ವರದಿ : ಅಂಶಿ ಪ್ರಸನ್ನಕುಮಾರ್
ಮೈಸೂರು(ಡಿ.02): ಮೈಸೂರು, ಚಾಮರಾಜನಗರ (Mysuru Chamarajanagar) ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ದ್ವಿ ಸದಸ್ಯ ಕ್ಷೇತ್ರದಿಂದ ಡಿ.10ರಂದು ವಿಧಾನ ಪರಿಷತ್ತಿಗೆ (MLC Election) ನಡೆಯುವ ಚುನಾವಣೆಯಲ್ಲಿ ಯುವ ನಾಯಕರು (youth Leaders) ಪ್ರಚಾರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಭವಿಷ್ಯದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಟಿ.ನರಸೀಪುರ ಕ್ಷೇತ್ರದಿಂದ ಡಾ.ಎಚ್.ಸಿ ಮಹದೇವಪ್ಪ(HC Mahadevappa) ಅವರು ಐದು ಬಾರಿ ಗೆದ್ದು, ಎಚ್.ಡಿ.ದೇವೇಗೌಡ (HD Devegowda), ಜೆ.ಎಚ್.ಪಟೇಲ್, ಧರ್ಮಸಿಂಗ್, ಸಿದ್ದರಾಮಯ್ಯ (Siddaramaiah) ಸಂಪುಟದಲ್ಲಿ ಹಲವಾರು ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದಾರೆ. ಅವರು ಮುಂಬರುವ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸುವ ಬಯಕೆ ಹೊಂದಿದ್ದಾರೆ. ಹೀಗಾಗಿ ಅವರ ಪುತ್ರ ಸುನಿಲ್ ಬೋಸ್ ಟಿ.ನರಸೀಪುರ ಕ್ಷೇತ್ರದಿಂದ ಅಭ್ಯರ್ಥಿಯಾಗಲು ತಯಾರಿ ನಡೆಸಿದ್ದಾರೆ. 2013 ರಿಂದಲೂ ಸುನಿಲ್ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
undefined
ಡಿಸಿಸಿ ಬ್ಯಾಂಕ್ (DCC Bank) ಅಧ್ಯಕ್ಷ, ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷರಾಗಿರುವ ಜಿ.ಡಿ.ಹರೀಶ್ ಗೌಡ ಅವರು ಚಾಮುಂಡೇಶ್ವರಿ (Chamundeshwari) ಕ್ಷೇತ್ರದ ಶಾಸಕರಾಗಿರುವ ಮಾಜಿ ಸಚಿವ, ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಜಿ.ಟಿ.ದೇವೇಗೌಡರ (GTDevegowda) ಪುತ್ರ. 2018ರಲ್ಲಿಯೇ ಹುಣಸೂರು ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಬೇಕಿತ್ತು. ಆದರೆ, ಕೊನೆಕ್ಷಣದಲ್ಲಿ ಎಚ್.ವಿಶ್ವನಾಥ್ ಅವರಿಗೆ ಅವಕಾಶ ಮಾಡಿಕೊಡಬೇಕಾಗಿ ಬಂದಿದ್ದರಿಂದ ಕಿರಿಯ ವಯಸ್ಸಿನಲ್ಲಿಯೇ ಶಾಸಕರಾಗುವ ಅವಕಾಶ ತಪ್ಪಿತು. ಜೆಡಿಎಸ್‌ನಲ್ಲಿಯೇ(JDS) ಇದ್ದಿದ್ದರೆ 2023ರ ಚುನಾವಣೆಯಲ್ಲಿ ಹುಣಸೂರಿನಿಂದ ಅವರ ಅಭ್ಯರ್ಥಿ ಎಂಬ ವಾತಾವರಣ ಇತ್ತು. ಆದರೆ, ಸಮ್ಮಿಶ್ರ ಸರ್ಕಾರ ಪತನಾನಂತರ ಜಿ.ಟಿ. ದೇವೇಗೌಡರು ಜೆಡಿಎಸ್‌ನಿಂದ ದೂರ ಇದ್ದಾರೆ. ಹೀಗಾಗಿ ಹರೀಶ್‌ಗೌಡರು ತಂದೆಯನ್ನು ಅನುಸರಿಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಾಜಿ ಸಿಎಂ, ಹಾಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರೊಂದಿಗೆ ಎರಡೆರಡು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ಜಿ.ಟಿ.ದೇವೇಗೌಡರು ಭವಿಷ್ಯದಲ್ಲಿ ಕಾಂಗ್ರೆಸ್ (Congress) ಸೇರುವ ಮುನ್ಸೂಚನೆ ನೀಡಿದ್ದಾರೆ. ಹಾಗಾದರೆ ಅವರಿಗೆ ಚಾಮುಂಡೇಶ್ವರಿಯಲ್ಲಿ ಮತ್ತೆ ಸ್ಪರ್ಧಿಸಲು ಟಿಕೆಟ್ ಸಿಗಬಹುದು. ಆದರೆ, ಹರೀಶ್‌ಗೌಡರಿಗೆ ಹುಣಸೂರಿನಲ್ಲಿ ಟಿಕೆಟ್ ಸಿಗುತ್ತಾ?, ಅಥವಾ ಚಾಮರಾಜ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಅವಕಾಶ ಮಾಡಿಕೊಡುತ್ತಾರ? ಎಂಬ ಕುತೂಹಲವಿದೆ. ಈವರೆಗೆ ನೇರವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿಲ್ಲವಾದರೂ ಅವರ ಬೆಂಬಲಿಗರು ಕಾಂಗ್ರೆಸ್ ಪರ ಕೆಲಸ ಮಾಡಬಹುದು.
ಎಚ್.ಎಸ್.ಮಹದೇವ ಪ್ರಸಾದ್ ಅವರು ಗುಂಡ್ಲುಪೇಟೆ ಕ್ಷೇತ್ರದಿಂದ ಸತತ ಐದು ಬಾರಿ ಗೆದ್ದು, ಧರ್ಮಸಿಂಗ್, ಎಚ್.ಡಿ. ಕುಮಾರಸ್ವಾಮಿ (HD Kumaraswamy) ಹಾಗೂ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದರು. ಅವರ ನಿಧನಾನಂತರ ನಡೆದ ಉಪ ಚುನಾವಣೆಯಲ್ಲಿ ಡಾ.ಗೀತಾ ಮಹದೇವ ಪ್ರಸಾದ್ ಅವರು ಸ್ಪರ್ಧಿಸಿ, ಆಯ್ಕೆಯಾಗಿ, ಸಚಿವರಾಗಿದ್ದರು. 2018ರ ಚುನಾವಣೆಯಲ್ಲಿ ಸೋತ ನಂತರ ಆರೋಗ್ಯದ ಸಮಸ್ಯೆಯಿಂದಾಗಿ ಕ್ಷೇತ್ರದ ಉಸ್ತುವಾರಿಯನ್ನು ಪುತ್ರ ಎಚ್.ಎಂ.ಗಣೇಶ್ ಪ್ರಸಾದ್ ಅವರಿಗೆ ವಹಿಸಿದ್ದಾರೆ. ಗಣೇಶ್ ತಾಲೂಕಿನಲ್ಲಿ ಪಕ್ಷ ಸಂಘಟನೆಯ ಮೂಲಕ ಮುಂದಿನ ವಿಧಾನಸಭಾ ಚುನಾವಣೆಗೆ (Assembly Election) ಸಜ್ಜಾಗುತ್ತಿದ್ದಾರೆ.
ಪಿರಿಯಾಪಟ್ಟಣದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೂಡ ಮಾಜಿ ಸಚಿವ ಕೆ.ವೆಂಕಟೇಶ್ ಕಾಂಗ್ರೆಸ್ ಅಭ್ಯರ್ಥಿಯಾಗಬಹುದು. ಆದರೆ, ಕಳೆದ ಬಾರಿಯೇ ಜಿಪಂ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿರುವ ನಿತಿನ್ ವೆಂಕಟೇಶ್ ಕಾಂಗ್ರೆಸ್ ಪರ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಾಮರಾಜ ಕ್ಷೇತ್ರದ ಮಾಜಿ ಶಾಸಕ ವಾಸು ಕೂಡ ಮುಂದಿನ ಚುನಾವಣೆಯಲ್ಲಿ ಟಿಕೆಟ್‌ನ ಪ್ರಬಲ ಆಕಾಂಕ್ಷಿ. ಅವರ ಹಿರಿಯ ಪುತ್ರ ವಿ. ಕವೀಶ್‌ಗೌಡ ಕೂಡ ಕಳೆದ ಹಲವು ವರ್ಷಗಳಿಂದಲೂ ಪಕ್ಷದ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಕೂಡ ಮೇಲ್ಮನೆ ಚುನಾವಣೆಯ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ ನಾಮಪತ್ರ ಸಲ್ಲಿಸುವ ವೇಳೆ ಕೂಡ ಭಾಗಿಯಾಗಿದ್ದರು.
ಪಿರಿಯಾಪಟ್ಟಣ ಶಾಸಕ ಕೆ.ಮಹದೇವ್ ಅವರ ಪುತ್ರ ಪಿ.ಎಂ.ಪ್ರಸನ್ನ ಹಾಲಿ ಮೈಮುಲ್ ಅಧ್ಯಕ್ಷರು. ತಾಲೂಕಿನಲ್ಲಿ ಅಪ್ಪನ ಜೊತೆಗೆ ಸಂಘಟನೆಗೆ ಸಾಥ್ ನೀಡುತ್ತಿದ್ದಾರೆ.
ಎರಡು ಬಾರಿ ಜಿಪಂ ಸದಸ್ಯರಾಗಿದ್ದ ಡಿ.ರವಿಶಂಕರ್ 2013ರಲ್ಲಿ ಕೆ.ಆರ್.ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಿ.ರವಿಶಂಕರ್ ಅವರ ಪುತ್ರ. 2018 ರಲ್ಲಿ ಸ್ವತಃ ರವಿಶಂಕರ್ ಅವರೇ ಅಭ್ಯರ್ಥಿಯಾಗಿದ್ದರು. ಮುಂದಿನ ಚುನಾವಣೆಯಲ್ಲಿಯೂ ಅವರೇ ಅಭ್ಯರ್ಥಿ ಎಂದು ಮಾಜಿ ಸಿಎಂ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೆ.ಆರ್.ನಗರಕ್ಕೆ ಹೋದಾಗಲೆಲ್ಲಾ ಹೇಳಿದ್ದಾರೆ. ಹೀಗಾಗಿ ರವಿಶಂಕರ್ ಪಕ್ಷದ ಸಂಘಟನೆ ಹಾಗೂ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ (Assembly Election) ಚಾಮರಾಜ ಕ್ಷೇತ್ರದಿಂದ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ 21,282 ಮತಗಳನ್ನು ಪಡೆದು, ಗಮನ ಸೆಳೆದಿದ್ದ ಕೆ.ಹರೀಶ್‌ಗೌಡ ನಂತರ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದಾರೆ. ಚಾಮರಾಜ ಕ್ಷೇತ್ರದ ಟಿಕೆಟ್ ಮೇಲೆ ಕಣ್ಣಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ.
ಹನೂರು ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ (JDS) ಅಭ್ಯರ್ಥಿಯಾಗಿ ಗಣನೀಯ ಪ್ರಮಾಣದ ಮತ ಪಡೆದಿದ್ದ ಆರ್. ಮಂಜುನಾಥ್ ಮುಂದಿನ ಬಾರಿ ಶತಾಯಗತಾಯ ಗೆಲ್ಲಬೇಕು ಎಂದು ಸಂಘಟನೆ ಹಾಗೂ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಮೇಲ್ಮನೆ ಚುನಾವಣೆಗೆ ಭಾರಿ ಲಾಬಿ ಮಾಡಿದ್ದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ,ಪುಷ್ಪಾ ಅಮರನಾಥ್ ಕೂಡ ಉಭಯ ಜಿಲ್ಲೆಗಳಲ್ಲಿ ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಟಿ.ನರಸೀಪುರ, ನಂಜನಗೂಡು, ಕೊಳ್ಳೇಗಾಲ- ಮೂರು ಪ.ಜಾತಿ ಮೀಸಲು ಕ್ಷೇತ್ರಗಳು. ಟಿ.ನರಸೀಪುರ ಸೇರಿದಂತೆ ಎಲ್ಲಿಯಾದರೂ ಒಂದು ಕಡೆ ಟಿಕೆಟ್ ಪಡೆಯಬೇಕು ಎಂಬುದು ಅವರ ಉದ್ದೇಶ.
ಹಿಂದೆ ಚಾಮರಾಜನಗರ ಕ್ಷೇತ್ರದಿಂದ ರೈತ ಸಂಘದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿರುವ ರೈತ ಮುಖಂಡ ಅಮ್ಮನಪುರ ಮಲ್ಲೇಶ್ ಅವರಿಗೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಮೇಲೆ ಕಣ್ಣು. ಇದರಿಂದಾಗಿಯೇ ಕ್ಷೇತ್ರದಲ್ಲಿ ನಾನಾ ಕಾರ್ಯಕ್ರಮಗಳ ಮೂಲಕ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಚಾಮರಾಜನಗರ ಜಿಪಂ ಮಾಜಿ ಅಧ್ಯಕ್ಷೆಯಾಗಿರುವ ನಾಗಶ್ರೀ ಪ್ರತಾಪ್ ಅವರು ಮಾಜಿ ಶಾಸಕ ದಿ.ಸಿ.ಗುರುಸ್ವಾಮಿ ಅವರ ಪುತ್ರಿ. ಅವರು ಕೂಡ ವಿಧಾನಸಭಾ ಚುನಾವಣೆಯ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ.