ಕಾಂಗ್ರೆಸ್‌ ಟಿಕೆಟ್‌ ಘೋಷಣೆ ವಿವಾದ ಎಐಸಿಸಿ ಅಂಗಳಕ್ಕೆ?

By Kannadaprabha News  |  First Published Nov 23, 2022, 12:30 PM IST

ಕಾಂಗ್ರೆಸ್‌ದಿಂದ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಬಯಸುವವರು ಟಿಕೆಟ್‌ಗಾಗಿ ಅರ್ಜಿ ಆಹ್ವಾನಿಸಿರುವಾಗಲೇ ಸಿದ್ದರಾಮಯ್ಯನವರ ಘೋಷಣೆ ವಿವಾದಕ್ಕೆ ಕಾರಣವಾಗಿದೆ.


ಸೋಮರಡ್ಡಿ ಅಳವಂಡಿ

ಕೊಪ್ಪಳ(ನ.23): ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇತ್ತೀಚೆಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಪಕ್ಷದ ವಲಯದಲ್ಲಿ ಸಂಚಲನ ಮೂಡಿಸಿದ್ದು, ಎಐಸಿಸಿ ವರೆಗೂ ದೂರು ತಲುಪಿದೆ.

Tap to resize

Latest Videos

undefined

ಕೊಪ್ಪಳ ತಾಲೂಕಿನ ವನಬಳ್ಳಾರಿಯಲ್ಲಿ ಗುತ್ತಿಗೆದಾರ ಹನುಮಂತ ಅರಸನಕೇರಿ ಅವರ ಸಹೋದರನ ಮದುವೆ ಸಮಾರಂಭಕ್ಕೆ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆಗಮಿಸಿದ್ದರು. ಆಗ ನೆರೆದಿದ್ದ ಜನಸ್ತೋಮ ಉದ್ದೇಶಿಸಿ ಮಾತನಾಡುವ ವೇಳೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಿಂದ ರಾಘವೇಂದ್ರ ಹಿಟ್ನಾಳ, ಗಂಗಾವತಿ ಕ್ಷೇತ್ರದಿಂದ ಇಕ್ಬಾಲ್‌ ಅನ್ಸಾರಿ, ಯಲಬುರ್ಗಾ ಕ್ಷೇತ್ರದಿಂದ ಬಸವರಾಜ ರಾಯರಡ್ಡಿ ಹಾಗೂ ಕನಕಗಿರಿ ವಿಧಾನಸಭಾ ಕ್ಷೇತ್ರದಿಂದ ಶಿವರಾಜ ತಂಗಡಗಿ ಅವರನ್ನು ಗೆಲ್ಲಿಸುವಂತೆ ಬಹಿರಂಗವಾಗಿ ಮನವಿ ಮಾಡುವ ಮೂಲಕ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದರು.

ಕರ್ನಾಟಕ ವಿಧಾನಸಭಾ ಚುನಾವಣೆ 2023: ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರು ಘೋಷಿಸಿದ ಸಿದ್ದರಾಮಯ್ಯ

ಕಾಂಗ್ರೆಸ್‌ದಿಂದ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಬಯಸುವವರು ಟಿಕೆಟ್‌ಗಾಗಿ ಅರ್ಜಿ ಆಹ್ವಾನಿಸಿರುವಾಗಲೇ ಸಿದ್ದರಾಮಯ್ಯನವರ ಘೋಷಣೆ ವಿವಾದಕ್ಕೆ ಕಾರಣವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಸ್ಪಷ್ಟನೆ ನೀಡಿ ಟಿಕೆಟ್‌ ಘೋಷಣೆ ಮಾಡುವ ಅಧಿಕಾರ ನನಗೂ ಸೇರಿದಂತೆ ಯಾರಿಗೂ ಇಲ್ಲ. ಅದೇನಿದ್ದರೂ ಹೈಕಮಾಂಡ್‌ಗೆ ಬಿಟ್ಟಅಧಿಕಾರ ಎಂದಿದ್ದರು. ಈ ನಡುವೆ ಕಾಂಗ್ರೆಸ್‌ನ ಕನಕಗಿರಿ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಮುಕುಂದರಾವ್‌ ಭವಾನಿಮಠ ಅವರು ಎಐಸಿಸಿಗೆ ದೂರು ನೀಡಿದ್ದಾರೆ.

ಅರ್ಜಿ ಏಕೆ ಕರೆದಿರಿ?:

ಒಂದೆಡೆ ಆಕಾಂಕ್ಷಿಗಳ ಅರ್ಜಿ ಕರೆದಿರುವಾಗ ಈ ರೀತಿಯ ಘೋಷಣೆ ಎಷ್ಟುಸರಿ? ಹಾಗಾದರೆ ಅರ್ಜಿಯನ್ನು ಯಾಕೆ ಕರೆಯಬೇಕಾಗಿತ್ತು ಎಂದು ಪ್ರಶ್ನಿಸಿದ್ದಾರೆ. ಅಷ್ಟಕ್ಕೂ ಮುಕುಂದರಾವ್‌ ಭವಾನಿಮಠ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರಾಗಿದ್ದಾರೆ. ಅವರ ಪರಮ ಅನುಯಾಯಿ ಆಗಿದ್ದಾರೆ. ಹೀಗಾಗಿ ದೂರಿಗೆ ಮಹತ್ವ ಬಂದಿದೆ. ಹೈಕಮಾಂಡ್‌ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಗೊತ್ತಾಗಿದೆ.

ಇಲ್ಲಿಯವರೆಗೆ ಟಿಕೆಟ್‌ಗೆ ಅರ್ಜಿ ಸಲ್ಲಿಸಿದವರು

ಕೊಪ್ಪಳ - ರಾಘವೇಂದ್ರ ಹಿಟ್ನಾಳ
ಯಲಬುರ್ಗಾ - ಬಸವರಾಜ ರಾಯರಡ್ಡಿ
ಕುಷ್ಟಗಿ - ಅಮರೇಗೌಡ ಭಯ್ಯಾಪುರ, ಹಸನಸಾಬ ದೋಟಿಹಾಳ, ಪ್ರಭಾಕರ ಚಿಣಿ
ಗಂಗಾವತಿ - ಇಕ್ಬಾಲ್‌ ಅನ್ಸಾರಿ, ಮಲ್ಲಿಕಾರ್ಜುನ ನಾಗಪ್ಪ, ಎಚ್‌.ಆರ್‌. ಶ್ರೀನಾಥ
ಕನಕಗಿರಿ- ಶಿವರಾಜ ತಂಗಡಗಿ, ಮುಕುಂದರಾವ್‌ ಭವಾನಿಮಠ

ಜನರ ಮೂಗಿಗೆ ತುಪ್ಪ ಹಚ್ಚುವ ಕಾಂಗ್ರೆಸಿಗರು: ಸಚಿವ ಹಾಲಪ್ಪ ಆಚಾರ್

ಆಕಾಂಕ್ಷಿಗಳ ಅರ್ಜಿಯನ್ನು ಕರೆದಿರುವಾಗಲೇ ಕೊಪ್ಪಳ ತಾಲೂಕಿನ ವನಬಳ್ಳಾರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಘೋಷಣೆ ಮಾಡಿರುವುದರ ವಿರುದ್ಧ ಎಐಸಿಸಿಗೆ ದೂರು ಸಲ್ಲಿಸಿದ್ದೇನೆ ಅಂತ ಟಿಕೆಟ್‌ ಆಕಾಂಕ್ಷಿ ಮುಕುಂದರಾವ್‌ ಭವಾನಿಮಠ ತಿಳಿಸಿದ್ದಾರೆ. 

ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ ಎಂದು ಹೇಳುವುದು ಸರಿಯಲ್ಲ. ಅವರು ಕಾಂಗ್ರೆಸ್‌ ಬೆಂಬಲಿಸುಂತೆ ಕೋರಿದ್ದಾರೆ. ಹಾಗೆಯೇ ಕಳೆದ ಬಾರಿ ಸೋತವರು ಮತ್ತು ಗೆದ್ದವರ ಹೆಸರು ಪ್ರಸ್ತಾಪಿಸಿ ಮನವಿ ಮಾಡಿದ್ದಾರೆ. ಅಂತಿಮವಾಗಿ ಹೈಕಮಾಂಡ್‌ ತೀರ್ಮಾನ ಕೈಗೊಳ್ಳುತ್ತದೆ ಅಂತ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.  
 

click me!