ಉಚ್ಚಾಟಿತ ಶಾಸಕ ಯತ್ನಾಳ್ ಪರ ಬಿಜೆಪಿಗರ ಅನುಕಂಪ: ಘಟಾನುಘಟಿ ನಾಯಕರು ಹೇಳಿದ್ದೇನು?

ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ ಆರೋಪದಡಿ ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಚಾಟನೆಗೊಂಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಪರ ಬಿಜೆಪಿಯ ಕೆಲ ನಾಯಕರು ಅನುಕಂಪದ ಮಾತುಗಳನ್ನಾಡಿದ್ದಾರೆ. 

BJP leaders express sympathy for expelled MLA Yatnal gvd

ಬೆಂಗಳೂರು (ಮಾ.28): ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ ಆರೋಪದಡಿ ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಚಾಟನೆಗೊಂಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಪರ ಬಿಜೆಪಿಯ ಕೆಲ ನಾಯಕರು ಅನುಕಂಪದ ಮಾತುಗಳನ್ನಾಡಿದ್ದಾರೆ. ಪಕ್ಷದಿಂದ ಉಚ್ಚಾಟನೆ ಮಾಡಿರುವ ಕ್ರಮ ದುರದೃಷ್ಟಕರ ಎಂದಿರುವ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಶ್ರೀರಾಮುಲು, ಉಚ್ಚಾಟನೆಯ ಮರುಪರಿಶೀಲನೆಗೆ ಹೈಕಮಾಂಡ್ ನಾಯಕರಿಗೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ. ಇದೇ ವೇಳೆ, ಸಿ.ಟಿ.ರವಿ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಮತ್ತಿತರ ನಾಯಕರು, ಪಕ್ಷದ ವಿರುದ್ಧ ಮಾತನಾಡುವುದು ಯಾರಿಗೂ ಒಳ್ಳೆಯದಲ್ಲ ಎಂದು ಹಿತವಚನದ ಮಾತುಗಳನ್ನಾಡಿದ್ದಾರೆ. 

ಆ ಮೂಲಕ ಪಕದ ತೀರ್ಮಾನವನ್ನು ಸಮರ್ಥಿಸಿಕೊಂಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಯತ್ನಾಳರು ಏಕಾಂಗಿಯಲ್ಲ. ಅವರ ಜೊತೆಗೆ ನಾವು ಗಟ್ಟಿಯಾಗಿ ನಿಂತಿದ್ದೇವೆ. ಬೆಂಗಳೂರಿನಲ್ಲಿ ಶುಕ್ರವಾರ ಸಭೆ ನಡೆಸಿ, ಯತ್ನಾಳ ಕಡೆಯಿಂದ ಹೈಕಮಾಂಡ್‌ಗೆ ಪತ್ರ ಬರೆಸಿ, ಆದೇಶದ ಮರುಪರಿಶೀಲನೆಗೆ ಮನವಿ ಮಾಡುತ್ತೇವೆ ಎಂದಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ಎಲ್ಲರೂ ಒಟ್ಟಿಗೆ ಹೋಗಬೇಕೆಂದು ಬಹಳ ಪ್ರಯತ್ನ ಮಾಡಿದೆವು. ಆದರೆ, ಕೇಂದ್ರ ನಾಯಕರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು. ಪಕ್ಷದ ವಿರುದ್ಧ ಮಾತನಾಡುವುದು ಯಾರಿಗೂ ಒಳ್ಳೆಯದಲ್ಲ ಎಂದು ಹಿತವಚನದ ಮಾತುಗಳನ್ನಾಡಿದ್ದಾರೆ.

Latest Videos

ಇದೇ ವೇಳೆ, ಚಿಕ್ಕಮಗಳೂರಿನಲ್ಲೇ ಮಾತನಾಡಿದ ಪರಿಷತ್ ಸದಸ್ಯ, ಮಾಜಿ ಸಚಿವ ಸಿ.ಟಿ.ರವಿ, ಬಸನಗೌಡಪಾಟೀಲ್‌ ಯತ್ನಾಳರು ನಮ್ಮ ನಾಲ್ಕು ದಶಕಗಳ ಒಡನಾಡಿ, ಅವರ ಉಚ್ಚಾಟನೆ ದುರದೃಷ್ಟಕರ ಎಂದು ಹೇಳಿದರು. ಆದರೆ, ವ್ಯಕ್ತಿ ಮುಖ್ಯವಲ್ಲ, ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂದು ಹೇಳಿದರು. ಬಳ್ಳಾರಿಯಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ಶ್ರೀರಾಮುಲು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ಈ ಆದೇಶದ ಮರುಪರಿಶೀಲನೆ ಮಾಡುವ ಮೂಲಕ ಪಕ್ಷಕ್ಕೆ ಆಗುವ ನಷ್ಟವನ್ನು ತಪ್ಪಿಸಬೇಕು ಎಂದು ಕೋರಿದರು. ನನಗೂ ಅವಕಾಶ ಸಿಕ್ಕರೆ ರಾಷ್ಟ್ರೀಯ ನಾಯಕರ ಬಳಿ ಹೋಗಿ ಮನವಿ ಮಾಡುತ್ತೇನೆ ಎಂದು ಹೇಳಿರುವ ರಾಮುಲು, ಯತ್ನಾಳರು ರಾಜ್ಯದ ಲಿಂಗಾಯತ ಪಂಚಮಸಾಲಿ ಸಮುದಾಯದ ಪ್ರಬಲ ನಾಯಕರಾಗಿದ್ದು, ಉಚ್ಚಾಟನೆ ಆ ಸಮುದಾಯದ ನಾಯಕರಿಗೆ, ಹಿಂದುವಾದಿಗಳಿಗೆ ತೀವ್ರ ನೋವು ಉಂಟು ಮಾಡಿದೆ ಎಂದು ರಾಮುಲು ಹೇಳಿದ್ದಾರೆ. 

ಅಡ್ಜಸ್ಟ್‌ಮೆಂಟ್ ರಾಜಕಾರಣ ನಿಲ್ಲದಿದ್ದರೆ ಪಕ್ಷ ಮಕಾಡೆ: ಶಾಸಕ ಯತ್ನಾಳ್

ಈ ಮಧ್ಯೆ, ಹಾವೇರಿಯಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ಸಿ.ಪಾಟೀಲ್, ಯತ್ನಾಳರ ಉಚ್ಚಾಟನೆ ದುರದೃಷ್ಟಕರ. ಆದರೂ, ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್ ಒಳ್ಳೆಯ ನಿರ್ಧಾರ ಕೈಗೊಂಡಿದೆ. ಪಕ್ಷದ ತತ್ವ ಸಿದ್ಧಾಂತಗಳಿಗೆ ಎಲ್ಲರೂ ಬದ್ಧರಾಗಿರಬೇಕು ಎಂದು ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಶಾಸಕ ಎಸ್.ಎನ್.ಚನ್ನಬಸಪ್ಪ, ಬಿಜೆಪಿ ಅಶಿಸ್ತನ್ನು ಯಾವತ್ತೂ ಸಹಿಸಿಲ್ಲ ಸಹಿಸುವುದೂ ಇಲ್ಲ. ಅದರ ಪರಿಣಾಮವೇ ಯತ್ನಾಳರ ಉಚ್ಚಾಟನೆ ಎಂದು ಹೇಳಿದರು. ಈ ಹಿಂದಿನ ಸನ್ನಿವೇಶಗಳನ್ನು ನೆನಪಿಸಿಕೊಂಡಿರುವ ಚನ್ನ ಬಸಪ್ಪ ಅವರು, ಉಮಾಭಾರತಿಯಂತಹ ದೊಡ್ಡ, ದೊಡ್ಡ ನಾಯಕರನ್ನೂ ಕೂಡ ಅಶಿಸ್ತು ತೋರಿದಾಗ ಪಕ್ಷದಿಂದ ಉಚ್ಚಾಟಿಸಲಾಗಿತ್ತು ಎಂದು ಹೇಳಿದ್ದಾರೆ.

vuukle one pixel image
click me!