
ವಿಜಯಪುರ (ಅ.08): ಮುಸ್ಲಿಂ ಸಮುದಾಯಕ್ಕೆ ಒಳ್ಳೆಯದಾಗಲಿ ಎಂದು ರಾಜ್ಯದಲ್ಲಿ 1.12 ಲಕ್ಷ ಎಕರೆ ಭೂಮಿಯನ್ನು ವಕ್ಫ್ ಮಂಡಳಿಗೆ ದಾನ ಮಾಡಿದ್ದಾರೆ. ಅದನ್ನು ಬಡವರಿಗೆ ಹಂಚಿಕೆ ಮಾಡಿ ಎಂದು ಹೇಳಲು ಇದೇನು ಯತ್ನಾಳ್ ಅವರ ಅಪ್ಪನ ಆಸ್ತಿಯಲ್ಲ ಎಂದು ಸಚಿವ ಬಿ.ಝೆಡ್. ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ವಿಜಯಪುರದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಕ್ಫ್ ಆಸ್ತಿಯನ್ನು ಬಡವರಿಗೆ ಹಂಚಿ ಎಂದಿದ್ದ ಶಾಸಕ ಯತ್ನಾಳ್ ಅವರಿಗೆ ತಿರುಗೇಟು ನೀಡಿದ್ದಾರೆ. 'ಯಾರಪ್ಪನ ಆಸ್ತಿ ಎಂದು ವಕ್ಫ್ ಆಸ್ತಿ ಹಂಚಬೇಕು. ಇದು ನನ್ನ ಅಪ್ಪನ ಆಸ್ತಿ ಆಗಿದ್ದರೆ ಬಡವರಿಗೆ ಹಂಚಬಹುದು. ಮತ್ತೊಂದೆಡೆ ಶಾಸಕ ಯತ್ನಾಳ್ ಅವರ ಅಪ್ಪನ ಆಸ್ತಿಯಾಗಿದ್ದರೂ ಬಡವರಿಗೆ ಹಂಚಬಹುದು. ಇದು ನನ್ನ ಅಪ್ಪನ ಆಸ್ತಿಯು ಅಲ್ಲ, ಯತ್ನಾಳ್ ಅಪ್ಪನ ಆಸ್ತಿಯು ಅಲ್ಲ. ದಾನಿಗಳು ಸಮಾಜಕ್ಕೆ ಒಳ್ಳೆಯದಾಗಲಿ ಎಂದು ದಾನ ಮಾಡಿದ್ದು. ಮಿಸ್ಟರ್ ಯತ್ನಾಳ್ ಅವರೆ ಒಂದು ಇಂಚು ಸರ್ಕಾರಿ ಭೂಮಿಯನ್ನ ವಕ್ಫ್‌ಗೆ ತಗೊಂಡಿಲ್ಲ. ರಾಜ್ಯದಲ್ಲಿ 1.12 ಲಕ್ಷ ಏಕರೆ ಭೂಮಿಯನ್ನು ದಾನ ಮಾಡಿದ್ದಾರೆ. ಇದನ್ನ ಯಾರಪ್ಪನ ಆಸ್ತಿ ಎಂದು ಬಡವರಿಗೆ ಹಂಚೋದು ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಮೈಸೂರು ಲೋಕಸಭೆ ಸೋಲಿಗೆ ಕ್ಯಾಂಡಿಡೇಟ್ ಸರಿ ಇಲ್ಲದ್ದೇ ಕಾರಣ: ಶಾಸಕ ಹರೀಶ್ ಗೌಡ
ದಲಿತ ಮುಖ್ಯಮಂತ್ರಿ ವಿಚಾರದ ಬಗ್ಗೆ ಮಾತನಾಡಿ, ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ. ಕುರ್ಚಿ ಖಾಲಿಯಾದರೆ ತಾನೆ ಈ ಚರ್ಚೆ. ಈಗ ಕುರ್ಚಿ ಖಾಲಿ ಇಲ್ಲ ,ಆ ಕುರ್ಚಿಯಲ್ಲಿ ಟಗರು ಕುಳಿತಿದೆ. ಆ ಟಗರುನ ಕೆಳೆಗೆ ಇಳಿಸೋದು ಅಷ್ಟು ಸುಲಭನಾ? ಟಗರುಗೆ ಅಲ್ಲಾಡಿಸಲು ಸಾಧ್ಯನಾ? 5 ವರ್ಷ ಸಿದ್ದರಾಮಯ್ಯ ಸಿಎಂ ಎಂದು ನಮ್ಮ ನಾಯಕಿಯಾದ ಸೋನಿಯಾ ಗಾಂಧಿ, ನಾಯಕರಾದ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ನಿನ್ನೆ ಮಾಜಿ ಸಂಸದ ಡಿ.ಕೆ. ಸುರೇಶ್ ಈಗ ಕುರ್ಚಿ ಖಾಲಿಯಿಲ್ಲ, ಸಿದ್ದರಾಮಯ್ಯ 5 ವರ್ಷ ಕಾಲ ಮುಂದುವರಿಯುತ್ತಾರೆ ಎಂದಿದ್ದಾರೆ ಎಂದರು.
ಸಿಎಂ ಅಧಿಕಾರ ಹಂಚಿಕೆಯಾಗಿದೆ ಅಂತ ನಿಮಗೆ ಯಾರು ಹೇಳಿದ್ದಾರೆ. ಯಾರು ಹೇಳಿಲ್ಲ ಇದು ಮಾಧ್ಯಮಗಳ ಸೃಷ್ಟಿ ಮಾಡಿಕೊಂಡಿರೋದು. ಎಲ್ಲಿಯೂ ಎರಡುವರೆ ವರ್ಷ ಅಂತ ಚರ್ಚೆ ಆಗಿಲ್ಲ. ಡಿ.ಕೆ. ಸುರೇಶ್ ಅವರೇ ಹೇಳಿದ್ದಾರಲ್ಲರೀ ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಎಂದು. ಐದು ವರ್ಷ ಕಾಲ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ ಎಷ್ಟೇ ಎಂದು ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟಪಡಿಸಿದರು.
ಜಾತಿ ಗಣತಿ ವರದಿ ವಿಚಾರದ ಬಗ್ಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ಜಾತಿಗಣತಿ ವರದಿ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುವುದಾಗಿ ಹೇಳಿದ್ದಾರೆ. ನಾನು ಕ್ಯಾಬಿನೆಟ್ ನಲ್ಲಿ ಇರ್ತೇನೆ. ಏನು ಚರ್ಚೆ ಆಗತ್ತೆ ನೋಡೋಣ. ಕುಮಾರಸ್ವಾಮಿ ಕಾಲದಲ್ಲೆ ಜಾತಿ ಗಣತಿ ವರದಿ ಬರಬೇಕಿತ್ತು. ನಮ್ಮ ಕಾಂಗ್ರೆಸ್ ಪ್ರಣಾಳಿಕೆಯಲ್ಲಿಯೆ ಜಾತಿ ಗಣತಿ ವಿಚಾರ ಇದೆ. ನಾನು ಸಹ ಜಾತಿ ಗಣತಿ ವರದಿ ಬರಬೇಕು ಎಂದಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ಜಾತಿ ಗಣತಿ ವರದಿ ಜಾರಿ: ವಿಪಕ್ಷಗಳಿಗೆ ನುಂಗಲಾರದ ತುತ್ತಾಗಿದೆ ಎಂದ ಗೃಹ ಸಚಿವ ಪರಮೇಶ್ವರ!
ಸತೀಶ್ ಜಾರಕಿಹೊಳಿ ಮೈಸೂರು ನಾಯಕರ ಭೇಟಿ ವಿಚಾರದ ಬಗ್ಗೆ ಮಾತನಾಡಿ, ಅವರು ಯಾರನ್ನು ಭೇಟಿ ಮಾಡಲೇ ಬಾರದಾ? ಸತೀಶ್ ಜಾರಕಿಹೊಳಿ ಪವರ್ ಸೆಂಟರ್ ತರ ಏನಿಲ್ಲ. ಅವರು ಎಲ್ಲಿಗಾದ್ರು ಹೋದರೆ ಅದು ಮಾಧ್ಯಮಗಳಿಗೆ ಸುದ್ದಿ ಆಗ್ತಿದೆ. ಮಾಮೂಲಿ ಮೈಸೂರು ಹೋಗ್ತಾರೆ ಬೆಳಗಾವಿ ಹೋಗ್ತಾರೆ. ನಾನು ಬಿಜಾಪುರ ಬಂದಿದ್ದೀನಿ, ಯಾರನ್ನಾದ್ರೂ ಭೇಟಿ ಮಾಡಿದ್ರೆ ತಪ್ಪಾ? ನಿನ್ನೆ ನಾನು ಸಚಿವ ಶಿವಾನಂದ ಪಾಟೀಲ್, ಶಾಸಕರು ಊಟಕ್ಕೆ ಸೇರಿದ್ವಿ ಇದು ಸುದ್ದಿ ಮಾಡೋಕ್ ಆಗತ್ತಾ? ಎಂದು ಕಿಡಿಕಾರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.