ಬಂಗಾರಪ್ಪ ಅವರ ಹೆಸರಿಗೆ ತಕ್ಕ ರೀತಿ ಮಧು ಮಾತನಾಡಲಿ: ಆರಗ ಜ್ಞಾನೇಂದ್ರ ತಿರುಗೇಟು

Published : Dec 05, 2025, 07:20 PM IST
Araga Jnanendra

ಸಾರಾಂಶ

ಬಂಗಾರಪ್ಪ ಅವರ ಹೆಸರನ್ನು ಇಟ್ಟುಕೊಂಡರೆ ಮಾತ್ರ ಸಾಲುವುದಿಲ್ಲ, ಬದಲಾಗಿ ಅವರ ತಂದೆಯವರು ಹೊಂದಿದ್ದ ಉತ್ತಮ ಮಾತು ಮತ್ತು ಸೌಜನ್ಯದ ನಡವಳಿಕೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ತಿರುಗೇಟು ನೀಡಿದರು.

ಶಿವಮೊಗ್ಗ (ಡಿ.05): ಸಚಿವ ಮಧು ಬಂಗಾರಪ್ಪ ಅವರು ತಮ್ಮ ಹೆಸರಿನ ಮುಂದೆ ತಮ್ಮ ತಂದೆ ಬಂಗಾರಪ್ಪ ಅವರ ಹೆಸರನ್ನು ಇಟ್ಟುಕೊಂಡರೆ ಮಾತ್ರ ಸಾಲುವುದಿಲ್ಲ, ಬದಲಾಗಿ ಅವರ ತಂದೆಯವರು ಹೊಂದಿದ್ದ ಉತ್ತಮ ಮಾತು ಮತ್ತು ಸೌಜನ್ಯದ ನಡವಳಿಕೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಅವರು ಮಾತನಾಡಿ, ನಾವೆಲ್ಲ ರಾಜಕೀಯಕ್ಕೆ ಬಂದಾಗ ಬಚ್ಚಾಗಳಾಗಿಯೇ ಬಂದವರು. ಬಡತನದಿಂದ, ಶೂನ್ಯದಿಂದ ರಾಜಕೀಯದಲ್ಲಿ ನೆಲೆ ಕಂಡುಕೊಂಡವರು. ಆದರೆ, ಮಧು ಬಂಗಾರಪ್ಪನವರು ರಕ್ತದಲ್ಲೇ ರಾಜಕಾರಣ ಹೊಂದಿದ್ದು, ಹುಟ್ಟಿನಿಂದಲೇ ಚಿನ್ನದ ಚಮಚ ಇಟ್ಟುಕೊಂಡು ಬಂದವರು. ಅವರು ತಮ್ಮ ತಂದೆಯವರ ನೆರಳಿನಲ್ಲಿಯೇ ಬೆಳೆದಿದ್ದಾರೆ. ಹಾಗಾಗಿ ಅವರು ನನಗಿಂತ ಚೆನ್ನಾಗಿ ಮಾತನಾಡಬೇಕು ಮತ್ತು ರಾಜಕೀಯದಲ್ಲಿ ಒಂದು ಅಂತಸ್ತನ್ನು ಕಾಪಾಡಿಕೊಳ್ಳಬೇಕು. ಅವರ ತಂದೆಯವರ ಯೋಗ್ಯತೆ, ಉತ್ತಮ ನಡವಳಿಕೆ, ಸ್ನೇಹಮಯಿ ಗುಣ ಮತ್ತು ರಾಜಕಾರಣದಲ್ಲಿ ಎದುರಾಳಿಗಳಿಗೆ ನೀಡುತ್ತಿದ್ದ ಗೌರವ ಈಶ್ವರಪ್ಪ ಅವರಿಗೂ ಬರಬೇಕು ಎಂದು ಆಗ್ರಹಿಸಿದರು.

ನಾನು ಕೂಡ ಈ ಹಿಂದೆ ಎರಡು ಜಿಲ್ಲೆಗಳ ಉಸ್ತುವಾರಿ ಸಚಿವನಾಗಿದ್ದೆ. ನನ್ನ ತಾಲೂಕಿಗೆ ಮಂತ್ರಿಯೊಬ್ಬರು ಬಂದಾಗ ಅವರಿಗೆ ಗೌರವ ನೀಡುವುದು ನನ್ನ ಕರ್ತವ್ಯ. ರಾಜಕಾರಣದಲ್ಲಿ ಒಂದು ಅಂತಸ್ತನ್ನು ಕಾಯ್ದುಕೊಳ್ಳಬೇಕು. ವೈಯಕ್ತಿಕ ಚಾರಿತ್ರ್ಯ ಹರಣ ಮಾಡುವುದನ್ನು ಬಿಡಬೇಕು. ಕೇವಲ ಟೀಕೆ ಮಾಡುವ ಮೂಲಕ ನಾನು ದೊಡ್ಡವನಾಗಬೇಕು ಎನ್ನುವುದನ್ನು ಬಿಡಬೇಕು. ತಾವು ಕೂಡ ರಾಜಕೀಯ ಆರಂಭದಲ್ಲಿ ಹೀಗೆಲ್ಲಾ ಮಾತನಾಡುತ್ತಿದ್ದೆವು, ಆದರೆ ಮೆಚ್ಯುರಿಟಿ ಬಂದ ನಂತರ ಇಂತಹ ಮಾತುಗಳನ್ನು ಬಿಟ್ಟಿದ್ದೇವೆ ಎಂದರು.

ಅಡಕೆ ಬೆಳೆಗಾರರ ಹಿತಕ್ಕೆ ಕ್ರಮ ಕೈಗೊಳ್ಳಿ

ಕಳೆದ ಸಾಲಿನಲ್ಲಿ ಅತಿವೃಷ್ಟಿಯಿಂದ ಕೊಳೆರೋಗ ಹಾಗೂ ಎಲೆಚುಕ್ಕೆ ರೋಗಗಳಿಂದ ಅಡಕೆ ಬೆಳೆಗಾರರು ತತ್ತರಿಸಿ ಹೋಗಿದ್ದು, ತಕ್ಷಣ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಡಕೆ ಬೆಳೆಗಾರರ ಹಿತಕಾಯಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅಡಕೆ ಸಹಕಾರ ಸಂಘಗಳ ಸಹಕಾರ ಮಹಾಮಂಡಳದ ಅಧ್ಯಕ್ಷ, ಶಾಸಕ ಆರಗ ಜ್ಞಾನೇಂದ್ರ ಒತ್ತಾಯಿಸಿದರು. ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಅಡಕೆ ಬೆಲೆ ಏರಿಕೆ ಬೆಳೆಗಾರರು ಅಡಕೆಯತ್ತ ಆಕರ್ಷಿಸಲು ಕಾರಣವಾಗಿದೆ. ಆದರೆ, ಅಡಕೆ ಬೆಳೆಗೆ ಬಾಧಿಸುತ್ತಿರುವ ರೋಗಗಳಿಂದ ಹಿಡುವಳಿ ಕಡಿಮೆಯಾಗಿ ಏರಿದ ದರಗಳು ಬೆಳೆಗಾರರ ಕೈಗೆ ಸಿಗುತ್ತಿಲ್ಲ.

ವಿದೇಶಿ ಕಳಪೆ ಅಡಕೆಗಳ ಆಮದು ಕೂಡ ಬೆಳೆಗಾರರಿಗೆ ಸಂಕಷ್ಟ ನೀಡುತ್ತಿದೆ. ಆಹಾರ ಭದ್ರತಾ ಆಯೋಗವು ಅಡಕೆ ತೇವಾಂಶದ ಬಗ್ಗೆ ಶೇ.7 ರಷ್ಟು ತೇವಾಂಶ ಇರಬೇಕು ಎಂದು ತಪ್ಪು ಮಾಹಿತಿ ನೀಡಿದೆ. ಆದರೆ ಈ ಪ್ರಮಾಣವನ್ನು ಶೇ.11.25ಕ್ಕೆ ಏರಿಸಬೇಕು ಎಂಬುದು ತಮ್ಮ ಆಗ್ರಹವಾಗಿದೆ ಎಂದರು.ಈ ಹಿಂದಿನ ಯುಪಿಎ ಸರ್ಕಾರ ಅಡಕೆ ಕ್ಯಾನ್ಸರ್‌ಕಾರಕವಾಗಿದೆ ಎಂದು ಸರ್ವೋಚ್ಛ ನ್ಯಾಯಾಲಯಕ್ಕೆ ತಿಳಿಸಿತ್ತು. ಈಗ ಅಡಿಕೆ ಮನುಷ್ಯನಿಗೆ ಹಾನಿಕಾರಕವಲ್ಲ ಎಂದು ಕೇಂದ್ರ ಸರ್ಕಾರ ಸರ್ವೋಚ್ಛ ನ್ಯಾಯಾಲಯಕ್ಕೆ ಅಫಿಡೆವಿಟ್ ಸಲ್ಲಿಸಿದೆ.

ಅಡಿಕೆ ಹಾನಿಕಾರಕವಲ್ಲ ಎಂದು ರುಜುವಾತು ಮಾಡಲು ಅಡಿಕೆ ಸಂಶೋಧನಾ ಕೇಂದ್ರಗಳು ಕೆಲಸ ನಿರ್ವಹಿಸುತ್ತಿವೆ. ಕೇಂದ್ರ ಸರ್ಕಾರ ಈಗಾಗಲೇ ಅಡಿಕೆ ಸಂಶೋಧನಾ ಕೇಂದ್ರಕ್ಕೆ 15 ಲಕ್ಷ ರು. ಅನುದಾನ ನೀಡಿದೆ. ಅಡಿಕೆಯನ್ನು ಅರಣ್ಯ ಉತ್ಪನ್ನಗಳ ಪಟ್ಟಿಗೆ ಸೇರಿಸಿದ್ದು, ಅದನ್ನು ಆ ಪಟ್ಟಿಯಿಂದ ಕೈಬಿಡಬೇಕು ಎಂದು ಕೇಂದ್ರ ಕೃಷಿ ಸಚಿವರನ್ನು ಕೋರಲಾಗಿದೆ. ಕೇಂದ್ರದ ಮಹತ್ವಾಕಾಂಕ್ಷಿ ಬೆಳೆವಿಮೆ ಯೋಜನೆಗೆ ರಾಜ್ಯ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಮಸ್ಯೆಗಳ ನಿವಾರಣೆ, ಸವಾಲುಗಳಿಗೆ ಧಾರ್ಮಿಕ ಗುರುಗಳಿಂದ ಪರಿಹಾರ: ಬಿ.ವೈ.ವಿಜಯೇಂದ್ರ
ಜಾತಿ ವ್ಯವಸ್ಥೆಗೆ ಪರಿಹಾರ ರೂಪದ ವಿದ್ಯೆ ಅಗತ್ಯ: ಸಿಎಂ ಸಿದ್ದರಾಮಯ್ಯ