ಕೊತ್ವಾಲ ಶಿಷ್ಯನ ಕೈಗೆ ಅಧಿಕಾರ ಸಿಕ್ಕದಿರುವುದು ನಮ್ಮ ಪುಣ್ಯ: ಡಿಕೆಶಿ ವಿರುದ್ಧ ರಮೇಶ್‌ ಜಾರಕಿಹೊಳಿ ಕಿಡಿ

By Govindaraj SFirst Published Jan 22, 2024, 11:59 AM IST
Highlights

ರಾಜ್ಯದಲ್ಲಿ ಸಿದ್ದರಾಮಯ್ಯನವರ ಕೈಗೆ ಅಧಿಕಾರ ಸಿಕ್ಕಿದೆ. ಒಂದು ವೇಳೆ ಕೊತ್ವಾಲನ ಶಿಷ್ಯನ ಕೈಯಲ್ಲಿ ಸಿಕ್ಕಿದ್ದರೇ ಅವರು ಹಾಗೂ ಬೆಳಗಾವಿ ವಿಷಕನ್ಯೆ ಸೇರಿ ನಮ್ಮ, ನಿಮ್ಮ ಉತಾರಗಳಲ್ಲಿ ಅವರದ್ದೇ ಹೆಸರು ಸೇರಿಸಿಕೊಳ್ಳುತ್ತಿದ್ದರು ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಕಿಡಿಕಾರಿದರು. 
 

ಕಾಗವಾಡ (ಜ.22): ರಾಜ್ಯದಲ್ಲಿ ಸಿದ್ದರಾಮಯ್ಯನವರ ಕೈಗೆ ಅಧಿಕಾರ ಸಿಕ್ಕಿದೆ. ಒಂದು ವೇಳೆ ಕೊತ್ವಾಲನ ಶಿಷ್ಯನ ಕೈಯಲ್ಲಿ ಸಿಕ್ಕಿದ್ದರೇ ಅವರು ಹಾಗೂ ಬೆಳಗಾವಿ ವಿಷಕನ್ಯೆ ಸೇರಿ ನಮ್ಮ, ನಿಮ್ಮ ಉತಾರಗಳಲ್ಲಿ ಅವರದ್ದೇ ಹೆಸರು ಸೇರಿಸಿಕೊಳ್ಳುತ್ತಿದ್ದರು ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಕಿಡಿಕಾರಿದರು. ಕಾಂಗ್ರೆಸ್ ಸರ್ಕಾರ ತಾರತಮ್ಯ ನೀತಿ ವಿರೋಧಿಸಿ ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ಬಿಜೆಪಿ ಪ್ರತಿಭಟನೆ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಪಾಪ ಸಿದ್ದಾರಮಯ್ಯರು ಒಳ್ಳೆಯವರು. ಅವರ ಬಗ್ಗೆ ಗೌರವ ಇದೆ. ಅವರ ಜೊತೆ ನಾನು ಕೆಲಸ ಮಾಡಿದ್ದೇನೆ. 

ಆದರೆ, ಅವರೂ ಈಗ ಮೊದಲಿನ ಸಿದ್ದರಾಮಯ್ಯ ಆಗಿ ಉಳಿದಿಲ್ಲ. ಯಾವಾಗ ಕೊತ್ವಾಲನ ಶಿಷ್ಯ ಉಪಮುಖ್ಯಮಂತ್ರಿ ಆದನೋ ಆಗಿನಿಂದ ಸಿದ್ದರಾಮಯ್ಯ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಟೀಕಿಸಿದರು. ಕೊತ್ವಾಲನ ಶಿಷ್ಯನ ಕೈಯಲ್ಲಿ ಅಧಿಕಾರ ಬಂದಿಲ್ಲ ನಮ್ಮ ಪುಣ್ಯ. ದೇವರು ದೊಡ್ಡವನಿದ್ದಾನೆ. ಒಂದು ವೇಳೆ ಅಧಿಕಾರ ಸಿಕ್ಕಿದ್ದರೇ ನಮ್ಮ ಆಸ್ತಿಗೆಲ್ಲ ಅವರ ಹೆಸರೇ ಸೇರುತ್ತಿತ್ತು. ಮೊದಲು ಈ ತರಹ ಅಥಣಿಯಲ್ಲಿ ಆಗುತ್ತಿತ್ತು. ಆದರೆ, ಈಗ ಕಾಗವಾಡದಲ್ಲಿ ಹೆಚ್ಚುತ್ತಿವೆ ಎಂದು ಆರೋಪಿಸಿದರು. ಪುರಸಭೆ ಸದಸ್ಯೆ ದೀಪಾಲಿ ಸಿಂಗೆಯವರ ಪತಿ ಮೇಲೆ ಕೇಸ್ ಆಗಿರುವುದು ಗೊತ್ತಾಗಿದೆ. 

ಪೂರ್ಣಾವಧಿ ಸಿಎಂ ಬಗ್ಗೆ ಪಕ್ಷದ ಹೈಕಮಾಂಡ್‌ ನಿರ್ಧರಿಸಲಿದೆ: ಸಚಿವ ಆರ್.ಬಿ.ತಿಮ್ಮಾಪುರ

ನನಗೆ ಇದರ ಸಂಪೂರ್ಣ ಮಾಹಿತಿ ಇದೆ. ನನ್ನ ಮೇಲೆ 420 ಕೇಸ್ ಆಗಿದೆ, ನೀವೇನು ಮಹಾ. ಆದರೂ ಹೆದರಬೇಡಿ. ಮೊದಲಿನಿಂದ ಅವರು ಇದನ್ನೇ ಮಾಡುತ್ತಾ ಬಂದಿದ್ದಾರೆ. ಮುಂದೆಯೂ ಇದನ್ನೇ ಮಾಡುತ್ತಾರೆ ಎಂದು ದೂರಿದರು. ಪುರಸಭೆ ಸದಸ್ಯೆ ಸಿಂಗೆಯವರ ಪತಿಯ ಕೇಸ್ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಬಗ್ಗೆ ಮಾತನಾಡಿದ್ದೇನೆ. ವಿಷಯ ಗೊತ್ತಿದೆ. ತಪ್ಪ, ಒಪ್ಪು ಆಮೇಲೆ. ಮೊದಲು ಎಫ್ಐಆರ್ ಆಗಬೇಕು. ರಾಜಕಾರಣ ಸೈಕಲ್ ಇದ್ದಂತೆ. ಮುಂದೆ ಅವರು ಕೆಳಗೆ ಬರುತ್ತಾರೆ. ನಾವು ಮೇಲೆ ಹೋಗುತ್ತೇವೆ. ಆಗ ನೀವು ನಮ್ಮ ಕೈಯ್ಯಾಗ ಸಿಗುತ್ತೀರಿ ಎನ್ನುವ ಮೂಲಕ ಪೊಲೀಸರಿಗೆ ಎಚ್ಚರಿಕೆ ನೀಡಿದರು.

ಅಧಿಕಾರ ಅಲ್ಲ ಜನ ಶಾಶ್ವತ: ರಾಜಕಾರಣ ಸೈಕಲ್ ಇದ್ದಂತೆ. ಅಧಿಕಾರ ಶಾಶ್ವತ ಅಲ್ಲ, ಜನರು ಶಾಶ್ವತ. ರಾಜಕಾರಣಿಗಳು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಬೇಕು. ಇವತ್ತು ನಡೆಸಿರುವ ಪ್ರತಿಭಟನೆ ಕೇವಲ ಶಾಂಪಲ್. ಮುಂದಿನ ದಿನಗಳಲ್ಲಿ ಲಕ್ಷಾಂತರ ಜನರೊಂದಿಗೆ ಪ್ರತಿಭಟನೆ ಮಾಡಲಾಗುವುದು. ಅಥಣಿಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಎರಡ್ಮೂರು ಸಾವಿರ ಕೋಟಿ ರುಪಾಯಿಗಳು ಬಿಡುಗಡೆಯಾಗಿದ್ದರೂ ಕೆಲಸ ಆಗುತ್ತಿಲ್ಲ ಎಂದು ಟೀಕಿಸಿದರು.

ರಾಜು ಕಾಗೆ ಮುಂದೆ ಮಾಜಿ ಆಗುವುದು ಗ್ಯಾರಂಟಿ: ರಾಜು ಕಾಗೆ ಒಳ್ಳೆಯ ವ್ಯಕ್ತಿ. ನೇರ ಮಾತುಗಾರ. ನನ್ನಂತೆಯೇ ನೇರ ಮಾತನಾಡುತ್ತಾರೆ. ಆದರೆ, ಈಗ ಅವರಿಗೆ ಅಥಣಿ ಗಾಳಿ ಬಡಿದಂತೆ ಕಾಣುತ್ತದೆ. ಆತನ ಸದ್ಯದ ಸ್ಥಿತಿ ನೋಡಿದರೇ ಮುಂದಿನ ದಿನಗಳಲ್ಲಿ ಮಾಜಿ ಆಗುವುದು ಗ್ಯಾರಂಟಿ ಎಂದು ಭರವಿಷ್ಯ ನುಡಿದರು. ನಾನು ಮುಖ್ಯವಾದ ಕಾರ್ಯಕ್ರಮ ಬಿಟ್ಟು ಬಂದಿದ್ದೇನೆ. ಇಲ್ಲವಾದರೆ ರಾಜು ಕಾಗೆ ನಾನೇ ಫೋನ್ ಮಾಡಿ ಬರಬೇಡ ಅಂತಾ ಹೇಳಿದ್ದೇನೆ ಎಂದು ಹೇಳುತ್ತಿದ್ದರು ಎಂದು ಹಾಸ್ಯ ಚಟಾಕಿ ಹಾರಿಸಿದರು.

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆ, ದೇಗುಲಗಳಲ್ಲಿ ವಿಶೇಷ ಪೂಜೆ: ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಆರೇಳು ತಿಂಗಳಲ್ಲಿಯೇ ಕೆಳಮಟ್ಟಕ್ಕೆ ಬಂದಿದೆ. ಈಗ ಮೇಲಿದ್ದವರು ಶೀಘ್ರ ಕೆಳಗೆ ಬರಲಿದ್ದಾರೆ. ಅದು ಲೋಕಸಭಾ ಚುನಾವಣೆಗೆ ಮುಂಚೆ ಅಥವಾ ಲೋಕಸಭಾ ಚುನಾವಣೆ ಮುಗಿದ ಬಳಿಕ. ಒಟ್ಟಿನಲ್ಲಿ ಅವರು ಕೆಳಗೆ ಬರುತ್ತಾರೆ. ಮುಂದಿನ ದಿನಗಳಲ್ಲಿ ಅಥಣಿ ಕಾಗವಾಡ ಹಾಗೂ ಕುಡಚಿಯಲ್ಲಿ ಮತ್ತೆ ನಾವು ಗೆಲ್ಲಬೇಕು. ಬಿಜೆಪಿ ಧ್ವಜ ಹಾರಿಸಬೇಕು.
-ರಮೇಶ ಜಾರಕಿಹೊಳಿ, ಗೋಕಾಕ ಶಾಸಕರು.

click me!