
ರಾಮನಗರ : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಚಿವ ಜಮೀರ್ ಅಹಮದ್ ಖಾನ್ ಅವರು ‘ಕಾಲಾ ಕುಮಾರಸ್ವಾಮಿ (ಕರಿಯ ಕುಮಾರಸ್ವಾಮಿ)’ ಎಂದು ಕರೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಉಪ ಚುನಾವಣೆ ಹೊಸ್ತಿಲಲ್ಲಿ ಹೊಸ ವಿವಾದ ಹುಟ್ಟು ಹಾಕಿದೆ.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಭಾಷಣದಲ್ಲಿ ಮಾತನಾಡಿದ್ದ ಜಮೀರ್ ಅವರು, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ‘ಬಿಜೆಪಿಯವರಿಗಿಂತ ಕಾಲಾ ಕುಮಾರಸ್ವಾಮಿ (ಕರಿಯ ಕುಮಾರಸ್ವಾಮಿ) ಹೆಚ್ಚು ಡೇಂಜರ್’ ಎಂದು ಉರ್ದುವಿನಲ್ಲಿ ಟೀಕಿಸಿದ್ದರು.
ಕುಮಾರಸ್ವಾಮಿಗೆ 'ಕರಿಯ..' ಎಂದ ಜಮೀರ್, ಜನಾಂಗೀಯ ದ್ವೇಷದ ಮಾತಿಗೆ ಜೆಡಿಎಸ್ ಆಕ್ರೋಶ!
ಇದರಿಂದ ಕೆಂಡಮಂಡಲಾಗಿರುವ ಜೆಡಿಎಸ್ ಕಾರ್ಯಕರ್ತರು, ‘ಎಕ್ಸ್’ ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಜಮೀರ್ ಅವರು ಕಪ್ಪು ವರ್ಣದವರ ಬಗ್ಗೆ ಜನಾಂಗೀಯ ನಿಂದನೆ ಮಾಡಿ ವರ್ಣಭೇದ ತಾರತಮ್ಯ ಎಸಗಿದ್ದಾರೆ. ಒಂದು ಸಮುದಾಯವನ್ನು ಎತ್ತಿಕಟ್ಟಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಡಲು ಜನರನ್ನು ಪ್ರಚೋದಿಸಿರುವುದು ಅಕ್ಷಮ್ಯ ಅಪರಾಧ. ಗೃಹ ಸಚಿವ ಪರಮೇಶ್ವರ್ ಹಾಗೂ ಪೊಲೀಸರು ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆಯಿದ್ದರೆ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದೆ ಅಲ್ಲದೆ ಕನ್ನಡಿಗರಾದ ಮಲ್ಲಿಕಾರ್ಜುನ ಖರ್ಗೆ, ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಕೆ.ಎಚ್. ಮುನಿಯಪ್ಪ, ಕೆ.ಜೆ.ಜಾರ್ಜ್, ಡಿ.ಕೆ. ಸುರೇಶ್ ಹಾಗೂ ರಹೀಮ್ ಖಾನ್ ಅವರ ಬಣ್ಣ ಯಾವುದು ಎಂದು ಪ್ರಶ್ನಿಸಿದೆ.
ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಹಣಬಲ ನಡೆಯಲ್ಲ: ಡಿ.ಕೆ.ಶಿವಕುಮಾರ್ ಗುಡುಗು
ವಿವಾದಾತ್ಮಕ ಹೇಳಿಕೆಗೆ ಜಮೀರ್ ಸ್ಪಷ್ಟನೆ:
ಈ ಮಧ್ಯೆ ತಮ್ಮ ಹೇಳಿಕೆ ವಿವಾದವಾಗುತ್ತಿದ್ದಂತೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಮೀರ್, ಮೊದಲಿನಿಂದಲೂ ಕುಮಾರಸ್ವಾಮಿಯವರು ನನ್ನನ್ನು ಕುಳ್ಳ ಅನ್ನುತ್ತಾರೆ. ನಾನು ಅವರನ್ನು ಕರಿಯಣ್ಣ ಎಂದು ಕರೆಯುತ್ತೇನೆ. ಕುಮಾರಸ್ವಾಮಿಯನ್ನು ನಾನು ಪ್ರೀತಿಯಿಂದ ಹಾಗೆ ಕರೆಯುತ್ತೇನೆಯೇ ಹೊರತು ಅದರ ಹಿಂದೆ ಯಾವುದೇ ದುರುದ್ದೇಶ ಇಲ್ಲ. ನಾವು ಬೇರೆ, ಬೇರೆ ಪಕ್ಷದಲ್ಲಿ ಇರಬಹುದು. ಆದರೆ, ಹಳೆಯ ಸ್ನೇಹವನ್ನು ಮರೆಯಲು ಸಾಧ್ಯವಿಲ್ಲ ಎಂದು ಸಮಜಾಯಿಸಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.