ಶಾಸಕ ಕಳಕಪ್ಪ ಬಂಡಿ ಚುನಾವಣಾ ಪ್ರಚಾರ ಆರಂಭ!

By Kannadaprabha NewsFirst Published Oct 6, 2022, 12:42 PM IST
Highlights
  • ಬಂಡಿ ಚುನಾವಣಾ ಪ್ರಚಾರ ಆರಂಭ!
  • -ಬಿಜೆಪಿ ರೋಣ ಹೆಸರಿನ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ ಶಾಸಕ ಕಳಕಪ್ಪ ಬಂಡಿ

ಎಸ್‌.ಎಂ. ಸೈಯದ್‌

ಗಜೇಂದ್ರಗಡ (ಅ.6) :ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ 7-8 ತಿಂಗಳುಗಳು ಬಾಕಿ ಇರುವಾಗಲೇ ರೋಣ ಶಾಸಕ ಕಳಕಪ್ಪ ಬಂಡಿ ಅವರು ವಿಜಯದಶಮಿ ನಿಮಿತ್ತ ತಾಲೂಕಿನ ಮ್ಯಾಕಲ್‌ಝರಿ ಗ್ರಾಮದ ಮಾರುತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಶಾಸಕರ ಮತ್ತು ಬಿಜೆಪಿ ರೋಣ ಹೆಸರಿನ ಫೇಸ್‌ಬುಕ್‌ನಲ್ಲಿ ‘ಇಂದು ಚುನಾವಣಾ ಪ್ರಚಾರ ಆರಂಭಿಸಲಾಯಿತು’ ಎಂದು ಪೋಸ್ಟ್‌ ಹಾಕಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಗದಗ: ಪುತ್ರನ ನೆನಪಿಗಾಗಿ ಬಡವರಿಗೆ ನಿವೇಶನ ದಾನ..!

ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಇನ್ನೂ ಹಲವು ತಿಂಗಳು ಬಾಕಿಯಿವೆ. ಆದರೆ, ಹಾಲಿ ಶಾಸಕ ಕಳಕಪ್ಪ ಬಂಡಿ ಅವರು ಫೇಸ್‌ಬುಕ್‌ನಲ್ಲಿ ಬುಧವಾರ ಹಾಕಿರುವ ಪೋಸ್ಟ್‌ನಿಂದಾಗಿ ರಾಜಕೀಯ ವಲಯದಲ್ಲಿ ಚರ್ಚೆಗೆ ನಾಂದಿ ಹಾಡಿದೆ.

ವಿಜಯದಶಮಿ ಶುಭದಿನವಾಗಿದ್ದರಿಂದ ಪೂಜೆ ಬಳಿಕ ಚುನಾವಣಾ ಪ್ರಚಾರ ಆರಂಭಿಸಿದ್ದೇವೆ. ಇದರಲ್ಲಿ ವಿಶೇಷವೇನಿಲ್ಲ ಎಂದು ಬಿಜೆಪಿ ಹೇಳಿದರೆ, ಬಿಜೆಪಿಗೆ ಸೋಲಿನ ಭಯ ಕಾಡುತ್ತಿದೆ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

ರಾಜ್ಯ ಮತ್ತು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ಅಭಿವೃದ್ಧಿ ಮತ್ತು ಜನಪರ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡಿರುವ ಕೆಲ ಬಿಜೆಪಿ ಮುಖಂಡರು 2023ರ ವಿಧಾನಸಭಾ ಚುನಾವಣೆಗೆ ರೋಣ ಮತಕ್ಷೇತ್ರದ ಬಿಜೆಪಿ ಟಿಕೆಟ್‌ ಅಕಾಂಕ್ಷಿಗಳು ಎಂದು ತಮ್ಮ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು ಭರ್ಜರಿ ತಾಲೀಮು ನಡೆಸಿದ್ದಾರೆ. ಹೀಗಾಗಿ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸಾರ್ವಜನಿಕ ವಲಯದಲ್ಲಿನ ಗುಸುಗುಸುಗೆ ಶಾಸಕ ಕಳಕಪ್ಪ ಬಂಡಿ ಅವರು ಇಂದಿನಿಂದ ಚುನಾವಣಾ ಪ್ರಚಾರ ಆರಂಭಿಸಲಾಯಿತು ಎನ್ನುವ ಪೋಸ್ಟ್‌ ಮುಂದಿನ ವಿಧಾನಸಭಾ ಚುನಾವಣೆಯ ರೋಣ ಮತಕ್ಷೇತ್ರದಿಂದ ಮತ್ತೊಮ್ಮೆ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡಂತಿದೆ.

ಹತ್ತಾರು ಚರ್ಚೆಗಳು:

ಆಡಳಿತದಲ್ಲಿ ಇರುವ ಶಾಸಕರ ಪಕ್ಷದಲ್ಲಿಯೇ ಸಾಕಷ್ಟುಸಂಖ್ಯೆಯಲ್ಲಿ ಟಿಕೆಟ್‌ ಆಕಾಂಕ್ಷಿಗಳಿದ್ದು, ಅವರೆಲ್ಲಾ ಮುಂದಿನ ಚುನಾವಣೆ ಟಿಕೆಟ್‌ಗಾಗಿ ಜಾತಿ ಲಾಬಿ, ಪಕ್ಷದ ವರಿಷ್ಠರ ಬಳಿ ಈಗಾಗಲೇ ಹಲವಾರು ಬಾರಿ ಭೇಟಿ ಮಾಡಿ ಬಂದಿದ್ದಾರೆ.

ಅವರೆಲ್ಲ ಈ ಬಾರೀ ನನಗೇ ಬಿಜೆಪಿ ಟಿಕೆಟ್‌, ಕಾರ್ಯಕರ್ತರು ನಮ್ಮ ಗೆಲುವಿಗೆ ಶ್ರಮಿಸಬೇಕು ಎಂದೆಲ್ಲಾ ಹೇಳಿಕೊಂಡು ಓಡಾತುತ್ತಿರುವುದು ರೋಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳಲ್ಲಿ ಸಾಕಷ್ಟುಗುಸುಗುಸು ಪ್ರಾರಂಭವಾಗಿದೆ. ಬುಧವಾರ ವಿಜಯದಶಮಿ ಎಂದು ಶಾಸಕರ ಮುಖಪುಟ ಪೇಜ್‌ ನಲ್ಲಿ ಹಾಕಿದ ಪೋಸ್ಟ್‌ ಮುಂಬರುವ ದಿನಗಳಲ್ಲಿ ಇನ್ನಾವ ರೀತಿಯ ರೂಪ ಪಡೆದುಕೊಳ್ಳುತ್ತದೆ ಕಾದು ನೋಡಬೇಕು.

ಗದಗ್‌ನಲ್ಲಿ ಲಂಚ ಸ್ವೀಕರಿಸುತ್ತಿದ್ದ ಅಗ್ನಿಶಾಮಕ ಅಧಿಕಾರಿ ಲೋಕಾಯುಕ್ತ ಬಲೆಗೆ

ರೋಣ ಮತಕ್ಷೇತ್ರದಲ್ಲಿ ಶಾಸಕ ಕಳಕಪ್ಪ ಬಂಡಿ ಅವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಚುನಾವಣೆಯಲ್ಲಿ ಅವರ ಗೆಲುವಿನ ಅಂತರವನ್ನು ಮತ್ತಷ್ಟುಹೆಚ್ಚಿಸಲಿವೆ. ಹೀಗಾಗಿ ವಿಜಯದಶಮಿ ಹಿನ್ನೆಲೆಯಲ್ಲಿ ತಾಲೂಕಿನ ಮ್ಯಾಕಲ್‌ಝರಿ ಗ್ರಾಮದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬುಧವಾರ ಚುನಾವಣಾ ಪ್ರಚಾರ ಆರಂಭಿಸಲಾಗಿದೆ. ಅಲ್ಲದೆ ವಿಪಕ್ಷಗಳು ಚುನಾವಣಾ ತಯಾರಿ ನಡೆಸಿರುವಾಗ ನಾವು ಚುನಾವಣಾ ಪ್ರಚಾರ ನಡೆಸುವುದರಲ್ಲಿ ವಿಶೇಷವೇನಿಲ್ಲ.

- ಮುತ್ತಣ್ಣ ಕಡಗದ, ತಾಲೂಕು ಅಧ್ಯಕ್ಷ, ಬಿಜೆಪಿ ರೋಣ ಮಂಡಲ

ಕ್ಷೇತ್ರದಲ್ಲಿ ಬಿಜೆಪಿಗೆ ಈಗಾಗಲೇ ಸೋಲಿನ ಭಯ ಕಾಡುತ್ತಿದೆ ಎಂಬ ಕೆಲ ಚರ್ಚೆಗಳಿಗೆ ಶಾಸಕರ ಮತ್ತು ಬಿಜೆಪಿ ರೋಣ ಪೇಜ್‌ಗಳಲ್ಲಿ ಇಂದು ಚುನವಣಾ ಪ್ರಚಾರ ಆರಂಬಿಸಲಾಯಿತು ಎನ್ನುವ ಪೋಸ್ಟ್‌ ಬಲ ನೀಡಿದೆ. ಆಡಳಿತ ನಡೆಸುವಲ್ಲಿ ವಿಫಲರಾಗಿದ್ದಾರೆ ಎನ್ನುವ ಆರೋಪಗಳನ್ನು ದೂರ ಮಾಡಲು ಈಗ ಪ್ರತಿ ಹಳ್ಳಿಗಳಲ್ಲಿ ಸಣ್ಣಪುಟ್ಟಘಟನೆಗಳಿಗೆ ಶಾಸಕರು ಮತ್ತು ಬಿಜೆಪಿ ಮಂಡಲದ ಅಧ್ಯಕ್ಷರು ಪಕ್ಷ ಸಂಘಟನೆ ಮೂಲಕ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗಿದ್ದಾರೆ.

- ಬಿ.ಎಸ್‌. ಶೀಲವಂತರ, ಮಾಧ್ಯಮ ವಕ್ತಾರ, ಜಿಲ್ಲಾ ಕಾಂಗ್ರೆಸ್‌

click me!