ಬಸ್ ಪ್ರಯಾಣ ದರ ಏರಿಕೆ ವಿಚಾರಕ್ಕೆ ಸರ್ಕಾರದ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರೋಧ ವ್ಯಕ್ತಪಡಿಸಿದ್ದಾರೆ. ಹೆಣ್ಣುಮಕ್ಕಳಿಗೆ ಉಚಿತ ಕೊಟ್ಟು ಗಂಡಸರಿಗೆ ಹಾಕಿದ್ದಾರೆ. ಗಂಡಸರು ಏನು ಪಾಪಾ ಮಾಡಿದ್ಧಾರೆ.
ವಿಜಯಪುರ (ಜ.06): ಬಸ್ ಪ್ರಯಾಣ ದರ ಏರಿಕೆ ವಿಚಾರಕ್ಕೆ ಸರ್ಕಾರದ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರೋಧ ವ್ಯಕ್ತಪಡಿಸಿದ್ದಾರೆ. ಹೆಣ್ಣುಮಕ್ಕಳಿಗೆ ಉಚಿತ ಕೊಟ್ಟು ಗಂಡಸರಿಗೆ ಹಾಕಿದ್ದಾರೆ. ಗಂಡಸರು ಏನು ಪಾಪಾ ಮಾಡಿದ್ಧಾರೆ. ಕರ್ನಾಟಕ ಗಂಡಸರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಬಾರದು. ಇದರಿಂದ ಹೆಣ್ಣು ಮಕ್ಕಳಿಗೂ ಅನ್ಯಾಯವಾಗುತ್ತದೆ. ಮಕ್ಕಳು, ಮನೆಯ ಯಜಮಾನರಿಗೂ ಅನ್ಯಾಯವಾಗುತ್ತದೆ. ಇವರ ರಕ್ಷಣೆ ಮಾಡಬೇಕೆಂದರೆ ಹೆಣ್ಣು ಮಕ್ಕಳೂ ಸಹ ಕಾಂಗ್ರೆಸ್‌ಗೆ ಮತ ಹಾಕಬಾರದೆಂದು ವಿನಂತಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರ ಸಚಿನ್ ಪಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೆಸರಿದ್ದು, ಅವರು ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಸಚಿವ ಖರ್ಗೆ ವಿರುದ್ದ ಕಲಬುರಗಿಯಲ್ಲಿ ಬಿಜೆಪಿ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಶಾಸಕ ಯತ್ನಾಳ ಗೈರು ವಿಚಾರಕ್ಕೆ ಪ್ರತಿಕ್ರಿಯಿಸಿ, ವಿಜಯೇಂದ್ರ ಅವರ ನೇತೃತ್ವದಲ್ಲಿ ಹೋರಾಟವೆಂದು ಎಲ್ಲಡೆ ಬೋರ್ಡ್ ಹಾಕಿದ್ದರು. ಭಾರಿ ಪ್ರತಿಭಟನೆ ಎಂದು ಹೇಳಿದ್ದರು. ಪಾಪ ವಿಜಯೇಂದ್ರ ಅವರಿಗೆ ಏನು ಕೆಲಸ ಇತ್ತೊ ಗೊತ್ತಿಲ್ಲ, ಬಂದಿಲ್ಲ. ನಿನ್ನೆ ಬಿಜೆಪಿಯವರ ಮೂರು ಕಡೆ ಹೋರಾಟ ಆಗಿದೆ. ಒಂದು ವಕ್ಫ್ ವಿರುದ್ಧ, ಪ್ರಿಯಾಂಕಾ ಖರ್ಗೆ ವಿರುದ್ಧ ಹೋರಾಟ, ಇನ್ನೊಂದು ಬಾಣಂತಿಯರ ಸಾವು ಹೋರಾಟ. ವಿಜಯೇಂದ್ರ ಅವರು ಬಾಣಂತಿಯರ ಸಾವಿನ ವಿರುದ್ಧದ ಶಿವಮೊಗ್ಗದ ಹೋರಾಟದಲ್ಲಿ ಭಾಗಿ ಆಗಿದ್ದರು. ಇದರಿಂದ ಗೊತ್ತಾಗುತ್ತೆ ನಮ್ಮಲ್ಲಿ ಸಾಮೂಹಿಕ ನಾಯಕತ್ವ ಇದೆ ಅನ್ನುವುದು. ಅವರು ಅಲ್ಲಿ ಮಾಡಿದ್ದಾರೆ, ನಾವು ಇಲ್ಲಿ ಮಾಡಿದ್ದೇವೆ ಅಷ್ಟೆ ಎಂದು ವ್ಯಂಗ್ಯದ ಮೂಲಕ ಯತ್ನಾಳ ವಿಜಯೇಂದ್ರ ಕಾಲೆಳೆದರು.
ವಿರೋಧ ಪಕ್ಷ ನಾಯಕ ಆರ್.ಅಶೋಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಧ್ಯೆ ಸಾಮರಸ್ಯ ಕೊರತೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗೆ ಗೊತ್ತಿಲ್ಲ. ಆರ್.ಅಶೋಕ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಾರೆ. ಬೆಳಗಾವಿ ಆಧಿವೇಶನದಲ್ಲಿ ಹಿರಿಯ ಶಾಸಕರ ಸಲಹೆ ಸೂಚನೆ ತೆಗೆದುಕೊಂಡರು. ಎಲ್ಲರೂ ಹೇಳಿದ ವಿಚಾರಗಳನ್ನು ಪಾಲನೆ ಮಾಡಿದರು. ಯಾವ ರೀತಿ ಸದನ ನಡೆಸಬೇಕು, ಬರೀ ಧರಣಿ ಮಾಡದೇ ಚರ್ಚೆ ಮಾಡಬೇಕೆಂಬ ಸಲಹೆಯಂತೆ ನಡೆದುಕೊಂಡರು. ಅವರ ಬಗ್ಗೆ ನಮ್ಮ ಯಾವುದೇ ಆರೋಪಗಳಿಲ್ಲ ಎಂದರು. ಚುನಾವಣೆ ಮೂಲಕ ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆ ಪ್ರಕ್ರಿಯೆ ಇದ್ದೇ ಇರುತ್ತದೆ.
ವಕ್ಫ್ ಮಂಡಳಿ ದೇಶಕ್ಕಂಟಿದ ಕ್ಯಾನ್ಸರ್ ಇದ್ದಂತೆ, ಅದನ್ನು ದೇಶದಿಂದ ತೊಲಗಿಸಬೇಕು: ಶಾಸಕ ಯತ್ನಾಳ್
ಈ ವಿಚಾರದಲ್ಲಿ ಪ್ರಹ್ಲಾದ್ ಜೋಶಿ ಅವರು ಹೇಳಿದ್ದು ಸರಿಯಿದೆ. ಈಗಿರುವುದು ಅಡ್ಹಾಕ್(ಅರ್ಧಂಬರ್ಧ) ಸಮಿತಿ, ಮುಂದೆ ರೆಗ್ಯುಲರ್ ಸಮಿತಿ ಬರಲಿದೆ. ಮುಂದೆ ಚುನಾಯಿತ ಅಧ್ಯಕ್ಷರು ಬರುತ್ತಾರೆ. ಅಧ್ಯಕ್ಷ ಯಾರಾಗಬೇಕು ಎಂಬುದನ್ನು ರಾಜ್ಯ ಘಟಕ ಕೇಂದ್ರಕ್ಕೆ ಬಿಡುತ್ತದೆ. ರಾಷ್ಟ್ರಾಧ್ಯಕ್ಷರು ಯಾರು ಆಧ್ಯಕ್ಷರೆಂದು ಘೋಷಣೆ ಮಾಡುತ್ತಾರೆ. ಇದರಲ್ಲಿ ವಿವಾದವಿಲ್ಲ. ಈಗ ಹಂಗಾಮಿ ಅಧ್ಯಕ್ಷರು, ಪ್ರಹ್ಲಾದ್ ಜೋಶಿ ಅವರು ಹೇಳಿದ್ದರಲ್ಲಿ ಯಾವುದೇ ವಿವಾದವಿಲ್ಲ. ಜೋಶಿ ಅವರು ಪಕ್ಷದ ನಿಯಮಗಳ ಬಗ್ಗೆ ಹೇಳಿದ್ದಾರೆ. ಅದನ್ನು ವಿವಾದ ಮಾಡಿದರೆ ಹೇಗೆ?. ಚುನಾವಣೆ ಆಗಲ್ಲ, ಸಹಮತ ಮಾಡಿಕೊಂಡು ರಾಜ್ಯಾಧ್ಯಕ್ಷರ ಆಯ್ಕೆ ಮಾಡುವ ಪದ್ದತಿಯಿದೆ. ಚುನಾವಣಾ ಆಯೋಗದ ನಿಬಂಧನೆಗಳಿವೆ. ಈ ನಿಬಂಧನೆಗಳನ್ನು ಪಾಲನೆ ಮಾಡಿ ರಾಷ್ಟ್ರೀಯ ಆಧ್ಯಕ್ಷರ ಸೂಚನೆ ಮೇರೆಗೆ ಘೋಷಣೆ ಆಗುತ್ತದೆ. ಜಿಲ್ಲಾ ಘಟಕದ ಅಧ್ಯಕ್ಷರ ಬದಲಾವಣೆಯೂ ಆಗಲಿದೆ ಎಂದರು.