ಅಪ್ಪ-ಮಗನಿಗೆ ಬರೀ ತರಲೆ ಕೆಲಸ ಎಂದು ಶಾಸಕ ಲೇಔಟ್ ಕೃಷ್ಣಪ್ಪ ಹಾಗೂ ಮಾಜಿ ಶಾಸಕ ಪ್ರಿಯಕೃಷ್ಣ ವಿರುದ್ಧ ಸಚಿವ ಸೋಮಣ್ಣ ಕಿಡಿಕಾರಿದರು.
ಚಾಮರಾಜನಗರ (ಮಾ.19): ಅಪ್ಪ-ಮಗನಿಗೆ ಬರೀ ತರಲೆ ಕೆಲಸ ಎಂದು ಶಾಸಕ ಲೇಔಟ್ ಕೃಷ್ಣಪ್ಪ ಹಾಗೂ ಮಾಜಿ ಶಾಸಕ ಪ್ರಿಯಕೃಷ್ಣ ವಿರುದ್ಧ ಸಚಿವ ಸೋಮಣ್ಣ ಕಿಡಿಕಾರಿದರು. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ನನ್ನ ಕ್ಷೇತ್ರದ ಜನರು 4 ವರ್ಷ 10 ತಿಂಗಳು ನೆಮ್ಮದಿಯಿಂದ ಇದ್ದರು, ಈಗ ಅಪ್ಪ-ಮಕ್ಕಳು ತರಲೆಗಳು ರೌಡಿಸಂ ಮಾಡಿಸೋದೆ ಅವರ ಕೆಲಸ, ನಾನು ಹೋಗಿ ನೋಡ್ತೀನಿ, ಯಾರಿಗೆ ಹೇಳಬೇಕು ಅವರಿಗೆ ಹೇಳ್ತೀನಿ, ಬೆಂಗಳೂರಿನ ಜನರು ಸೂಕ್ಷ್ಮ ಜನರು ಸರಿಯಾದ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು. ಚಾಮರಾಜನಗರದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಪಕ್ಷದ ತೀರ್ಮಾನಕ್ಕೆ ಬದ್ಧ, ಇಂಥ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲು ಎಂದು ಸೂಚಿಸಿದರೇ ನಿಲ್ಲುತ್ತೇನೆ, ನಿನಗೆ 72 ಆಯ್ತು ಬೇಡ ಎಂದರೆ ನಿಲ್ಲಲ್ಲ, ಚಾಮರಾಜನಗರಕ್ಕೂ ನನಗೂ 50 ವರ್ಷದ ಸಂಬಂಧವಿದೆ ಎಲ್ಲವೂ ಪಕ್ಷಕ್ಕೆ ಬಿಟ್ಟದ್ದು ಎಂದರು.
ಬೊಮ್ಮಾಯಿ, ಸಚಿವ ಸೋಮಣ್ಣ ಗಹನ ಚರ್ಚೆ: ಪಕ್ಷದೊಂದಿಗೆ ಭಿನ್ನಮತ ಶಮನಗೊಂಡಿರುವ ಹಿನ್ನೆಲೆ ಮಹದೇಶ್ವರಬೆಟ್ಟದ ದೀಪದ ಒಡ್ಡುವಿನಲ್ಲಿ ನಿರ್ಮಾಣವಾದ 108ಅಡಿ ಎತ್ತರದ ಮಲೆಮಹದೇಶ್ವರಸ್ವಾಮಿ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಚಿವ ಸೋಮಣ್ಣ ಕಾರ್ಯಕ್ರಮದ ಆರಂಭದಿಂದಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ವೇದಿಕೆಯಲ್ಲಿ ಕುಳಿತು ಗಹನವಾದ ಚರ್ಚೆಯಲ್ಲಿ ಮುಳುಗಿದ್ದರು. ಸೋಮಣ್ಣ ಕುಟುಂಬದೊಟ್ಟಿಗೆ ಫೋಟೋ: ಕಾರ್ಯಕ್ರಮದಲ್ಲಿ ಸಚಿವ ಸೋಮಣ್ಣ ಪತ್ನಿ ಶೈಲಜಾ ಸೋಮಣ್ಣ ಹಾಗೂ ಕುಟುಂಬಸ್ಥರು ಭಾಗಿಯಾಗಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಟ್ಟಿಗೆ ಸೋಮಣ್ಣ ಕುಟುಂಬ ಫೋಟೊ ಕ್ಲಿಕ್ಕಿಸಿಕೊಂಡರು. ಬೊಮ್ಮಾಯಿ ಹಸನ್ಮುಖಿಯಾಗಿ ಫೋಟೋಗೆ ಫೋಸ್ ಕೊಟ್ಟರು.
undefined
ಮಹದೇಶ್ವರ ಪ್ರತಿಮೆ ಚಾಮರಾಜನಗರ ಜಿಲ್ಲೆಯ ಹಿರಿಮೆ ಹೆಚ್ಚಿಸಿದೆ: ಸಿಎಂ ಬೊಮ್ಮಾಯಿ
2 ದಿನದಲ್ಲಿ ವಿಶೇಷ ಪ್ಯಾಕೇಜ್: ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾಕ್ಷೇತ್ರ ಮಲೆ ಮಹದೇಶ್ವರಬೆಟ್ಟದಲ್ಲಿ ನಿರ್ಮಿಸಿರುವ 108 ಅಡಿ ಎತ್ತರದ ಮಲೆಮಹದೇಶ್ವರಸ್ವಾಮಿ ಪ್ರತಿಮೆ, ಮೂರೂವರೆ ಕೋಟಿ ವೆಚ್ಚದಲ್ಲಿ ನಿರ್ಮಿತ 560 ಕೆ.ಜಿ. ತೂಕದ ಬೆಳ್ಳಿರಥವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಲೋಕಾರ್ಪಣೆ ಮಾಡಿದರು. ಇದೇ ವೇಳೆ ಚಾಮರಾಜನಗರ ಜಿಲ್ಲೆಗೆ ಇನ್ನೆರಡು ದಿನದಲ್ಲಿ ವಿಶೇಷ ಪ್ಯಾಕೇಜ್ ಘೊಷಣೆ ಮಾಡಲಾಗುವುದು. ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿ ವರದಿ ಕೊಟ್ಟಿದ್ದು, ಇನ್ನೆರಡು ದಿನದಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗುವುದು ಎಂದು ಬೊಮ್ಮಾಯಿ ಘೋಷಿಸಿದರು.
ಮಹದೇಶ್ವರರ ಪ್ರತಿಮೆ ನಿರ್ಮಾಣದಿಂದ ಕ್ಷೇತ್ರದ ಹಿರಿಮೆ, ಗರಿಮೆ ಎತ್ತಿಹಿಡಿಯುವ ಕೆಲಸವಾಗಿದೆ. ಮಹದೇಶ್ವರರ ಇಷ್ಟುದೊಡ್ಡಮೂರ್ತಿ ಚೆನ್ನಾಗಿ ಮೂಡಿ ಬಂದಿದ್ದು, ಜೀವಕಳೆ ಇದೆ. ಈ ಪ್ರತಿಮೆ ನಿರ್ಮಾಣಕ್ಕಾಗಿ ಶ್ರಮಿಸಿದ ಎಲ್ಲರೂ ತಮ್ಮ ಬದುಕಿನ ಸಾರ್ಥಕತೆ ಕಂಡು ಕೊಂಡಿದ್ದಾರೆ. ಮಹದೇಶ್ವರರ ಪ್ರತಿಮೆ ಅನಾವರಣಗೊಳಿಸುವ ಅವಕಾಶ ದೊರೆತಿದ್ದು ನನ್ನ ಯೋಗ ಎಂದರು. ಮಲೆಮಹದೇಶ್ವರರ ಪವಾಡಗಳು ಜನರ ಮನಸ್ಸಿನಲ್ಲಿ ಉಳಿದಿದೆ. ಮಲೆಮಹದೇಶ್ವರರನ್ನು ಪೂಜಿಸಿ ನಂತರ ತಮ್ಮ ಕಾಯಕ ಪ್ರಾರಂಭಿಸುವ ಲಕ್ಷಾಂತರ ಜನ ಈ ಭಾಗದಲ್ಲಿದ್ದಾರೆ. ಪ್ರತಿವರ್ಷ ಎರಡರಿಂದ ಮೂರು ಲಕ್ಷ ಜನ ಕಾಲ್ನಡಿಗೆಯಲ್ಲೇ ಬಂದು ಮಾದಪ್ಪನದರ್ಶನ ಪಡೆದು ತಮ್ಮ ಭಕ್ತಿ ಮೆರೆಯುತ್ತಾರೆ ಎಂದು ತಿಳಿಸಿದರು.
ವನ್ಯಸಂಪತ್ತು ಅರಣ್ಯ ಇಲಾಖೆಯದ್ದೆಂಬ ಮನೋಭಾವ ಬಿಡಿ: ರಿಷಬ್ ಶೆಟ್ಟಿ
ಮಲೆಮಹದೇಶ್ವರ ಬೆಟ್ಟದಲ್ಲಿ ನೂರಾರು ಕೋಟಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿದ್ದೇವೆ. ಕ್ಷೇತ್ರಕ್ಕೆ ಬರುವ ಭಕ್ತರಿಗೆ ವಾಸ್ತವ್ಯ, ದಾಸೋಹ, ದರ್ಶನ, ಸಾರಿಗೆ ವ್ಯವಸ್ಥೆ ಸೇರಿ ಹಲವು ಸೌಕರ್ಯಗಳನ್ನು ಒದಗಿಸುವ ಕಾರ್ಯವನ್ನು ಪ್ರಾಧಿಕಾರದಿಂದ ಮಾಡಲಾಗುತ್ತಿದೆ. ಅವಿಸ್ಮರಣೀಯ-ಸೋಮಣ್ಣ: ಈ ದಿನ ನನ್ನ ಜೀವನದ ಅವಿಸ್ಮರಣೀಯ ದಿನ. ಮಹದೇಶ್ವರರ ಪ್ರತಿಮೆ ಉದ್ಘಾಟನೆ ಮನಸ್ಸಿಗೆ ಉಲ್ಲಾಸ, ಭಕ್ತಿ ಉಂಟು ಮಾಡುವ ಕಾರ್ಯವಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು. ಮಾದಪ್ಪನ ಪ್ರತಿಮೆ ನಿರ್ಮಾಣದಿಂದ ಮಹದೇಶ್ವರರ ವಿಚಾರಧಾರೆಗಳು ಜಗತ್ತಿಗೇ ಪರಿಚಯಿಸುವ ಕೆಲಸವಾಗಿದೆ. ಸರ್ಕಾರ ಹಾಗೂ ಪ್ರಾಧಿಕಾರ ಒಗ್ಗೂಡಿ ಕೆಲಸ ಮಾಡಿದರೆ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಆಗುತ್ತವೆ ಎಂಬುದಕ್ಕೆ ಈ ಕಾರ್ಯವೇ ನಿದರ್ಶನ ಎಂದು ತಿಳಿಸಿದರು.