ಡಿ.ಕೆ.ಸುರೇಶ್ ಆಯ್ಕೆಯಾಗದಿದ್ದರೆ ಹೇಮಾವತಿ ಮರೀಚಿಕೆ: ಶಾಸಕ ಬಾಲಕೃಷ್ಣ

By Kannadaprabha NewsFirst Published Nov 23, 2023, 11:01 PM IST
Highlights

ಸಂಸದ ಡಿ.ಕೆ.ಸುರೇಶ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮರು ಆಯ್ಕೆಯಾಗದಿದ್ದರೆ ಮಾಗಡಿ ತಾಲೂಕಿಗೆ ಹೇಮಾವತಿ ಮರೀಚಿಕೆಯಾಗುತ್ತದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು. 

ಕುದೂರು (ನ.23): ಸಂಸದ ಡಿ.ಕೆ. ಸುರೇಶ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮರು ಆಯ್ಕೆಯಾಗದಿದ್ದರೆ ಮಾಗಡಿ ತಾಲೂಕಿಗೆ ಹೇಮಾವತಿ ಮರೀಚಿಕೆಯಾಗುತ್ತದೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು. ಕುದೂರು ಗ್ರಾಮ ಪಂಚಾಯ್ತಿ ಕಚೇರಿಯ ಆವರಣದಲ್ಲಿ ಏರ್ಪಡಿಸಿದ್ದ ಸಂಸದ-ಶಾಸಕರ ಜನಸ್ಪಂದನ ಸಭೆ ಉದ್ಘಾಟಿಸಿದ ಅವರು, ಬಿಜೆಪಿ ಶಾಸಕ ಸುರೇಶ್ ಗೌಡರು ಆತುರಗೆಟ್ಟ ಆಂಜನೇಯ ಆಡಿದ ಹಾಗೆ ಆಡುತ್ತಾರೆ. ನಾವು ಮಾಗಡಿ ತಾಲೂಕಿಗೆ ನೀರನ್ನು ಬಿಡುವುದಿಲ್ಲ ಎಂದು ಕೂಗಾಡುತ್ತಾರೆ. ಹೇಮಾವತಿ ನದಿ ನೀರು ನಮ್ಮ ಹಕ್ಕು ಅದನ್ನು ಪಡದೇ ತೀರುತ್ತೇವೆ. ಇದಕ್ಕೆ ಸಂಸದ ಡಿ.ಕೆ.ಸುರೇಶ್ ರವರ ಸಹಕಾರವೂ ಅಗತ್ಯವಿದೆ ಎಂದರು.

ಹೇಮಾವತಿ ನದಿ ನೀರು ಬರಲು ಕಳೆದ ಸಂಯುಕ್ತ ಸರ್ಕಾರದಲ್ಲಿ ಲಿಂಕ್ ಕೆನಾಲ್ ಎಂಬ ಯೋಜನೆ ಜಾರಿಗೆ ತಂದರು. ಆದರೆ ಅದು ಟೆಂಡರ್ ಬರುವ ವೇಳಗೆ ಸರ್ಕಾರ ಪತನವಾಯಿತು. ನಂತರ ಬಿಜೆಪಿ ಸರ್ಕಾರ ಬಂದಿತು. ಅವರು ಬಂದ ತಕ್ಷಣ ಲಿಂಕ್ ಕೆನಾಲ್ ಟೆಂಡರ್ ರದ್ದು ಮಾಡಿದ ದೆಸೆಯಿಂದಾಗಿ ನೀರು ಬರಲು ತಡವಾಗುತ್ತಿದೆ. ಈಗ 500 ಕೋಟಿ ರು. ಬಿಡುಗಡೆ ಮಾಡಿ ಹೇಮಾವತಿ ನದಿ ನೀರನ್ನು ಹರಿಸುವ ಕೆಲಸಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಹೇಳಿದರು. ವಿರೋಧ ಪಕ್ಷದ ನಾಯಕ ಅಶೋಕ್ ಅವರು ಲೂಸಾಗಿ ಮಾತನಾಡಬಾರದು. ಮಾತು ತೂಕವಾಗಿರಬೇಕು. ನಮ್ಮ ಸರ್ಕಾರ ಹೇಗೆ ಬೀಳುತ್ತದೆ. ಹೆಚ್ಚಿನ ಶಾಸಕರನ್ನು ನಮ್ಮ ಪಕ್ಷಕ್ಕೆ ಜನರು ನೀಡಿದ್ದಾರೆ. ಇಷ್ಟಿದ್ದೂ ಹೇಗೆ ನಮ್ಮ ಸರ್ಕಾರ ಬೀಳುತ್ತದೆ ಎಂಬುದನ್ನು ಅವರು ಹೇಳಬೇಕು ಎಂದು ವ್ಯಂಗ್ಯವಾಡಿದರು.

ಪೊಲೀಸ್ ಇನ್‌ಸ್ಪೆಕ್ಟರ್‌ಗೆ ನಾಮ ಹಾಕಿದ ವಂಚಕರು: ಖಾತೆಯಲ್ಲಿದ್ದ ಲಕ್ಷ‌-ಲಕ್ಷ‌ ಹಣ ಮಂಗಮಾಯ!

ಎಷ್ಟೇ ಜನಸಂಪರ್ಕ ಸಭೆ ಮಾಡಿದರೂ ನನ್ನ ವೇಗಕ್ಕೆ ಅಧಿಕಾರಿಗಳು ಹೊಂದಿಕೆಯಾಗುತ್ತಿಲ್ಲ. ಅವರು ನನ್ನೊಂದಿಗೆ ಸಹಕರಿಸಿದ್ದೇ ಆದರೆ ಜನರ ಸಮಸ್ಯೆಗಳನ್ನು ಬೇಗನೆ ಬಗೆಹರಿಸಬಹುದು ಎಂದು ಎಚ್.ಸಿ. ಬಾಲಕೃಷ್ಣ ಹೇಳಿದರು. ಸಂಸದ ಡಿ.ಕೆ. ಸುರೇಶ್ ಮಾತನಾಡಿ, ನಮ್ಮದು ರೈತಪರ ಸರ್ಕಾರವಾಗಿದೆ. ರೈತರ ಪಂಪ್ ಸೆಟ್‌ಗಳನ್ನು ಸೋಲಾರ್ ಪಂಪ್ ಸೆಟ್‌ ಗಳನ್ನಾಗಿ ಪರಿವರ್ತಿಸಲಾಗುವುದು. ಇದರಿಂದ ಸೂರ್ಯನ ಶಾಖದಿಂದಲೇ ಮೋಟಾರುಗಳು ಓಡುವಂತಾಗಬೇಕು. ಆಗ ಹಗಲಿನ ವೇಳೆಯೇ ಕೆಲಸ ಮಾಡಬಹುದು. ವಿದ್ಯುತ್ತನ್ನು ರೈತ ಅವಲಂಬಿಸುವ ಅವಶ್ಯಕತೆಯೇ ಇರುವುದಿಲ್ಲ ಎಂದು ಹೇಳಿದರು.

ವಿ.ಸೋಮಣ್ಣ ಬಿಜೆಪಿ ಪಕ್ಷ ಬಿಡಲ್ಲ: ಮಾಜಿ ಸಚಿವ ರಾಮದಾಸ್ ಸ್ಪಷ್ಟನೆ

ಗ್ರಾಮ ಪಂಚಾಯ್ತಿ ನೌಕರರು ಸುಮ್ಮನೆ ಕುಳಿತು ಸಂಬಳ ಪಡೆಯಬಾರದು ಜನರ ಜೊತೆಗೆ ಬೆರೆತು ಸಮಸ್ಯೆಗಳನ್ನು ಅಲ್ಲಲ್ಲಿಯೇ ಪರಿಹಾರ ಮಾಡಬೇಕು. ಕುದೂರು ಬೆಸ್ಕಾಂ ಕಚೇರಿಯ ಬಳಿಯೇ ಸೋಲಾರ್ ವಿದ್ಯುತ್ ಸಲುವಾಗಿ ಜಾಗ ಗುರುತಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪಹಣಿ, ಇ-ಖಾತೆ ಕುರಿತು ಹೆಚ್ಚಿನ ಅರ್ಜಿಗಳನ್ನು ಪಡೆದರು ಅದನ್ನು ಆದ್ಯತೆಗಳಿಗನುಗುಣವಾಗಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಸುರೇಶ್ ತಿಳಿಸಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕುಸುಮಾ, ರವ್ಯಜ್ಯೋತಿ, ನಿರ್ಮಲ, ಭಾಗ್ಯಮ್ಮ, ಹನುಮಂತರಾಯಪ್ಪ, ಕೆ.ಬಿ.ಬಾಲರಾಜ್, ಸಂಧ್ಯ, ಮಂಜುನಾಥ್ ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.

click me!