ಚಾಮರಾಜನಗರ ಉಸ್ತುವಾರಿಯಾಗಿದ್ದರೂ ಜಿಲ್ಲಾ ಕಾರ್ಯಕ್ರಮಕ್ಕೆ ಗೈರು, ಪಕ್ಷದಲ್ಲಿ ತಮ್ಮನ್ನು ಕಡೆಗಣಿಸುತ್ತಿದ್ದಾರೆಂದು ಬೇಸರಗೊಂಡಿರುವ ಸಚಿವ ಸೋಮಣ್ಣ.
ಚಾಮರಾಜನಗರ/ಬೆಂಗಳೂರು(ಮಾ.02): ಆಡಳಿತಾರೂಢ ಬಿಜೆಪಿಯ ವಿಜಯಸಂಕಲ್ಪ ಯಾತ್ರೆಗೆ ಚಾಲನೆ ನೀಡಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಾಮರಾಜನಗರಕ್ಕೆ ಆಗಮಿಸಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅವರು ಕಾರ್ಯಕ್ರಮದಿಂದ ದೂರ ಉಳಿದದ್ದು ತೀವ್ರ ಚರ್ಚೆಗೆ ಕಾರಣವಾಗಿದೆ. ಮೇಲಾಗಿ ಯಾತ್ರೆಗಾಗಿ ರಚಿಸಲಾಗಿರುವ ತಂಡದಲ್ಲಿ ಸೋಮಣ್ಣ ಅವರಿದ್ದರೂ ಗೈರು ಹಾಜರಾಗಿ ಬೆಂಗಳೂರಿನಲ್ಲೇ ಉಳಿದಿರುವುದು ನಾನಾ ವ್ಯಾಖ್ಯಾನಕ್ಕೆ ಎಡೆ ಮಾಡಿಕೊಟ್ಟಿದೆ.
ಪಕ್ಷದ ಜಿಲ್ಲಾಧ್ಯಕ್ಷರು ಮತ್ತು ಪಕ್ಷದ ವಿವಿಧ ಹುದ್ದೆಗಳಿಗೆ ನೇಮಕಾತಿ ವೇಳೆ ತಮ್ಮನ್ನು ಕೊಂಚವೂ ಗಣನೆಗೆ ತೆಗೆದುಕೊಂಡಿಲ್ಲ. ತಮ್ಮ ವರ್ಚಸ್ಸಿಗೆ ಧಕ್ಕೆ ತರಲು ಕೆಆರ್‌ಐಡಿಎಲ್ ಅಧ್ಯಕ್ಷ ಎಂ.ರುದ್ರೇಶ್ ಅವರನ್ನು ಕಳುಹಿಸಿ ಕ್ಷೇತ್ರದಲ್ಲಿ ಪ್ರಚಾರ ಮಾಡಿಸಲಾಗುತ್ತಿದೆ. ಜತೆಗೆ ಹಿರಿಯ ಸಚಿವನಾಗಿದ್ದರೂ ಯಾತ್ರೆಯ ನಾಯಕತ್ವವನ್ನು ಬೇರೆ (ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ) ಅವರಿಗೆ ವಹಿಸಲಾಗಿದೆ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಸೋಮಣ್ಣ ಅವರು ವರಿಷ್ಠರ ಜತೆಗೆ ಮುನಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಅವರು ವಿಜಯ ಸಂಕಲ್ಪ ಯಾತ್ರೆಯಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
undefined
ಬೊಮ್ಮಾಯಿ, ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ: ನಡ್ಡಾ
ಈ ಅಸಮಾಧಾನದ ಬಗ್ಗೆ ಗೊತ್ತಾಗಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಬಹು ಒತ್ತಾಯದಿಂದ ಸೋಮಣ್ಣ ಅವರನ್ನು ಕರೆದಿದ್ದರು. ಅವರು ಹೊರಡುವುದಕ್ಕೂ ಸಿದ್ಧರಾದರು. ಆದರೆ, ಕೊನೆ ಕ್ಷಣದಲ್ಲಿ ಜಿಲ್ಲೆಗೆ ಸಂಬಂಧಪಡದ ರುದ್ರೇಶ್ ಅವರು ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಬಗ್ಗೆ ಗೊತ್ತಾಗಿ ಕೈಬಿಟ್ಟರು ಎಂದು ತಿಳಿದು ಬಂದಿದೆ.
ಸೋಮಣ್ಣ ಜತೆಗೆ ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರೂ ಗೈರಾಗಿರುವುದು ಅಚ್ಚರಿ ಮೂಡಿಸಿದೆ. ಅವರ ಗೈರಿಗೆ ಕಾರಣ ತಿಳಿದು ಬಂದಿಲ್ಲ. ಚುನಾವಣೆಯ ಹೊಸ್ತಿಲಲ್ಲಿ ಈ ಬೆಳವಣಿಗೆ ಆಡಳಿತಾರೂಢ ಬಿಜೆಪಿಗೆ ತೀವ್ರ ಮುಜುಗರ ಉಂಟು ಮಾಡಿದೆ.