
ಬೆಂಗಳೂರು : ಬೆಂಗಳೂರಿನ ರಸ್ತೆ ಗುಂಡಿ ಮುಚ್ಚದ ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಪ್ರತಿಭಟನೆ ಕುರಿತು ಪ್ರತಿಕ್ರಿಯೆ ನೀಡುವಾಗ ಪ್ರಶ್ನೆ ಕೇಳಿದ ಮಾಧ್ಯಮ ಪ್ರತಿನಿಧಿಯನ್ನೇ ನೀವು ಬಿಜೆಪಿ ಸೇರಿದರೆ ಒಳ್ಳೆಯ ಭವಿಷ್ಯವಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಉಡಾಫೆಯ ಹೇಳಿಕೆ ನೀಡಿದರು.
ಬಿಜೆಪಿ ಪ್ರತಿಭಟನೆ ಪ್ರಶ್ನಿಸುತ್ತಿದ್ದೀರಿ, ನೀವು (ಕಾಂಗ್ರೆಸ್) ಪ್ರತಿಪಕ್ಷದಲ್ಲಿದ್ದಾಗ ರಸ್ತೆ ಗುಂಡಿ ಬಗ್ಗೆ ಎಷ್ಟು ಪ್ರತಿಭಟನೆ ಮಾಡಿಲ್ಲ ಎಂದು ಕೇಳಿದ ಪ್ರಶ್ನೆಗೆ, ಉಡಾಪೆ ಉತ್ತರ ನೀಡಿದ ಶಾಸಕರು, ನೀವು ಬಿಜೆಪಿ ಸೇರಿದರೆ ಒಳ್ಳೆಯ ಭವಿಷ್ಯವಿದೆ ಎಂದರು. ಶಾಸಕರ ಈ ಹೇಳಿಕೆಯನ್ನು ಮಾಧ್ಯಮ ಪ್ರತಿನಿಧಿಗಳು ಆಕ್ಷೇಪಿಸಿ ಯಾರೇ ಅಧಿಕಾರದಲ್ಲಿದ್ದರೂ ಮಾಧ್ಯಮಗಳು ಯಾವಾಗಲೂ ಪ್ರತಿಪಕ್ಷಗಳ ಸ್ಥಾನದಲ್ಲೇ ಕೆಲಸ ಮಾಡುವುದು. ಶಾಸಕರು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದಾಗ ಸಾವರಿಸಿಕೊಂಡ ಅವರು, ಅಲ್ಲ ಮಾಧ್ಯಮಗಳು ಇಂದು ಪ್ರತಿಪಕ್ಷಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿದೆ ಎಂದರು.
ಛಲವಾದಿ ಕ್ರಿಶ್ಚಿಯನ್‌ಗೆ ಮತಾಂತರ ಆಗಿದ್ದಾರಾ?:
ವಿಧಾನ ಪರಿಷತ್‌ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ
ಚರ್ಚೆ ಆಗುತ್ತಿದ್ದು ಈ ಬಗ್ಗೆ ಅವರು ಸ್ಪಷ್ಟನೆ ನೀಡಬೇಕು ಎಂದು ಇದೇ ವೇಳೆ ಶಾಸಕ ಪ್ರದೀಪ್ ಈಶ್ವರ್ ಆಗ್ರಹಿಸಿದರು. ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡುತ್ತಾ, ಕ್ರಿಶ್ಚಿಯನ್ ಅನ್ನುವ ಪದ ಬಂದಿದ್ದರಿಂದ ನಾರಾಯಣಸ್ವಾಮಿ ಅವರು ಚರ್ಚ್‌ಗೆ ಹೋಗಿ ಪ್ರಾರ್ಥನೆ ಸಲ್ಲಿಸಿದ್ದರು. ಮತಾಂತರ ಆಗಿದ್ದಾರೆ ಅಂತೆಲ್ಲಾ ತುಂಬಾ ಜನ ಚರ್ಚೆ ಮಾಡುತ್ತಿದ್ದಾರೆ. ಮತಾಂತರ ಆಗಿರುವುದು ಹೌದಾ, ಆಗಿದ್ದರೆ ಯಾವ ಕಾರಣಕ್ಕೆ ಮತಾಂತರ ಆದಿರಿ ಎಂದು ತಿಳಿಸಬೇಕು ಎಂದರು.
ಬಿಜೆಪಿ ಸರ್ಕಾರದಲ್ಲೇ ಅವೈಜ್ಞಾನಿಕ ರಸ್ತೆ ನಿರ್ಮಾಣ: ಪ್ರದೀಪ್ ಈಶ್ವರ್
ಅವೈಜ್ಞಾನಿಕ ರಸ್ತೆಗಳ ನಿರ್ಮಾಣ ಆಗಿರುವುದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ. ಆಗ ಕಳಪೆಯಾಗಿ ರಸ್ತೆಗಳ ನಿರ್ಮಾಣ ಮಾಡಿರುವುದರಿಂದ ಈಗ ಗುಂಡಿಗಳು ಬಿದ್ದಿವೆ ಎಂದು ಶಾಸಕ ಪ್ರದೀಪ್ ಈಶ್ವರ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆಗುಂಡಿ ಮುಚ್ಚಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ ಕುರಿತ ಪ್ರಶ್ನೆಗೆ, ರಸ್ತೆಯನ್ನು ಗುಣಮಟ್ಟದಿಂದ ನಿರ್ಮಾಣ ಮಾಡದಿದ್ದಾಗ ಗುಂಡಿ ಬೀಳುತ್ತದೆ. ಬಿಜೆಪಿ ಅವಧಿಯಲ್ಲಿ ಅವೈಜ್ಞಾನಿಕವಾಗಿ, ಗುಣಮಟ್ಟ ಇಲ್ಲದ ರಸ್ತೆಗಳನ್ನು ನಿರ್ಮಿಸಿರುವುದೇ ಇವತ್ತು ಗುಂಡಿಗಳು ಬೀಳಲು ಕಾರಣ. ಈಗ ನಾವು ಆ ಗುಂಡಿಗಳನ್ನು ಮುಚ್ಚುವ ಅಭಿಯಾನ ಆರಂಭಿಸಿದ್ದೇವೆ ಎಂದರು.
ಈಗ ರಸ್ತೆ ಗುಂಡಿ ಬಗ್ಗೆ ಪ್ರತಿಭಟನೆ ಮಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಣ್ಣ, ವಿಪಕ್ಷ ನಾಯಕ ಅಶೋಕಣ್ಣ ಅವರಿಗೆ ತಮ್ಮದೇ ಸರ್ಕಾರದಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಬಿದ್ದಿದ್ದ ಗುಂಡಿಗಳನ್ನೆಲ್ಲಾ ಮುಚ್ಚಿದ್ದರಾ? ಆಗ ನಿಮಗೆ ಗುಂಡಿ ಬಗ್ಗೆ ಪ್ರೀತಿ ಇರಲಿಲ್ವಾ? ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.