Council Election Karnataka : JDS - ಕೈ ಜಿದ್ದಾಜಿದ್ದಿನ ಕದನ - ಸೋಲಿನ ಸೇಡು ತೀರಿಸಿಕೊಳ್ಳಲು ದಳಪತಿಗಳ ತವಕ

Kannadaprabha News   | Asianet News
Published : Dec 02, 2021, 02:16 PM IST
Council Election Karnataka :  JDS - ಕೈ ಜಿದ್ದಾಜಿದ್ದಿನ ಕದನ - ಸೋಲಿನ ಸೇಡು ತೀರಿಸಿಕೊಳ್ಳಲು ದಳಪತಿಗಳ ತವಕ

ಸಾರಾಂಶ

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆ ಚುನಾವಣೆಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳು ಮತಬೇಟೆಯಲ್ಲಿ ಜಿದ್ದಾಜಿದ್ದಿನ ಪೈಪೋಟಿ

ವರದಿ :  ಮಂಡ್ಯ ಮಂಜುನಾಥ

 ಮಂಡ್ಯ(ನ.02):  ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ( MLC Election) ನಡೆಯಲಿರುವ ಚುನಾವಣೆಯಲ್ಲಿ ಜೆಡಿಎಸ್‌ (JDS) ಮತ್ತು ಕಾಂಗ್ರೆಸ್‌ (Congress) ಅಭ್ಯರ್ಥಿಗಳು ಮತಬೇಟೆಯಲ್ಲಿ ಜಿದ್ದಾ ಜಿದ್ದಿನ ಪೈಪೋಟಿಗಿಳಿದಿದ್ದಾರೆ. ಗ್ರಾಪಂ ಸದಸ್ಯರನ್ನೇ ಗುರಿಯಾಗಿಸಿಕೊಂಡು ಚುನಾವಣಾ (Election) ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಎರಡೂ ಪಕ್ಷಗಳು ಗೆಲುವಿಗೆ ಶತ ಪ್ರಯತ್ನ ನಡೆಸುತ್ತಿವೆ.ಜೆಡಿಎಸ್‌ , ಕಾಂಗ್ರೆಸ್‌ ಪಕ್ಷಗಳಿಗೆ ಸರಿಸಮನಾಗಿ ಪೈಪೋಟಿ ನೀಡುವುದಕ್ಕೆ ಮುಂದಾಗಿರುವ ಬಿಜೆಪಿ, ಅಬ್ಬರದ ಚುನಾವಣಾ ಪ್ರಚಾರದೊಂದಿಗೆ ಮುನ್ನಡೆಯುತ್ತಿದೆ. ಸಚಿವ ಕೆ.ಸಿ.ನಾರಾಯಣಗೌಡರು ಅಭ್ಯರ್ಥಿಯೊಂದಿಗೆ ಎಲ್ಲೆಡೆ ಪ್ರಚಾರಕ್ಕಿಳಿದಿದ್ದು ಹೆಚ್ಚಿನ ಮತಗಳನ್ನು ಕಮಲ (BJP) ಬುಟ್ಟಿಗೆ ಬೀಳಿಸಿಕೊಳ್ಳುವುದಕ್ಕೆ ತೀವ್ರ ಹೋರಾಟ ನಡೆಸುತ್ತಿದ್ದಾರೆ.

ಕಾರ್ಯತಂತ್ರದ ಅನುಭವ :  ಜೆಡಿಎಸ್‌ (JDS)  ಅಭ್ಯರ್ಥಿ ಎನ್‌.ಅಪ್ಪಾಜಿ ಗೌಡರು ಈಗಾಗಲೇ ವಿಧಾನಪರಿಷತ್‌ (MLC Election) ಚುನಾವಣೆಯನ್ನು ಎದುರಿಸಿದ್ದು, ಅವರಿಗೆ ಚುನಾವಣಾ ಕಾರ್ಯತಂತ್ರ ನಡೆಸಿರುವ ಅನುಭವವಿದೆ. ಆರಂಭದಿಂದಲೂ ಅಬ್ಬರದ ಪ್ರಚಾರಕ್ಕಿಳಿಯದೆ ನೇರವಾಗಿ ಗ್ರಾಪಂ ಸದಸ್ಯ ಮತದಾರರನ್ನೇ ಭೇಟಿಯಾಗುವ ಮೂಲಕ ಮತ ಬೇಟೆಗಿಳಿದರು. ಪ್ರಚಾರದಲ್ಲಿ ಭಾಷಣಕ್ಕೆ ಮಹತ್ವ ನೀಡುವುದರ ಜೊತೆಗೆ ಸಮಯವನ್ನು ವ್ಯರ್ಥ ಮಾಡದೆ ಆಯಾ ಕ್ಷೇತ್ರದ ಶಾಸಕರು, ಸ್ಥಳೀಯ ಮುಖಂಡರನ್ನು ಒಗ್ಗೂಡಿಸಿಕೊಂಡು ಮೌನವಾಗಿಯೇ ಮತಗಳನ್ನು ಕ್ರೋಢೀಕರಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ಉತ್ತಮ ಒಡನಾಟ:  ಪರಿಷತ್‌ ಅಭ್ಯರ್ಥಿ ಎನ್‌.ಅಪ್ಪಾಜಿಗೌಡ (Appaji Gowda) ಜಿಲ್ಲೆಯ ಎಲ್ಲಾ ಜೆಡಿಎಸ್‌ ಶಾಸಕರೊಂದಿಗೆ ಉತ್ತಮ ಒಡನಾಟ, ಬಾಂಧವ್ಯವನ್ನು ಹೊಂದಿರುವುದು ಅವರಿಗೆ ಚುನಾವಣೆಯಲ್ಲಿ ಹೆಚ್ಚಿನ ಅನುಕೂಲವಾಗಿದೆ. ಎಲ್ಲಾ ಶಾಸಕರು ಅಪ್ಪಾಜಿಗೌಡರ ಬೆಂಬಲಕ್ಕೆ ನಿಂತು ಗೆಲ್ಲಿಸುವುದಕ್ಕೆ ಟೊಂಕಕಟ್ಟಿದ್ದಾರೆ. ಜೆಡಿಎಸ್‌ ಮುಖಂಡರು-ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸುತ್ತಿರುವುದು ಅಪ್ಪಾಜಿಗೌಡರಿಗೆ ಹೆಚ್ಚಿನ ಶಕ್ತಿ ದೊರಕಿದಂತಾಗಿದೆ.

ನಿಖಿಲ್‌ ಜವಾಬ್ದಾರಿ: ಸಮಗ್ರ ಜಿಲ್ಲಾ ನಾಯಕತ್ವ ಜೆಡಿಎಸ್‌ಗೆ ಇಲ್ಲದಿರುವುದರಿದ ಜೆಡಿಎಸ್‌ ಯುವ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ (Nikhil kumaraswamy) ಅದರ ಸಾರಥ್ಯವನ್ನು ವಹಿಸಿಕೊಂಡಿದ್ದಾರೆ. ವಿಧಾನಪರಿಷತ್‌ ಚುನಾವಣಾ ಪ್ರಚಾರದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ತೊಡಗುವುದರೊಂದಿಗೆ ಮುಂದಿನ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಬೇಕಾದ ಅನುಭವ, ಗೆಲುವಿಗೆ ಬೇಕಾದ ವಿಭಿನ್ನ ತಂತ್ರಗಾರಿಕೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸಕ್ರಿಯವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಜನರಿಗೆ ಹತ್ತಿರವಾಗುವ ಪ್ರಯತ್ನ ನಡೆಸಿದ್ದಾರೆ.

ಜೆಡಿಎಸ್‌ ಸದಸ್ಯರ ಮೇಲುಗೈ:  ಕಳೆದ ಗ್ರಾಪಂ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿರುವುದು ಅಪ್ಪಾಜಿಗೌಡರಿಗೆ ಪ್ಲಸ್‌ಪಾಯಿಂಟ್‌ ಎಂದು ಹೇಳಲಾಗುತ್ತಿದೆ. ಸುಮಾರು 2400 ಮಂದಿ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಮತಗಳನ್ನೇ ನೇರ ಟಾರ್ಗೆಟ್‌ ಮಾಡಿಕೊಂಡು ಗೆಲುವಿನ ಖುಷಿಯೊಂದಿಗೆ ಮುನ್ನಡೆದಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.

ಮಂಡ್ಯದಂತಹ ಜೆಡಿಎಸ್‌ ಭದ್ರಕೋಟೆಯೊಳಗೆ ಕಳೆದ ಲೋಕಸಭೆ ಚುನಾವಣೆ ಹಾಗೂ ಕೆ.ಆರ್‌.ಪೇಟೆ ಉಪ ಚುನಾವಣೆಯಲ್ಲಿನ (By Election) ಸೋಲು ದಳಪತಿಗಳನ್ನು ಮುಖಭಂಗಕ್ಕೊಳಪಡಿಸಿದೆ. ಆ ಎರಡೂ ಚುನಾವಣೆಗಳಲ್ಲಿನ ಸೋಲಿನ ಸೇಡು ತೀರಿಸಿಕೊಳ್ಳಲು ವಿಧಾನಪರಿಷತ್‌ ಚುನಾವಣೆಯನ್ನು ವರಿಷ್ಠರು ಸವಾಲಾಗಿ ಸ್ವೀಕರಿಸಿದ್ದಾರೆ.

ಜಿಲ್ಲೆಯಲ್ಲಿ ಕಾಂಗ್ರೆಸ್‌ ನಾಯಕರೇ ಶಕ್ತಿ :  ಕಾಂಗ್ರೆಸ್‌ (Congress) ಅಭ್ಯರ್ಥಿ ದಿನೇಶ್‌ ಗೂಳಿಗೌಡ ಅವರು ಕ್ಷೇತ್ರಕ್ಕೆ ಹೊಸಬರು. ಸಚಿವರ ಬಳಿ ವಿಶೇಷಾಧಿಕಾರಿಯಾಗಿದ್ದವರು. ರಾಜಕೀಯ ಅನುಭವ ಕಡಿಮೆ. ಮೊದಲ ಬಾರಿಗೆ ವಿಧಾನಪರಿಷತ್‌ ಚುನಾವಣೆ ಎದುರಿಸುತ್ತಿದ್ದು, ಕಾಂಗ್ರೆಸ್‌ ನಾಯಕರನ್ನೇ ನೆಚ್ಚಿಕೊಂಡು ಚುನಾವಣೆಯಲ್ಲಿ ಗೆಲ್ಲುವ ಪ್ರಯತ್ನ ನಡೆಸಿದ್ದಾರೆ. ಇದೇ ಜಿಲ್ಲೆಯವರೆಂಬ ಕಾರಣ ಹಾಗೂ ಸ್ಥಳೀಯ ಸಮಸ್ಯೆಗಳಿಗೆ ಪರಿಷತ್‌ನಲ್ಲಿ ದನಿಯಾಗಿರುತ್ತೇನೆಂಬ ಭರವಸೆಯೊಂದಿಗೆ ತಮ್ಮನ್ನು ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ.

ವಾತಾವರಣ ಬದಲಾಗಿರುವ ನಂಬಿಕೆ: ಕಳೆದ ಲೋಕಸಭೆ ಹಾಗೂ ಕೆ.ಆರ್‌.ಪೇಟೆ ಉಪ ಚುನಾವಣೆಯಲ್ಲಿನ ಜೆಡಿಎಸ್‌ ಸೋಲಿನಿಂದ ಜಿಲ್ಲೆಯಲ್ಲಿ ವಾತಾವರಣ ಬದಲಾಗಿದೆ. 2018ರ ಚುನಾವಣೆಯಲ್ಲಿ ಜೆಡಿಎಸ್‌ನತ್ತ ಮುಖ ಮಾಡಿದ್ದ ಜನರ ಮನಸ್ಥಿತಿ ಪರಿವರ್ತನೆಗೊಂಡಂತೆ ಕಂಡುಬಂದಿರುವುದರಿಂದ ಕಾಂಗ್ರೆಸ್‌ ಅಭ್ಯರ್ಥಿ ಕೈ ಹಿಡಿಯುವರೆಂಬ ನಂಬಿಕೆ ಕಾಂಗ್ರೆಸ್‌ನವರದ್ದಾಗಿದೆ.

ಮಾಜಿ ಸಚಿವರಾದ ಎನ್‌.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಅವರು ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ. ಜೆಡಿಎಸ್‌ ಪ್ರಾಬಲ್ಯವನ್ನು ಇನ್ನಷ್ಟುಕುಗ್ಗಿಸುವ ಮೂಲಕ ದುರ್ಬಲಗೊಳಿಸುವ ಗುರಿಯೊಂದಿಗೆ ದಿನೇಶ್‌ಗೌಡರ ಬೆನ್ನಿಗೆ ನಿಂತು ಹೋರಾಟ ನಡೆಸುತ್ತಿದ್ದಾರೆ.

ಕಾಂಗ್ರೆಸ್‌ ತೀವ್ರ ಕಸರತ್ತು:  ಮಂಡ್ಯ, ನಾಗಮಂಗಲ, ಮಳವಳ್ಳಿ, ತಾಲೂಕುಗಳಲ್ಲಿ ಕಾಂಗ್ರೆಸ್‌ ಗ್ರಾಮ ಪಂಚಾಯಿತಿಯಲ್ಲಿ ಹೆಚ್ಚಿನ ಪ್ರಾಬಲ್ಯ ಹೊಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಶ್ರೀರಂಗಪಟ್ಟಣದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸಮಬಲ ಸಾಧಿಸಿರುವಂತೆ ಕಂಡುಬಂದಿದ್ದು, ಮೇಲುಕೋಟೆ ಹಾಗೂ ಮದ್ದೂರು ಬಹುತೇಕ ಜೆಡಿಎಸ್‌ ಹಿಡಿತದಲ್ಲಿದೆ. ಕೆ.ಆರ್‌.ಪೇಟೆಯಲ್ಲಿ ಬಿಜೆಪಿ ಸ್ವಲ್ಪ ಪ್ರಾಬಲ್ಯ ಹೊಂದಿರುವುದರಿಂದ ಕಾಂಗ್ರೆಸ್‌ ಗೆಲುವಿಗೆ ತೀವ್ರ ಕಸರತ್ತು ಮಾಡುತ್ತಿದೆ.

ಜೆಡಿಎಸ್‌ ಮತಬ್ಯಾಂಕ್‌ಗೆ ಲಗ್ಗೆ:  ಜೆಡಿಎಸ್‌ (JDS) ಮತ ಬ್ಯಾಂಕ್‌ಗೆ ಲಗ್ಗೆ ಹಾಕಿರುವ ಕಾಂಗ್ರೆಸ್‌ ಆ ಪಕ್ಷದ ಬೆಂಬಲಿತ ಮತದಾರರನ್ನು ಸೆಳೆಯುವ ಪ್ರಯತ್ನವನ್ನು ಆರಂಭಿಸಲಾಗಿದೆ. ಈಗಾಗಲೇ ಅಭ್ಯರ್ಥಿ ದಿನೇಶ್‌ ಗೂಳೀಗೌಡ ಅವರೂ ಸಹ ಜೆಡಿಎಸ್‌ ಮುಖಂಡರನ್ನು ಸಂಪರ್ಕಿಸುವುದರೊಂದಿಗೆ ಅವರ ಮನವೊಲಿಸಿ ಮತಗಳನ್ನು ಸೆಳೆಯುವ ಸಾಹಸಕ್ಕಿಳಿದಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಎನ್‌.ಅಪ್ಪಾಜಿಗೌಡರು ವಿಧಾನಪರಿಷತ್‌ ಸದಸ್ಯರಾಗಿ ಸಾಧಿಸಿದ ವೈಫಲ್ಯಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಟ್ಟು ಜೆಡಿಎಸ್‌ ವೋಟುಗಳನ್ನು ತಮ್ಮತ್ತ ಸೆಳೆಯುವ ತಂತ್ರ ನಡೆಸಿದ್ದಾರೆ.

2015ರ ವಿಧಾನಸಭಾ ಚುನಾವಣೆಯಲ್ಲಿ (Assembly Election) ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಎನ್‌.ಅಪ್ಪಾಜಿಗೌಡರ ಗೆಲುವಿನ ಪಾಲುದಾರರಾಗಿರುವ ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು ಜೆಡಿಎಸ್‌ ಚುನಾವಣಾ ಕಾರ್ಯತಂತ್ರಗಳನ್ನು ಹತ್ತಿರದಿಂದ ಕಂಡಿದ್ದಾರೆ. ಅದೇ ತಂತ್ರಗಾರಿಕೆಯನ್ನು ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವಿಗೆ ಬಳಸುತ್ತಿದ್ದು, ಜೆಡಿಎಸ್‌ಗೆ ನೆಲೆ ಇಲ್ಲದಂತೆ ಮಾಡುವ ನಿಟ್ಟಿನಲ್ಲಿ ಪಣತೊಟ್ಟು ಹೋರಾಡುತ್ತಿದ್ದಾರೆ. ಇವರ ಬೆನ್ನಿಗೆ ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಹಾಗೂ ರಮೇಶ್‌ ಬಂಡಿಸಿದ್ದೇಗೌಡ ಬೆನ್ನಿಗೆ ನಿಂತಿದ್ದಾರೆ.

ಚಲುವರಾಯಸ್ವಾಮಿ ಶಕ್ತಿ ಪ್ರದರ್ಶನ:

ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ರಣೋತ್ಸಾಹ ತುಂಬುವುದರೊಂದಿಗೆ ಚುನಾವಣೆಗೆ ಸಜ್ಜುಗೊಳಿಸಿರುವ ಎನ್‌.ಚಲುವರಾಯಸ್ವಾಮಿ ಇಡೀ ಚುನಾವಣೆಯ ಸಾರಥ್ಯವನ್ನು ವಹಿಸಿ ಗೆಲುವಿಗೆ ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ಆರಂಭದಲ್ಲಿ ಅಬ್ಬರದ ಪ್ರಚಾರಕ್ಕಿಳಿಯುವುದರೊಂದಿಗೆ ಜನರಿಗೆ ಕ್ಷೇತ್ರದ ಅಭ್ಯರ್ಥಿಯನ್ನು ಪರಿಚಯಿಸಿ ಇದೀಗ ಜೆಡಿಎಸ್‌ ಮಾದರಿಯಲ್ಲೇ ಗ್ರಾಮ ಪಂಚಾಯಿತಿ ಸದಸ್ಯರನ್ನೇ ಟಾರ್ಗೆಟ್‌ ಮಾಡಿಕೊಂಡು ಮತಗಳನ್ನು ಬೇಟೆಯಾಡಲಾರಂಭಿಸಿದ್ದಾರೆ.

ಭಾರೀ ಪ್ರಚಾರದಲ್ಲಿ ಬಿಜೆಪಿ

ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಹೊಂದಾಣಿಕೆ ಮಾಡಿಕೊಂಡಿವೆ ಎಂಬ ಸುದ್ದಿಗಳು ಹರಿದಾಡುತ್ತಿರುವುದರ ನಡುವೆಯೂ ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು ಭಾರೀ ಪ್ರಚಾರದಲ್ಲಿ ತೊಡಗಿ ಜೆಡಿಎಸ್‌-ಕಾಂಗ್ರೆಸ್‌ ತೀವ್ರ ಪೈಪೋಟಿ ನೀಡುವ ರಣೋತ್ಸಾಹ ಪ್ರದರ್ಶಿಸುತ್ತಿದ್ದಾರೆ.

ಸಚಿವ ಕೆ.ಸಿ.ನಾರಾಯಣಗೌಡರು ಚುನಾವಣಾ ಅಖಾಡದಲ್ಲಿ ಸಾರಥಿಯಾಗಿ ನಿಂತು ಮಂಜು ಅವರಿಗೆ ಬಲ ತುಂಬುತ್ತಿದ್ದಾರೆ. ಕೆ.ಆರ್‌.ಪೇಟೆ ಉಪ ಚುನಾವಣೆಯ ನಂತರ ಮತ್ತೊಮ್ಮೆ ಜಿಲ್ಲೆಯಲ್ಲಿ ಕಮಲ ಅರಳಿಸಲು ಕಸರತ್ತು ನಡೆಸುತ್ತಿದ್ದಾರೆ. ಗ್ರಾಮ ಪಂಚಾಯಿತಿಗಳಲ್ಲೂ ಬಿಜೆಪಿ ತೃಪ್ತಿದಾಯಕ ಮತಗಳನ್ನು ಹೊಂದಿದ್ದು, ಬಿಜೆಪಿ ಪಕ್ಷ ಅಧಿಕಾರದಲ್ಲಿರುವುದರಿಂದ ಗ್ರಾಪಂ ಸದಸ್ಯರು ಪಕ್ಷವನ್ನು ಕೈಹಿಡಿಯುವರೆಂಬ ನಂಬಿಕೆ ಅವರಲ್ಲಿದೆ. ಈಗಾಗಲೇ ಬೂಕಹಳ್ಳಿ ಮಂಜು ಅವರು ಮೂರ್ನಾಲ್ಕು ಬಾರಿ ಗ್ರಾಮ ಪಂಚಾಯಿತಿ ಸದಸ್ಯರನ್ನು ಭೇಟಿಯಾಗಿ ಬಂದಿರುವ ಅವರು ಮತದಾರರು ನನ್ನ ಪರವಾಗಿದ್ದಾರೆ ಎಂಬ ವಿಶ್ವಾಸದಲ್ಲಿದ್ದಾರೆ.

ಒಟ್ಟಾರೆ ಮೂರು ಪಕ್ಷದ ಅಭ್ಯರ್ಥಿಗಳೂ ಗೆಲುವಿನ ಗುರಿಯೊಂದಿಗೆ ಚುನಾವಣಾ ರಣರಂಗದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಅಂತಿಮವಾಗಿ ವಿಜಯಲಕ್ಷ್ಮೀ ಯಾರಿಗೆ ಒಲಿಯುವಳು ಎನ್ನುವುದನ್ನು ಕಾದುನೋಡಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ