ಕೇಂದ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಅಧಿಕಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯಿಂದ ದೇಶ ಅಧೋಗತಿಗೆ ಹೋಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕಿಡಿಕಾರಿದ್ದಾರೆ.
ಕೊಪ್ಪಳ (ಮಾ.23): ಕೇಂದ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಅಧಿಕಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯಿಂದ ದೇಶ ಅಧೋಗತಿಗೆ ಹೋಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕಿಡಿಕಾರಿದ್ದಾರೆ. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪದಾಧಿಕಾರಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯ ಜನತಾ ಪಾರ್ಟಿ ಬದಲಿಗೆ ಬಾಂಡ್ ಜನತಾ ಪಾರ್ಟಿ ಎಂದು ಕರೆಯಬೇಕು. ಭ್ರಷ್ಟಾಚಾರಕ್ಕೆ ರಸೀದಿ ನೀಡಿದ ಸರ್ಕಾರ ಬಿಜೆಪಿ. ಬಾಂಡ್ ನೀಡಿದರೆ ಅವರ ಮನೆಗೆ ಇಡಿಯೂ ಹೋಗಲ್ಲ, ಸಿಬಿಐ ಸಹ ಹೋಗಲ್ಲ. ಈಗ ಲಂಚಕ್ಕೆ ರಸೀದಿ ನೀಡುವ ಸ್ಥಿತಿ ಬಂದಿದೆ ಎಂದರು.
ಚುನಾವಣೆ ಬಂದರೆ ನಾಟಕ ಶುರು. ಪಾಕಿಸ್ತಾನ, ಧರ್ಮದ ಬಗ್ಗೆ ಮಾತನಾಡುತ್ತಾರೆ. 400 ಸೀಟು ಗೆದ್ದರೆ ಸಂವಿಧಾನ ಬದಲಾಯಿಸುತ್ತಾರೆ. ಆಗ ದೇಶದಲ್ಲಿ ಹಿಟ್ಲರ್ ಆಡಳಿತ, ಗಡಾಫಿ ಆಡಳಿತ ಬರುತ್ತದೆ. ಮತ್ತೆ ಮೋದಿ ಅಧಿಕಾರಕ್ಕೆ ಬಂದರೆ ಸಂವಿಧಾನ ತೆಗೆದು ರಾಜಾಡಳಿತ ಪ್ರಾರಂಭಿಸುತ್ತಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಮಾತನಾಡಿ, ಬಿಜೆಪಿ ಭರವಸೆ ಬಿರುಗಾಳಿಯಲ್ಲ, ಕಳೆದಬಾರಿ ಕಡಿಮೆ ಅಂತರದಿಂದ ಸೋಲಾಯಿತು. ಆದರೆ ಈ ಬಾರಿ ಕಾಂಗ್ರೆಸ್ ಕೊಟ್ಟಿರುವ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ಮನೆ ಮನೆಗೆ ಹೋಗಿ ಮನವರಿಕೆ ಮಾಡಬೇಕಾಗಿದೆ.
ಚುನಾವಣೆ ಘೋಷಣೆ ಬಳಿಕ ದೊಡ್ಡ ಬೇಟೆ: ಒಂದೇ ದಿನ 36 ಕೋಟಿ ರು. ಜಪ್ತಿ!
ಇಂಡಿಯಾ ಮೈತ್ರಿ ಕೂಟ ಅಧಿಕಾರಕ್ಕೆ ಬಂದರೆ ರಾಹುಲ್ ಗಾಂಧಿ ಅವರು ಬಡವರ ಬದುಕು ಹಸನು ಮಾಡುತ್ತೇವೆ ಎಂದಿದ್ದಾರೆ. ನರೇಗಾ ತಂದಿದ್ದು ಕಾಂಗ್ರೆಸ್ ಸರ್ಕಾರ, ದೇಶದ ಅಭಿವೃದ್ಧಿ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಆದರೆ ದೇಶ ಆಳುತ್ತಿರುವ ಬಿಜೆಪಿ ಕಾರ್ಪೊರೇಟ್ ಮಾಲೀಕರ ಸಾಲ ಮನ್ನಾ ಮಾಡುತ್ತದೆ. ಆದ್ದರಿಂದ ಕೇಂದ್ರ ಸರ್ಕಾರದಲ್ಲಿರುವ ಸರ್ಕಾರ ತೆಗೆದು ಹಾಕಲು ತೀರ್ಮಾನ ಮಾಡಬೇಕಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ವಿಶ್ರಮಿಸದೆ ಕೆಲಸ ಮಾಡಬೇಕು ಎಂದರು.
ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಈ ಬಾರಿಯ ಚುನಾವಣೆ ಧರ್ಮ ಮತ್ತು ಅಧರ್ಮದ ನಡುವೆ ನಡೆಯುತ್ತದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಕಾಂಗ್ರೆಸ್ ಧರ್ಮದ ಆಡಳಿತ ನಡೆಸುತ್ತಿದೆ. ಕೇಂದ್ರದಲ್ಲಿ ಮೋದಿ ಸರ್ಕಾರ ಸುಳ್ಳು ಭರವಸೆ ನೀಡಿ ಅಧರ್ಮದ ಆಡಳಿತ ನಡೆಸುತ್ತಿದೆ. ಕಾಂಗ್ರೆಸ್ ಅಕೌಂಟ್ ಸೀಜ್ ಮಾಡುವ ಮೂಲಕ ದುರಾಡಳಿತ ಮಾಡುತ್ತಿದೆ. ರಾಜ್ಯದಲ್ಲಿ ೨೮ ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ ಎಂದರು.
ಕಾಂಗ್ರೆಸ್ ಶಾಸಕರಿಗೆ ಬಿಜೆಪಿ 50 ಕೋಟಿ ರು. ಆಫರ್: ಸಿಎಂ ಸಿದ್ದರಾಮಯ್ಯ
ಕೆ. ಬಸವರಾಜ ಹಿಟ್ನಾಳ, ಶಾಂತಣ್ಣ ಮುದಗಲ್ , ಟಿ. ಜನಾರ್ದನ , ಕೆ.ಎಂ. ಸಯ್ಯದ್, ಗೂಳಪ್ಪ ಹಲಿಗೇರಿ, ಅಮ್ಜಾದ್ ಪಟೇಲ, ಗಾಳೆಪ್ಪ ಪೂಜಾರ, ಕಾಟನ್ ಪಾಷಾ, ಯಮನಪ್ಪ ಕಬ್ಬೇರ, ಕೃಷ್ಣಾರಡ್ಡಿ ಗಲಬಿ, ಕೃಷ್ಣ ಇಟ್ಟಂಗಿ, ಪ್ರಸನ್ನ ಗಡಾದ, ತೋಟಪ್ಪ ಕಾಮನೂರು, ಅಮ್ಜಾದ ಪಟೇಲ, ಲತಾ ಗವಿಸಿದ್ದಪ್ಪ ಚಿನ್ನೂರು, ಇಂದಿರಾ ಭಾವಿಕಟ್ಟಿ ಇದ್ದರು. ಸಂಗಣ್ಣ ಕರಡಿ ಅವರನ್ನು ನಾವು ಆಹ್ವಾನ ಮಾಡುತ್ತೇವೆ. ಅವರಿಗೆ ಟಿಕೆಟ್ ತಪ್ಪಿದ ತಕ್ಷಣ ಮಾತನಾಡಿದ್ದೇನೆ. ಅವರಿಗೆ ಅನ್ಯಾಯವಾಗಿದ್ದು, ಪಕ್ಷಕ್ಕೆ ಬರುವಂತೆ ಕೋರುತ್ತೇವೆ. ಬರುವುದು, ಬಿಡುವುದು ಅವರಿಗೆ ಬಿಟ್ಟಿರುವ ವಿಚಾರ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.