ಕೊನೆ ಉಸಿರಿನವರೆಗೂ ಕೆಆರ್‌ಪಿಪಿಯಲ್ಲಿರುವೆ. ಕನಸಲ್ಲೂ ನಾನು ಬಿಜೆಪಿಗೆ ಹೋಗಲಾರೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಕನಸಿನಲ್ಲಿಯೂ ನಾನು ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ.
ಕೊಪ್ಪಳ (ನ.29): ಕೊನೆ ಉಸಿರಿನವರೆಗೂ ಕೆಆರ್‌ಪಿಪಿಯಲ್ಲಿರುವೆ. ಕನಸಲ್ಲೂ ನಾನು ಬಿಜೆಪಿಗೆ ಹೋಗಲಾರೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಕನಸಿನಲ್ಲಿಯೂ ನಾನು ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಆನಂತರ ಅವರನ್ನು ಅಭಿನಂದಿಸಿದ್ದೇನೆಯೇ ಹೊರತು ರಾಜಕಾರಣ ಮಾತನಾಡಿಲ್ಲ. ಕೊನೆ ಉಸಿರು ಇರುವವರೆಗೂ ನಾನು ಕೆಆರ್‌ಪಿಪಿ ಪಕ್ಷದಲ್ಲಿರುತ್ತೇನೆ. ಎಂದಿಗೂ ಬಿಜೆಪಿಯತ್ತ ಸುಳಿಯುವುದಿಲ್ಲ ಎಂದರು. ಕೆಆರ್‌ಪಿಪಿಯಿಂದ ಲೋಕಸಭೆಗೆ ಚುನಾವಣೆಗೆ 8 ಕ್ಷೇತ್ರದಲ್ಲಿ ಅಭ್ಯರ್ಥಿ ನಿಲ್ಲಿಸುವ ಕುರಿತು ಸಮೀಕ್ಷೆ ನಡೆದಿದೆ.
ಫೆಬ್ರವರಿಯಲ್ಲಿ ಅಂತಿಮ ನಿರ್ಧಾರ ಮಾಡಲಾಗುವುದು. ಬಿಜೆಪಿಯಲ್ಲಿ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದಾರೆ. ಬರ ಕುರಿತು ಅವರ 18 ತಂಡ ಅಧ್ಯಯನ ಮಾಡಿದ ನಂತರವೂ ವಿಪಕ್ಷ ನಾಯಕ ತಿರುಗಾಡುತ್ತಿದ್ದಾರೆ. ಆಡಳಿತ ಪಕ್ಷ ಕಾಂಗ್ರೆಸಿಗರು ತಮ್ಮ ಮೇಲಿನ ಕೇಸ್‌ನಿಂದ ಪಾರಾಗಲು ಯತ್ನಿಸುತ್ತಿದ್ದಾರೆ. ಬಿಜೆಪಿಯಲ್ಲಿ ಶ್ರೀರಾಮುಲು ಅವರಿಗೆ ಸ್ಥಾನಮಾನ ನೀಡುತ್ತಿಲ್ಲ. ಏಕೆ ನೀಡುತ್ತಿಲ್ಲ ಎಂದು ಬಿಜೆಪಿಯವರನ್ನು ಕೇಳಬೇಕು ಎಂದು ಹೇಳಿದರು. ಈ ಹಿಂದೆ ಶ್ರೀರಾಮನ ಹೆಸರು ಹೇಳಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈಗ ಅಂಜನಾದ್ರಿ ಮರೆತಿದ್ದಾರೆ. ಫೆಬ್ರುವರಿ ಬಜೆಟ್ ಅಧಿವೇಶನದಲ್ಲಿ ಅಂಜನಾದ್ರಿಗೆ ₹5 ಸಾವಿರ ಕೋಟಿ ಬಿಡುಗಡೆ ಮಾಡಿಸಬೇಕು.
28 ಕ್ಷೇತ್ರಗಳನ್ನೂ ಗೆದ್ದು ಪ್ರಧಾನಿ ಮೋದಿಗೆ ಬಲ ತರುವೆ: ಬಿ.ವೈ.ವಿಜಯೇಂದ್ರ
10 ವರ್ಷದಿಂದ ಸಂಸದ ಸಂಗಣ್ಣ ಕರಡಿ ಕೇವಲ ರೈಲು ಬಿಡುವುದನ್ನು ಬಿಟ್ಟು ಅಂಜನಾದ್ರಿ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿಸಿಲ್ಲ ಎಂದರು. ಜಿಲ್ಲೆಯಲ್ಲಿ ಕರಡಿ ದಾಳಿಯಿಂದ ರೈತರಿಗೆ ಗಾಯಗಳಾಗಿವೆ. ಕರಡಿ ದಾಳಿಯಿಂದ ರೈತರು ಮರಣ ಹೊಂದುತ್ತಿದ್ದಾರೆ. ವನ್ಯಪ್ರಾಣಿಗಳಿಂದ ಆಗುವ ಹಾನಿ ಪರಿಹಾರ ನೀಡುವಲ್ಲಿ ತಾರತಮ್ಯವಾಗುತ್ತಿದೆ. ಹಳೆ ಮೈಸೂರು ಭಾಗದಲ್ಲಿ ನೀಡುತ್ತಿರುವ ಪರಿಹಾರ ಉತ್ತರ ಕರ್ನಾಟಕಕ್ಕೆ ನೀಡುತ್ತಿಲ್ಲ. ಈ ಕುರಿತು ಬೆಳಗಾವಿ ಅಧಿವೇಶನದಲ್ಲಿ ಮಾತನಾಡುತ್ತೇನೆ. ಜಿಲ್ಲೆಯಲ್ಲಿ ಕರಡಿ ಧಾಮ ನಿರ್ಮಿಸಬೇಕು. ರೈತರಿಗೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ಬರುವ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ಮಾಡುತ್ತೇನೆ ಎಂದು ಎಚ್ಚರಿಸಿದರು.