ಸಚಿವ ಶ್ರೀರಾಮುಲು ಖಡಕ್ ಮಾತು: ಎಲ್ಲಾ ಊಹಾಪೋಹಗಳಿಗೆ ತೆರೆ

By Suvarna NewsFirst Published Aug 11, 2021, 4:53 PM IST
Highlights

* ಖಾತೆಯ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಸಚಿವರ ಅಸಮಾಧಾನ
* ಈ ಬಗ್ಗೆ ಸ್ಪಷ್ಟನೆ ಕೊಟ್ಟ ಸಚಿವ ಶ್ರೀರಾಮುಲು
* ಸಾರಿಗೆ ಖಾತೆ ನೀಡಿರುವುದಕ್ಕೆ ರಾಮುಲು ಅಸಮಾಧಾನಗೊಂಡಿದ್ದಾರೆ ಎನ್ನವು ಸುದ್ದಿ ಇತ್ತು

ಬೆಂಗಳೂರು, (ಆ.11): ಬೊಮ್ಮಾಯಿ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿದ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿದೆ. ಅದರಲ್ಲೂ ಆನಂದ್ ಸಿಂಗ್ ರಾಜೀನಾಮೆ ನೀಡುವ ಹಂತಕ್ಕೆ ಹೋಗಿದ್ದಾರೆ.

ಇನ್ನು ಸಾರಿಗೆ ಖಾತೆ ಕೊಟ್ಟಿದ್ದಕ್ಕೆ ಶ್ರೀರಾಮುಲು ಅವರಿಗೂ ಸಹ ಅಸಮಾಧಾನ ಇದೆ ಎನ್ನುವ ಸುದ್ದಿ ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಆ ಸುದ್ದಿಗೆ ಸ್ವತಃ ರಾಮುಲು ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.

ಖಾತೆ ಕ್ಯಾತೆ: ಸಚಿವರಿಗೆ ದಿಲ್ಲಿಯಿಂದಲೇ ಒಂದು ಮನವಿ ಮಾಡಿದ ಬಿಜೆಪಿ ನಾಯಕ

ಇಂದು (ಆ.11) ಬೆಂಗಳೂರಿನ ಬಿಜೆಪಿ ಕಚೇರಿ ಜಗನ್ನಾಥ್ ಭವನಕ್ಕೆ ಭೇಟಿ ನೀಡಿ ಕಾರ್ಯಕರ್ತರ ಅಹವಾಲುಗಳನ್ನು ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ನಮಗೆ ಬೆಂಕಿ ಬಂಡಾಯ ಏನೂ ಇಲ್ಲ ನಮ್ಮದು ಶಿಸ್ತಿನ ಪಕ್ಷ. ನಮ್ಮ ಹೈಕಮಾಂಡ್ ಇದೆ ಎಂದು ಎಂದು ಸ್ಪಷ್ಟಪಡಿಸಿದರು.

ಖಾತೆಯ ವಿಚಾರಕ್ಕೆ ಸಂಬಂಧಿಸಿದಂತೆ ರಾಮುಲು ಅಸಮಧಾನಗೊಂಡಿದ್ದಾರೆ ಎಂದು ನಾನು ಕೆಲವು ಮಾಧ್ಯಮದಲ್ಲಿ ನೋಡಿದ್ದೇನೆ. ನನಗೆ ಯಾವ ಅಸಮಾಧಾನ ಇಲ್ಲ. ನಮ್ಮದು ಶಿಸ್ತಿನ ಪಕ್ಷ. ಹೈಕಮಾಂಡ್ ಎಲ್ಲವನ್ನು ನಿರ್ಧರಿಸುತ್ತದೆ ಎಂದು ಹೇಳಿದರು.

ನನಗೆ ಕೊಟ್ಟ ಸಾರಿಗೆ ಇಲಾಖೆ ನಿರ್ವಹಣೆ ‌ಮಾಡುತ್ತೇನೆ. ಜನಪರವಾದ ಕೆಲಸ ‌ಮಾಡಬೇಕು. ಕೊಟ್ಟ ಕೆಲಸ ಸಮರ್ಥವಾಗಿ ನಿರ್ವಹಣೆ ಮಾಡಿದ್ದೇನೆ. ಖಾತೆಯ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಅಸಮಧಾನ ಇಲ್ಲ ಎಂದು ಹೇಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದರು.

ಇನ್ನು, ಡಿಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಬಹಳಷ್ಟು ಮಂದಿ ಬೆಂಬಲಿಗರು ಡಿಸಿಎಂ ಆಗಬೇಕು ಎನ್ನುವುದರ ಬಗ್ಗೆ ನೀರಿಕ್ಷೆ ಇಟ್ಟುಕೊಂಡಿದ್ದರು. ಆದರೇ, ನಮ್ಮ ಹೈಕಮಾಂಡ್ ಸದ್ಯಕ್ಕೆ ಡಿಸಿಎಂ ‌ಮಾಡಿಲ್ಲ.ಕೊಟ್ಟ ಖಾತೆಯನ್ನು ‌ನಿರ್ವಹಣೆ ಮಾಡುತ್ತೇನೆ ಎಂದರು.

click me!