯ್ದೆಯನ್ನು ರದ್ದುಗೊಳಿಸಿ, ಅಲ್ಲಿ ಶಾಂತಿಯನ್ನು ನೆಲೆಸುವಂತೆ ಮಾಡಿದ್ದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ(Vijayendra) ಹೇಳಿದರು.

ನಗರದ ಫ್ರೀಡಂ ಪಾರ್ಕ್ನ(Freedom park shivamogga)ಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ (BJP Yuvamorcha)ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಯುವ ಸಂಕಲ್ಪ ಸಮಾವೇಶ(Youth vijayasankalpa convention)ವನ್ನು ಉದ್ಘಾಟಿಸಿ ಮಾತನಾಡಿದ ಅವ​ರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದಲೂ ನಕ್ಸಲರ ಬೆನ್ನು ಮುರಿದ್ದಾರೆ. ಈಗ ಕಾಶ್ಮೀರದ ಲಾಲ್‌ ಚೌಕ್‌(Lal Chowk in Kashmir)ನಲ್ಲಿ ರಾಹುಲ್‌ ಗಾಂಧಿ(Rahul gandhi) ಅವರು ಭಾರತ್‌ ಜೋಡೋ ಯಾತ್ರೆ(Bharat jodo yatre) ಸಮಾರೋಪವನ್ನು ಆಚರಿಸಿದ್ದಾರೆ. ಇದಕ್ಕೆ ಕಾರಣ ಪ್ರಧಾನಿ ಮೋದಿ ಎಂದರು.

ಮೋದಿಯವರ ಆಡ​ಳಿತ ಮೆಚ್ಚಿ ವಿಶ್ವವೇ ಕೊಂಡಾಡುತ್ತಿದೆ: ಕುಮಾರ ಬಂಗಾರಪ್ಪ

ಕಾಂಗ್ರೆಸ್‌ಗೆ ಇಂಥ ಸ್ಥಿತಿ ಬರಬಾರದಿತ್ತು:

‘ಆರುವ ದೀಪ ಜೋರಾಗಿ ಉರಿಯುತ್ತದೆ’ ಎಂಬಂತೆ ಕಾಂಗ್ರೆಸ್ಸಿಗರು ರಾಹುಲ್‌ಗಾಂಧಿ ಪ್ರಧಾನಿಯಾಗುವ ಹಗಲು ಕನಸು ಕಾಣುತ್ತಿದ್ದಾರೆ. 60 ವರ್ಷಕ್ಕೂ ಹೆಚ್ಚು ಕಾಲ ಅಧಿಕಾರ ಇದ್ದ ಪಕ್ಷ ಇಂದು ಅವನತಿಯತ್ತ ದಾಪುಗಾಲು ಇಟ್ಟಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ನಕ್ಸಲರು ಆಕ್ರಮಿತ ಕಾಶ್ಮೀರ ಹೋಗಿ ಹೊಕ್ಕಿಕೊಳ್ಳುವಂತೆ ಕೇರಳದ ವೈನಾಡು ಕ್ಷೇತ್ರಕ್ಕೆ ಹೋಗಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಈ ಕ್ಷೇತ್ರದಲ್ಲಿ ಶೇ.50ರಷ್ಟುಮುಸ್ಲಿಂ ಸಮುದಾಯದವರಿದ್ದಾರೆ. ಶೇ.15ರಷ್ಟುಕ್ರಿಶ್ಚಿಯನ್ಸ್‌ ಇದ್ದಾರೆ. ಇಂತಹ ಕಡೆ ಹೋಗಿ ಗೆದ್ದಿದ್ದಾರೆ. ಇಂತಹ ಸ್ಥಿತಿ ಕಾಂಗ್ರೆಸ್‌ಗೆ ಬರಬಾರದಿತ್ತು ಎಂದು ಲೇವಡಿ ಮಾಡಿದರು.

ನರೇಂದ್ರ ಮೋದಿ(PM Narendra Modi) ಪ್ರಧಾನಿಯಾದ ಬಳಿಕ ಐಐಟಿಗಳನ್ನು ಸ್ಥಾಪಿಸಿ ಹೊಸ ಶಿಕ್ಷಣ ನೀತಿಗಳ ಮೂಲಕ ಯುವಕರ ಪರವಾದ ಚಿಂತನೆ ನಡೆಸಿ, ಅನೇಕ ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ಮಾಡಿದೆ. ರಾಜ್ಯದಲ್ಲಿ ಇದರ ಫಲವಾಗಿ 8ರಿಂದ 10 ಲಕ್ಷ ಗ್ಲೋಬಲ್‌ ಇನ್‌ವೆಸ್ಟ್‌ಮೆಂಟ್‌ ಒಡಂಬಡಿಕೆ(Global Investment Pact)ಯಾಗಿದೆ. ಮುಂದಿನ ದಿನಗಳಲ್ಲಿ ಲಕ್ಷಾಂತರ ಯುವಕರಿಗೆ ಉದ್ಯೋಗ ಸಿಗಲಿದೆ. ಬುಡಸಮೇತ ಕಾಂಗ್ರೆಸ್‌ನ್ನು ಕಿತ್ತು ಹಾಕುವ ಕೆಲಸ ಜನ ಮಾಡುತ್ತಿದ್ದಾರೆ. ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಯಲ್ಲ. ತ್ರಿಬಲ್‌ ತಲಾಖ್‌ ಹೊಡೆದುಹಾಕಿ, ಮಹಿಳೆಗೆ ಸಮಾನ ಹಕ್ಕು ನೀಡಿ ಸ್ವಾಭಿಮಾನದ ಬದುಕನ್ನು ಕೊಟ್ಟಿದ್ದು ಮೋದಿ ಸರ್ಕಾರ ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರ ಜಾತಿ-ಜಾತಿಗಳ ಮಧ್ಯೆ ವಿಷಬೀಜ ಬಿತ್ತಿ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಿ ಯುವಕರನ್ನು ಅವಿದ್ಯಾವಂತರನ್ನಾಗಿಸಿ, ಬಡವರನ್ನು ಬಡವರಾಗಿಯೇ ಇರುವಂತೆ ಮಾಡಿದ್ದು ಮತ್ತು ಇಡೀ ದೇಶವನ್ನೇ ಕೊಳ್ಳೆ ಹೊಡೆದಿದ್ದು, ಕಾಂಗ್ರೆಸ್‌ ಸಾಧನೆ. ಅವರಿಂದ ನಾವು ನೈತಿಕತೆ ಪಾಠ ಕಲಿಯುವ ಅವಶ್ಯಕತೆಯಿಲ್ಲ ಎಂದರು.

ಚುನಾವಣೆ ಬಂದಾಗ ಹುಟ್ಟಿಕೊಳ್ಳುವ ಪಕ್ಷಗಳು

ಚುನಾವಣೆಗೆ ಎರಡು ತಿಂಗಳು ಬಾಕಿ ಇದೆ. ಈಗ ಕಾಂಗ್ರೆಸ್‌, ಜೆಡಿಎಸ್‌ ಪಕ್ಷದ ಕಚೇರಿಗಳಿಗೆ ಸುಣ್ಣ, ಬಣ್ಣ ಹೊಡೆಯಲಾಗುತ್ತಿದೆ. ಇವು ಚುನಾವಣೆ ಸಮೀಪದಲ್ಲಿ ಹುಟ್ಟಿಕೊಳ್ಳುವ ಪಕ್ಷಗಳು. ಚುನಾವಣೆ ಹತ್ತಿರ ಬಂದಾಗ ಪಂಚರತ್ನ ಎಂದು ಓಡುವ ಪಾರ್ಟಿ ಬಿಜೆಪಿ ಅಲ್ಲ. ವರ್ಷದ ಎಲ್ಲ ದಿನವೂ 24 ಗಂಟೆಯೂ ಕೆಲಸ ಮಾಡುವ ಪಕ್ಷ ಇದ್ದರೆ ಅದು ಬಿಜೆಪಿ ಮಾತ್ರ ಎಂದು ರಾಷ್ಟ್ರೀಯ ಬಿಜೆಪಿ ಯುವಮೋರ್ಚಾ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಪಂಚ ವರ್ಷಗಳಿಂದಲೂ ಸಾಮಾಜಿಕ, ಅಭಿವೃದ್ಧಿ ಮಾಡುವ ಪಕ್ಷ ಬಿಜೆಪಿಯಾಗಿದ್ದು, ಬಿಜೆಪಿ ಚುನಾವಣೆ ಇರಲಿ ಬಿಡಲಿ ಜನರ ಮಧ್ಯೆ ಹೋಗಿ ಜನಪರ ಕೆಲಸವನ್ನು ಮಾಡುತ್ತ ಇರುತ್ತದೆ. ರಾಜ್ಯದ ಯಾವ ತಾಲೂಕಿಗೆ ಹೋದರೂ ಡಬಲ್‌ ಎಂಜಿನ್‌ ಸರ್ಕಾರದಿಂದ ಹಿಂದೆಂದೂ ಕಾಣದ ಅಭಿವೃದ್ಧಿಯಾಗಿದೆ. ಸ್ವಾತಂತ್ರ್ಯ ಬಂದು 70 ವರ್ಷಗಳಲ್ಲಿ ಆಗದ ಅಭಿವೃದ್ಧಿಯನ್ನು ಕೇವಲ 8 ವರ್ಷದಲ್ಲಿ ಮೋದಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡುತ್ತಾ ಬಂದಿದೆ. ರಸ್ತೆ, ರೈಲ್ವೆ, ವಿಮಾನ ಸೇರಿದಂತೆ ಎಲ್ಲಾ ಸಂಪರ್ಕ ಕ್ರಾಂತಿಯನ್ನು ಮಾಡಿ ಭಾರತ್‌ ಜೋಡೊ ಮಾಡಿದ ಹೆಗ್ಗಳಿಕೆ ಬಿಜೆಪಿ ಸರ್ಕಾರದ್ದು ಎಂದು ತಿಳಿಸಿದರು.

ವಿಮಾಣ ನಿಲ್ದಾಣದಲ್ಲಿ ಕರ್ನಾಟಕ ನಂ.1:

ದೇಶದಲ್ಲೇ ಅತಿ ಹೆಚ್ಚು ವಿಮಾನ ನಿಲ್ದಾಣಗಳು ಕರ್ನಾಟಕ ರಾಜ್ಯದಲ್ಲಿ ಆಗುತ್ತಿವೆ. 150-200 ಕಿ.ಮೀ. ದೂರಕ್ಕೊಂದು ಎಂಬಂತೆ ಕರ್ನಾಟಕದಲ್ಲಿ ವಿಮಾನ ನಿಲ್ದಾಣ ಇವೆ. ಮುಂದಿನ ದಿನಗಳಲ್ಲಿ ಇವುಗಳ ಸಂಖ್ಯೆ ಇನ್ನಷ್ಟುಹೆಚ್ಚಾಗಲಿವೆ. ರೈತರಿಗೆ ಕೇಂದ್ರದ 6 ಸಾವಿರ ಮತ್ತು ರಾಜ್ಯದ 4 ಸಾವಿರ ಸೇರಿಸಿ ನೀಡಿದ ಮೊಟ್ಟಮೊದಲ ರಾಜ್ಯ ಕರ್ನಾಟಕ. ಪ್ರಧಾನಿ ಮೋದಿ ಅವರು ಮತ್ತೆ ಮೈಸೂರು, ಬೆಂಗಳೂರು, ರಾಷ್ಟ್ರೀಯ ಹೆದ್ದಾರಿ ಲೋಕಾರ್ಪಣೆಗೆ ಬರುತ್ತಿದ್ದಾರೆ. ಜೆಡಿಎಸ್‌, ಕಾಂಗ್ರೆಸ್‌ನವರು ಅದು ನಮ್ಮ ಕನಸು ಎಂದು ಹೇಳುತ್ತಿದ್ದಾರೆ. ಕಾಮಗಾರಿಗೆ ಶಂಕುಸ್ಥಾಪನೆ ಮಾಡಿ ಲೋಕಾರ್ಪಣೆಗೊಳಿ​ಸುವ ಸರ್ಕಾರವಿದ್ದರೆ ಅದು ಬಿಜೆಪಿ ಸರ್ಕಾರ ಮಾತ್ರ. 1976ರಲ್ಲಿ ಶಂಕು ಸ್ಥಾಪನೆ ಮಾಡಿದ ಹೆದ್ದಾರಿಗಳು 2016 ರವರೆಗೆ ಪೂರ್ಣಗೊಳ್ಳದೇ ಕುಂಟುತ್ತ ಸಾಗಿತ್ತು. ಆದರೆ, ಬಿಜೆಪಿ ಸರ್ಕಾರ ಬಂದ ಮೇಲೆ 3 ಲಕ್ಷ ಕಿ.ಮೀ. ಹೆದ್ದಾರಿ ನಿರ್ಮಾಣವಾಗಿದೆ ಎಂದರು.

ಮಳೆ ಬರುವ ಮೊದಲು ಮೋಡ ಕಾಣುವಂತೆ ಕಾಂಗ್ರೆಸ್‌ಗೆ ಸೋಲಿನ ಭಯದ ಮುನ್ಸೂಚನೆ ಸಿಕ್ಕಿದೆ. ಅದಕ್ಕಾಗಿಯೇ ಇವಿಎಂ ಸರಿಯಿಲ್ಲ ಎಂದು ಹೊಸರಾಗ ಶುರುಮಾಡಿದ್ದಾರೆ. ಸೋಲು ಬರುವುದು ಇ.ವಿ.ಎಂ.ನಿಂದಲ್ಲ. ಮತದಾರರ ನಿರ್ಧಾರದಿಂದ ಎಂಬುದನ್ನು ಕಾಂಗ್ರೆಸ್ಸಿನವರು ತಿಳಿಯಬೇಕು. ಇಡೀ ರಾಜ್ಯದಲ್ಲಿ ವಾತಾವರಣ ನಮ್ಮ ಪರವಾಗಿದೆ. ಯುವ ಮೋರ್ಚಾ ನಿರಂತರವಾಗಿ ಪಕ್ಷದ ಕೆಲಸ ಕಾರ್ಯಗಳಲ್ಲಿ ತೊಡಗಿಸಬೇಕು ಎಂದರು.

ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಡಾ. ಸಂದೀಪ್‌ಕುಮಾರ್‌ ಮಾತನಾಡಿ, ಎಲ್ಲ ಮೂಲ ಸೌಲಭ್ಯಗಳನ್ನು ನೀಡಿ ಅಭಿವೃದ್ಧಿ ಮಾಡಿದ ಸರ್ಕಾರ ಬಿಜೆಪಿಯದ್ದು, 70 ವರ್ಷಗಳಲ್ಲಿ ಆಗದ ಅಭಿವೃದ್ಧಿ ಕೇವಲ 8 ವರ್ಷಗಳಲ್ಲಿ ಆಗಿದೆ. ಯಾರು ಕುಂಕುಮ, ಕೇಸರಿ ಕಂಡರೆ ಅಲರ್ಜಿ ಎನ್ನುತ್ತಾರೋ, ಹಿಂದೂ ವಿರೋಧಿ ನೀತಿ ಅನುಸರಿಸಿ ಅಲ್ಪಸಂಖ್ಯಾತರ ತುಷ್ಟಿಕರಣ ಮಾಡುತ್ತಾರೋ, ಅವರನ್ನು ದೂರವಿರಿಸಿ ನವ ಮತದಾರರನ್ನು ಆಕರ್ಷಿಸಿ ರಾಷ್ಟ್ರ ನಿರ್ಮಾಣ ಕಾರ್ಯದ ಜವಾಬ್ದಾರಿಯನ್ನು ನಿರ್ವಹಿಸೋಣ ಎಂದರು.

ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಬಡ ಮಹಿಳೆಯೊಬ್ಬರಿಗೆ ಮನೆ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಅವರಿಗೆ ಮನೆ ಹಂಚಿಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಎಂ.ಬಿ.ಹರಿಕೃಷ್ಣ ಮಾತನಾಡಿದರು. ಶಾಸಕ ಕೆ.ಬಿ.ಅಶೋಕ್‌ ನಾಯ್‌್ಕ, ಡಿ.ಎಸ್‌.ಅರುಣ್‌, ಆಯನೂರು ಮಂಜುನಾಥ್‌, ಸಂಸದ ಬಿ.ವೈ.ರಾಘವೇಂದ್ರ, ಸಿದ್ಧರಾಮಣ್ಣ, ಜ್ಯೋತಿಪ್ರಕಾಶ್‌, ಡಾ.ಧನಂಜಯ ಸರ್ಜಿ, ಮೇಯರ್‌ ಶಿವಕುಮಾರ್‌, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್‌, ಕೆ.ಈ.ಕಾಂತೇಶ್‌, ಲಲಿತಾ ಗೌಡ, ಸಾಯಿವರಪ್ರಸಾದ್‌, ಅನೂಪ್‌ಕುಮಾರ್‌, ನವೀನ್‌ ಕುಮಾರ್‌, ದರ್ಶನ್‌ ಹಾಗೂ ಜಿಲ್ಲೆಯ ಎಲ್ಲ ತಾಲೂಕಿನ ಯುವ ಮೋರ್ಚಾ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

ನೌಕ​ರರ ಬಲಿಷ್ಠ ಹೋರಾ​ಟಕ್ಕೆ ಸರ್ಕಾರ ತಲೆ​ಬಾ​ಗ​ಬೇ​ಕಾ​ಗಿ​ದೆ: ಯಡಿ​ಯೂ​ರಪ್ಪ

‘ಬಿಜೆಪಿ ಅಧಿಕಾರಕ್ಕೆ ಬರುವರೆಗೆ ಮಲಗಬೇಡಿ’

ಚುನಾವಣೆಗೆ ಇನ್ನು 2 ತಿಂಗಳು ಬಾಕಿ ಇದೆ. ಯುವ ಕಾರ್ಯಕರ್ತರ ಕರ್ತವ್ಯ ಇಲ್ಲಿಂದ ಆರಂಭವಾಗಿದೆ. ಚುನಾವಣೆ ಮುಗಿದು, ಪಕ್ಷ ಅಧಿಕಾರಕ್ಕೆ ಬರುವವರೆಗೆ ಮಲಗಬಾರದು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ಮುಟ್ಟಿಸುವಂತೆ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಪಕ್ಷದ ಎಲ್ಲ ಮೋರ್ಚಾಗಳ ಸಮಾವೇಶ ನಡೆಸಲಾಗುತ್ತಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

ಯಡಿಯೂರಪ್ಪ ಅವರು ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೊಂದು ಅಧಿಕಾರಕ್ಕೆ ತರುತ್ತೇನೆ ಎಂದು ಮಾತು ಕೊಟ್ಟು ಅದರಂತೆ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದರೆ ಜಿಲ್ಲೆಯಲ್ಲಿ ಎಲ್ಲ ಕ್ಷೇತ್ರದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಬೇಕು. ಈ ಬಾರಿ ಭದ್ರಾವತಿ ಕ್ಷೇತ್ರದಲ್ಲೂ ಪಕ್ಷ ಗೆಲ್ಲುವ ಮೂಲಕ ಜಿಲ್ಲೆಯ ಎಲ್ಲ ಕ್ಷೇತ್ರದಲ್ಲೂ ಕಮಲವನ್ನು ಅರಳಿಸಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು. ಕಾರ್ಯಕರ್ತರು ಉತ್ಸುಕರಾಗಿದ್ದರೆ ಪಕ್ಷ ಅಧಿಕಾರಕ್ಕೆ ಬರುವುದು ಕಷ್ಟಸಾಧ್ಯವಲ್ಲ ಎಂದು ಕರೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌