ದೆಹಲಿಯಲ್ಲಿ ವರಿಷ್ಠರ ಭೇಟಿಗೆ ಕಾದು ಕಾದು ಸುಸ್ತು, ದಾರಿ ಮಧ್ಯೆ ಅಯೋಧ್ಯೆಯತ್ತ ರಾಜ್ಯ ಕೈ ಶಾಸಕರ ಪ್ರಯಾಣ ರಾಮನ ದರ್ಶನ!

Published : Apr 15, 2026, 12:31 PM IST
Karnataka Congress MLAs Visit Ayodhya

ಸಾರಾಂಶ

ಸಚಿವ ಸಂಪುಟ ಪುನರ್‌ರಚನೆ ಚರ್ಚೆಯ ನಡುವೆ ದೆಹಲಿಗೆ ತೆರಳಿದ್ದ ಕಾಂಗ್ರೆಸ್ ಹಿರಿಯ ಶಾಸಕರಿಗೆ ಹೈಕಮಾಂಡ್ ನಾಯಕರ ಭೇಟಿ ಸಾಧ್ಯವಾಗಿಲ್ಲ. ಹೀಗಾಗಿ, ಶಾಸಕರು ಅಯೋಧ್ಯೆಗೆ ತೆರಳಿ ರಾಮಲಲ್ಲಾ ದರ್ಶನ ಪಡೆದು, ಮತ್ತೆ ದೆಹಲಿಗೆ ಮರಳಿ ವರಿಷ್ಠರನ್ನು ಭೇಟಿಯಾಗುವ ನಿರೀಕ್ಷೆಯಲ್ಲಿದ್ದಾರೆ.

ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನರ್‌ರಚನೆ ಕುರಿತ ಚರ್ಚೆಗಳು ಜೋರಾಗಿರುವ ನಡುವೆಯೇ, ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ತೆರಳಿದ್ದ ಕರ್ನಾಟಕದ ಹಿರಿಯ ಕಾಂಗ್ರೆಸ್ ಶಾಸಕರುಗಳಿಗೆ ಹೈಕಮಾಂಡ್‌ ನಾಯಕರು ಭೇಟಿಗೆ ಸಿಗದ ಹಿನ್ನೆಲೆಯಲ್ಲಿ ಅಯೋಧ್ಯೆಗೆ ತೆರಳಿ ಮರ್ಯಾದ ಪುರುಷೋತ್ತಮ ಶ್ರೀ ರಾಮ ಹಾಗೂ ರಾಮಲಲ್ಲಾ ದರ್ಶನ ಪಡೆದಿದ್ದಾರೆ. ದರ್ಶನದ ಬಳಿಕ ಅವರು ಮರು ದೆಹಲಿಗೆ ವಾಪಸ್ಸಾಗಿ, ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ನಿರೀಕ್ಷೆಯಲ್ಲಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಟಿಬಿ ಜಯಚಂದ್ರ ಆಯೋಧ್ಯೆಯಲ್ಲಿ ರಾಮನನ್ನು ನೋಡಬೇಕೆಂಬ ಬಯಕೆ ಇತ್ತು. ಹಾಗಿ 15 ಜನ ಶಾಸಕರು ಬಂದಿದ್ದೇವೆ. ರಾಮನ ಆಶೀರ್ವಾದ ಪಡೆದುಕೊಳ್ಳಲು ಬಂದಿದ್ದೇವೆ. ಮತ್ತೊಂದು ಖುಷಿ ವಿಷ್ಯ ಅಂದರೆ ರಾಮನ ವಿಗ್ರಹವನ್ನು ಮೈಸೂರಿನ ಅರುಣ್ ಯೋಗಿರಾಜ್ ಕೆತ್ತನೆ ಮಾಡಿದ್ದಾರೆ. ಕರ್ನಾಟಕ ಅಂದ್ರೆ ಹನುಮಂತನ ಜಾಗ ಹೀಗಾಗಿ ಯುಪಿ ಜೊತೆಗೆ ಇರುವ ಸಂಬಂಧ ನಾವು ಊಹೆ ಮಾಡಲು ಸಾಧ್ಯವಿಲ್ಲ. ಶ್ರೀರಾಮನ ಆಶೀರ್ವಾದ ಪಡೆಯಲು ಬಂದಿದ್ದೇವೆ ಹೀಗಾಗಿ ಖುಷಿ ಇದೆ ಎಂದಿದ್ದಾರೆ.

ಸಂಸತ್ ಅಧಿವೇಶನ ಹಿನ್ನೆಲೆ ಸಿಗುತ್ತಾರೆಂಬ ಭರವಸೆ

ಏಪ್ರಿಲ್ 16ರಿಂದ ಸಂಸತ್ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಪಕ್ಷದ ಎಲ್ಲಾ ವರಿಷ್ಠ ನಾಯಕರು ದೆಹಲಿಯಲ್ಲಿ ಲಭ್ಯರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಭೇಟಿಗೆ ಮುನ್ನ ರಾಮಲಲ್ಲಾ ದರ್ಶನ ಪಡೆದು ಬಳಿಕ ಮಾತುಕತೆ ನಡೆಸಲು ಶಾಸಕರು ತೀರ್ಮಾನಿಸಿದ್ದಾರೆ.

ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಸೇರಿದಂತೆ ಶಾಸಕರಾದ ಅಶೋಕ್ ಪಟ್ಟಣ, ಜಿ.ಎಸ್. ಪಾಟೀಲ್, ಕೆ. ಷಡಾಕ್ಷರಿ, ಜಗದೀಶ್ ಪಾಟೀಲ್, ಡಿ.ಜಿ. ಶಾಂತನಗೌಡ, ಹಂಪನಗೌಡ ಬಾದರ್ಲಿ, ರಾಘವೇಂದ್ರ ಹಿಟ್ನಾಳ್, ಬಿ. ಶಿವಣ್ಣ, ಬಸವರಾಜ್ ಶಿವಣ್ಣನವರ್, ಮಹಂತೇಶ್ ಕೌಜಲಿ, ಯಶವಂತರಾಯಗೌಡ ಪಾಟೀಲ್ ಸೇರಿದಂತೆ ಹಲವರು ಅಯೋಧ್ಯೆ ಪ್ರವಾಸ ಕೈಗೊಂಡಿದ್ದರು.

ಯಾವು ನಾಯಕರೂ ಭೇಟಿಗೆ ಸಿಕ್ಕಿಲ್ಲ

ಇದಕ್ಕೂ ಮೊದಲು, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಎಚ್ಚರಿಕೆಯನ್ನು ಲೆಕ್ಕಿಸದೇ, ಕಾಂಗ್ರೆಸ್ ಶಾಸಕರ ಈ ಗುಂಪು ದೆಹಲಿಗೆ ತೆರಳಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಲು ಯತ್ನಿಸಿತು. ಆದರೆ ಪ್ರಯತ್ನ ಕೈಗೂಡಲಿಲ್ಲ. ಸಚಿವ ಸ್ಥಾನಕ್ಕಾಗಿ ಒತ್ತಡ ಹೇರುವ ಉದ್ದೇಶದಿಂದ ಈ ಭೇಟಿ ಮಹತ್ವ ಪಡೆದಿದೆ.

ಮಂಗಳವಾರವೂ ವರಿಷ್ಠರನ್ನು ಭೇಟಿ ಮಾಡಲು ಶಾಸಕರು ಪ್ರಯತ್ನ ನಡೆಸಿದ್ದರು. ಬುಧವಾರ ವೇಣುಗೋಪಾಲ್ ಮತ್ತು ಸುರ್ಜೇವಾಲಾ ಅವರನ್ನು ಭೇಟಿಯಾಗುವ ನಿರೀಕ್ಷೆಯಿದೆ ಎಂದು ಶಾಸಕರು ತಿಳಿಸಿದ್ದರು. ಜೊತೆಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ಸಮಯ ಕೋರಿ ವಿನಂತಿಸಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಇದರ ನಡುವೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಈಗಾಗಲೇ ಕೆಲ ಹಿರಿಯ ಶಾಸಕರು ಭೇಟಿ ಮಾಡಿ ತಮ್ಮ ಅಹವಾಲುಗಳನ್ನು ಮಂಡಿಸಿದ್ದಾರೆ. ಮುಂದಾಗಿ ವೇಣುಗೋಪಾಲ್ ಹಾಗೂ ಸುರ್ಜೇವಾಲಾ ಅವರೊಂದಿಗೆ ಸಮಗ್ರ ಚರ್ಚೆ ನಡೆಸಿ, ಮನವಿ ಸಲ್ಲಿಸಿದ ನಂತರವೇ ರಾಜ್ಯಕ್ಕೆ ಮರಳಲು ಶಾಸಕರು ತೀರ್ಮಾನಿಸಿದ್ದಾರೆ.

ರಾಹುಲ್ ಗಾಂಧಿ, ವೇಣುಗೋಪಾಲ್ ದೆಹಲಿಯಲ್ಲಿಲ್ಲ

ಮೂಲತಃ ಸೋಮವಾರವೇ ಹೈಕಮಾಂಡ್ ಭೇಟಿಗೆ ಶಾಸಕರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಹೊರಗಡೆಯಾಗಿದ್ದರಿಂದ ಭೇಟಿ ಸಾಧ್ಯವಾಗಲಿಲ್ಲ. ಇದೇ ವೇಳೆ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರು ಕೇರಳದಲ್ಲಿರುವುದರಿಂದ ಅವರ ಭೇಟಿಯೂ ಮುಂದೂಡಿಕೆಯಾಗಿದೆ.

ದೆಹಲಿಯಲ್ಲಿ ತಂಗಿರುವ ಶಾಸಕರ ಪಟ್ಟಿಯಲ್ಲಿ ಅಶೋಕ್ ಪಟ್ಟಣ, ವೈ.ವಿ. ಪಾಟೀಲ್, ಜಿ.ಎಸ್. ಪಾಟೀಲ್, ಬಸವರಾಜ್ ಶಿವಣ್ಣನವರ್, ಆನೇಕಲ್ ಶಿವಣ್ಣ, ಸಿ. ಪುಟ್ಟರಂಗ ಶೆಟ್ಟಿ, ಹಂಪನಗೌಡ ಬಾದರ್ಲಿ, ಡಿ.ಜಿ. ಶಾಂತನಗೌಡ, ಜೆ.ಟಿ. ಪಾಟೀಲ್, ಶಿವಲಿಂಗೇಗೌಡ, ಎ.ಆರ್. ಕೃಷ್ಣಮೂರ್ತಿ, ಯಶವಂತರಾಯಗೌಡ ಪಾಟೀಲ್, ಕೆ. ಷಡಾಕ್ಷರಿ, ಟಿ.ಬಿ. ಜಯಚಂದ್ರ, ನಾರಾಯಣಸ್ವಾಮಿ, ರಾಘವೇಂದ್ರ ಹಿಟ್ನಾಳ್ ಸೇರಿದಂತೆ ಹಲವರು ಸೇರಿದ್ದಾರೆ.

ಈ ಮಧ್ಯೆ, ಸಚಿವ ಸಂಪುಟ ಪುನರ್‌ರಚನೆ ಚರ್ಚೆಗಳು ತೀವ್ರಗೊಂಡಿರುವ ಸಂದರ್ಭದಲ್ಲಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು. ದೆಹಲಿಗೆ ತೆರಳುವ ಮುನ್ನ ಸದಾಶಿವನಗರದಲ್ಲಿರುವ ಖರ್ಗೆ ನಿವಾಸದಲ್ಲಿ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಈ ಚರ್ಚೆ ನಡೆದಿರುವುದು ಗಮನಾರ್ಹ. ತಮಿಳುನಾಡು ಚುನಾವಣಾ ಪ್ರಚಾರದ ಕುರಿತು ಚರ್ಚಿಸಲು ಈ ಭೇಟಿ ನಡೆದಿತ್ತೆಂದು ಶಿವಕುಮಾರ್ ಸ್ಪಷ್ಟಪಡಿಸಿದ್ದರೂ, ಸಂಪುಟ ಪುನರ್‌ರಚನೆ ಕುರಿತ ಮಾತುಕತೆ ನಡೆಯುತ್ತಿರುವ ಸಮಯದಲ್ಲೇ ಈ ಭೇಟಿ ನಡೆದಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಖರ್ಗೆ ಅವರನ್ನು ಭೇಟಿಯಾದ ಬಳಿಕ ಶಾಸಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುವ ಡಿ.ಕೆ. ಶಿವಕುಮಾರ್, ದೆಹಲಿ ಪ್ರವಾಸದಲ್ಲಿರುವ ಶಾಸಕರು ಪಕ್ಷಕ್ಕೆ ಮುಜುಗರ ಉಂಟುಮಾಡುವ ಹೇಳಿಕೆಗಳನ್ನು ನೀಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ, ಸಚಿವ ಸಂಪುಟ ಪುನರ್‌ರಚನೆಗೆ ಇದು ಸೂಕ್ತ ಸಮಯವಲ್ಲ; ಚುನಾವಣೆಗಳು ಮುಗಿದ ಬಳಿಕ ಈ ವಿಷಯವನ್ನು ಚರ್ಚಿಸಬಹುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಿಹಾರದಲ್ಲಿ ಕೇಸರಿ ಪರ್ವ: ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಪ್ರಮಾಣ ವಚನ ಸ್ವೀಕಾರ
Women s Reservation Bill: ಮಹಿಳಾ ಮೀಸಲಾತಿ ಓಕೆ; ಚುನಾವಣಾ ಟೈಮಲ್ಲೇ ಏಕೆ - ಸೋನಿಯಾ ಗಾಂಧಿ