ಸಚಿವ ಶ್ರೀರಾಮುಲುರಿಂದ ಕಾರ್ಯಕರ್ತರಿಗೆ ಭರ್ಜರಿ ಬಾಡೂಟ!

By Kannadaprabha NewsFirst Published Nov 15, 2022, 3:48 AM IST
Highlights
  • ಸಚಿವ ಶ್ರೀರಾಮುಲುರಿಂದ ಕಾರ್ಯಕರ್ತರಿಗೆ ಭರ್ಜರಿ ಬಾಡೂಟ
  • ನುಂಕಿಮಲೆ ಬೆಟ್ಟದಲ್ಲಿ 2 ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರಿಗೆ ಭೋಜನ

ಮೊಳಕಾಲ್ಮುರು (ನ.15) : ಚುನಾವಣಾಗೂ ಮುನ್ನ ಅಥವಾ ಗೆಲುವು ಸಾಧಿಸಿದ ಬಳಿಕ ಬಾಡೂಟ ಏರ್ಪಡಿಸುವುದು ಸಾಮಾನ್ಯ. ಆದರೆ ಸಚಿವ ಶ್ರೀರಾಮುಲು ಚುನಾವಣೆಗೆ ಇನ್ನೂ ನಾಲ್ಕೈದು ತಿಂಗಳು ಇರುವಾಗಲೇ ಭಾನುವಾರ ಸಂಜೆ ಕಾರ್ಯಕರ್ತರಿಗೆ ಭರ್ಜರಿ ಬಾಡೂಟವನ್ನು ಉಣಬಡಿಸಿದ್ದಾರೆ.

ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ತಾಲೂಕಿನ ನುಂಕಿಮಲೆ ಬೆಟ್ಟದಲ್ಲಿ 2 ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರಿಗೆ ಭರ್ಜರಿ ಬಾಡೂಟವನ್ನು ಏರ್ಪಡಿಸಿದ್ದರು. ಇದಕ್ಕಾಗಿ ಕ್ವಿಂಟಲ್‌ಗಟ್ಟಲೆ ಕುರಿ ಮಾಂಸ ಮತ್ತು ಚಿಕನ್‌ ಊಟದ ವ್ಯವಸ್ಥೆ ಮಾಡಿದ್ದರು. ಮಾಂಸದೂಟದ ರುಚಿಯನ್ನು ಸವಿಯಲು ಕ್ಷೇತ್ರದ ನಾಲ್ಕು ಹೋಬಳಿಗಳ ನಾನಾ ಕಡೆಗಳ ಬಿಜೆಪಿ ಕಾರ್ಯಕರ್ತರೊಟ್ಟಿಗೆ ಕಾಂಗ್ರೆಸ್‌ ಕಾರ್ಯಕರ್ತರು ಕೂಡ ಕಂಡು ಬಂದಿದ್ದು ವಿಶೇಷ.

Karnataka Politics: ಸಿದ್ದು ವಿರುದ್ಧ ಅಚ್ಚರಿಯ ಅಭ್ಯರ್ಥಿ ಕಣಕ್ಕೆ: ಸಚಿವ ಶ್ರೀರಾಮುಲು

ವಾಟ್ಸಾಪ್‌ನಲ್ಲಿ ಕಾರ್ಯಕರ್ತರಿಗೆ ಆಹ್ವಾನ:

ನಮ್ಮ ಸಚಿವರ ಔತಣಕೂಟದಲ್ಲಿ ಮಾಂಸಹಾರಿ ಮತ್ತು ಸಸ್ಯಹಾರಿಗಳಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿತ್ತು. ಮಾಂಸಪ್ರಿಯರಿಗಾಗಿ ಒಂದಿಪ್ಪತ್ತು ಕುರಿ, ಒಂದೈವತ್ತು ಕೋಳಿ ಬಲಿಯಾಗಿದ್ದವು. ಸಸ್ಯಾಹಾರಿಗಳಿಗೆ ಹೋಳಿಗೆ ಊಟದ ಸಿಹಿ ಪಾರ್ಟಿ ಕೊಟ್ಟು ಕ್ಷೇತ್ರದ ಜನತೆಗೆ 2023ರ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆಂದು ಸ್ಪಷ್ಟಸಂದೇಶ ನೀಡಿದರು. ನಮ್ಮ ಸಚಿವರ ಔತಣ ಕೂಟದಲ್ಲಿ ಭಾಗಿಯಾಗಲು ಮಧ್ಯಾಹ್ನ 12 ಗಂಟೆಗೆ ಆಗಮಿಸಬೇಕೆಂದು ವಾಟ್ಸ್‌ ಗ್ರೂಪ್‌ಗಳ ಮೂಲಕ ಕಾರ್ಯಕರ್ತರನ್ನು ಕರೆಯಲಾಗಿತ್ತು. ಇದರಿಂದಾಗಿ ಮಧ್ಯಾಹ್ನ ಹೊತ್ತಿಗೆ ಸಾವಿರಾರು ಕಾರ್ಯಕರ್ತರು ಜಮಾಯಿಸಿ ಸಚಿವರಿಗಾಗಿ ಕಾದು ಕುಳಿತಿದ್ದರು. 4 ಗಂಟೆಗೆ ಆಗಮಿಸಿದ ಸಚಿವರು ವೇದಿಕೆ ಕಾರ್ಯಕ್ರಮದ ನಂತರ ಕಾರ್ಯಕರ್ತರಿಗೆ ಸ್ವತಃ ಮಾಂಸದೂಟ ಬಡಿಸಿದರು. ಕಾರ್ಯಕ್ರಮದ ಯಶಸ್ವಿಗೆ ನೂರಾರು ಕಾರ್ಯಕರ್ತರು ಟೊಂಕಕಟ್ಟಿನಿಂತಿದ್ದರು.

ಮಾಂಸದ ಜೊತೆ ಮದ್ಯವೂ ಸಪ್ಲೈ:

ಹೊಂಡದ ಸಮೀಪದಲ್ಲಿ ನಾಲ್ಕು ಕೌಂಟರ್‌ಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಇಳಿ ಸಂಜೆಯ ಬಾಡೂಟದ ಘಮಲಿನ ನಡುವೆ ಮದ್ಯದ ಬಾಟಲಿಗಳ ಸದ್ದು ಕೇಳಿ ಬಂದಿತು. ಜತೆಗೆ ಕರೆತಂದಿದ್ದವರಿಗೆ ಕೆಲ ಮುಖಂಡರು ಕದ್ದು ಮುಚ್ಚಿ ಮದ್ಯ ನೀಡುತ್ತಿರುವುದು ಕಂಡುಬಂದಿತು.

ರಾಜಕೀಯ ರೀ ಎಂಟ್ರಿ ಸುಳಿವು ನೀಡಿದ ಗಣಿಧಣಿ: ಬಿಜೆಪಿ ವಿರುದ್ಧ ಜನಾರ್ದನ ರೆಡ್ಡಿ ಕಿಡಿ

ನಾನಾ ತರದ ವಿಶ್ಲೇಷಣೆ:

ಬಿಜೆಪಿ ಪ್ರಭಾವಿ ನಾಯಕರು ಆಗಿರುವ ಸಚಿವ ಶ್ರೀರಾಮುಲು ಮೊಳಕಾಲ್ಮುರು ಬಿಟ್ಟು ಬಳ್ಳಾರಿ ಗ್ರಾಮಾಂತರದಲ್ಲಿ ಸ್ಪರ್ಧಿಸುತ್ತಾರೆ. ಕೂಡ್ಲಿಗಿ ಅಥವಾ ಕೊಪ್ಪಳದ ಕಡೆ ಹೋಗುತ್ತಾರೆ ಎಂದು ನಾನಾ ತರದ ಚರ್ಚೆಗಳು ಕಾರ್ಯಕರ್ತರಲ್ಲಿ ಕೇಳಿಬರುತ್ತಿದ್ದವು. ಇದಕ್ಕೆಲ್ಲಾ ಸಚಿವ ಬಿ. ಶ್ರೀರಾಮುಲು ಮತ್ತೊಮ್ಮೆ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಬಹಳಷ್ಟಿವೆ ಕಾರ್ಯಕರ್ತರು ಸಹಕರಿಸಬೇಕೆಂದು ಹೇಳುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದರೂ ಚುನಾವಣಾ ಘೋಷಣೆಯಾದ ನಂತರ ಸಚಿವರ ಮುಂದಿನ ನಡೆಯ ಬಗ್ಗೆ ಕಾದು ನೋಡಬೇಕಿದೆ ಎನ್ನುವುದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೆಲ ಕಾರ್ಯಕರ್ತರ ಮಾತಾಗಿತ್ತು.

click me!