ಪರಿಷತ್‌ ಕ್ಷೇತ್ರ ಸಮೀಕ್ಷೆ: ಪಶ್ಚಿಮದಲ್ಲಿ ಗುರು-ಶಿಷ್ಯರ ಕಾಳಗ!

By Kannadaprabha News  |  First Published Jun 11, 2022, 3:51 PM IST

* (ಪರಿಷತ್‌ ಕ್ಷೇತ್ರ ಸಮೀಕ್ಷೆ: ಪಶ್ಚಿಮದಲ್ಲಿ ಗುರು-ಶಿಷ್ಯರ ಕಾಳಗ!
* 7 ಬಾರಿ ಗೆದ್ದಿರುವ ‘ಗುರು’ ಹೊರಟ್ಟಿಗೆ ‘ಶಿಷ್ಯ’ ಶ್ರೀಶೈಲ ಗಡದಿನ್ನಿ ಪೈಪೋಟಿ
* ಕಾಂಗ್ರೆಸ್‌, ಬಿಜೆಪಿ ಇಲ್ಲಿ ಈವರೆಗೆ ಗೆದ್ದೇ ಇಲ್ಲ


ಮಲ್ಲಿಕಾರ್ಜುನ ಸಿದ್ದಣ್ಣವರ, ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
 

ಧಾರವಾಡ, (ಜೂನ್.11): 13ನೇ ಚುನಾವಣೆ ಎದುರಿಸುತ್ತಿರುವ ‘ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರ’ ಹಿಂದೆಂದಿಗಿಂತಲೂ ಈ ಬಾರಿ ರಂಗೇರಿದೆ. ಜೆಡಿಎಸ್‌-ಬಿಜೆಪಿ ಮಧ್ಯೆ ಮಾತ್ರ ನಡೆಯುತ್ತಿದ್ದ ಸ್ಪರ್ಧೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ-ಕಾಂಗ್ರೆಸ್‌ ಪರಸ್ಪರ ತೊಡೆತಟ್ಟಿವೆ. ಚುನಾವಣಾ ಅಖಾಡ ದಿನದಿಂದ ದಿನಕ್ಕೆ ತುರುಸುಗೊಳ್ಳುತ್ತಿದ್ದು, ಉಭಯ ಪಕ್ಷಗಳು ನೇರಾನೇರ ಪೈಪೋಟಿಗಿಳಿದಿವೆ.

Tap to resize

Latest Videos

ಈ ಕ್ಷೇತ್ರದಲ್ಲಿ ಸತತ ಏಳುಬಾರಿ ದಾಖಲೆಯ ಜಯಸಾಧಿಸಿ ಸೋಲಿಲ್ಲದ ಸರದಾರ ಎನಿಸಿರುವ ಬಸವರಾಜ ಹೊರಟ್ಟಿಅವರು ಎಂಟನೇ ಬಾರಿ ಅದೃಷ್ಟಪರೀಕ್ಷೆಗೆ ಇಳಿದಿರುವುದು ಮತ್ತು ಅವರು ಜನತಾ ಪರಿವಾರ ತೊರೆದು ಬಿಜೆಪಿ ಅಭ್ಯರ್ಥಿಯಾಗಿರುವುದು ಅಖಾಡ ರಂಗೇರುವಂತೆ ಮಾಡಿದೆ. ಹೀಗಾಗಿ ಮೊದಲಿಂದಲೂ ಈ ಕ್ಷೇತ್ರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದ ಕಾಂಗ್ರೆಸ್‌, ಹೊರಟ್ಟಿಬಿಜೆಪಿ ಅಭ್ಯರ್ಥಿಯಾಗುತ್ತಿದ್ದಂತೆ ಮೈಕೊಡವಿ ಎದ್ದು ಕುಳಿತಿದೆ. ಮೇಲಾಗಿ ಹೊರಟ್ಟಿಅವರ ಆಪ್ತ ಶಿಷ್ಯ ಶ್ರೀಶೈಲ ಗಡದಿನ್ನಿ ಜೆಡಿಎಸ್‌ ಅಭ್ಯರ್ಥಿಯಾಗಿ ಗುರುವಿನ ಎದುರು ನಿಂತು ತೊಡೆ ತಟ್ಟಿರುವುದು ವಿಶೇಷ.

ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದರಿಂದ ಗೆಲುವಿನ ಅಂತರ ಜಾಸ್ತಿ: ಹೊರಟ್ಟಿ

ಪಕ್ಷಗಳ ಬಲಾಬಲ, ಅಭ್ಯರ್ಥಿಗಳ ಸಾಧನೆ, ಜಾತಿ ಲೆಕ್ಕಾಚಾರ, ಪ್ರಚಾರದ ವೈಖರಿ, ಒಳ ಏಟಿನ ಸುಳಿವು ಇಡೀ ಕ್ಷೇತ್ರವನ್ನು ಊಹೆಗೆ ನಿಲುಕದಂತೆ ಮಾಡಿದ್ದರೂ ಬಿಜೆಪಿ-ಕಾಂಗ್ರೆಸ್‌ ಮಧ್ಯೆ ನೇರ ಪೈಪೋಟಿ ಕಂಡುಬರುತ್ತಿದೆ. ಆಯಾ ಪಕ್ಷಗಳ ಹಿರಿಯ ನಾಯಕರು ಕ್ಷೇತ್ರ ವ್ಯಾಪ್ತಿಯ ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಜೆಡಿಎಸ್‌ ಅಭ್ಯರ್ಥಿ ಪರ ಪ್ರಚಾರ ನಡೆಸಿ ಹೋಗಿದ್ದಾರೆ.

ಯಾರೇ ಗೆದ್ದರೂ ದಾಖಲೆ:
ಕಾಂಗ್ರೆಸ್‌, ಬಿಜೆಪಿ ಈ ಕ್ಷೇತ್ರದಲ್ಲಿ ಎಂದೂ ಗೆಲುವು ಸಾಧಿಸಿಲ್ಲ. ಶಿಕ್ಷಕರನ್ನು ಸಂಘಟಿಸಿದ ನಾಯಕರು ಪಕ್ಷೇತರ, ಲೋಕಕಶಕ್ತಿ, ಜೆಡಿಯು, ಜೆಡಿಎಸ್‌ ಅಭ್ಯರ್ಥಿಯಾಗುತ್ತ ಪ್ರಾಬಲ್ಯ ಮೆರೆಯುತ್ತ ಬಂದಿದ್ದಾರೆ. ಹಾಗಾಗಿ ಈಗ ಯಾವ ಪಕ್ಷ ಗೆದ್ದರೂ ಹೊಸ ದಾಖಲೆಯೇ ಸರಿ. ದಾಖಲೆವೀರ ಹೊರಟ್ಟಿಗೆ ಕಾಂಗ್ರೆಸ್‌ ಅಭ್ಯರ್ಥಿ ಬಸವರಾಜ ಗುರಿಕಾರ ನೇರ ಪೈಪೋಟಿ ಒಡ್ಡಿದ್ದಾರೆ. ಇಬ್ಬರಲ್ಲಿ ಯಾರೇ ಗೆದ್ದರೂ ಅದು ಕೂಡ ಹೊಸ ದಾಖಲೆಯಾಗಲಿದೆ.

2016 ಚುನಾವಣೆಯಲ್ಲಿ ಒಟ್ಟು 22389ರಷ್ಟುಇದ್ದ ಮತದಾರರ ಸಂಖ್ಯೆ ಈ ಬಾರಿ 17916ಕ್ಕೆ ಇಳಿದಿದೆ. ಪ್ರತಿಸಲವೂ ಹೊರಟ್ಟಿಭಾರೀ ಅಂತರದ ಗೆಲುವು ದಾಖಲಿಸುತ್ತ ಬಂದಿದ್ದು, ಇದೀಗ ಅದು ಕಷ್ಟಎನ್ನುವ ಮಾತಿದೆ. ಯಾರೇ ಗೆದ್ದರೂ ಅಂತರ ತೀರಾ ಕಮ್ಮಿಯಾಗಲಿದ್ದು, ಅದೂ ಕೂಡ ದಾಖಲೆಯೇ ಆಗಲಿದೆ.

ಶಿಕ್ಷಕರ ಪ್ರಶ್ನಾತೀತ ನಾಯಕ:
ಬಸವರಾಜ ಹೊರಟ್ಟಿಈ ಕ್ಷೇತ್ರದ ಮತದಾರ ಶಿಕ್ಷಕರ ಪ್ರಶ್ನಾತೀತ ನಾಯಕರಾಗಿ ಬಿಂಬಿಸಲ್ಪಟ್ಟವರು. ಮೇಲ್ಮನೆ ಸದಸ್ಯರಾಗಿ ಸದನದ ಒಳಗೂ ಶಿಕ್ಷಕರ ಪರವಾಗಿ ದನಿ ಎತ್ತುತ್ತ ಬಂದಿದ್ದಾರೆ. ತಾವೇ ಶಿಕ್ಷಣ ಸಚಿವರಾದಾಗÜ ಆ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದ್ದಾರೆ. ಸಮಸ್ಯೆ ಹೇಳಿಕೊಂಡು ಬಂದ ಯಾವುದೇ ಶಿಕ್ಷಕರಿಗೆ ನಿರಾಸೆ ಮಾಡಿಲ್ಲ ಎನ್ನುವ ದೊಡ್ಡ ಅಭಿದಾನ ಹೊರಟ್ಟಿಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಸೇರಿದಂತೆ ನಾಲ್ಕೂ ಜಿಲ್ಲೆಯ ಸಚಿವರು, ಸಂಸದರು, ಶಾಸಕರು ಹೊರಟ್ಟಿಯವರ ಬೆನ್ನಿಗೆ ನಿಂತು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದು, ಹೊರಟ್ಟಿಗೆಲುವಿನ ವಿಶ್ವಾಸದಲ್ಲಿದ್ದಾರೆ.

ಆದರೆ ಹೊರಟ್ಟಿಇಂದು ಬಿಜೆಪಿ ಅಭ್ಯರ್ಥಿ ಆಗಿರುವುದರಿಂದ ಶಿಕ್ಷಕರಲ್ಲಿನ ಅಲ್ಪಸಂಖ್ಯಾತ (ಮುಸ್ಲಿಂ, ಕ್ರೈಸ್ತ) ಮತ್ತು ದಲಿತರಿಗೆ ಸಿದ್ಧಾಂತ ಮತ್ತು ತಮ್ಮ ನಾಯಕ ಇವೆರಡರಲ್ಲಿ ಯಾವುದು ಮುಖ್ಯ? ಎನ್ನುವುದರ ಮೇಲೆ ಹೊರಟ್ಟಿಭವಿಷ್ಯ ನಿಂತಿದೆ.

ಮೂರು ದಶಕಗಳ ಸಂಘಟಕ:
ಕಾಂಗ್ರೆಸ್‌ ಅಭ್ಯರ್ಥಿ ಬಸವರಾಜ ಗುರಿಕಾರ ಕೂಡ ಕಳೆದ ಮೂರು ದಶಕಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕಟ್ಟಿಕೊಂಡು ಶಿಕ್ಷಕರ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುತ್ತಲೇ ಬಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಸೋಲುಂಡರೂ ಪಟ್ಟುಬಿಡದೇ ಈ ಕ್ಷೇತ್ರದ ಮತದಾರ ಶಿಕ್ಷಕರೊಂದಿಗೆ ಒಡನಾಟ ಇಟ್ಟುಕೊಂಡು ಅವರ ಪ್ರೀತಿ, ವಿಶ್ವಾಸ ಗಳಿಸಿದ್ದಾರೆ. ಶಿಕ್ಷಕರನ್ನು ಅತಿ ಹೆಚ್ಚು ಮತದಾರರನ್ನಾಗಿ ಮಾಡಿದ ಹೆಗ್ಗಳಿಕೆ ಇವರದು. ಮೇಲಾಗಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಇದೇ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ 3 ದಿನ ಬಿರುಸಿನ ಪ್ರಚಾರ ನಡೆಸಿದ್ದಾರೆ.

ಹೊರಟ್ಟಿಯವರ ನಾಲ್ಕು ಚುನಾವಣೆಗಳನ್ನು ಮಾಡುವ ಮೂಲಕ ಗುರುವಿನ ಪಟ್ಟುಗಳನ್ನು ಅರಿತಿರುವ ಜೆಡಿಎಸ್‌ ಅಭ್ಯರ್ಥಿ ಶ್ರೀಶೈಲ ಗಡದಿನ್ನಿ ಕೂಡ ಮತದಾರ ಶಿಕ್ಷಕರ ಮೇಲೆ ಪ್ರಭಾವ ಹೊಂದಿದ್ದಾರೆ. ಇವರ ಜತೆಗೆ ನಾಲ್ವರು ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹಾಗಾಗಿ ಯಾರು, ಯಾರಿಗೆ ಒಳ ಏಟು ನೀಡುತ್ತಾರೆ ಎನ್ನುವುದು ಇನ್ನೂ ನಿಗೂಢವಾಗಿದೆ.

* ಕಣದಲ್ಲಿರುವ ಅಭ್ಯರ್ಥಿಗಳು:
ಬಸವರಾಜ ಹೊರಟ್ಟಿ-ಬಿಜೆಪಿ
ಬಸವರಾಜ ಗುರಿಕಾರ- ಕಾಂಗ್ರೆಸ್‌
ಶ್ರೀಶೈಲ ಗಡದಿನ್ನಿ- ಜೆಡಿಎಸ್‌
ಕರಿಬಸಪ್ಪ ಮಧ್ಯಾಹ್ನದ- ಪಕ್ಷೇತರ
ಕೃಷ್ಣವಾಣಿ ಶ್ರೀನಿವಾಸಗೌಡ- ಪಕ್ಷೇತರ
ಫಕೀರಗೌಡ ಕಲ್ಲನಗೌಡರ- ಪಕ್ಷೇತರ
ವೆಣಕನಗೌಡ ಗೌಡರ- ಪಕ್ಷೇತರ

* ಕಳೆದ ಬಾರಿಯ ಫಲಿತಾಂಶ(2016)
ಒಟ್ಟು ಮತಗಳು-22389
ಚಲಾವಣೆಯಾದ ಮತ-14,939
ಬಸವರಾಜ ಹೊರಟ್ಟಿ-7480
ಮಾ.ನಾಗರಾಜ- 4371
ಗೆಲುವಿನ ಅಂತರ-3109

click me!