
ಮಂಡ್ಯ (ನ.02): ದಿಶಾ ಸಭೆ ನಡೆಸಿ ಜೆಡಿಎಸ್ ಶಾಸಕರ ವಿರುದ್ಧ ವಾಗ್ದಾಳಿ ನಡೆಸುವುದೇ ಸಂಸದೆ ಸುಮಲತಾ ಕೆಲಸವಾಗಿದೆ. ಅಭಿವೃದ್ಧಿ ವಿಚಾರವಾಗಿ ಅವರ ಸಾಧನೆ ಶೂನ್ಯ ಎಂದು ಶಾಸಕ ಸಿ.ಎಸ್. ಪುಟ್ಟರಾಜು ಕಿಡಿಕಾರಿದರು. ತಾಲೂಕಿನ ದುದ್ದ ಹೋಬಳಿಯ ಚಂದಗಾಲು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಚಂದಗಾಲು-ತಂಡಸನಹಳ್ಳಿ ಮಾರ್ಗವಾಗಿ 3 ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ನರೇಗಾ ಯೋಜನೆಯಲ್ಲಿ ಮಂಡ್ಯ ಜಿಲ್ಲೆ ಕೊನೆಯ ಸ್ಥಾನದಲ್ಲಿದ್ದು, ಸಂಸದೆ ಸುಮಲತಾ ಯಾವುದೇ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ.
ನರೇಗಾ ಯೋಜನೆಯಡಿ ಒಂದೊಂದು ಪಂಚಾಯ್ತಿಯಲ್ಲಿ 10 ಕೋಟಿ ರು. ಕೆಲಸ ಮಾಡುವಂತಹ ಅವಕಾಶಗಳಿವೆ. ನಾನೂ ಸಹ ನಾಲ್ಕು ವರ್ಷಗಳ ಕಾಲ ಸಂಸದನಾಗಿ ಕೆಲಸ ಮಾಡಿದ್ದೆ. ಕೇಂದ್ರದಿಂದ ಹಣ ತಂದು ಯಾವ ರೀತಿ ಕೆಲಸ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದೇನೆ. ಆದರೆ, ಸುಮಲತಾ ಅವರು ಯಾವುದೇ ಕೆಲಸ ಮಾಡದೆ ಕೇವಲ ಗೊಂದಲ ಮೂಡಿಸುತ್ತಿದ್ದಾರೆ ಎಂದು ಟೀಕಿಸಿದರು. ಇನ್ನಾದರೂ ಕೀಳು ಮಟ್ಟದ ರಾಜಕೀಯ, ಜೆಡಿಎಸ್ ಶಾಸಕರನ್ನು ಟೀಕಿಸುವುದನ್ನು ಬಿಟ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜಿಲ್ಲೆಗೆ ಹೆಸರು ತರುವ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆ ಛಿದ್ರ
ಬಿಜೆಪಿ ವಿರುದ್ಧವೂ ವಾಗ್ದಾಳಿ: ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಕೆಟ್ಟವ್ಯವಸ್ಥೆಯನ್ನು ನೋಡಿರಲಿಲ್ಲ. ಇಂತಹ ಬೇಜವಾಬ್ದಾರಿ ಸರ್ಕಾರ ಹಾಗೂ ಬೇಜವಾಬ್ದಾರಿ ಮಂತ್ರಿಗಳನ್ನು ನಾನು ನೋಡಿರಲಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಒಂದು ವರ್ಷವಾದರೂ ಉಸ್ತುವಾರಿ ಸಚಿವ ಗೋಪಾಲಯ್ಯ ಕಚೇರಿ ತೆರೆದಿಲ್ಲ. ಈ ಸರ್ಕಾರದಲ್ಲಿ ಅಭಿವೃದ್ಧಿ ವಿಚಾರ ಇಲ್ಲವೇ ಇಲ್ಲ. ನಾರಾಯಣಗೌಡ ಪ್ರತಿನಿಧಿಸುವ ಕೆ.ಆರ್.ಪೇಟೆ ಹೊರತುಪಡಿಸಿ ಉಳಿದ ಕ್ಷೇತ್ರಗಳು ಗೋಪಾಲಯ್ಯ ಅವರಿಗೆ ಕಾಣುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿವರಾಮೇಗೌಡರಿಗೆ ತಿರುಗೇಟು: ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರು ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ ಛಿದ್ರವಾಗಲಿದೆ ಎಂದು ಹೇಳಿದ್ದಾರೆ. ಇದನ್ನು ಶಿವರಾಮೇಗೌಡ ಹೇಳುವುದರಿಂದ ಅದು ಸಾಬೀತಾಗುವುದಿಲ್ಲ. ಜಿಲ್ಲೆಯ ಜನತೆ ಕಳೆದ ಬಾರಿ ಏಳಕ್ಕೆ ಏಳೂ ಜೆಡಿಎಸ್ ಶಾಸಕರನ್ನು ಗೆಲ್ಲಿಸಿಕೊಟ್ಟಿದ್ದರು. ಅದೇ ರೀತಿ ಮತ್ತೊಮ್ಮೆ ಜನ ಆಶೀರ್ವಾದ ಮಾಡಿ ಕೊಡುತ್ತಾರೆ. ಅದು ಜನರ ತೀರ್ಮಾನ ಶಿವರಾಮೇಗೌಡ ಹೇಳುವುದರಿಂದ ತೀರ್ಮಾನವಾಗುವುದಿಲ್ಲ ಎಂದು ಅವರಿಗೆ ತಿರುಗೇಟು ನೀಡಿದರು.
ಎಸ್.ಎಂ.ಕೃಷ್ಣ ಯೋಜನೆಗಳ ಹಿಂದೆ ನನ್ನ ಪರಿಶ್ರಮವಿತ್ತು:ಡಿ.ಸಿ.ತಮ್ಮಣ್ಣ
ಮಳೆಯಿಂದಾಗಿ ಸಾಕಷ್ಟು ಹಾನಿಯುಂಟಾಗಿತ್ತು. ಮಾರಚಾಕನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸಾಕಷ್ಟುಸಮಸ್ಯೆಗಳಿತ್ತು. ಅದನ್ನು ಪಟ್ಟಿಮಾಡಿ ಎಲ್ಲವನ್ನೂ ಸರಿಪಡಿಸುವ ಕಾರ್ಯ ಮಾಡುತ್ತಿದ್ದೇವೆ. ಹಂತ ಹಂತವಾಗಿ ಅಭಿವೃದ್ಧಿ ಕಾರ್ಯವನ್ನು ಮಾಡುತ್ತೇನೆ. ಜನರ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿ ಕೆಲಸ ಮಾಡುತ್ತೇನೆ. ಈಗಾಗಲೇ ವಡ್ಡರಹಳ್ಳಿಕೊಪ್ಪಲು, ಕುರಿಕೊಪ್ಪಲು ಗ್ರಾಮದ ಅಭಿವೃದ್ಧಿಗೂ ಚಾಲನೆ ನೀಡಿದ್ದೇನೆ ಎಂದರು. ಜೆಡಿಎಸ್ ಮುಖಂಡ ಚಂದಗಾಲು ಶ್ರೀಧರ್, ವಿಜಯಕುಮಾರ್, ತಮ್ಮಣ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವಿತ್ರಾ ಶಿವಕುಮಾರ್, ಸದಸ್ಯರಾದ ನಿರಂಜನ್, ಸಿದ್ದರಾಜು, ಸಂತೋಷ್, ಎಂಜಿನಿಯರ್ ಲೋಕೇಶ್, ಜಗದೀಶ್, ಗುತ್ತಿಗೆದಾರ ರಾಘವೇಂದ್ರ ಇತರರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.