* ಇಂದು ಎಲ್ಲ ರೀತಿಯ ಶಿಕ್ಷಣ ಮತ್ತು ತರಬೇತಿಗಳು ಶುಲ್ಕ ಸಹಿತವಾಗಿವೆ
* ಅಗ್ನಿಪಥ ಯೋಜನೆಯಡಿ ಸೇವೆಗೆ ನೇಮಕಗೊಂಡವರು ವೇತನಸಹಿತ ತರಬೇತಿ ಪಡೆಯಲಿದ್ದಾರೆ
* ಈ ಯೋಜನೆಯ ಲಾಭವನ್ನು ಕರ್ನಾಟಕದ ಯುವಜನತೆ ಪಡೆಯಬೇಕು
ಖಾನಾಪುರ(ಜೂ.21): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಗ್ನಿಪಥ ಯೋಜನೆಯ ಬಗ್ಗೆ ಜಿಲ್ಲೆಯ ಐವರು ಕಾಂಗ್ರೆಸ್ ಶಾಸಕರು ಯುವಜನತೆಯ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಅರಣ್ಯ ಸಚಿವ ಉಮೇಶ ಕತ್ತಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಂದು ಎಲ್ಲ ರೀತಿಯ ಶಿಕ್ಷಣ ಮತ್ತು ತರಬೇತಿಗಳು ಶುಲ್ಕ ಸಹಿತವಾಗಿವೆ. ಆದರೆ ಅಗ್ನಿಪಥ ಯೋಜನೆಯಡಿ ಸೇವೆಗೆ ನೇಮಕಗೊಂಡವರು ವೇತನಸಹಿತ ತರಬೇತಿ ಪಡೆಯಲಿದ್ದಾರೆ. ಮಿಲಿಟರಿ ಸೇರಿ ದೇಶಸೇವೆ ಮಾಡುವ ಇರಾದೆ ಹೊಂದಿದ ಯುವಕರು ಅಗ್ನಿಪಥದಲ್ಲಿ ಯಶಸ್ವಿಯಾದಾಗ ಮಾತ್ರ ಸೇನೆಯಲ್ಲಿ ಮುಂದುವರಿಯಲಿದ್ದಾರೆ. ಯುವಜನತೆಯ ಭವಿಷ್ಯದ ದಿಕ್ಸೂಚಿಯಾಗಲಿರುವ ಈ ಯೋಜನೆಯ ಲಾಭವನ್ನು ಕರ್ನಾಟಕದ ಯುವಜನರು ಪಡೆಯಬೇಕು ಎಂದು ಕರೆ ನೀಡಿದರು.
ಬೆಳಗಾವಿ: ಬೆಳ್ಳಂಬೆಳಿಗ್ಗೆ ಕುಂದಾನಗರಿಯಲ್ಲಿ ಫೈರಿಂಗ್, ಕೊಲೆ ಆರೋಪಿ ಬಂಧನ
ಬಹುಪಾಲು ಅರಣ್ಯ ಪ್ರದೇಶ ಹೊಂದಿರುವ ಖಾನಾಪುರ ತಾಲೂಕಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ತಿಂಗಳಾಂತ್ಯದ ಒಳಗೆ ಸ್ಥಳೀಯವಾಗಿ ಎಲ್ಲ ಅಧಿಕಾರಿಗಳ ಸಭೆಯನ್ನು ಆಯೋಜಿಸಲಾಗುತ್ತದೆ. ಸಭೆಯಲ್ಲಿ ಅರಣ್ಯ ಪ್ರದೇಶದ ಮೂಲಕ ಹಾದುಹೋಗುವ ರಸ್ತೆ, ಸೇತುವೆ, ವಿದ್ಯುತ್ ಕಂಬಗಳ ಕುರಿತು ಚರ್ಚಿಸಿ ಅರಣ್ಯ ಪ್ರದೇಶದ ಅಂಚಿನಲ್ಲಿರುವ ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸುವ ಕುರಿತು ಗಮನಹರಿಸಲಾಗುವುದು. 1980ಕ್ಕೂ ಮೊದಲಿನಿಂದ ಅಸ್ತಿತ್ವದಲ್ಲಿರುವ ರಸ್ತೆಗಳ ಅಭಿವೃದ್ಧಿಗೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಸಭೆಯಲ್ಲಿ ಕೆಪಿಟಿಸಿಎಲ್, ಹೆಸ್ಕಾಂ, ಕಂದಾಯ, ಪೊಲೀಸ್, ಲೋಕೋಪಯೋಗಿ, ಶಿಕ್ಷಣ ಮತ್ತಿತರ ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ ಕಾನನದಂಚಿನ ಭಾಗಗಳನ್ನು ಅಭಿವೃದ್ಧಿಪಡಿಸುವ ಕುರಿತು ಪರಿಹಾರೋಪಾಯಗಳನ್ನು ಕಂಡುಕೊಳ್ಳಲಾಗುವುದು ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಅರಣ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿ ಖಾನಾಪುರಕ್ಕೆ ಭೇಟಿ ನೀಡಿದ ಸಚಿವರನ್ನು ಮಾಜಿ ಶಾಸಕ ಅರವಿಂದ ಪಾಟೀಲ, ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕ ಸುರೇಶ ದೇಸಾಯಿ, ಬಿಜೆಪಿ ಬ್ಲಾಕ್ ಅಧ್ಯಕ್ಷ ಸಂಜಯ ಕುಬಲ, ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೊಚೇರಿ ಮತ್ತಿತರರು ಸತ್ಕರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಬಾಬುರಾವ್ ದೇಸಾಯಿ, ಸೋನಾಲಿ ಸರ್ನೋಬತ್, ಸದಾನಂದ ಪಾಟೀಲ, ಗಜಾನನ ರೇಮಾಣಿ, ಕಿರಣ ಯಳ್ಳೂರಕರ, ಅಪ್ಪಯ್ಯ ಕೋಡೊಳಿ, ಧನಶ್ರೀ ದೇಸಾಯಿ, ಸುಂದರ ಕುಲಕರ್ಣಿ, ಶ್ರೀಕಾಂತ ಇಟಗಿ, ಬಸವರಾಜ ಸಾಣಿಕೊಪ್ಪ, ಜಾರ್ಡನ್ ಗೋನ್ಸಾಲ್ವಿಸ್, ಸುನೀಲ ಮಡ್ಡೀಮನಿ, ಪಂಡಿತ ಓಗಲೆ, ರಾಜೇಂದ್ರ ರಾಯ್ಕಾ, ಗುಂಡು ತೋಪಿನಕಟ್ಟಿ, ಸುನೀಲ ನಾಯ್ಕ, ಮಹಾಂತೇಶ ಬಾಳೇಕುಂದ್ರಿ ಮತ್ತಿತರರು ಇದ್ದರು.