ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಪ್ರಕರಣ: ನಿರೀಕ್ಷಣಾ ಜಾಮೀನಿಗೆ ಯಡಿಯೂರಪ್ಪ ಮೊರೆ

By Kannadaprabha News  |  First Published Jun 14, 2024, 4:45 AM IST

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಿರೀಕ್ಷಣಾ ಜಾಮೀನು ಕೋರಿ ಹೈಕೊರ್ಟ್‌ಗೆ ಮೊರೆ ಹೋಗಿದ್ದಾರೆ.


ಬೆಂಗಳೂರು (ಜೂ.14): ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಿರೀಕ್ಷಣಾ ಜಾಮೀನು ಕೋರಿ ಹೈಕೊರ್ಟ್‌ಗೆ ಮೊರೆ ಹೋಗಿದ್ದಾರೆ. ಈ ಕುರಿತಂತೆ ಗುರುವಾರ ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿರುವ ಯಡಿಯೂರಪ್ಪ ಅವರು, ವಿರೋಧ ಪಕ್ಷದ ಕೆಲ ರಾಜಕೀಯ ಮುಖಂಡರು ಸಂಘಟಿತವಾಗಿ ತಮ್ಮ ವಿರುದ್ಧ ದೊಡ್ಡಮಟ್ಟದ ಸಂಚು ರೂಪಿಸುವಲ್ಲಿ ಭಾಗಿಯಾಗಿದ್ದಾರೆ. ತಾನು ಯಾವುದೇ ಅಪರಾಧ ಎಸಗದೆ ಇದ್ದರೂ ಕೆಲ ವ್ಯಕ್ತಿಗಳಿಂದ ಯಾವುದೇ ಸಾಕ್ಷ್ಯಾಧಾರಗಳಿಲ್ಲದಿದ್ದರೂ ಫೋಕ್ಸೋ ಕಾಯ್ದೆಯಡಿ ಲೈಂಗಿಕ ಕಿರುಕುಳ ಆರೋಪದ ಸಂಬಂಧ ಸುಳ್ಳು ಪ್ರಕರಣ ದಾಖಲು ಮಾಡಿಸಿ, ತಮ್ಮ ಘನತೆ ಹಾಗೂ ಜನಪ್ರಿಯತೆ ಕುಗ್ಗಿಸುವ ಹುನ್ನಾರ ನಡೆಸಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಅಲ್ಲದೆ, ತಮಗೆ 81 ವರ್ಷವಾಗಿದ್ದು, ಹಲವು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದೇನೆ. ಜತೆಗೆ, ಕಾಲ ಕಾಲಕ್ಕೆ ವೈದ್ಯರ ಭೇಟಿ ಮಾಡುವುದು ಔಷಧಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ತನ್ನ ವಿರುದ್ಧ ಮರಣದಂಡನೆ ಶಿಕ್ಷೆ ವಿಧಿಸಬಹದಾದ ಆರೋಪ ಇಲ್ಲ. ಕೇವಲ ಏಳು ವರ್ಷಗಳ ಶಿಕ್ಷೆಯಾಗುವಂತಹ ಆರೋಪವಿದೆ. ಇಂತಹ ಪ್ರಕರಣದಲ್ಲಿ ವಿಚಾರಣಾ ಸಂದರ್ಭದಲ್ಲಿ ಬಂಧನ ಮಾಡದೆ ಜಾಮೀನು ನೀಡಬಹುದು ಎಂದು ಸುಪ್ರೀಂಕೋರ್ಟ್ ಈಗಾಗಲೇ ಹಲವು ಪ್ರಕರಣಗಳಲ್ಲಿ ಆದೇಶಿಸಿದೆ. ಅದರಂತೆ ತಮಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು ಎಂದು ಯಡಿಯೂರಪ್ಪ ಅರ್ಜಿಯಲ್ಲಿ ಕೋರಿದ್ದಾರೆ. ಅರ್ಜಿಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರ ಅಪರಾಧ ವಿಭಾಗವನ್ನು (ಸಿಐಡಿ) ಪ್ರತಿವಾದಿ ಮಾಡಿದ್ದಾರೆ. ಅರ್ಜಿ ಶುಕ್ರವಾರ ಹೈಕೋರ್ಟ್‌ ಮುಂದೆ ವಿಚಾರಣೆಗೆ ಬರುತ್ತದೆ.

Tap to resize

Latest Videos

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಕೇಸ್‌: ಬಿ.ಎಸ್.ಯಡಿಯೂರಪ್ಪ ಬಂಧನಕ್ಕೆ ಸಿದ್ಧತೆ!

ಮನವಿ ಏನು?: ವ್ಯಾಪಾರದಲ್ಲಿ ತಮಗೆ ಕೆಲವರಿಂದ ಕೋಟ್ಯಂತರ ಹಣ ಮೋಸವಾಗಿದೆ. ಈ ಕುರಿತು ತನಿಖೆ ನಡೆಸಲು ಎಸ್‌ಐಟಿ ರಚನೆಯಾಗುವುದಕ್ಕೆ ನೆರವು ನೀಡುವಂತೆ ಕೋರಿ ದೂರುದಾರ ಮಹಿಳೆ ಅತ್ಯಾಚಾರ ಪ್ರಕರಣ ಸಂತ್ರಸ್ತೆಯಾದ ತನ್ನ ಅಪ್ರಾಪ್ತ ಪುತ್ರಿಯೊಂದಿಗೆ ನನ್ನ ಮನೆಗೆ ಬಂದಿದ್ದರು. 9 ನಿಮಿಷ ಕಾಲ ಮಾತನಾಡಿದ ನಂತರ ದೂರುದಾರ ಮಹಿಳೆಯ ಪುತ್ರಿಯನ್ನು ಕೊಠಡಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಆರೋಪ ನನ್ನ ಮೇಲೆ ಹೊರಿಸಲಾಗಿದೆ. ಈ ಕುರಿತು ದೂರುದಾರ ಮಹಿಳೆಯು 2024ರ ಮಾ.3ರಂದು ತಮ್ಮ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಬಳಿಕ ಆ ದೂರನ್ನು ಆಧರಿಸಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದು, ಅದನ್ನು ಸರ್ಕಾರ ವರ್ಗಾವಣೆ ಮಾಡಿದೆ. ಸಿಐಡಿ ಅವರು ಮಾ.28ರಂದು ನೋಟಿಸ್‌ ನೀಡಿದ್ದರು. ಏ.12ರಂದು ನಾನು ವಿಚಾರಣೆಗೆ ಹಾಜರಾಗಿದ್ದೆ. ತನಿಖಾಧಿಕಾರಿಗಳು ನನ್ನ ಯಾವುದೇ ಹೇಳಿಕೆ ದಾಖಲಿಸಿಕೊಂಡಿಲ್ಲ. ಕೇವಲ ಧ್ವನಿ ಮಾದರಿ ಸಂಗ್ರಹಿಸಿದ್ದರು. ನಂತರ ಜೂ.11ರಂದು ಮತ್ತೆ ನನಗೆ 2ನೇ ಬಾರಿಗೆ ನೋಟಿಸ್‌ ಜಾರಿ ಮಾಡಿ ಜೂ.12ರಂದೇ ವಿಚಾರಣೆಗೆ ಹಾಜರಾಗಲು ಸಿಐಡಿ ತನಿಖಾಧಿಕಾರಿಗಳು ಸೂಚಿಸಿದ್ದಾರೆ. ವಿಚಾರಣೆಗೆ ಹಾಜರಾಗಲು ಕೇವಲ ಒಂದು ದಿನ ಕಾಲಾವಕಾಶ ನೀಡಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಸಿಐಡಿ ನೋಟಿಸ್‌ಗೆ ನಾನು ಉತ್ತರಿಸಿದ್ದು, ದೆಹಲಿಯಲ್ಲಿ ಸಭೆ ಇರುವ ಕಾರಣ ಜೂ.17ರಂದು ವಿಚಾರಣೆಗೆ ಹಾಜರಾಗಲಾಗುವುದು ಎಂದು ತಿಳಿಸಿದ್ದೆ. ವಿಚಾರಣೆ ಹಾಜರಾಗಿದ್ದರೂ ಮತ್ತು ತನಿಖೆಗೆ ಸಹಕರಿಸುವುದಾಗಿ ತಿಳಿಸಿದ್ದರೂ ತನಿಖಾ ಸಂಸ್ಥೆ ವಿಚಾರಣಾ ನ್ಯಾಯಾಲಯಕ್ಕೆ ನನ್ನ ವಿರುದ್ಧ ವಾರೆಂಟ್‌ ಜಾರಿಗೊಳಿಸಲು ಅರ್ಜಿ ಸಲ್ಲಿಸಿದೆ. ಆದ್ದರಿಂದ ವಿಚಾರಣಾ ನ್ಯಾಯಾಲಯ ವಾರೆಂಟ್ ಜಾರಿ ಮಾಡಿದರೆ ಸಿಐಡಿ ಅಧಿಕಾರಿಗಳು ಬಂಧಿಸುವ ಸಾಧ್ಯತೆ ಇರಲಿದೆ ಎಂದು ಯಡಿಯೂರಪ್ಪ ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಜತೆಗೆ, ಪ್ರಸ್ತುತ ಪ್ರಕರಣ ಐಪಿಸಿ 354 (ಎ) ಅಡಿಯಲ್ಲಿ ಲೈಂಗಿಕ ಕಿರುಕುಳದ ಅಡಿಯಲ್ಲಿ ಬರುವುದಿಲ್ಲ. 

ಬಿಟ್‌ಕಾಯಿನ್‌ ಹಗರಣ: ₹5 ಕೋಟಿ ಕೇಸಲ್ಲಿ ಮೊಹಮ್ಮದ್‌ ನಲಪಾಡ್‌ ವಿಚಾರಣೆ

ಅಲ್ಲದೆ, ಫೋಕ್ಸೋ ಕಾಯಿದೆಯಡಿಯಲ್ಲಿ ದೂರು ದಾಖಲಿಸಲು ಯಾವುದೇ ಅಂಶಗಳು ಇಲ್ಲ. ಘಟನೆ ನಡೆದ ದಿನದಂದು ಸ್ಥಳದಲ್ಲಿದ್ದ ನನ್ನ ಮನೆಯ ಸಿಬ್ಬಂದಿ ಅಥವಾ ಭೇಟಿಗಾರರು ದೂರುದಾರ ಮಹಿಳೆ ಹೇಳಿರುವಂತೆ ಯಾವುದೇ ಅಪರಾಧ ಕೃತ್ಯ ನಡೆದಿಲ್ಲ ಎಂದು ತನಿಖಾ ಸಂಸ್ಥೆ ಮುಂದೆ ಸ್ಪಷ್ಟವಾಗಿ ನುಡಿದಿದ್ದಾರೆ. ಘಟನೆ ನಡೆದ ದಿನದಿಂದ ಒಂದೂವರೆ ತಿಂಗಳ ಬಳಿಕ ದೂರು ದಾಖಲಿಸಲಾಗಿದೆ. ನನಗೆ ಕಿರುಕುಳ ನೀಡುವ ಉದ್ದೇಶದಿಂದ ಈ ದೂರು ದಾಖಲಾಗಿದೆ. ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದ್ದು, ವಿಚಾರ ನ್ಯಾಯಾಲಯದ ವಿಚಾರಣೆಗೂ ನಿಯಮಿತವಾಗಿ ಹಾಜರಾಗುತ್ತೇನೆ. ಆದ್ದರಿಂದ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು ಎಂದು ಯಡಿಯೂರಪ್ಪ ಅರ್ಜಿಯಲ್ಲಿ ನ್ಯಾಯಾಲಯವನ್ನು ಕೋರಿದ್ದಾರೆ.

click me!