*ಇಂಧನ ಸಚಿವ ಸುನೀಲ್ ಕುಮಾರ್ ಅವರಿಗೆ ಸ್ವಾತಂತ್ರ್ಯ ದಿನಾಚರಣೆ ಜೊತೆಗೆ, ಹುಟ್ಟು ಹಬ್ಬದ ಸಂಭ್ರಮ
* ಮತ್ತೊಂದು ಜನ ಮೆಚ್ಚುಗೆ ಕಾರ್ಯ ಮಾಡಿದ ಸಚಿವ ಸುನೀಲ್ ಕುಮಾರ್
* ಊಟ ಮಾಡುತ್ತಾ ಅವರ ಸಮಸ್ಯೆಯನ್ನು ಆಲಿಸಿದ ಸಚಿವ
ಉಡುಪಿ, (ಆ.15): ನನ್ನ ನೋಡಲು ಬರುವವರು ಒಂದು ಕನ್ನಡ ಪುಸ್ತಕ ತನ್ನಿ ಎಂದು ಹೇಳುವ ಮೂಲಕ ಮಾದರಿಯಾಗಿದ್ದ ಇಂಧನ ಸಚಿವ ಸುನೀಲ್ ಕುಮಾರ್ ಅವರು ಇದೀಗ ಮತ್ತೊಂದು ಜನ ಮೆಚ್ಚಚುಗೆ ಕಾರ್ಯ ಮಾಡಿದ್ದಾರೆ.
ಹೌದು...ಇಂದು (ಆ.15) ಇಂಧನ ಸಚಿವ ಸುನೀಲ್ ಕುಮಾರ್ ಅವರಿಗೆ ಸ್ವಾತಂತ್ರ್ಯ ದಿನಾಚರಣೆ ಜೊತೆಗೆ, ಹುಟ್ಟು ಹಬ್ಬದ ಸಂಭ್ರಮ. ಸಚಿವರಾದ ಬಳಿಕ ಮೊದಲ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸದೇ ಸರಳ ಮತ್ತು ವಿಶೇಷವಾಗಿ ಆಚರಿಸಿಕೊಂಡು ಸಾರ್ವಜನಿಕರ ಗಮನ ಸೆಳೆದಿದ್ದಾರೆ.
ನನ್ನ ನೋಡಲು ಬರುವವರು ಒಂದು ಕನ್ನಡ ಪುಸ್ತಕ ತನ್ನಿ : ಸಚಿವ ಸುನಿಲ್ ಕುಮಾರ್
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ, ಎಲ್ಲ ಲೈನ್ ಮ್ಯಾನ್‌ಗಳನ್ನು ತಮ್ಮ ಮನೆಗೆ ಆಹ್ವಾನಿಸಿ, ಅವರೊಂದಿಗೆ ಊಟ ಮಾಡಿದ್ದಾರೆ. ತಮ್ಮ ಹುಟ್ಟು ಹಬ್ಬದ ನಿಮಿತ್ತ ಲೈನ್ ಮ್ಯಾನ್‌ಗಳಿಗೆ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಲೈನ್ ಮ್ಯಾನ್‌ಗಳ ಮಧ್ಯೆ ಕುಳಿತು ಊಟ ಮಾಡಿದ್ದು, ಮಾತ್ರವಲ್ಲದೇ ಊಟ ಮಾಡುತ್ತಾ ಅವರ ಸಮಸ್ಯೆಯನ್ನು ಆಲಿಸಿದ್ದಾರೆ.
ಸಚಿವರ ವಿಭಿನ್ನ ಹುಟ್ಟು ಹಬ್ಬ ಆಚರಣೆ ಸಾರ್ವಜನಿಕರ ಮೆಚ್ಚುಗೆ ಪಾತ್ರವಾಗಿದೆ. ಅಲ್ಲದೇ ಇತರರಿಗೂ ಮಾದರಿಯಾಗಿದೆ.
ಇನ್ನು ಸಚಿವರಾದ ಮೇಲೆ ತಮ್ಮನ್ನು ಅಭಿನಂದಿಸಲು ಬರುವವರು ಯಾರೂ ಹಾರ ತುರಾಯಿಗಳನ್ನು ತರಬೇಡಿ. ಕೊಡಲೇಬೇಕು ಅಂದಿದ್ದರೆ ಒಂದು ಕನ್ನಡ ಪುಸ್ತಕ ಕೊಂಡು ತನ್ನಿ. ಅದನ್ನು ಕಾರ್ಕಳ ಗ್ರಂಥಾಲಯಕ್ಕೆ ಕೊಡುತ್ತೇನೆ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.