ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಬಿಜೆಪಿಯಿಂದ 6 ವರ್ಷ ಉಚ್ಚಾಟನೆ ಮಾಡಿರುವ ಹೈಕಮಾಂಡ್ ನಿಲುವನ್ನು ಖಂಡಿಸಿ ವಿಜಯಪುರ ಜಿಲ್ಲೆಯಲ್ಲಿ ಪಕ್ಷದ 174 ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ.
ವಿಜಯಪುರ (ಮಾ.28): ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಬಿಜೆಪಿಯಿಂದ 6 ವರ್ಷ ಉಚ್ಚಾಟನೆ ಮಾಡಿರುವ ಹೈಕಮಾಂಡ್ ನಿಲುವನ್ನು ಖಂಡಿಸಿ ವಿಜಯಪುರ ಜಿಲ್ಲೆಯಲ್ಲಿ ಪಕ್ಷದ 174 ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿಯ ನಗರ ಮಂಡಲದ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿ ಎಲ್ಲ ಮೋರ್ಚಾಗಳ 174 ಪದಾಧಿಕಾರಿಗಳು ಅಧಿಕೃತವಾಗಿ ಗುರುವಾರ ತಮ್ಮ ಹುದ್ದೆಗಳಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎಂದು ನಗರ ಮಂಡಲ ಅಧ್ಯಕ್ಷತೆ ಶಂಕರ ಹೂಗಾರ ತಿಳಿಸಿದ್ದಾರೆ.
ಯತ್ನಾಳರನ್ನು ಉಚ್ಚಾಟನೆ ಮಾಡಿದ್ದರಿಂದ, ಮನಸಿಗೆ ನೋವುಂಟಾಗಿದೆ ಎಂದು ಪದಾಧಿಕಾರಿಗಳು ಆಕ್ರೋಶ ಹೊರಹಾಕಿದ್ದಾರೆ. ನಗರ ಮ೦ಡಲದ ಕಾರ್ಯದರ್ಶಿಗಳು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಸಾಮಾಜಿಕ ಜಾಲತಾಣದ ಸಂಚಾಲಕರು, ಸಂಚಾಲಕರು, ಮಾಧ್ಯಮ ಪ್ರಮುಖರು, ಕಾರ್ಯಾಲಯ ಕಾರ್ಯದರ್ಶಿ, ಕಾನೂನು ಪ್ರಕೋಷ್ಟ, ಕೋಶಾಧ್ಯಕ್ಷರು, ಕಾರ್ಯಕಾರಿಣಿ ಸದಸ್ಯರು ಹಾಗೂ ಯುವ ಮೋರ್ಚಾದ ಅಧ್ಯಕ್ಷರು ಪದತ್ಯಾಗ ಮಾಡಿದ್ದಾರೆ.
ಯತ್ನಾಳರ ವಿಜಯಪುರ ನಿವಾಸ ಖಾಲಿ, ಖಾಲಿ: ಅಶಿಸ್ತಿನ ಹಿನ್ನೆಲೆಯಲ್ಲಿ ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ ವಿಜಯಪುರದ ನಿವಾಸ ಬಿಕೋ ಎನ್ನುತ್ತಿದೆ. ಸದಾ ಅಭಿಮಾನಿಗಳಿಂದ ತುಂಬಿರುತ್ತಿದ್ದ ನಗರದ ಸಿಂದಗಿ ರಸ್ತೆಯಲ್ಲಿರುವ ಯತ್ನಾಳರ ಮನೆಯತ್ತ ಯಾರೂ ಸುಳಿಯುತ್ತಿಲ್ಲ. ಇದರಿಂದಾಗಿ ಅವರ ಮನೆ ಖಾಲಿ, ಖಾಲಿಯಾಗಿದೆ. ಯತ್ನಾಳ್ ಅವರು ದೊಡ್ಡ ಸಂಖ್ಯೆಯಲ್ಲಿ ಬೆಂಬಲಿಗರನ್ನು ಹೊಂದಿದ್ದರೂ, ಅವರೂ ಸಹ ಮನೆಯತ್ತ ಬರುತ್ತಿಲ್ಲ ಎನ್ನಲಾಗಿದೆ. ಈ ಮಧ್ಯೆ, ಪೊಲೀಸ್ ಹಾಗೂ ಸೆಕ್ಯೂರಿಟಿ ಗಾರ್ಡ್ ಅವರ ಮನೆಗೆ ಬಿಗಿ ಬಂದೋಬಸ್ತ್ ಕಲ್ಪಿಸಿದ್ದು, ಮನೆಗೆ ಯಾರನ್ನೂ ಬಿಡುತ್ತಿಲ್ಲ.
ಉಚ್ಚಾಟಿತ ಶಾಸಕ ಯತ್ನಾಳ್ ಪರ ಬಿಜೆಪಿಗರ ಅನುಕಂಪ: ಘಟಾನುಘಟಿ ನಾಯಕರು ಹೇಳಿದ್ದೇನು?
ಯತ್ನಾಳ್ ಬಿಜೆಪಿಗೆ ಲಾಭವಲ್ಲ, ಹಾನಿ: ಯತ್ನಾಳ್‌ರಿಂದ ಬಿಜೆಪಿಗೆ ಹಾನಿಯಾಗಿದೆ ಹೊರತು ಕಿಂಚಿತ್ತು ಲಾಭವಾಗಿಲ್ಲ. ಆದ್ದರಿಂದ ಇದೀಗ ಅವರ ಉಚ್ಚಾಟನೆಯಿಂದಲೂ ಪಕ್ಷಕ್ಕೆ ಯಾವುದೇ ಹಾನಿಯಾಗಲ್ಲ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯತ್ನಾಳರ ನಡವಳಿಕೆಯೇ ಅವರಿಗೆ ಮುಳುವಾಗಿದೆ. ಈ ಹಿಂದೆ ನನಗೆ ಟಿಕೆಟ್ ಸಿಕ್ಕಾಗಲೂ ಚುನಾವಣೆ ಮಾಡಲಿಲ್ಲ. ಅವರ ತಾತ್ಸಾರ, ಅಸೂಯೆ, ಹೊಟ್ಟೆಕಿಚ್ಚಿನ ಗುಣವೇ ಅವರನ್ನು ಇಂದು ಕಾಡುತ್ತಿದೆ ಎಂದರು. ಸ್ವತಃ ಯತ್ನಾಳ್ ಅವರೇ 5-6 ಸಾವಿರ ಮತಗಳ ಅಂತರದಿಂದಗೆಲುವು ಸಾಧಿಸಿದ್ದಾರೆ. ಯಾವುದೇ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಲ್ಲ, ಅವರ ನೇತೃತ್ವದಲ್ಲಿ ಜಿ.ಪಂ ಸ್ಥಾನಗಳಲ್ಲಿಯೂ ಗೆಲುವು ಸಾಧಿಸಿಲ್ಲ. ಹೀಗಾಗಿ ಇವರಿಂದ ಪಕ್ಷಕ್ಕೆ ಕಿಂಚಿತ್ತು ನಷ್ಟವಾಗಲ್ಲ ಎಂದರು.