ಬಿಜೆಪಿಯಲ್ಲಿ ಇದ್ದಿದ್ರೆ ಲಕ್ಷ್ಮಣ ಸವದಿ ದೊಡ್ಡ ಲೀಡರ್‌ ಆಗ್ತಿದ್ದ: ಶಾಸಕ ರಮೇಶ್ ಜಾರಕಿಹೊಳಿ

Published : Oct 23, 2025, 09:37 PM IST
Ramesh jarkiholi

ಸಾರಾಂಶ

ಬಿಜೆಪಿಯಲ್ಲಿ ಸವದಿ ಇದ್ದಿದ್ದರೆ ರಾಜ್ಯದಲ್ಲಿ ಅತಿ ದೊಡ್ಡ ಲೀಡರ್ ಆಗುತ್ತಿದ್ದ. ಕಾಂಗ್ರೆಸ್‌ನಲ್ಲಿ ಬರೀ 5 ವರ್ಷ ಶಾಸಕರಾಗಿ ಕೆಲಸ ಮಾಡಬಹುದು. ಬಿಜೆಪಿ ಬಿಟ್ಟು ತನ್ನ ವ್ಯಕ್ತಿತ್ವವನ್ನು ಹಾಳು ಮಾಡಿಕೊಂಡ ಎಂದು ಶಾಸಕ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

ಅಥಣಿ (ಅ.23): ನಾವು ಅಂದಿನ ರಾಜಕೀಯ ವಿದ್ಯಮಾನದಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದಾಗ ಲಕ್ಷ್ಮಣ ಸವದಿಗೆ ಹೆಚ್ಚಿನ ಲಾಭವಾಯಿತು. ಬಿಜೆಪಿಯಲ್ಲಿ ಸವದಿ ಇದ್ದಿದ್ದರೆ ರಾಜ್ಯದಲ್ಲಿ ಅತಿ ದೊಡ್ಡ ಲೀಡರ್ ಆಗುತ್ತಿದ್ದ. ಕಾಂಗ್ರೆಸ್‌ನಲ್ಲಿ ಬರೀ 5 ವರ್ಷ ಶಾಸಕರಾಗಿ ಕೆಲಸ ಮಾಡಬಹುದು. ಬಿಜೆಪಿ ಬಿಟ್ಟು ತನ್ನ ವ್ಯಕ್ತಿತ್ವವನ್ನು ಹಾಳು ಮಾಡಿಕೊಂಡ. ಬಿಜೆಪಿ ಬಿಟ್ಟಿದ್ದು ಒಳ್ಳೆಯದಾಯಿತು. ಇನ್ನು ಮುಂದೆ ಸವದಿ ಬಿಜೆಪಿಗೆ ಬರುವುದಕ್ಕೆ ನಾವು ಆಸ್ಪದ ಕೊಡುವುದಿಲ್ಲ ಎಂದು ಶಾಸಕ ರಮೇಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

ಕೃಷ್ಣಾ ಸಕ್ಕರೆ ಕಾರ್ಖಾನೆ ಸಂಘದ ಚುನಾವಣೆ ಹಿನ್ನೆಲೆ ಇತ್ತೀಚೆಗೆ ಸ್ವಾಭಿಮಾನಿ ರೈತರ ಪೆನಲ್ ಬೆಂಬಲಿಸಿ ಮಾತನಾಡಿದ ಅವರು, ಶಾಸಕ ಲಕ್ಷ್ಮಣ ಸವದಿ ಬಿಜೆಪಿ ಮರಳಿ ಬರುವುದಕ್ಕೆ ಅಷ್ಟೇನೂ ಸಲೀಸಿಲ್ಲ. ಈಗ ನಾವು ಬಿಜೆಪಿಯಲ್ಲಿ ಒಳ್ಳೆಯ ಸ್ಥಾನಮಾನ ಪಡೆದಿದ್ದೇವೆ. ಸವದಿ ಬಿಜೆಪಿ ಬರುವುದಾದರೆ ಅವನನ್ನು ಎಲ್ಲಿ ತಡೆಯಬೇಕು. ಅಲ್ಲಿ ತಡೆಯುತ್ತೇವೆ. ಆ ಶಕ್ತಿ ನಮ್ಮಲ್ಲಿದೆ. ಇದನ್ನು ಮೀರಿ ಅವನು ಏನಾದರೂ ಪಕ್ಷಕ್ಕೆ ಬಂದರೆ ಮುಂದೆ ದೇವರಿದ್ದಾನೆ ನೋಡೋಣ ಎಂದು ಪರೋಕ್ಷವಾಗಿ ಎಚ್ಚರಿಸಿದರು.

ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆಗುವುದಕ್ಕೆ ಆಸೆ ವ್ಯಕ್ತಪಡಿಸಿಲ್ಲ ಎಂದು ಶಾಸಕ ಸವದಿ ಹೇಳುತ್ತಾರೆ. ಆದರೆ ಸವದಿಗೆ ಅವಕಾಶ ಸಿಕ್ಕರೆ ಗ್ರಾಮ ಪಂಚಾಯತಿ ಅಧ್ಯಕ್ಷನಾಗಲೂ ಹಿಂದೆ ಸರಿಯುವುದಿಲ್ಲ. ಡಿ.ಕೆ.ಶಿವಕುಮಾರ್ ಮನೆಯಲ್ಲಿ ನಾನೇ ಬೆಳಗಾವಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗುತ್ತೇನೆ ಎಂದು ಹೇಳಿದ್ದಾನೆ. ಇಲ್ಲಿ ಅಥಣಿಯಲ್ಲಿ ಕುಳಿತು ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಎಂದು ಹೇಳುತ್ತಾನೆ. ಅವಕಾಶ ಸಿಕ್ಕರೆ ಜಿಗಿದು ಬರುತ್ತಾರೆ. ರಾಜ್ಯದಲ್ಲಿ ಶಾಸಕ ಲಕ್ಷ್ಮಣ ಸವದಿ ಮಾತು ಕೇಳಿ ರಾಜ್ಯದಲ್ಲಿ ಇಬ್ಬರು ಪ್ರಮುಖ ನಾಯಕರು ಹಾಳಾಗಿದ್ದಾರೆ. ಅಣ್ಣಾಸಾಬ ಜೊಲ್ಲೆ ಸಂಸದ ಸ್ಥಾನ ಕಳೆದುಕೊಂಡರು, ರಮೇಶ್ ಕತ್ತಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಕಳೆದುಕೊಂಡರು. ಸದ್ಯ ಸವದಿ ಮಾತು ಕೇಳಿಕೊಂಡು ಇವರಿಬ್ಬರು ಹುಚ್ಚರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈ ಭಾಗದ ರೈತರ ಜೀವನಾಡಿಯಾಗಿರುವ ಕೃಷ್ಣ ಸಹಕಾರಿ ಕಾರ್ಖಾನೆಯಲ್ಲಿ ಮುಳುಗುವ ಹಂತಕ್ಕೆ ಬಂದಿದೆ. ಅಲ್ಲಿ ಸ್ಕ್ರಾಪ್ ಮೇಲೆ ಡಿಸಿಸಿ ಬ್ಯಾಂಕಿನಲ್ಲಿ ₹10 ಕೋಟಿ ಸಾಲ ಮಂಜೂರು ಮಾಡಿಕೊಂಡಿದ್ದಾರೆ. ಆದರೆ ಲಕ್ಷ್ಮಣ ಸವದಿ ಡಿಸಿಸಿ ಬ್ಯಾಂಕ್‌ನಲ್ಲಿ ಒಂದೇ ಒಂದು ರೂಪಾಯಿ ತೆಗೆದುಕೊಂಡಿಲ್ಲ ಎಂದು ಭಾಷಣ ಮಾಡುತ್ತಾರೆ. ಕೃಷ್ಣಾ ಸಕ್ಕರೆ ಕಾರ್ಖಾನೆಯ ಸ್ಕ್ರಾಪ್ ಮೇಲೆ ಸಾಲ ತೆಗೆದಿದ್ದಾರೆ. ಆ ಸಾಲ ತೆಗೆದೇ ಈ ಚುನಾವಣೆ ಮಾಡುತ್ತಿದ್ದಾರೆ. ಶಾಸಕ ಲಕ್ಷ್ಮಣ ಸವದಿಗೆ ಬೇಕಾದ ವ್ಯಕ್ತಿಗೆ ಯಾವುದೇ ಕಾರ್ಖಾನೆ ಹೊಂದಿದ್ದರು ಅವರಿಗೂ ₹15 ಕೋಟಿ ಸಾಲ ತೆಗೆದುಕೊಟ್ಟಿದ್ದಾರೆ. ಶಾಸಕ ಲಕ್ಷ್ಮಣ ಸವದಿ ಹೇಳುವ ಮಾತು ಎಲ್ಲವೂ ಸುಳ್ಳು. ಕೃಷ್ಣಾ ಶುಗರ್‌ ಫ್ಯಾಕ್ಟರಿ ಉಳಿಸಿಕೊಳ್ಳೋಕೆ ನಿಮಗೆ ಸುವರ್ಣಾವಕಾಶ ಬಂದಿದೆ. ದಯವಿಟ್ಟು ಸ್ವಾಭಿಮಾನಿ ರೈತ ಪೆನಲ್ ಆಯ್ಕೆ ಮಾಡುವಂತೆ ರೈತರಲ್ಲಿ ಮನವಿ ಮಾಡಿದರು.

ಡಿಸಿಸಿ ಬ್ಯಾಂಕಿಗೆ ರಾಜೀನಾಮೆ ಕೊಡಿಸುತ್ತೇನೆ

ಡಿಸಿಸಿ ಬ್ಯಾಂಕ್ ಚುನಾವಣೆ ಮಹೇಶ್ ಕುಮಠಳ್ಳಿಗೆ ಸೋಲಾಗಿರಬಹುದು. ಸೋತರು ಈ ಭಾಗದ ಡೈರೆಕ್ಟರ್ ಅವರೇ. ಅವರನ್ನು ಕೇಳಿ ನಾವು ಮುಂಬರುವ ಪತ್ತುಗಳನ್ನು ನೀಡುತ್ತೇವೆ. ಸವದಿ ಆಯ್ಕೆಯಾದರೂ ತಾಂತ್ರಿಕವಾಗಿ ಅಷ್ಟೇ ಆಡಳಿತ ನಡೆಸಬಹುದು. ಎಲ್ಲವೂ ಮಹೇಶ ಕುಮಠಳ್ಳಿ ಅವರಿಂದ ನಿರ್ಧಾರ ಮಾಡುತ್ತೇವೆ. ನಮ್ಮ ಮಾತು ಏನಾದರೂ ನಡೆಯದಿದ್ದರೆ, ನನ್ನ ಮಗನನ್ನು ಕೂಡ ಡಿಸಿಸಿ ಬ್ಯಾಂಕಿಗೆ ರಾಜೀನಾಮೆ ಕೊಡಿಸುತ್ತೇನೆ. ನಮ್ಮ ಆಡಳಿತ ಅಲ್ಲಿ ನಡೆಯುತ್ತದೆ, ನಡೆಯದ್ದಿರೆ ರಾಜೀನಾಮೆ ಕೊಡುತ್ತೇವೆ ಎಂದರು.

ಕಾಗವಾಡ ತಾಲೂಕಿನ ಡಿಸಿಸಿ ಬ್ಯಾಂಕ್‌ನಿಂದ ಶ್ರೀನಿವಾಸ್ ಪಾಟೀಲ್ ಅವರನ್ನು ಶಾಸಕ ರಾಜು ಕಾಗೆ ವಿರುದ್ಧ ನಾಮಪತ್ರ ಸಲ್ಲಿಕೆ ಮಾಡಲಾಗಿತ್ತು. ಆದರೆ ನನ್ನ ಸಹೋದರ ಬಾಲಚಂದ್ರ ಜಾರಕಿಹೊಳಿ ಮನವಿಯ ಮೇರೆಗೆ ಆರು ತಿಂಗಳಲ್ಲಿ ಚುನಾವಣೆ ಬರುತ್ತದೆ. ಇದರಿಂದ ಕಾಗೆ ಅವರು ಅವಿರೋಧವಾಗಿ ಆಯ್ಕೆ ಮಾಡು ಎಂದಾಗ ನಾವು ಶ್ರೀನಿವಾಸ್ ಪಾಟೀಲ್ ನಾಮಪತ್ರ ಹಿಂದಕ್ಕೆ ತೆಗೆದುಕೊಂಡೆವು. ಬಾಲಚಂದ್ರ ಭರವಸೆ ಮೇರೆಗೆ ನಮ್ಮ ಅಭ್ಯರ್ಥಿಯಿಂದ ನಾಮಪತ್ರ ಹಿಂದಕ್ಕೆ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.

ಮಾಜಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ ,ಪ್ರತಿ ಮಾತಿಗೂ ಸ್ವಾಭಿಮಾನಕ್ಕೆ ದಕ್ಕೆ ಬಂತು ಅದಕ್ಕೆ ಬಿಜೆಪಿಯಿಂದ ಬಿಟ್ಟು ಬಂದೆ ಅನ್ನುತ್ತಾರೆ. ನಾವು ಮಾಡಿದ ಸಾವಿರಾರು ಕೋಟಿ ರುಪಾಯಿ ಅನುದಾನದ ಯೋಜನೆಯಾದ ಅಮ್ಮಾಜೇಶ್ವರಿ ಏತ ನೀರಾವರಿ ನಾನು ಮಾಡಿದ್ದೇನೆ ಎಂದು ಹೇಳಲು ನಿಮಗೆ ಸ್ವಾಭಿಮಾನಕ್ಕೆ ದಕ್ಕೆ ಬರುವುದಿಲ್ಲವೆ? ಅಥಣಿ ಆಡಳಿತದಲ್ಲಿ ಗೋಕಾಕ ಶಾಸಕ ರಮೇಶ ಜಾರಕಿಹೋಳಿ ಕೈ ಹಾಕಿಲ್ಲ. ಆದರೆ ಅಥಣಿ ಜನತೆಗೆ ಅಥಣಿ ಗೋಕಾಕ ಆಗುತ್ತದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಡಿಸೆಂಬರ್‌ನಿಂದ ಶುಕ್ರದೆಸೆ ಶುರುವಾಗುತ್ತದೆ ಎಂದು ಹೇಳುತ್ತಾರೆ. 20 ವರ್ಷಗಳಿಂದ ಶುಕ್ರದೆಸೆ ಇರಲಿಲ್ವಾ ಎಂದು ಪ್ರಶ್ನೆ ಮಾಡಿದರು.

ಕಾಂಗ್ರೆಸ್ ಪಕ್ಷದ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ, ಹೊರಗಿನವರು ಆಡಳಿತ ನಡೆಸುತ್ತಾರೆ ಎಂದು ಅಪಪ್ರಚಾರ ಮಾಡುತ್ತಿರುವ ನೀವು ನಮ್ಮ ಕಾರ್ಖಾನೆ ಹಾಳು ಮಾಡಿದ್ದು ನೀವು. ನಮ್ಮ ರೈತರನ್ನ ಹಾಳು ಮಾಡಿದ್ದು ನೀವು. ಕಾರ್ಖಾನೆಯಿಂದ ಮತದಾನ ಹಕ್ಕು ಕಸಿದುಕೊಂಡಿದ್ದು ನೀವು. ಮತಕ್ಷೇತ್ರವನ್ನ ಹಾಳು ಮಾಡಿದ್ದು ನೀವು ಆದರೆ ಗೂಬೆ ಮಾತ್ರ ಹೊರಗಿನವರ ಮೇಲೆ ಕೂರಿಸುತ್ತಿದ್ದೀರಿ ಎಂದು ದೂರಿದರು.

ಈ ವೇಳೆ ಮಾಜಿ ಸಚಿವ ಶ್ರೀಮಂತ ಪಾಟೀಲ, ಮಾಜಿ ಶಾಸಕ ಶಹಜಹಾನ ಡೊಂಗರಗಾವ, ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ ಗುರೂಜಿ, ಸಿದ್ದಪ್ಪಾ ಮುದಕನ್ನವರ ,ಸಿದ್ದಾರ್ಥ ಶಿಂಗೆ ಮಾತನಾಡಿದರು. ಈ ವೇಳೆ ಎ.ಎ.ಹುದ್ದಾರ, ಗಿರೀಶ ಬುಟಾಳಿ, ಜಿನಗೌಡಾ ಪಾಟೀಲ, ರಾವಸಾಬ ಪಾಟೀಲ,ಅಪ್ಪಾಸಾಬ ಅವತಾಡೆ, ಸಂಪತ್ತಕುಮಾರ ಶೆಟ್ಟಿ, ರಾವಸಾಬ ಐಹೋಳೆ, ಮಲ್ಲಪ್ಪಾ ಹಂಚಿನಾಳ, ರಮೇಶ ಸಿಂದಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ
India Latest News Live: ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ