
ಬೆಂಗಳೂರು (ಏ.01): ಸಿಎಂ ಯಡಿಯೂರಪ್ಪ ಮೇಲೇಕೆ ಸಚಿವ ಈಶ್ವರಪ್ಪ ದೂರು ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಸಿಎಂ ಪರವಾಗಿ ಹಲವರು ಸಚಿವರು ನಿಂತಿದ್ದಾರೆ.
ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಮಹೇಶ್ ಕುಮುಟಹಳ್ಳಿ, ಅರುಣ್ ಕುಮಾರ್, ಮಾಡಾಳ್ ವಿರೂಪಾಕ್ಷಪ್ಪ ಸೇರಿ ಹಲವರು ಸಿಎಂ ಯಡಿಯೂರಪ್ಪ ಭೇಟಿ ಮಾಡಿದ್ದು, ಅವರ ಪರ ಸಹಿ ಸಂಗ್ರಹ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಇದು ಚುನಾವಣಾ ಸಮಯ. ಈ ಸಂಧರ್ಭದಲ್ಲಿ ಸಿಎಂ ಮೇಲೆ ರಾಜ್ಯಪಾಲರಿಗೆ ದೂರು ಕೊಡುವುದು ಎಷ್ಟು ಸರಿ. ಹಿಂದೆ ರಾಯಣ್ಣ ಬ್ರಿಗೇಡ್ ಮಾಡಿ ಪಕ್ಷಕ್ಕೆ ಡ್ಯಾಮೇಜ್ ಮಾಡಿದ್ದರಿ. ಅಂದು ರಾಯಣ್ಣ ಬ್ರಿಗೇಡ್ ಮಾಡದೇ ಇದ್ದಿದ್ದರೆ ಬಿಜೆಪಿಗೆ 140 ಸ್ಥಾನ ಬರುತಿತ್ತು ಎಂದು ಅಸಮಾಧಾನ ಹೊರಹಾಕಿದರು.
ಈಶ್ವರಪ್ಪ ದೂರು : ಸರ್ಕಾರ ವಜಾಕ್ಕೆ ಆಗ್ರಹ
ಈಶ್ವರಪ್ಪ ನಡೆಯನ್ನು ನಾವೆಲ್ಲಾ ಶಾಸಕರು ಖಂಡಿಸುತ್ತೇವೆ. ಕೇಂದ್ರ ಸಚಿವ ಅಮಿತ್ ಶಾ, ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರಿಗೆ ಈಶ್ವರಪ್ಪ ಮೇಲೆ ದೂರು ಕೊಡುತ್ತೇವೆ. ಈಶ್ವರಪ್ಪಗೆ ಏನೇ ಸಮಸ್ಯೆ ಇದ್ದರೂ ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ಮಾಡಬೇಕಿತ್ತು. ಅದು ಬಿಟ್ಟು ಸಿಎಂ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬಾರದು. ಸಿಎಂ ಮೇಲಿನ ನಿಮ್ಮ ದೂರು ಅಕ್ಷಮ್ಯ ಅಪರಾಧ ಎಂದಿದ್ದಾರೆ.
ಮರೀಸ್ವಾಮಿ ಒಬ್ಬರಿಗೆ ಮಾತ್ರ ಅನುದಾನ ಬಿಡುಗಡೆ ಮಾಡಿಲ್ಲ. ಬೆಂಗಳೂರು ನಗರದಲ್ಲಿರುವ ಒಟ್ಟು ಜಿಲ್ಲಾ ಪಂಚಾಯಿತಿ ಸದಸ್ಯರಿಗೆ 65 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಈಶ್ವರಪ್ಪ ವಿರುದ್ದ ಸೂಕ್ತವಾದ ಕ್ರಮ ಕೈಗೊಳ್ಳಬೇಕು. ಉಪ ಚುನಾವಣೆ ಸಂದರ್ಭದಲ್ಲಿ ಈ ರೀತಿಯ ಸಚಿವರ ವರ್ತನೆ ಸರಿಯಲ್ಲ. ಹೀಗಾಗಿ ಇದು ತಪ್ಪು, ಇವರ ವಿರುದ್ಧ ಸೂಕ್ತವಾದ ಕ್ರಮ ಕೈಗೊಳ್ಳಬೇಕು ಎಂದು ದೂರು ಕೊಡುತ್ತೇವೆ ಎಂದು ರೇಣುಕಾಚಾರ್ಯ ಅಸಮಾಧಾನ ಹೊರಹಾಕಿದ್ದಾರೆ.
ಕೆ.ಎಸ್.ಈಶ್ವರಪ್ಪ ಬಗ್ಗೆ ಬೇಸರ ವ್ಯಕ್ತಪಡಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದೂರು ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಕಾರ್ಯವೈಖರಿ ಬಗ್ಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಿರಿಯ ಸಚಿವರಾದ ಕೆ ಎಸ್ ಈಶ್ವರಪ್ಪನವರು ಮುಖ್ಯಮಂತ್ರಿಗಳ ಕಾರ್ಯವೈಖರಿಯ ಬಗ್ಗೆ ಮತ್ತು ಹಣವನ್ನು ಮಂಜೂರು ಮಾಡಿರುವ ಬಗ್ಗೆ ನೇರವಾಗಿ ರಾಜ್ಯಪಾಲರಿಗೆ ದೂರನ್ನು ಸಲ್ಲಿಸಿರುವುದು ಸರಿಯಾದ ಕ್ರಮ ಅಲ್ಲ ಎಂದು ಬಿ.ಸಿ.ಪಾಟೀಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"
ಯಾವುದೇ ವಿಷಯಗಳು ಇದ್ದರೂ ಕೂಡ ಅದನ್ನು ಸಂಪುಟ ಸಭೆಯಲ್ಲಿ ಚರ್ಚಿಸಲು ಅವಕಾಶವಿದೆ. ಹೀಗಿದ್ದರೂ ಕೂಡ ಸಂಪುಟ ಸಭೆಯಲ್ಲಿ ಯಾವುದೇ ವಿಷಯವನ್ನು ಈಶ್ವರಪ್ಪನವರು ಪ್ರಸ್ತಾಪ ಮಾಡದೆ ಈ ರೀತಿ ನೇರವಾಗಿ ಏಕಾಏಕಿ ರಾಜ್ಯಪಾಲರಿಗೆ ದೂರು ಸಲ್ಲಿಸುವುದು ಹಿರಿಯರಾದ ಈಶ್ವರಪ್ಪನವರಿಗೆ ಶೋಭೆ ತರುವಂತಹದ್ದಲ್ಲ. ಯಾವುದೇ ತಪ್ಪನ್ನು ಮಾಡದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಪ್ಪು ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲರಿಗೆ ದೂರು ನೀಡಿರುವುದು ಎಷ್ಟು ಸರಿ? ಎಂದು ಬಿ.ಸಿ.ಪಾಟೀಲ್ ಪತ್ರಿಕಾ ಪ್ರಕಟಣೆ ಮೂಲಕ ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.