ಶೇ.60 ಕಮಿಷನ್ ಆರೋಪ ಸಾಬೀತು ಮಾಡಲಿ: ಎಚ್‌ಡಿಕೆಗೆ ಸಿಎಂ ಸಿದ್ದರಾಮಯ್ಯ ಸವಾಲು

Published : Jan 06, 2025, 04:48 AM IST
ಶೇ.60 ಕಮಿಷನ್ ಆರೋಪ ಸಾಬೀತು ಮಾಡಲಿ: ಎಚ್‌ಡಿಕೆಗೆ ಸಿಎಂ ಸಿದ್ದರಾಮಯ್ಯ ಸವಾಲು

ಸಾರಾಂಶ

ರಾಜ್ಯ ಸರ್ಕಾರದಲ್ಲಿ ಶೇ.60 ಕಮೀಷನ್ ಪಡೆಯಲಾಗುತ್ತಿದೆಯೆಂದು ಆರೋಪಿಸಿರುವ ವಿಪಕ್ಷದವರಿಗೆ ಕೇವಲ ಆರೋಪ ಮಾಡುವುದೇ ಕೆಲಸವಲ್ಲ. ದಾಖಲಾತಿಗಳ ಸಮೇತ ಆರೋಪಿಸಿ, ಅದನ್ನು ಸಾಬೀತುಪಡಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಬಹಿರಂಗ ಸವಾಲು ಹಾಕಿದರು. 

ದಾವಣಗೆರೆ (ಜ.06): ರಾಜ್ಯ ಸರ್ಕಾರದಲ್ಲಿ ಶೇ.60 ಕಮೀಷನ್ ಪಡೆಯಲಾಗುತ್ತಿದೆಯೆಂದು ಆರೋಪಿಸಿರುವ ವಿಪಕ್ಷದವರಿಗೆ ಕೇವಲ ಆರೋಪ ಮಾಡುವುದೇ ಕೆಲಸವಲ್ಲ. ದಾಖಲಾತಿಗಳ ಸಮೇತ ಆರೋಪಿಸಿ, ಅದನ್ನು ಸಾಬೀತುಪಡಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸಚಿವ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿಗೆ ಬಹಿರಂಗ ಸವಾಲು ಹಾಕಿದರು. ನಗರದಲ್ಲಿ ಯುವಜನೋತ್ಸವ ಸಮಾರಂಭಕ್ಕೆ ತೆರಳಲು ಬಾಪೂಜಿ ಎಂಬಿಎ ಹೆಲಿಪ್ಯಾಡ್‌ನಲ್ಲಿ ಭಾನುವಾರ ಇಳಿದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಆಧಾರವೇ ಇಲ್ಲದೆ ಆರೋಪ ಮಾಡಬಾರದು. ಆರೋಪವನ್ನು ಮಾಡಿದರೆ ಅದನ್ನು ಸಾಬೀತು ಮಾಡಬೇಕು. ದಾಖಲಾತಿಗಳ ಸಮೇತ ಆರೋಪ ಮಾಡಲಿ, ಅದನ್ನು ಸಾಬೀತುಪಡಿಸಲಿ ಎಂದರು.

ಪೂರಕ ದಾಖಲೆ ಇಟ್ಟುಕೊಂಡು ಆರೋಪ ಮಾಡಬೇಕು. ವಿಪಕ್ಷಗಳು ತಾವು ಮಾಡಿದ ಆರೋಪ ಸಾಬೀತು ಮಾಡಬೇಕು ಎಂದು ಕಿವಿಮಾತು ಹೇಳಿದರು. ಕೆಎಸ್ಸಾರ್ಟಿಸಿ ಬಸ್‌ ಪ್ರಯಾಣ ದರವನ್ನು ಹಿಂದೆ ಯಾವುದೇ ಸರ್ಕಾರವೂ ಹೆಚ್ಚಿಸಿರಲೇ ಇಲ್ಲವೇ? ಇದೇ ಬಿಜೆಪಿ ಸರ್ಕಾರವಿದ್ದಾಗ, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗಲೂ ಬಸ್‌ ಪ್ರಯಾಣ ದರ ಹೆಚ್ಚು ಮಾಡಿರಲಿಲ್ಲವೇ? ಕೇಂದ್ರ ಸರ್ಕಾರವು ರೈಲ್ವೆ ಪ್ರಯಾಣ ದರ ಏರಿಕೆ ಮಾಡಿಲ್ಲವೇ? ಎಲ್ಲಾ ಕಾಲದಲ್ಲೂ, ಎಲ್ಲಾ ಸರ್ಕಾರಗಳ ಅವದಿಯಲ್ಲೂ ಬಸ್‌ ಪ್ರಯಾಣ ದರ ಹೆಚ್ಚಳವಾಗಿದೆ ಎಂದು ಬಸ್‌ ಪ್ರಯಾಣ ದರ ಏರಿಕೆ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನೌಕರರ ವೇತನ, ಡೀಸೆಲ್ ದರ ಏರಿಕೆ, ಹೊಸ ಬಸ್‌ಗಳ ಖರೀದಿ, ಹಣದುಬ್ಬರವೂ ಆಗುತ್ತಲೇ ಇರುತ್ತದೆ. ವರ್ಷಗಳ ಹಿಂದೆ ಬಸ್‌ ಪ್ರಯಾಣ ದರ ಹೆಚ್ಚಿಸಿದ್ದನ್ನು ಬಿಟ್ಚರೆ, ಈಗ ಏರಿಸಲಾಗಿದೆ. ರಾಜ್ಯದ ಸಾರಿಗೆ ನಿಗಮಗಳು ತೊಂದರೆಯಲ್ಲಿವೆಯೆಂಬ ಕಾರಣಕ್ಕೆ ಹಾಗೂ ಬೇಡಿಕೆಯೂ ಇದ್ದುದರಿಂದ ಬಸ್‌ ಪ್ರಯಾಣ ದರ ಏರಿಸಲಾಗಿದೆ. ರೈಲ್ವೆ ಪ್ರಯಾಣ ದರವನ್ನು ಕೇಂದ್ರ ಸರ್ಕಾರ ಹೆಚ್ಚಿಗೆ ಮಾಡಿದೆಯಲ್ಲವೇ ಎಂದು ಪ್ರಶ್ನಿಸಿದರು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಮುಖ್ಯಮಂತ್ರಿ ಬದಲಾವಣೆಯಂತಹ ವಿಷಯಗಳ ಬಗ್ಗೆ ನಮ್ಮ ಪಕ್ಷದ ವರಿಷ್ಟರು ತೀರ್ಮಾನ ಕೈಗೊಳ್ಳುತ್ತಾರೆ. ಖಾಲಿ ಇರುವ ಸಚಿವ ಸ್ಥಾನಗಳನ್ನು ತುಂಬುವ ಬಗ್ಗೆ ನಮ್ಮ ಪಕ್ಷದ ವರಿಷ್ಟರ ಜೊತೆಗೆ ಚರ್ಚಿಸುತ್ತೇವೆ. ನಾಗೇಂದ್ರ ರಾಜೀನಾಮೆಯಿಂದ ತೆರವಾದ ಸಚಿವ ಸ್ಥಾನವನ್ನು ತುಂಬುವ ಬಗ್ಗೆ ಪಕ್ಷದ ವರಿಷ್ಟರೊಂದಿಗೆ ಚರ್ಚಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ರಸ್ತೆಗಲ್ಲ, ಇಡೀ ರಾಜ್ಯಕ್ಕೆ ಸಿದ್ದರಾಮಯ್ಯ ಹೆಸರಿಡಿ: ಎಚ್.ಡಿ.ಕುಮಾರಸ್ವಾಮಿ ಲೇವಡಿ

ವಿಶ್ವ ಕನ್ನಡ ಸಮ್ಮೇಳನ ಬಗ್ಗೆ ಪರಿಶೀಲನೆ: ರಾಜ್ಯದ ಬಜೆಟ್‌ ಅನ್ನು ಮಾರ್ಚ್‌ನಲ್ಲಿ ಮಂಡಿಸಲಿದ್ದೇನೆ. ಬಜೆಟ್ ಪೂರ್ವಭಾವಿ ಚರ್ಚೆ ಆರಂಭವಾದ ನಂತರ ದಿನಾಂಕವನ್ನು ತಿಳಿಸುತ್ತೇವೆ. ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವಂತೆ ಈ ಹಿಂದೆ ನಾನೇ ಸಿಎಂ ಆಗಿದ್ದಾಗ ಘೋಷಣೆ ಮಾಡಲಾಗಿತ್ತು. ಇದೀಗ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವ ಬಗ್ಗೆ ಸಚಿವ ಎಸ್.ಎಸ್‌.ಮಲ್ಲಿಕಾರ್ಜುನ ನೇತೃತ್ವದಲ್ಲಿ ಮನವಿ ಮಾಡಿದ್ದೀರಿ. ಈ ಬಗ್ಗೆ ಪರಿಶೀಲಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು. ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ, ಭೈರತಿ ಸುರೇಶ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಎಚ್.ಆಂಜನೇಯ ಇತರರು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಧ್ಯೆ ಖುರ್ಚಿ ಕಾದಾಟ ಇಲ್ಲ: ಬಸವರಾಜ ರಾಯರೆಡ್ಡಿ
ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್