
ಮಳವಳ್ಳಿ (ಜು.21): ಜನರಿಂದ ಬಹುಮತ ಪಡೆದು ಅಧಿಕಾರಕ್ಕೆ ಬರಲಾಗದವರು, ಕುದುರೆ ವ್ಯಾಪಾರ ಮಾಡೋರು ಕಾಂಗ್ರೆಸ್‌ನವರಿಗೆ ಬುದ್ಧಿ ಹೇಳುವುದಕ್ಕೆ ಬರುತ್ತಾರೆ. ನಮ್ಮದು ಕಾಂಗ್ರೆಸ್ ಸಿದ್ಧಾಂತ, ಅದಾನಿ, ಅಂಬಾನಿ ಸಿದ್ಧಾಂತ ಅಲ್ಲ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಕಾಲ ಸಮೀಪಿಸದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆಗೆ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿರುಗೇಟು ನೀಡಿದ ಅವರು, ಬಿಜೆಪಿಯವರಿಗೆ ಬಹುಮತದ ಸರ್ಕಾರ ಮಾಡುವುದಕ್ಕೆ ಯೋಗ್ಯತೆ ಇಲ್ಲ. ಅದಕ್ಕಾಗಿ ಅವರು ನಮ್ಮನ್ನು ಟೀಕೆ ಮಾಡುತ್ತಾರೆ. ನಮ್ಮನ್ನು ಅತಂತ್ರ ಮಾಡುವುದಕ್ಕಾಗಿ ಸಿಎಂ ರಾಜೀನಾಮೆ ಅಸ್ತ್ರ ಪ್ರಯೋಗಿಸಿದ್ದಾರೆ ಎಂದು ಲೇವಡಿ ಮಾಡಿದರು.
ನಮ್ಮ ಪಾರ್ಟಿಗೂ ಅವರಿಗೂ ಏನು ಸಂಬಂಧ?, ನಮ್ಮ ಸುದ್ದಿ ಮಾತನಾಡೊದಕ್ಕೆ ಅವರು ಯಾರು?, ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಆಗುತ್ತಿದೆ. ಅದರ ಬಗ್ಗೆ ವಿಜಯೇಂದ್ರ ಯೋಚನೆ ಮಾಡಲಿ. ನಮ್ಮ ಪಕ್ಷ, ಸರ್ಕಾರ ಸಧೃಡವಾಗಿದೆ. ನಮ್ಮ ಯೋಜನೆಗಳು ಜನಪರವಾಗಿವೆ ಎಂದು ದೃಢವಾಗಿ ಹೇಳಿದರು. ಸಾಧನೆ ಮಾಡಿರೋದಕ್ಕೆ ಸಾಧನಾ ಸಮಾವೇಶ ಮಾಡ್ತಿರೋದು. ಸಾಧನೆ ಮಾಡದೆ ನಾವು ಮಾತನಾಡಲ್ಲ. ಮೈಸೂರು ಜಿಲ್ಲೆಯಲ್ಲಿ ಸರ್ಕಾರದ ಸಾಧನಾ ಸಮಾವೇಶ ನಡೆದಿದೆ. ಮಂಡ್ಯ ಜಿಲ್ಲೆಯಲ್ಲೂ ಸಮಾವೇಶ ಮಾಡುತ್ತೇವೆ. ಮಳವಳ್ಳಿ ಕ್ಷೇತ್ರದಲ್ಲಿ ಹಲವಾರು ಕಾಮಗಾರಿಗಳು ಉದ್ಘಾಟನೆಗೆ ಸಜ್ಜಾಗಿವೆ. ಸಿದ್ಧತೆ ಮಾಡಿಕೊಂಡು ದಿನಾಂಕ ಘೋಷಣೆ ಮಾಡುವುದಾಗಿ ಹೇಳಿದರು.
ಅಭಿವೃದ್ಧಿಯಲ್ಲಿ ಸಮತೋಲನವಾದ ವಾತಾವರಣ ನಿರ್ಮಾಣ ಮಾಡಿರೋದು ಕಾಂಗ್ರೆಸ್. ಇದು ನಮ್ಮ ಪಕ್ಷದ ಸಿದ್ಧಾಂತ. ಅದಾನಿ, ಅಂಬಾನಿಗೆ ಲಕ್ಷಾಂತರ ಕೋಟಿ ದುಡ್ಡು ಮಾಡುಕೊಡುವುದು ನಮ್ಮ ಸಿದ್ಧಾಂತವಲ್ಲ ಎಂದು ಬಿಜೆಪಿಗೆ ಕುಟುಕಿದ ನರೇಂದ್ರಸ್ವಾಮಿ, ಕಾಂಗ್ರೆಸ್ ಸರ್ಕಾರ ಉಳ್ಳವರ ಪರ ಅಲ್ಲ, ಜನರ ಪರ, ಅಭಿವೃದ್ಧಿ ಪರವಾಗಿದೆ ಎಂದು ದೃಢವಾಗಿ ಹೇಳಿದರು. ಮೊದಲು 10 ಕೆಜಿ ಅಕ್ಕಿ ಕೊಡುತ್ತಿದ್ದುದನ್ನು ೫ ಕೆಜಿಗೆ ಇಳಿಸಿದ ಗಿರಾಕಿಗಳು ಬಿಜೆಪಿಯವರು. ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಐದು ವರ್ಷಗಳಲ್ಲಿ ಒಂದು ಮನೆ ಕೊಟ್ಟಿಲ್ಲ. ಇನ್ನು ಬಡವರ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ ಅವರಿಗೆ. ಎಸ್‌ಸಿಪಿ, ಟಿಎಸ್‌ಪಿ ಬಗ್ಗೆ ಮಾತನಾಡುತ್ತಾರೆ. ಬೇಕಿದ್ದರೆ ಚರ್ಚೆಗೆ ಬರಲಿ. ನಾನೇ ಅದರ ಅಧ್ಯಕ್ಷ. ಉತ್ತರ ಕೊಡುತ್ತೇನೆ ಎಂದರು.
ಇಲ್ಲೊಬ್ಬ ಅರೆಬರೆ ತಿಳಿವಳಿಕೆ ಇರುವ ಅರೆ ಹುಚ್ಚ ಮಾತನಾಡ್ತಾನೆ ಎಂದು ಪರೋಕ್ಷವಾಗಿ ಮಾಜಿ ಶಾಸಕ ಅನ್ನದಾನಿ ಅವರನ್ನು ಅರೆಹುಚ್ಚ ಎಂದ ಶಾಸಕ ನರೇಂದ್ರಸ್ವಾಮಿ, ದಲಿತರನ್ನು ಶೋಷಣೆ ಮಾಡುತ್ತಿದ್ದಾರೆ ಅಂತಾರೆ. ದಲಿತರನ್ನು ಮಂತ್ರಿ ಮಾಡುವುದಕ್ಕೆ ಯೋಗ್ಯತೆ ಇಲ್ಲದ ಪಕ್ಷದವರು ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು. ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಲಿ. ಮಂಡ್ಯಕ್ಕೆ ೮ ಸಾವಿರ ಕೋಟಿ ರು. ತರುತ್ತೇವೆ ಎಂದಿದ್ದರು. 8 ರುಪಾಯಿ ಬರಲಿಲ್ಲ. ಈಗ ಟೀಕೆ ಮಾಡ್ತಾರೆ. ಹಸಿವಿನ ಬಗ್ಗೆ ಅರಿವಿದ್ದವನು ಮಾತನಾಡಲಿ, ಹೊಟ್ಟೆತುಂಬಿದವನು, ಲೂಟಿ ಹೊಡೆಸುವವರು ಮಾತನಾಡುವುದಲ್ಲ ಎಂದು ವಾಕ್‌ಪ್ರಹಾರ ನಡೆಸಿದರು.
ಡಿಕೆಶಿ ಸಿಎಂ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಿಎಂ ಆಗುವ ತೀರ್ಮಾನ ಹೈಕಮಾಂಡ್ ಹಂತದಲ್ಲಿದೆ. ಸೂಕ್ತ ಸಂದರ್ಭದಲ್ಲಿ ಆ ತೀರ್ಮಾನ ಹೊರಬೀಳಲಿದೆ ಎಂದು ಡಿಕೆಶಿ ಪರ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಬ್ಯಾಟ್ ಬೀಸಿದರು. ನಮ್ಮ ಪಕ್ಷದಲ್ಲಿ ಆ ವಿಚಾರ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸೂಕ್ತ ಸಂದರ್ಭದಲ್ಲಿ ಆ ತೀರ್ಮಾನಕ್ಕೆ ಪಕ್ಷದ ನಾಯಕರು ಬರಲಿದ್ದಾರೆ. ನಮ್ಮ ಪಕ್ಷದ ತೀರ್ಮಾನವನ್ನು ನಾವು ಒಪ್ಪಿಕೊಳ್ಳುತ್ತೇವೆ. ಹಲವಾರು ಸಂದರ್ಭದಲ್ಲಿ ನನಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಅಂತ ಹೇಳಿದ್ದೇನೆ. ಪಕ್ಷ ತೀರ್ಮಾನ ಮಾಡೋವರೆಗೂ ನಾನು ಕಾಯಬೇಕು. ಬಹಳಷ್ಟು ಜನರಿಗಿಂತ ನನಗೆ ಅರ್ಹತೆ ಇದ್ದರೂ ಅವಕಾಶ ಸಿಕ್ಕಿಲ್ಲ. ಹಾಗಂತ ನಮ್ಮ ಪಕ್ಷ, ನಮ್ಮ ಸಿದ್ಧಾಂತ ಬಿಡುವುದಕ್ಕೆ ಆಗೋಲ್ಲ. ನಮ್ಮ ಪಕ್ಷದಲ್ಲಿ ಯಾರಿಗೂ ಅನ್ಯಾಯ ಆಗುವುದಿಲ್ಲವೆಂಬ ಬಗ್ಗೆ ದೃಢ ವಿಶ್ವಾಸವಿದೆ ಎಂದರು. ಡಿಕೆಶಿ ಪರ ವಿವಿಧ ಮಠದ ಸ್ವಾಮಿಗಳ ಬೆಂಬಲ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಮಠಾಧೀಶರು ಶ್ರೀಸಾಮಾನ್ಯರಿಗೆ ಮಾರ್ಗದರ್ಶಕರಾಗಿರಿ. ರಾಜಕೀಯ ವಿಚಾರವನ್ನು ದಯವಿಟ್ಟು ಗೌಣವಾಗಿಸಿ ಆಶೀರ್ವದಿಸುವಂತೆ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.