
ಕಾಗವಾಡ (ಅ.04): ಹಲವಾರು ವಿಚಾರಗಳಿಗೆ ಸಂಬಂಧಿಸಿದಂತೆ ಸರ್ಕಾರದ ನ್ಯೂನತೆಗಳು ಎದ್ದು ಕಾಣುತ್ತಿದೆ. ಎಲ್ಲವೂ ಗೊತ್ತಿದ್ದರೂ ಪಕ್ಷದ ಶಾಸಕರು, ಮುಖಂಡರು ಮೌನವಾಗಿದ್ದಾರೆ. ನಾನು ಇದ್ದದ್ದನ್ನು ಇರುವ ಹಾಗೆ ಹೇಳಿದ್ದೇನೆ. ಇದರಲ್ಲಿ ಹೆದರುವಂತಹ ಮತ್ತು ಮುಜಗರಕ್ಕೆ ಒಳಗಾಗುವಂತಹ ಸಂದರ್ಭವೇ ಬರುವುದಿಲ್ಲ ಎಂದು ಕಾಗವಾಡ ಶಾಸಕ ರಾಜು ಕಾಗೆ ಸ್ಪಷ್ಟಪಡಿಸಿದರು. ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಸರ್ಕಾರದ ಆಡಳಿತ ನ್ಯೂನತೆಗಳ ಕುರಿತಂತೆ ನೀಡಿದ ಹೇಳಿಕೆಗೆ ಈಗಲೂ ಬದ್ಧನಾಗಿದೇನೆ. ಸರ್ಕಾರ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕೆಂಬುವುದೇ ನನ್ನ ಹೇಳಿಕೆಯ ಒಟ್ಟಾರೆ ಸಾರಾಂಶವಾಗಿದೆ ಎಂದರು.
ಸರ್ಕಾರ ಬಂದು ನಾಲ್ಕೈದು ತಿಂಗಳು ಗತಿಸುತ್ತಾ ಬಂದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ಸರಿಯಾಗಿ ಆಗುತ್ತಿಲ್ಲ. ಈ ಬಗ್ಗೆ ಜನತೆ ಅಸಮಾದಾನ ವ್ಯಕ್ತಪಡಿಸುತ್ತಿದ್ದಾರೆ. ಶಾಸಕಾಂಗ ಮತ್ತು ಕಾರ್ಯಾಂಗ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂಬುವುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಬಗ್ಗೆ ಮುಖ್ಯಮಂತ್ರಿಗಳು ಗಮನ ಹರಿಸಬೇಕೆಂದು ಒತ್ತಾಯಿಸಿದ್ದೇನೆ. ಇದು ಸಹಜವಾಗಿಯೇ ಸಾರ್ವಜನಿಕರ ದೃಷ್ಟಿಯಲ್ಲಿ ವೈಫಲ್ಯತೆಯನ್ನು ಎತ್ತಿ ತೋರಿಸುತ್ತದೆ ಎಂದು ಅಸಮದಾನ ಹೊರಹಾಕಿದರು.
ಈ ಭಾಗದ 22 ಗ್ರಾಮಗಳ ಮಹತ್ವಾಕಾಂಕ್ಷಿ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವ ಭರವಸೆ ನೀಡಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ. ಆದರೆ, ಈ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು, ನೀರಾವರಿ ಸಚಿವರನ್ನು ಹಲವು ಬಾರಿ ಭೇಟಿಯಾಗಿ ಮಾತುಕತೆ ನಡೆಸಿದರೂ ಕೂಡ ಇಲ್ಲಿಯವರೆಗೆ ಪ್ರಯೋಜನವಾಗಿಲ್ಲ. ಹೀಗಾದರೆ ಜನತೆಗೆ ಏನು ಉತ್ತರ ಕೊಡುವುದು ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ನನ್ನ ಗುರು, ಅವರಿಂದ ಕಲಿಯಬೇಕಾದದ್ದು ಬಹಳಷ್ಟಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಒಂದೇ ಅಲ್ಲ, ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಆಗುತ್ತಿಲ್ಲ. ಇದನ್ನೇ ನೆಪವಾಗಿಟ್ಟುಕೊಂಡು ಅಧಿಕಾರಿಗಳು ಮನಸೋ ಇಚ್ಚೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಹೆಸ್ಕಾಂ ವಿಚಾರದಲ್ಲಿಯೂ ಕೂಡ ಕಂಡು ಬರುತ್ತಿರುವ ಲೋಪಗಳ ಬಗ್ಗೆ ಬೆಳಕು ಚೆಲ್ಲಿದ್ದೇನೆ. ರೈತರಿಗೆ ತೊಂದರೆ ಆಗುತ್ತಿದೆ. ಸರ್ಕಾರ ಅದನ್ನು ಸರಿಪಡಿಸಬೇಕೆಂದು ಮತ್ತೊಮ್ಮೆ ಒತ್ತಾಯಿಸುವುದಾಗಿ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.