ಶಿವಮೊಗ್ಗ (ಡಿ.04): ರಾಜ್ಯದಲ್ಲಿರುವ ಭ್ರಷ್ಟಾಚಾರದ ಸರ್ಕಾರ (karnataka Govt) ಬದಲಾವಣೆ ಆಗಬೇಕಿದೆ. ರಾಜ್ಯದಲ್ಲಿ ಕೊರೊನಾ (Corona) ಸಂದರ್ಭದಲ್ಲಿ ಬೆಡ್ ಖರೀದಿಯಲ್ಲಿ ಭಾರೀ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ. ಸರ್ಕಾರದ ಆಡಳಿತ ವೈಖರಿಗೆ ಜನತೆ ಭ್ರಮ ನಿರಸನಗೊಂಡಿದ್ದಾರೆ ಎಂದು ಸರ್ಕಾರದ ವಿರುದ್ಧ ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಆಕ್ರೋಶ ವ್ಯಕ್ತಪಡಿಸಿದರು. ಶಿವಮೊಗ್ಗದಲ್ಲಿಂದು (Shivamogga) ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು.
ಬೆಳಗಾವಿ (Belagavi) ಅಧಿವೇಶನದಲ್ಲಿ ರಾಜ್ಯದ ಭ್ರಷ್ಟಾಚಾರ(Corruption), ಆಡಳಿತ ವೈಫಲ್ಯ ಬಗ್ಗೆ ಪ್ರಸ್ತಾಪ ಮಾಡುತ್ತೇವೆ. ಪರಿಷತ್ ಚುನಾವಣೆಯ (MLC Election) ಕಾಂಗ್ರೆಸ್ 15 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ. ನಮ್ಮ ಪಕ್ಷ ಹೆಚ್ಚು ಸ್ಥಾನಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅಭ್ಯರ್ಥಿ ಪ್ರಸನ್ನ ಕುಮಾರ್ ಪರ ಪ್ರಚಾರದ ವೇಳೆ ಡಿಕೆ ಶಿವಕುಮಾರ್ ತಿಳಿಸಿದರು.
ಪರಿಷತ್ ಚುನಾವಣೆ ನಂತರ ಈಶ್ವರಪ್ಪ (KS Eshwarappa) ಸಿಎಂ ಬದಲಾವಣೆ ಆಗುತ್ತದೆ ಎಂದಿದ್ದಾರೆ. ಡಿಸಿಎಂ ಆಗಿದ್ದವರೂ ಹೇಳಿದಂತೆ ನಡೆಯಬಹುದು. ಹಿಂದೆ ಸಿಎಂ ಬದಲಾವಣೆ ಅಂದಿದ್ದರು. ಆದರೆ ಅದು ಆಗುವುದಿಲ್ಲ ಎಂದುಕೊಂಡಿದ್ದೆವು. ಅದರೆ ನಾವಂದುಕೊಂಡದ್ದು ಸುಳ್ಳಾಯ್ತು. ಯಡಿಯೂರಪ್ಪ (Yediyurappa) ಕಣ್ಣಲ್ಲಿ ನೀರು ಹಾಕಿದ್ದರು. ಹಾಗೆಯೇ ಈಗಲೂ ಸಹ ಈಶ್ವರಪ್ಪ ಹೇಳಿದ್ದು ಸತ್ಯವಾಗಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ಪಕ್ಷ ಸೆರುವವರ ಸಂಖ್ಯೆ ಹೆಚ್ಚಳ : ಕಾಂಗ್ರೆಸ್ (Congress) ಪಕ್ಷಕ್ಕೆ ಸೇರ್ಪಡೆಯಾಗುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇದರಿಂದ ನಮ್ಮ ಬಲ ಹೆಚ್ಚಾಗಿ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗೃಹ ಸಚಿವರ ಹೇಳಿಕೆ ಕುರಿತು ಪ್ರತಿಕ್ರಿಯೆ : ಪೊಲೀಸರು (police) ಎಂಜಲು ಕಾಸಿಗೆ ಆಸೆ ಪಡುವವರು ಎನ್ನುವ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಪಾಪ ಗೃಹ ಸಚಿವರು ಇರುವುದನ್ನು ಹೇಳುತ್ತಿದ್ದಾರೆ. ಆಯುಧ ಪೂಜೆ ದಿನ ಉಡುಪಿ, ವಿಜಯಪುರದಲ್ಲಿ ಪೋಲಿಸರಿಗೆ ಹೊಸ ಬಟ್ಟೆ ಕೊಡಿಸಿದ್ದಾರೆ. ಗೃಹ ಸಚಿವರು ಪೊಲೀಸರಿಗೆ ಎಂಜಲು ಕಾಸು ಎಂಬ ಪದ ಬಳಸಿದ್ದಾರೆ. ನಾಯಿಯಾದರೂ ನಿಯತ್ತಿನ ಪ್ರಾಣಿ. ಆ ಇಲಾಖೆಯಲ್ಲಿ ಏನಾಗುತ್ತಿದೆ ಎಂಬುದು ಅವರೇ ಹೇಳಬೇಕು. ಆದರೆ, ಪದ ಬಳಕೆ ತಪ್ಪು ಎಂದರು.
ಸಿದ್ದರಾಮಯ್ಯ ವಿಶ್ವಾಸ : ಇನ್ನು ಅಭ್ಯರ್ಥಿ ಪ್ರಸನ್ನ ಕುಮಾರ್ ಪರ ಪ್ರಚಾರಕ್ಕೆ ಶಿವಮೊಗ್ಗಕ್ಕೆ ಆಗಮಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಪರಿಷತ್ ಚುನಾವಣೆ ನಡೆಯುತ್ತಿರುವ 20 ಸ್ಥಾನ ಗಳಲ್ಲಿ ಕನಿಷ್ಠ 15 ಸ್ಥಾನದಲ್ಲಿ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಬಿಜೆಪಿ ಸರ್ಕಾರ ಜನಪರ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರು.
ಎಚ್‌ಡಿಡಿ - ಪ್ರಧಾನಿ ಭೇಟಿ ವಿಚಾರ : ಪ್ರಧಾನಿ ಮೋದಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಭೇಟಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ (Siddaramaiah) ಬಿಜೆಪಿಗೆ ಜೆಡಿಎಸ್ (JDS) ಬೆಂಬಲಿಸುತ್ತಾರೆ. ಕೆಲವು ಕ್ಷೇತ್ರದಲ್ಲಿ ಜೆಡಿಎಸ್ ಸ್ಥಳೀಯ ಮುಖಂಡರು ಕಾಂಗ್ರೆಸ್ ಗೆ ಬೆಂಬಲ ನೀಡುತ್ತಾರೆ ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಪೊಲೀಸ್ ಅಧಿಕಾರಿಗಳಿಗೆ ಟೀಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರಿಗೆ ಸಚಿವ ಸ್ಥಾನ ನಿರ್ವಹಣೆ ಮಾಡಲು ಆಗದೇ ಇದ್ದರೆ ರಾಜೀನಾಮೆ ನೀಡಬೇಕು. ಅವರ ಇಲಾಖೆಯಲ್ಲಿ ಭ್ರಷ್ಟಾಚಾರ ಕೊಳೆತು ನಾರುತ್ತಿದೆ ಎನ್ನುವುದು ಮನವರಿಕೆ ಆಗಿದೆ. ಈ ಹಿನ್ನೆಲೆಯಲ್ಲಿ ಇಂತಹ ಹೇಳಿಕೆ ನೀಡಿದ್ದಾರೆ ಎಂದರು.
ಅಧಿವೇಶನ ಆರಂಭವಾಗುತ್ತಿದೆ. ಅತಿವೃಷ್ಟಿ ಸಮಸ್ಯೆಯಾಗಿದೆ. ಮೂರು ನಾಲ್ಕು ಪಟ್ಟು ಹೆಚ್ಚು ಮಳೆ ಹೆಚ್ಚಾಗಿದೆ. ಅಪಾರ ಪ್ರಮಾಣದ ಬೆಳೆ ನಷ್ಟ ಆಗಿದೆ. ಒಂದು ತಿಂಗಳಾಯ್ತು, ಇನ್ನು ಕೂಡಾ ಸರ್ವೇ ಆಗಿಲ್ಲ. 6 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ರೈತರ ವಿರೋಧಿ ಸರ್ಕಾರ ಇದಾಗಿದೆ. ಬಿಜೆಪಿ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಜನರು ಶಾಪ ಹಾಕುತ್ತಿದ್ದಾರೆ. ರಾಜಕೀಯ ಧೃವೀಕರಣ ಶುರುವಾಗಿದೆ. ಜೆಡಿಎಸ್ ಮತ್ತು ಬಿಜೆಪಿಯಿಂದ ಅನೇಕರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ ಎಂದರು.