ನನ್ನ ಕ್ಷೇತ್ರದ ಬಗ್ಗೆ ಸದನದಲ್ಲಿ ಮಾತನಾಡಲ್ಲ ಜೈಲಿಗೆ ಹೋಗುವ ಸಾಧ್ಯತೆಯಿದೆಯೆಂದು ಜ್ಯೋತಿಷಿ ಹೇಳಿದ್ದಾರೆ: ಮುನಿರತ್ನ

Published : Mar 17, 2026, 04:18 PM IST
mla munirathna

ಸಾರಾಂಶ

ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಮುನಿರತ್ನ, ವಿಕ್ಟೋರಿಯಾ ಆಸ್ಪತ್ರೆಗೆ ಶಾಂತವೇರಿ ಗೋಪಾಲಗೌಡರ ಹೆಸರಿಡುವುದನ್ನು ವಿರೋಧಿಸಿದರು. ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಜ್ಯೋತಿಷಿಯೊಬ್ಬರ ಸಲಹೆಯಿಂದಾಗಿ ತಮ್ಮ ಕ್ಷೇತ್ರದ ಬಗ್ಗೆ ಮಾತನಾಡಲು ನಿರಾಕರಿಸಿದ್ದು ಚರ್ಚೆಗೆ ಗ್ರಾಸವಾಯಿತು.

ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ನಗರದ ಅಭಿವೃದ್ಧಿ, ರಾಜಕೀಯ ವಿಚಾರಗಳು ಹಾಗೂ ಆಸ್ಪತ್ರೆಗಳ ನಾಮಕರಣ ಕುರಿತು ಶಾಸಕ ಮುನಿರತ್ನ ನೀಡಿದ ಹೇಳಿಕೆಗಳು ಚರ್ಚೆಗೆ ಕಾರಣವಾಗಿವೆ. ವಿಶೇಷವಾಗಿ, ವಿಕ್ಟೋರಿಯಾ ಆಸ್ಪತ್ರೆಗೆ ಶಾಂತವೇರಿ ಗೋಪಾಲಗೌಡರ ಹೆಸರಿಡುವ ವಿಚಾರಕ್ಕೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ವಿಕ್ಟೋರಿಯಾ ಆಸ್ಪತ್ರೆಗೆ ನಾಮಕರಣ ವಿವಾದ

ವಿಕ್ಟೋರಿಯಾ ಆಸ್ಪತ್ರೆಯ ಹಳೆಯ ಕಟ್ಟಡಕ್ಕೆ ಶಾಂತವೇರಿ ಗೋಪಾಲಗೌಡರ ಹೆಸರಿಡುವುದಕ್ಕೆ ವಿರೋಧ ವ್ಯಕ್ತಪಡಿಸಿದ ಮುನಿರತ್ನ, “ಹಳೆಯ ಕಟ್ಟಡಕ್ಕೆ ಅವರ ಹೆಸರಿಡುವುದು ಸರಿಯಲ್ಲ. ಹೊಸ ಕಟ್ಟಡ ನಿರ್ಮಿಸಿ ಅದಕ್ಕೆ ಶಾಂತವೇರಿ ಗೋಪಾಲಗೌಡರ ಹೆಸರಿಡಲಿ” ಎಂದು ಸಲಹೆ ನೀಡಿದರು. ಹಳೆಯ ವಿಕ್ಟೋರಿಯಾ ಕಟ್ಟಡಕ್ಕೆ ಹೊಸ ಹೆಸರು ನೀಡುವುದರಿಂದ ಆ ಮಹನೀಯರ ಗೌರವಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಆರ್.ಆರ್ ನಗರ ಬಗ್ಗೆ ಮಾತಾಡಲ್ಲ: ಮುನಿರತ್ನ

ತಮ್ಮ ರಾಜರಾಜೇಶ್ವರಿ ನಗರ ಕ್ಷೇತ್ರದ ಬಗ್ಗೆ ಮಾತನಾಡುವುದಿಲ್ಲವೆಂದು ಮುನಿರತ್ನ ಹೇಳಿದ್ದಾರೆ. ನಾನು ಆರ್.ಆರ್ ನಗರ ವಿಷಯದಲ್ಲಿ ಸದನದಲ್ಲಿ ಮಾತಾಡಬಾರದು ಎಂದು ನಿರ್ಧರಿಸಿದ್ದೇನೆ. ಯಾರೋ ಜ್ಯೋತಿಷಿಯೊಬ್ಬರು, ಆರ್.ಆರ್ ನಗರ ಬಗ್ಗೆ ಮಾತನಾಡಿದರೆ ಜೈಲಿಗೆ ಹೋಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಅದಕ್ಕಾಗಿಯೇ ನಾನು ನನ್ನ ಕ್ಷೇತ್ರದ ಬಗ್ಗೆ ಮಾತನಾಡುವುದನ್ನು ತಪ್ಪಿಸಿಕೊಂಡಿದ್ದೇನೆ ಎಂದು ಅವರು ತಿಳಿಸಿದರು. ಆದರೆ, ಬೆಂಗಳೂರಿನ ಸಾಮಾನ್ಯ ವಿಷಯಗಳ ಬಗ್ಗೆ ಮಾತ್ರ ಮಾತನಾಡುತ್ತೇನೆ ಎಂದರು.

ಬೆಂಗಳೂರು ನನ್ನ ಐದನೇ ತಲೆಮಾರು

ತಾವು ಬೆಂಗಳೂರಿನ ಮೂಲ ನಿವಾಸಿಯಾಗಿದ್ದು, ತಮ್ಮ ಕುಟುಂಬವು ಐದನೇ ತಲೆಮಾರಿನಿಂದ ಇಲ್ಲಿ ವಾಸಿಸುತ್ತಿದೆ ಎಂದು ಮುನಿರತ್ನ ಹೇಳಿದರು. “ನಮ್ಮ ಮಕ್ಕಳು, ಮೊಮ್ಮಕ್ಕಳು ಸೇರಿ ಇದು ಏಳನೇ ತಲೆಮಾರಾಗುತ್ತದೆ. 1972ರಲ್ಲಿ ನನ್ನ ತಂದೆ ಕಾರ್ಪೊರೇಟರ್ ಆಗಿದ್ದರು. ಹಾಗಾಗಿ ಬೆಂಗಳೂರಿನ ಸಮಸ್ಯೆಗಳು ಮತ್ತು ಅಭಿವೃದ್ಧಿ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ” ಎಂದರು.

ಬೆಂಗಳೂರು ಅಭಿವೃದ್ಧಿ ಕುರಿತು ಆರೋಪಗಳು

ನಗರದ ಅಭಿವೃದ್ಧಿ ಕಾರ್ಯಗಳಲ್ಲಿ ಅಕ್ರಮ ನಡೆಯುತ್ತಿದೆ ಎಂದು ಮುನಿರತ್ನ ಆರೋಪಿಸಿದರು. “ರಾಜಾಕಾಲುವೆಗಳ ಪಕ್ಕ ಮೋರಿಗಳನ್ನು ಅಗಲ ಮಾಡುವ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಬೆಂಗಳೂರು ಟನೆಲ್ ಯೋಜನೆ ವಿಚಾರದಲ್ಲಿ ಮುಖ್ಯಮಂತ್ರಿಗೆ ಉಪಮುಖ್ಯಮಂತ್ರಿಗಳು ತಪ್ಪು ಮಾಹಿತಿ ನೀಡಿದ್ದಾರೆ. ಯಾರಿಗೋ ಲಾಭವಾಗುವಂತೆ ಟೆಂಡರ್ ನೀಡಲಾಗುತ್ತಿದೆ. ಯಾರಿಗೋ ಟೆಂಡರ್ ಕೊಟ್ಟು ಬೆಂಗಳೂರು ಅಡ ಇಡಲು ಹೊರಟಿದ್ದಾರೆ ಎಂದು ಅವರು ಆರೋಪಿಸಿದರು.

ಇದಲ್ಲದೆ, ಉದ್ಯಮಿಗಳು ಮತ್ತು ಬಿಲ್ಡರ್‌ಗಳು ಬೆಂಗಳೂರನ್ನು ಬಿಟ್ಟು ಹೊರಟು ಹೋಗುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, “ಬೆಂಗಳೂರುದಲ್ಲಿ ಭ್ರಷ್ಟಾಚಾರ ಹೆಚ್ಚಾಗಿರುವುದರಿಂದ ಉದ್ಯಮಿಗಳು ಇಲ್ಲಿ ಉಳಿಯಲು ಇಚ್ಛಿಸುವುದಿಲ್ಲ. ನಾವು ಇದ್ದದ್ದನ್ನೇ ಕಳೆದುಕೊಳ್ಳುತ್ತಿದ್ದೇವೆ. ಉದ್ಯಮಿಗಳು ಬೆಂಗಳೂರು ಬಿಟ್ ಹೋಗ್ತಿದ್ದಾರೆ. ಆಂದ್ರದ ಸಿಎಂ ರೇವಂತ್ ರೆಡ್ಡಿ ಬೆಂಗಳೂರು ಬಗ್ಗೆ ಮಾತಾಡ್ತಾರೆ. ತಮಿಳುನಾಡು ಭಾರತದಲ್ಲೇ ಕೈಗಾರಿಕೆಯಲ್ಲಿ ಮೊದಲ ಸ್ಥಾನ. ನಾವು ಇರೋರನ್ನು ಓಡಿಸ್ತಿದ್ದೀವಿ, ಇರೋದನ್ನು ಕಳ್ಕೊಳ್ತಿದ್ದೀವಿ. ನಾವು ಉದ್ಯಮಿಗಳನ್ನ ಬೆಂಗಳೂರಿನಲ್ಲಿ ಇರಲು ಬಿಡ್ತಿಲ್ಲ. ಬಿಲ್ಡರ್ ಗಳು ಬೆಂಗಳೂರು ಬಿಡ್ತಿದ್ದಾರೆ. ಯಾಕೆ ಅಂತ ನಾನು ಕೇಳಿದ್ರೆ, ಬೆಂಗಳೂರಿನಲ್ಲಿ ಭ್ರಷ್ಟಾಚಾರ ಕಮ್ಕಿ ಆಗಿದೆ ಅಂತಾರೆ ಎಂದು ಮುನಿರತ್ನ ಆರೋಪಿಸಿದರು.

ಲಕ್ಷ್ಮಿ ಹೆಬ್ಬಾಳ್ಕರ್ ಜೊತೆ ವಾಗ್ವಾದ

ಮುನಿರತ್ನ ಮಾತನಾಡುತ್ತಿರುವ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಟೀಕೆ ಮಾಡಿದರು. “ನೀವು ಒಳ್ಳೇ ನಟರು” ಎಂದು ಅವರು ಮುನಿರತ್ನ ಅವರನ್ನು ಕಾಲೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಮುನಿರತ್ನ, “ನಾನು ನಟ ಅಲ್ಲ, ಪ್ರೊಡ್ಯೂಸರ್” ಎಂದು ತಿರುಗೇಟು ನೀಡಿದರು. ಜೊತೆಗೆ, “ನೀವು ಒಳ್ಳೇ ಆ್ಯಕ್ಟರ್. ಕಲ್ಪನಾ ಮತ್ತು ಮಂಜುಳಾ ಇದ್ದಿದ್ದರೆ ನಿಮ್ಮ ನಟನೆ ನೋಡಿ ಸತ್ತು ಹೋಗ್ತಿದ್ರು ಅಂತ ಕೌಂಟರ್ ಕೊಟ್ಟರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಯುವ ನಿಧಿ ಯೋಜನೆ ಕೈಬಿಟ್ರಾ?: ಬಜೆಟ್‌ನಲ್ಲಿ ಅನುದಾನದ ನೀಡದ ಬಗ್ಗೆ ಬಿಜೆಪಿ ಶಾಸಕನ ಪ್ರಶ್ನೆಗೆ ಸರ್ಕಾರ ಮೌನ!
ಗಾಲ್ಫ್‌ ಆಡ್ತಾರೆ, ಡ್ಯೂಟಿ ಮಾಡೋಕೆ ಟೈಂ ಇಲ್ಲ; 9 ತಿಂಗಳು ಕಚೇರಿಗೆ ಬಾರದ ಐಎಎಸ್‌, ಆರ್ ಅಶೋಕ್ ಗರಂ, ಯಾರು ಆ ಅಧಿಕಾರಿ?