ಇಂಧನ ಇಲಾಖೆ ದಿವಾಳಿಗೆ ಸಿದ್ದು ಕಾರಣ: ಸಚಿವ ಸುನೀಲ್‌ ಕುಮಾರ್‌ ತಿರುಗೇಟು

By Kannadaprabha NewsFirst Published Sep 7, 2022, 4:30 AM IST
Highlights

ಇಲಾಖೆಯ ಸಾಲದ ಪಾಪದ ಕೂಸಿಗೆ ಸಿದ್ದು ಹೊಣೆ, ತಮ್ಮ ಅವಧಿಯಲ್ಲಿ ಅವರು ಇಲಾಖೆಗೆ ಹಣ ನೀಡಲಿಲ್ಲ, ಎಸ್ಕಾಂಗೆ ಸರ್ಕಾರ 8800 ಕೋಟಿ ಬಾಕಿ ಉಳಿಸಿಕೊಂಡಿತ್ತು ಹೀಗಿದ್ದರೂ ನಮ್ಮ ವಿರುದ್ಧ ಮಾಜಿ ಸಿಎಂ ಅಪಪ್ರಚಾರ

ಬೆಂಗಳೂರು(ಸೆ.07):  ಇಂಧನ ಇಲಾಖೆ ದಿವಾಳಿಯಾಗಲು, ಆರ್ಥಿಕ ನಷ್ಟಉಂಟಾಗಲು ಹಿಂದಿನ ಮುಖ್ಯಮಂತ್ರಿ, ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯ ಅವರು ಕಾರಣ, ಇಂಧನ ಇಲಾಖೆಯ ಸಾಲದ ಪಾಪದ ಕೂಸಿಗೆ ಸಿದ್ದರಾಮಯ್ಯ ಅವರೇ ಹೊಣೆ ಎಂದು ಇಂಧನ ಸಚಿವ ಸುನೀಲ್‌ ಕುಮಾರ್‌ ಆರೋಪಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,ಸಿದ್ದರಾಮಯ್ಯ ಅವರು ತಮ್ಮ ಆಡಳಿತಾವಧಿಯಲ್ಲಿ ಇಂಧನ ಇಲಾಖೆಗೆ ಸಬ್ಸಿಡಿ ರೂಪದ ಹಣವನ್ನು ಸಕಾಲಕ್ಕೆ ಬಿಡುಗಡೆ ಮಾಡಲಿಲ್ಲ. ಇಂಧನ ಇಲಾಖೆಗೆ ಕೊಡಬೇಕಾದ ಹಣ ನೀಡಲಿಲ್ಲ. ಒಟ್ಟು 3470 ಕೋಟಿ ರು. ಸಬ್ಸಿಡಿ ಹಣ ಬಾಕಿ ಇತ್ತು. ಜೊತೆಗೆ 3500 ಕೋಟಿ ರು. ಸಾಲ ಮಾಡಲಾಯಿತು. ಆರ್‌ಡಿಪಿಆರ್‌ ಇಲಾಖೆಯಿಂದ ಬರಬೇಕಾದ ಬಾಕಿ ನೀಡಲಿಲ್ಲ. ಕೃಷಿ ಪಂಪ್‌ಸೆಟ್‌ ವಿದ್ಯುತ್‌ ನೀಡಿಕೆ ಸಂಬಂಧ ಹಿಂದಿನ ಸರ್ಕಾರ 5500 ಕೋಟಿ ರು. ಬಾಕಿ ಉಳಿಸಿಕೊಂಡಿತ್ತು. ಇಂತಹ ಸಂದರ್ಭದಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಪರೋಕ್ಷವಾಗಿ ಮೀಟರ್‌ ಅಳವಡಿಸುವ ಪ್ರಯತ್ನ ಮಾಡಲಾಗಿತ್ತು. ಕಾಂಗ್ರೆಸ್‌ ಅವಧಿಯಲ್ಲಿ ಬಾಕಿ ಉಳಿದಿದ್ದ ಸುಮಾರು 8000 ಕೋಟಿ ರು.ಗಳನ್ನು ಎಸ್ಕಾಂ ಹಾಗೂ ಕೆಪಿಸಿಎಲ್‌ಗೆ ನೀಡಲಾಗಿದೆ. ವಿವಿಧ ಇಲಾಖೆಯಿಂದ ಇಂಧನ ಇಲಾಖೆಗೆ ಬರಬೇಕಾದ ಹಣ ಬಂದಿದೆ. ಹೀಗಿರುವಾಗ ಬಿಜೆಪಿ ಸರ್ಕಾರ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸಲು ಮುಂದಾಗಿದೆ ಎಂದೆಲ್ಲಾ ಸಿದ್ದರಾಮಯ್ಯ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

SC, ST ಕುಟುಂಬಗಳಿಗೆ ನೀಡುವ ಉಚಿತ ವಿದ್ಯುತ್ ಯೋಜನೆ ರದ್ದಾಯ್ತಾ? ಇಲ್ಲಿದೆ ಸತ್ಯಾಸತ್ಯತೆ

ಪರಿಶಿಷ್ಟರಿಗೆ 75 ಯೂನಿಟ್‌ ಉಚಿತ ವಿದ್ಯುತ್‌:

ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಪರಿಶಿಷ್ಟಜಾತಿ ಮತ್ತು ಪಂಗಡದ ಕುಟುಂಬಗಳ ಗೃಹ ವಿದ್ಯುತ್‌ ಬಳಕೆದಾರರಿಗೆ ಮಾಸಿಕ 75 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಒದಗಿಸುವ ಯೋಜನೆಯನ್ನು ರದ್ದು ಪಡಿಸಿಲ್ಲ, ಆದರೆ ಯೋಜನೆ ಜಾರಿ ಸಂಬಂಧ ಕಳೆದ ಆಗಸ್ಟ್‌ 24 ರಂದು ಹೊರಡಿಸಿದ್ದ ಮಾರ್ಗಸೂಚಿ ಸುತ್ತೋಲೆಯನ್ನು ಇ-ಆಡಳಿತ ಭಾಗಶಃ ಪರಿಷ್ಕರಿಸಿದ್ದರಿಂದ ಸೆ. 3 ರಂದು ಹಿಂದೆ ಹೊರಡಿಸಿದ್ದ ಸುತ್ತೋಲೆಯನ್ನು ಹಿಂಪಡೆಯಲಾಗಿದೆ ಎಂದರು.

ಯೋಜನೆಯಡಿ ಸುಮಾರು 39 ಲಕ್ಷ ಫಲಾನುಭವಿಗಳು ಪ್ರಯೋಜನ ಪಡೆಯಬಹುದೆಂದು ಅಂದಾಜಿಸಲಾಗಿದೆ. ಈಗಾಗಲೇ ಸುಮಾರು 4 ಲಕ್ಷ ಫಲಾನುಭವಿಗಳನ್ನು ಗುರುತಿಸಲಾಗಿದೆ ಕಳೆದ ಮೇ ಮತ್ತು ಜೂನ್‌ ತಿಂಗಳಲ್ಲಿ ವಿದ್ಯುತ್‌ ಬಿಲ್‌ ಪಾವತಿಸಿ ಸುಮಾರು 15 ಸಾವಿರ ಫಲಾನುಭವಿಗಳಿಗೆ ಹಣ ಮರು ಪಾವತಿಸಲಾಗಿದೆ ಎಂದು ಸಚಿವ ಸುನಿಲ್‌ ಕುಮಾರ್‌ ವಿವರಿಸಿದರು.

ಹೊಸ ಆ್ಯಪ್‌ ಅಭಿವೃದ್ದಿ

ಪರಿಶಿಷ್ಟರಿಗೆ ನೀಡುವ ಉಚಿತ ವಿದ್ಯುತ್‌ ಯೋಜನೆ ಸುಲಭವಾಗಿ ಅನುಷ್ಠಾನಗೊಳಿಸಲು ಇ-ಆಡಳಿತ ಇಲಾಖೆ ಹೊಸ ಆ್ಯಪ್‌ ಸಿದ್ಧಪಡಿಸುತ್ತಿದೆ ಎಂದು ಬೆಸ್ಕಾಂ ತಿಳಿಸಿದೆ.

ಪುನರ್‌ರಚಿತ ಟ್ರಸ್ವ್‌ ಪಟ್ಟಿಹಿಂದಕ್ಕೆ, ಸೋಮವಾರ ಹೊಸ ಪಟ್ಟಿ: ಸಚಿವ ಸುನಿಲ್‌ ಕುಮಾರ್‌

ಡಿಕೆಶಿ ಸೋಲಾರ್‌ ಯೋಜನೆ ತನಿಖೆ ಸುಳಿವು

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಇಂಧನ ಇಲಾಖೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಕಿರುವ ಸವಾಲನ್ನು ತಾವು ಸ್ವೀಕರಿಸಿದ್ದು, ಪಾವಗಡ ಸೋಲಾರ್‌ ಪ್ಲಾಂಟ್‌ ಹಂಚಿಕೆ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು, ಅಧಿವೇಶನದ ಬಳಿಕ ಈ ಬಗ್ಗೆ ಉತ್ತರ ನೀಡುವುದಾಗಿ ಸಚಿವ ಸುನಿಲಕುಮಾರ್‌ ಹೇಳಿದರು. ಈಗಾಗಲೇ ಪ್ಲಾಂಟ್‌ ಹಂಚಿಕೆ ಬಗ್ಗೆ ಪರಿಶೀಲಿಸಲಾಗುತ್ತಿದೆ. ತನಿಖೆ ಬಗ್ಗೆ ಮುಂದೆ ಮಾಹಿತಿ ನೀಡುವುದಾಗಿ ಅವರು ಹೇಳಿದರು.

ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಕೃಷಿ ಪಂಪ್‌ಸೆಟ್‌ಗೆ ಮೀಟರ್‌ ಅಳವಡಿಸಲಿ ಎಂದ ಸಚಿವರು, ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸುವುದಿಲ್ಲ, ಹೆಚ್ಚುವರಿ ವಿದ್ಯುತ್‌ ನೀಡಲಾಗುತ್ತಿದೆ. ಬಿಜೆಪಿ ಸರ್ಕಾರ ರೈತ ಸ್ನೇಹಿ ಆಗಿದೆ. ಕೆಇಆರ್‌ಸಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ವಿದ್ಯುತ್‌ನನ್ನು ರೈತರು ಬಳಸುತ್ತಿರುವುದರಿಂದ 1200 ಕೋಟಿ ರು. ಅನುದಾನವನ್ನು ಒದಗಿಸಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
 

click me!