ನನ್ನ ಮೈಚರ್ಮದಿಂದ ಚಪ್ಪಲಿ ಮಾಡಿ ಕೊಟ್ಟರೂ ಕನಕಗಿರಿಯ ಜನರ ಋಣ ತೀರಿಸಲು ಸಾಧ್ಯವಿಲ್ಲ: ಸಚಿವ ತಂಗಡಗಿ

By Kannadaprabha NewsFirst Published Mar 4, 2024, 8:12 PM IST
Highlights

ಎಲ್ಲಿಂದಲೋ ಬಂದ ನನ್ನನ್ನು ಕನಕಗಿರಿಯ ಜನರು ಶಾಸಕರನ್ನಾಗಿ ಮಾಡಿದ್ದಾರೆ. ನನ್ನ ಮೈ ಚರ್ಮವನ್ನು ಚಪ್ಪಲಿ ಮಾಡಿ, ಕನಕಗಿರಿ ಜನರಿಗೆ ಕೊಟ್ಟರೂ ಈ ಜನರ ಋಣ ತೀರಿಸಲು ಸಾಧ್ಯವಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
 

ಕನಕಗಿರಿ (ಮಾ.04): ಎಲ್ಲಿಂದಲೋ ಬಂದ ನನ್ನನ್ನು ಕನಕಗಿರಿಯ ಜನರು ಶಾಸಕರನ್ನಾಗಿ ಮಾಡಿದ್ದಾರೆ. ನನ್ನ ಮೈ ಚರ್ಮವನ್ನು ಚಪ್ಪಲಿ ಮಾಡಿ, ಕನಕಗಿರಿ ಜನರಿಗೆ ಕೊಟ್ಟರೂ ಈ ಜನರ ಋಣ ತೀರಿಸಲು ಸಾಧ್ಯವಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಕನಕಗಿರಿ ಉತ್ಸವದ ಸಮಾರೋಪ ಸಮಾರಂಭದ ಸಮಾರೋಪ ನುಡಿಗಳನ್ನಾಡಿದರು. ನಾನು ಮೊದಲು ಕನಕಗಿರಿಗೆ ಬಂದಾಗ ಅವರು ತೋರಿದ ಪ್ರೀತಿ, ಅವರು ನನ್ನನ್ನು ನಡೆಸಿಕೊಂಡ ರೀತಿಯನ್ನು ನಾನು ಜೀವನದಲ್ಲಿ ಎಂದೂ ಮರೆಯಲು ಸಾಧ್ಯವಿಲ್ಲ. ಅವರು ನನ್ನನ್ನು ಕೇವಲ ಶಾಸಕನನ್ನಾಗಿ ಮಾಡಿಲ್ಲ, ಮೂರು ಬಾರಿಯೂ ಸಚಿವನಾಗುವ ಯೋಗ ನೀಡಿದ್ದಾರೆ. ಇಂಥ ಭಾಗ್ಯವನ್ನು ನೀಡಿದವರ ಋಣ ತೀರಿಸಲು ಸಾಧ್ಯವೇ ಇಲ್ಲ. ಅವರ ಸೇವೆ ಮಾಡಿಕೊಂಡು ಇರುತ್ತೇನೆ, ಕ್ಷೇತ್ರವನ್ನು ಅಭಿವೃದ್ದಿ ಮಾಡುತ್ತೇನೆ ಎಂದರು.

ಜನರ ಪ್ರೀತಿ ಮತ್ತು ತಾಳ್ಮೆಯನ್ನು ಸ್ಮರಿಸಲೇಬೇಕು. ತಡರಾತ್ರಿ ಮೂರು ಗಂಟೆವರೆಗೂ ಕಾರ್ಯಕ್ರಮ ನೋಡಿದ್ದಾರೆ ಎಂದರೆ ಅವರ ಪ್ರೀತಿ ಅರ್ಥವಾಗುತ್ತದೆ. ಕನಕಗಿರಿ ಉತ್ಸವ ಜತೆಗೆ ಅಭಿವೃದ್ಧಿಯಾಗಬೇಕು. ರಾಜಾ ಉಡಚಪ್ಪ ನಾಯಕ ಮಾಡಿದ ಸಾಧನೆಯನ್ನು ಮಾದರಿಯಾಗಿ ಮಾಡಿಕೊಂಡು ಅಭಿವೃದ್ಧಿ ಮಾಡಲಾಗುವುದು. ರಾಜರನ್ನು ಮೀರಿಸಿದ ಹಿರಿಮೆ ಕನಕಗಿರಿಯ ಸಾಮಂತರದು. ಹಂಪಿ ಉತ್ಸವ ಮಾದರಿಯಲ್ಲಿಯೇ ಕನಕಗಿರಿ ಉತ್ಸವವನ್ನಾಗಿ ಮಾಡುವ ಆಸೆ ಇದೆ. ಅದನ್ನು ನಾನು ಮಾಡಿಯೇ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಕನಕಗಿರಿ ಉತ್ಸವ ಆಚರಣೆ ಮಾಡುವ ಬಯಕೆ ಹೊಂದಿದ್ದೇನೆ. ಪ್ರವಾಸೋಧ್ಯಮ ಅಭಿವೃದ್ಧಿಯಾಗಬೇಕು. ಕನಕಗಿರಿ ದೇವಸ್ಥಾನಗಳ ಅಭಿವೃದ್ಧಿಯಾಗಬೇಕು. ಬಾವಿಗಳ ಜೀರ್ಣೊದ್ಧಾರವಾಗಬೇಕು ಎಂದರು.

ಪಾಪ ಕುಮಾರಣ್ಣ ಹೆದರಿ ಮಂಡ್ಯಕ್ಕೆ ಓಟ: ಶಾಸಕ ಬಾಲಕೃಷ್ಣ ಲೇವಡಿ

ಕನಕಗಿರಿ ಬಹುತೇಕ ಒಣಬೇಸಾಯದ ಭಾಗವಾಗಿದ್ದು, ಇದನ್ನು ನೀರಾವರಿ ಮಾಡಬೇಕಾಗಿದೆ. ನಾನು ಮೊದಲು ಬಂದಾಗ ತಾಲೂಕು ಆಗಬೇಕು. ಕನಕಗಿರಿ ಉತ್ಸವ ಮಾಡಬೇಕು ಎಂದಿದ್ದರು. ಅವರಿಗೆ ಕೊಟ್ಟ ಮಾತಿನಂತೆ ಎರಡನ್ನು ಮಾಡಿದ್ದೇನೆ. ಗ್ರಾಮ ಪಂಚಾಯಿತಿ ಇದ್ದ ಕನಕಗಿರಿ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿ ಮಾಡಿದ್ದೇನೆ ಎಂದರು. ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಲಕ್ಷ್ಮಿ ಕೇರೆ, ಕಾಟಾಪುರ ಕೆರೆ ಸೇರಿದಂತೆ 8 ಕೆರೆ ತುಂಬಿಸುವ ಕೆಲಸ ಮಾಡಿದ್ದೇನೆ. ಕನಕಗಿರಿಯಲ್ಲಿ ನೀರಿನ ಬಹುದೊಡ್ಡ ಸಮಸ್ಯೆ ಇತ್ತು. ಅದನ್ನು ನೀಗಿಸಿದ್ದೇನೆ, ದಿನದ 24 ಗಂಟೆ ನೀರು ಪೂರೈಕೆ ಮಾಡಲಾಗುತ್ತದೆ. ಇದನ್ನು ಕನಕಗಿರಿಯ ಸ್ವಾಮೀಜಿಗಳು ಹೇಳಿದ್ದಾರೆ ಎನ್ನುವುದು ನನಗೆ ಅತೀವ ಸಂತೋಷವಾಗುತ್ತದೆ ಮತ್ತು ಸಾರ್ಥಕ ಭಾವ ಮೂಡುತ್ತದೆ ಎಂದು ಸಂತೋಷದಿಂದ ಹೇಳಿದರು.

ಕನಕಗಿರಿ ಕನಕಚಾಲಪತಿ ದೇವಸ್ಥಾನಕ್ಕೆ ಪ್ರತ್ಯೇಕ ಪ್ರಾಧಿಕಾರವನ್ನು ಮುಂದಿನ ಬಜೆಟ್ ನಲ್ಲಿ ಸಿಎಂ ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ಇದು ಅತೀವ ಸಂತೋಷವಾಗಿದೆ. ಕೆರೆ ತುಂಬಿಸುವ ಯೋಜನೆ ಮೊದಲು ಜಾರಿಯಾಗಿದ್ದು ಕನಕಗಿರಿ ಕ್ಷೇತ್ರದಲ್ಲಿ ಎನ್ನುವುದು ಗಮನಾರ್ಹ ಸಂಗತಿ. ಇದಾದ ಮೇಲೆ ಆನೆಕಲ್, ಕೋಲಾರ ಕೆರೆ ತುಂಬಿಸುವ ಯೋಜನೆಯನ್ನು ಜಾರಿ ಮಾಡಿದ್ದೇನೆ ಎಂದರು. ಕೆರೆ ತುಂಬಿಸುವ ಯೋಜನೆ ಮಾಡಿದ್ದರಿಂದ ಕನಕಗಿರಿ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ಈ ಹಿಂದೆಯೂ ಅನೇಕ ಮಹಾನ್ ನಟರು ಬಂದಿದ್ದಾರೆ. ಅದನ್ನು ಮೀರಿಸುವ ಮಹಾನ ನಟ ರವಿಚಂದ್ರನ್ ಬಂದಿದ್ದಾರೆ ಎಂದರು.

ನಾನು ಹೈಸ್ಕೂಲ್ ನಲ್ಲಿ ಇದ್ದಾಗ ರವಿಚಂದ್ರನ್ ಅವರ ಸಿನೆಮಾ ನೋಡಿದ್ದೇನೆ. ನಾನು ವಿಷ್ಣುವರ್ದನ್ ಅಭಿಮಾನಿಯಾಗಿದ್ದೇನೆ ಎಂದು ಹೇಳಿಕೊಂಡರು. ನಾನು ಕಾಲೇಜು ಜೀವನದಲ್ಲಿಯೂ ಲೀಡರ್ ಆಗಿದ್ದೆ. ನಮ್ಮ ಮಾಸ್ಟರ್ ಮಾಡಬೇಕು ಎಂದಿದ್ದರು. ಆದರೆ, ನಾನು ಮಾತ್ರ ಪೊಲೀಸ್ ಅಧಿಕಾರಿಯಾಗಬೇಕು ಎನ್ನುವ ಆಸೆ ಇತ್ತು. ಆದರೆ, ಇದ್ಯಾವುದು ಆಗಲಿಲ್ಲ. ಆದರೆ, ಕನಕಗಿರಿಯ ಶಾಸಕನಾಗಿದ್ದೇನೆ, ಸಚಿವನಾಗುವ ಯೋಗ ತಂದುಕೊಟ್ಟಿದ್ದಾರೆ. ಮೂರು ಬಾರಿ ಗೆಲ್ಲಿಸಿ, ಮೂರು ಬಾರಿಯೂ ಸಚಿವನನ್ನಾಗಿ ಮಾಡಿದ್ದೀರಿ, ಈ ಬಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವನಾದ ಮೇಲೆ ಜವಾಬ್ದಾರಿ ಹೆಚ್ಚಳವಾಗಿದೆ ಎಂದರು.

ನಾನು ಉಡಾಫೆ ರಾಜಕಾರಣ ಮಾಡಲ್ಲ: ಶಾಸಕ ಎಚ್‌.ಸಿ.ಬಾಲಕೃಷ್ಣ

ಕನಕಗಿರಿ ನೇರವಾಗಿ ಡ್ಯಾಮಿನಿಂದಲೇ ನೀರು ತರಲಾಗುವುದು. ₹200 ಕೋಟಿ ಮೀಸಲಿಟ್ಟಿದ್ದು, ಅದನ್ನು ಜಾರಿ ಮಾಡಿಯೇ ಮಾಡುತ್ತೇನೆ. ಸುವರ್ಣಗಿರಿಯ ಚನ್ನಮಲ್ಲ ಶ್ರೀಗಳು ಸಾನಿಧ್ಯ ವಹಿಸಿದ್ದರು. ಖ್ಯಾತ ನಟ, ನಿರ್ದೇಶಕ ವಿ.ರವಿಚಂದ್ರನ್, ಜಿಲ್ಲಾ ಮತ್ತು ಸತ್ರ ಪ್ರಧಾನ ನ್ಯಾಯಾಧೀಶ ಚಂದ್ರಶೇಖರ, ನ್ಯಾಯಾಧೀಶರಾದ ಸದಾನಂದ ನಾಯಕ, ರಮೇಶ ಗಾಣಿಗೇರ, ಗೌರಮ್ಮ ಪಾಟೀಲ್, ರಾಜಾ ನವೀನಚಂದ್ರ ನಾಯಕ, ಜಿಲ್ಲಾಧಿಕಾರಿ ನಳಿನ್ ಅತುಲ್, ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆ, ಎಸ್ಪಿ ಯಶೋದಾ ವಂಟಿಗೋಡಿ, ಬಾಷಾ ಹಿರೇಮನಿ ಹಾಗೂ ಅವರ ತಂಡ ನಾಡಗೀತೆ ಹಾಡಿದರು.

click me!