'ನೀವೇಷ್ಟೇ ಸತ್ಯಹರಿಶ್ಚಂದ್ರ ಎಂದು ಹೇಳಿಕೊಂಡ್ರೂ ಜನ ನಂಬಲು ದಡ್ಡರಲ್ಲ': ಸಿಎಂ ಸಿದ್ದರಾಮಯ್ಯ ವಿರುದ್ಧ ಹೆಚ್ ವಿಶ್ವನಾಥ್ ವಾಗ್ದಾಳಿ

By Kannadaprabha News  |  First Published Oct 24, 2024, 7:29 AM IST

ಸರ್ಕಾರಿ ಕಾರ್ಯಕ್ರಮದಲ್ಲಿ ನೀವೆಷ್ಟೇ ಸತ್ಯಹರಿಶ್ಚಂದ್ರ ಎಂದು ಹೇಳಿಕೊಂಡರೂ ನಂಬಲು ರಾಜ್ಯದ ಜನರು ದಡ್ಡರಲ್ಲ ಎಂದು ವಿಧಾನ ಪರಿಷತ್ಸದಸ್ಯ ಎಚ್.ವಿಶ್ವನಾಥ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.


ಮೈಸೂರು (ಅ.24) : ಸರ್ಕಾರಿ ಕಾರ್ಯಕ್ರಮದಲ್ಲಿ ನೀವೆಷ್ಟೇ ಸತ್ಯಹರಿಶ್ಚಂದ್ರ ಎಂದು ಹೇಳಿಕೊಂಡರೂ ನಂಬಲು ರಾಜ್ಯದ ಜನರು ದಡ್ಡರಲ್ಲ ಎಂದು ವಿಧಾನ ಪರಿಷತ್ಸದಸ್ಯ ಎಚ್.ವಿಶ್ವನಾಥ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರುಣ ಕ್ಷೇತ್ರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ನಾನೊಬ್ಬ ಪ್ರಾಮಾಣಿಕ, ನನ್ನ ಹೆಸರಿನಲ್ಲಿ ಒಂದೇ ಒಂದು ಸೂರು ಇಲ್ಲ ಅಂತ ಸುಳ್ಳು ಹೇಳುತ್ತೀರಿ. ಮಗ ಮತ್ತು ಸೊಸೆಯ ಹೆಸರಿನಲ್ಲಿ ಮಾಡಿರುವ 350 ಕೋಟಿ ರು.ನ ಪಬ್ ಅನ್ನು ಭೈರತಿ ಸುರೇಶ್ ನೋಡಿಕೊಳ್ಳುತ್ತಿಲ್ಲವೇ. ಆತನನ್ನು ಮೊದಲು ಒದ್ದು ಒಳಗೆ ಹಾಕಿದರೆ ಸತ್ಯ ಹೊರಬರುತ್ತದೆ ಎಂದರು.

Tap to resize

Latest Videos

undefined

 

ಚಮಚಗಿರಿ ಭಾಷಣ ಮಾಡುವ ಮೂಲಕ ದಸರಾ ಪಾವಿತ್ರ್ಯತೆ ಹಾಳು ಮಾಡಿದ್ದಾರೆ: ಎಚ್.ವಿಶ್ವನಾಥ್

ಮೊದಲು ಕುರುಬ ಸಮಾಜದವರನ್ನು ಯಾವುದೇ ಕಾರ್ಯಕ್ರಮಕ್ಕೆ ಕರೆದು ಅಕ್ಷತೆಕಾಳು ಹಾಕಿಸುತ್ತಿದ್ದರು. ಆದರೆ, ಸಿದ್ದರಾಮಯ್ಯ ಮತ್ತು ಭೈರತಿ ಸುರೇಶ್ ಕಂಟಕಪ್ರಾಯರಾಗಿದ್ದಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ತಮ್ಮ ಭ್ರಷ್ಟಾಚಾರದ ಬಗ್ಗೆ ಸಮರ್ಥನೆ ಮಾಡಿಕೊಂಡು ನೀವೆಷ್ಟೇ ಬಾರಿ ಸತ್ಯಹರಿಶ್ಚಂದ್ರ ಅಂತೇಳಿದರೂ ನಾಡಿನ ಜನರಿಗೆ ನೀವೊಬ್ಬ ಭ್ರಷ್ಟಾಚಾರಿ ಎಂಬುದು ಅರ್ಥವಾಗಿದೆ. ನೀವು ಏನೇ ಹೇಳಿದರೂ ಅದನ್ನು ನಂಬಲು ರಾಜ್ಯದ ಜನರು ದಡ್ಡರಲ್ಲ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರುಣ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ಜನರಿಗೆ ನೀಡಿರುವ ಕೊಡುಗೆ, ಕಾಮಗಾರಿಗಳ ಬಗ್ಗೆ ಹೇಳಲಿ. ಅದನ್ನು ಬಿಟ್ಟು ತಮ್ಮ ಭ್ರಷ್ಟಾಚಾರದ ಸಮರ್ಥನೆಗೆ ಸ್ಪಷ್ಟೀಕರಣದ ಸಮಾವೇಶವನ್ನಾಗಿ ಮಾಡಿಕೊಂಡರು ಎಂದು ಟೀಕಿಸಿದರು.

ಮಾತೆತ್ತಿದರೆ ಪ್ರಾಮಾಣಿಕ, ಸತ್ಯಹರಿಶ್ಚಂದ್ರ ಎಂದು ಪದೇ ಪದೇ ಹೇಳಿಕೊಳ್ಳುತ್ತೀರಿ. ಆದರೆ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಏನಾಯಿತು? ಎಂಬುದು ನಿಮಗೆ ಗೊತ್ತಿಲ್ಲವೇ? ಜೈಲಿಗೆ ಹೋಗಿ ಬಂದ ಮಾಜಿ ಸಚಿವನಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸುತ್ತೀರಿ ಅಂದರೆ ನಿಮಗೆ ನಾಚಿಕೆ ಆಗುವುದಿಲ್ಲವೇ? ಎಂದು ಪ್ರಶ್ನಿಸಿದರು.

ಪ್ರಾಯಶ್ಚಿತವಾಗುತ್ತಿದೆ:

ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ಗೆ ಕರೆತಂದಿದ್ದಕ್ಕೆ ಪ್ರಾಯಶ್ಚಿತ ಆಗುತ್ತಿದೆ. ನನ್ನ ನಂತರ ಕಾಂಗ್ರೆಸ್‌ನಲ್ಲಿ ಯಾರೂ ಮುಖ್ಯಮಂತ್ರಿ ಆಗಬಾರದು ಎಂದು ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನೇ ಸರ್ವನಾಶ ಮಾಡಲು ಹೊರಟಿದ್ದಾರೆ. 16ನೇ ಲೂಯಿ ಹೇಳಿದಂತೆ ಜಲಪ್ರಳಯವಾದರೂ ನನ್ನ ನಂತರ ಯಾರೂ ಉಳಿಯಬಾರದೆಂದು ಹೇಳಿದಂತೆ ಸಿದ್ದರಾಮಯ್ಯ ನಡೆದುಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಮುಗಿಸೋದು ಗ್ಯಾರಂಟಿ ಎಂದರು.

ಈಗ ಅಹಿಂದ ಕಾರ್ಡ್ ಪ್ಲೇ ಮಾಡಿದರೂ ನಡೆಯುತ್ತಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಒಕ್ಕಲಿಗ, ಲಿಂಗಾಯತರು ಕಾರಣ. ಆ ಸಮಾಜದ ಶಾಸಕರು ಆಯ್ಕೆಯಾಗಿಲ್ಲ. ಕುರುಬ ಸಮಾಜಕ್ಕೂ ಸಿದ್ದರಾಮಯ್ಯ ಮತ್ತು ಅವರ ತಂಡದ ಬಗ್ಗೆ ಅನ್ಯಾಯವಾಗಿರುವುದರ ಬಗ್ಗೆ ಅರ್ಥವಾಗುತ್ತಿದೆ. ಮಠ, ಸಂಘವನ್ನು ಎರಡು ಭಾಗ ಮಾಡಿದರು. ಒಂದು ಮೆಡಿಕಲ್ ಕಾಲೇಜು ಕಟ್ಟಲಿಲ್ಲ. ಕುರುಬ ಸಮಾಜದ ಹೆಸರಿನಲ್ಲಿ ರಾಜಕಾರಣ ಮಾಡಿದರೇ ಹೊರತು ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದರು.

ಕರ್ನಾಟಕದಲ್ಲಿ ವ್ಯಕ್ತಿ ರಾಜಕಾರಣ ವೈಭವೀಕರಿಸಿ ಪಕ್ಷ ರಾಜಕಾರಣ ಮೂಲೆ ಗುಂಪಾಗುತ್ತಿದೆ. ಸಿದ್ದರಾಮಯ್ಯ ಅವರ ಬಟ್ಟೆಗೆ ಕಪ್ಪುಚುಕ್ಕೆ ಮೆತ್ತಿದೆ. ಅದನ್ನು ಎಷ್ಟು ಬಾರಿ ತೊಳೆದರೂ ಕಲೆ ಹೋಗುವುದಿಲ್ಲ. ನಾನು ಮೂರು ಪಕ್ಷ ಬದಲಿಸಿದ್ದೇನೆ. ಜಂಡ ಬದಲಾದರು ಅಜೆಂಡಾ ಬದಲಾಗಿಲ್ಲ. ಚುನಾವಣೆಯಲ್ಲಿ ಜನರು ಗೆಲ್ಲಿಸುವುದು ಹೊರತು ನಾವು ಡಬ್ಬ ತುಂಬಿಸಿಕೊಳ್ಳಲಾಗದು ಎಂದರು.

ಯೋಗೇಶ್ವರ್ ವಿರುದ್ಧವೂ ಟೀಕೆ:

ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರುವ ಮೂಲಕ ಆ ಪಕ್ಷ ವಂಚಕರ ಸಂತೆಯಾಗುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಆಯಿತು, ಮುಡಾ ಹಗರಣ ಆಯಿತು. ಸಿ.ಪಿ.ಯೋಗೇಶ್ವರ್ ನನ್ನು ಸೈನಿಕ ಎಂದು ಕರೆಯುವುದು ಸೈನಿಕರಿಗೆ ಮಾಡಿದ ಅಪಮಾನ. ಅವರು ಬಂದಾಕ್ಷಣ ಕಾಂಗ್ರೆಸ್ ಪಕ್ಷವನ್ನೇ ಬದಲಾಯಿಸಿ ಬಿಡುತ್ತಾರಾ?, ಅವನೊಬ್ಬ ಫ್ರಾಡ್, ಹುಣಸೂರು ಉಪ ಚುನಾವಣೆ ವೇಳೆ ಯಡಿಯೂರಪ್ಪ ಅವರು ಕಳುಹಿಸಿದ್ದ ಹಣ ಮತ್ತು ಸೌಲಭ್ಯವನ್ನು ಹೊತ್ತುಕೊಂಡು ಹೋದ, ನಮ್ಮ ಕಡೆ ಬರಲೇ ಇಲ್ಲ ಎಂದು ಆರೋಪಿಸಿದರು.

ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ಸೋಲು-ಗೆಲುವಿಗೂ ಸರ್ಕಾರದ ಉಳಿವಿಗೂ ಸಂಬಂಧವಿಲ್ಲ. ಅದು ಯಾವುದೇ ಪರಿಣಾಮ ಬೀರುವುದಿಲ್ಲ. 136 ರಿಂದ 137 ಸ್ಥಾನಗಳು ಆಗುತ್ತದೆಯೇ ಹೊರತು ಬೇರೇನೂ ಆಗುವುದಿಲ್ಲ. ಯೋಗೀಶ್ವರ್ ಪುತ್ರಿಯೇ ಅಪ್ಪನ ಮಾನ ಹರಾಜು ಹಾಕುತ್ತೇನೆ ಎನ್ನುತ್ತಿದ್ದಾರೆ ಎಂದರು.

ಬೆಂಗಳೂರು ಸೇರಿ ಹಲವೆಡೆ ಜಲಪ್ರಳಯವಾಗಿದೆ. ಬಹುಮಹಡಿ ಕಟ್ಟಡಗಳಲ್ಲಿ ವಾಸಿಸುತ್ತಿರುವ ಜನರು ಆಹಾರ ಪದಾರ್ಥ, ಔಷಧ ತೆಗೆದುಕೊಳ್ಳಲು ಹೊರಗೆ ಬಾರದ ಸನ್ನಿವೇಶವಿದೆ. ಆದರೆ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಹಿರಿಯ ಅಧಿಕಾರಿಗಳು ತಮಗೆ ಸಂಬಂಧವೇ ಇಲ್ಲದಂತೆ ಕಾಲಹರಣ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಅಬ್ಬಬ್ಬಾ! ಜಿಟಿ ದೇವೇಗೌಡ ಪರಾಕ್ರಮ ನೋಡಿದ್ರೆ ಮುಡಾ ಫಲಾನುಭವಿ ಇರಬೇಕು: ಹೆಚ್. ವಿಶ್ವನಾಥ್!

ತಮಗೂ ಮತ್ತು ಮಳೆಗೂ ಸಂಬಂಧ ಇಲ್ಲ ಎಂದು ನಿರ್ಲಕ್ಷ್ಯಿಸಿದ್ದಾರೆ. ರಾಜ್ಯದಲ್ಲಿ ಅತಿವೃಷ್ಟಿಯಾದರೂ ಮೂರು ಪಕ್ಷಗಳನಾಯಕರು ಉಪ ಚುನಾವಣೆ ಕಡೆಗೆ ಗಮನಹರಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಪರಿಹಾರಕ್ಕೆ ಸಿದ್ಧತೆಯಾಗುತ್ತಿದೆ ಎನ್ನುತ್ತಿದ್ದಾರೆ. ಆದರೆ, ಈತನ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದರು.

click me!