ನಾವು ಕೂಡ ರಾಮ ಮತ್ತು ಆಂಜನೇಯನ ಭಕ್ತರೇ: ಬಿಜೆಪಿ ವಿರುದ್ಧ ಸಚಿವ ತಂಗಡಗಿ ವಾಗ್ದಾಳಿ

By Kannadaprabha News  |  First Published Jan 24, 2024, 11:03 PM IST

ಬಿಜೆಪಿ ರಾಮನನ್ನು ರಾಜಕೀಯಕರಣ ಮಾಡುತ್ತಿದೆ, ಧರ್ಮ ಇದ್ದರೆ ಮಾತ್ರ ಬಿಜೆಪಿಗೆ ರಾಜಕಾರಣ ಮಾಡಲು ಸಾಧ್ಯ, ಅವರಿಗೆ ಅಭಿವೃದ್ಧಿ ಮತ್ತು ಬಡವರ ಚಿಂತನೆ ಬೇಕಾಗಿಲ್ಲ ಎಂದು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. 


ಉಡುಪಿ (ಜ.24): ಬಿಜೆಪಿ ರಾಮನನ್ನು ರಾಜಕೀಯಕರಣ ಮಾಡುತ್ತಿದೆ, ಧರ್ಮ ಇದ್ದರೆ ಮಾತ್ರ ಬಿಜೆಪಿಗೆ ರಾಜಕಾರಣ ಮಾಡಲು ಸಾಧ್ಯ, ಅವರಿಗೆ ಅಭಿವೃದ್ಧಿ ಮತ್ತು ಬಡವರ ಚಿಂತನೆ ಬೇಕಾಗಿಲ್ಲ ಎಂದು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ವಿಚಾರದಲ್ಲಿ ನಾವು ಅಂತರ ಕಾಯ್ದುಕೊಂಡಿಲ್ಲ, ನಾವು ಕೂಡ ರಾಮ ಮತ್ತು ಆಂಜನೇಯನ ಭಕ್ತರೇ. ನಾವು ಪ್ರತಿದಿನ ಎದ್ದು ದೇವರಿಗೆ ನಮಸ್ಕಾರ ಮಾಡಿಯೇ ಮನೆಯಿಂದ ಹೊರಡೋದು, ನಾನು ಕಿಷ್ಕಿಂದ ಇರುವ ಜಿಲ್ಲೆಯಲ್ಲಿರುವವನು, ನಾನು ಪ್ರತಿ ವರ್ಷ ಆಂಜನೇಯ ಮಾಲೆ ಹಾಕುತ್ತೇನೆ, ಆದರೆ ಭಕ್ತಿ ಹಾಗೂ ಲೋಕ ಕಲ್ಯಾಣಕ್ಕಾಗಿ ಮಾಲೆ ಹಾಕುತ್ತೇನೆ. ಆದರೆ ಚುನಾವಣೆ ಬಂದಾಗ ಮಾತ್ರ ಬಿಜೆಪಿಗೆ ಧರ್ಮ, ಮಸೀದಿ, ಪಾಕಿಸ್ತಾನ ನೆನಪಾಗುತ್ತದೆ ಎಂದವರು ಬಿಜೆಪಿಗೆ ತಿರುಗೇಟು ನೀಡಿದರು.

ಸಂಸದರಿಂದ ಪ್ರಯತ್ನ ಇಲ್ಲ: ಕನ್ನಡಕ್ಕೆ ಶಾಸ್ತ್ರೀಯ ಮಾನ್ಯತೆ ಸಿಕ್ಕಿದೆ. ಇದರಿಂದ ಕೇಂದ್ರ ಸರ್ಕಾರದಿಂದ ಹೆಚ್ಚು ಅನುದಾನ ಬರಬೇಕಾಗಿತ್ತು. ಬೇರೆ ರಾಜ್ಯಗಳಿಗೆ ಇಂತಹ ಅನುದಾನ ಸಿಕ್ಕಿದೆ. ಆದರೆ ನಮ್ಮ ರಾಜ್ಯದ ಸಂಸದರು ಈ ಅನುದಾನ ನೀಡುವಂತೆ ಮೋದಿ ಅವರಿಗೆ ಒಂದು ಪತ್ರ ಬರೆದಿಲ್ಲ, ಯಾವುದೇ ಪ್ರಯತ್ನವನ್ನೂ ಮಾಡಿಲ್ಲ ಎಂದವರು ಆರೋಪಿಸಿದರು. ಮೋದಿ ಅವರನ್ನು ಕಂಡರೆ ನಮ್ಮ ರಾಜ್ಯದ ಸಂಸದರಿಗೆ ಹೆದರಿಕೆಯಾಗುತ್ತದೆ, ಇನ್ನು ಅನುದಾನ ಕೇಳೋದು ಎಲ್ಲಿಂದ ಬಂತು ಎಂದು ಲೇವಡಿ ಮಾಡಿದ ಸಚಿವರು, ನಮ್ಮ ಸಂಸದರು ಕೇವಲ ಮಾಧ್ಯಮದ ಮುಂದೆ ಮಾತನಾಡುತ್ತಾರೆ. ಆದ್ದರಿಂದ ಈ ತಿಂಗಳ ಅಂತಕ್ಕೆ ನಾನು ದೆಹಲಿಗೆ ಹೋಗುತಿದ್ದೇನೆ ಎಂದರು.

Latest Videos

undefined

ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀವಿ ಅಂದ ಪ್ರಧಾನಿ ಮೋದಿ ವಿಫಲ: ಸಿದ್ದರಾಮಯ್ಯ ಲೇವಡಿ

ಅನುದಾನ ಕೊರತೆ ಇಲ್ಲ: ಕನ್ನಡ ಸಂಸ್ಕೃತಿ ಇಲಾಖೆಯ ಅನುದಾನದಲ್ಲಿ ಜಿಲ್ಲಾವಾರು ತಾರತಮ್ಯವಾಗುತ್ತಿರುವ ಬಗ್ಗೆ ನನಗೆ ಮಾಹತಿ ಇಲ್ಲ, ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ನಾವು ಪಕ್ಷವನ್ನು ನೋಡಿಕೊಂಡು ಅನುದಾನ ಹಂಚಿಕೆ ಮಾಡುತ್ತಿಲ್ಲ, ಆ ರೀತಿ ಮಾಡುವುದು ಬಿಜೆಪಿ ಮಾತ್ರ ಎಂದರು. ಜಿಲ್ಲೆಯಿಂದ ಇಲಾಖೆಯ ಕಾರ್ಯಕ್ರಮಗಳಿಗೆ ಪ್ರಸ್ತಾಪ ಬಂದರೆ ಹಣ ನೀಡುತ್ತೇವೆ. ಈ ಬಾರಿ ಕನ್ನಡ ಸಂಸ್ಕೃತಿ ಇಲಾಖೆಗೆ 40- 50 ಕೋಟಿ ರು. ಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ, ನಮ್ಮಲ್ಲಿ ಅನುದಾನದ ಕೊರತೆ ಇಲ್ಲ, ಬಿಜೆಪಿಗೆ ಮಾತ್ರ ಕೊರತೆ ಕಾಣುತ್ತದೆ ಎಂದು ಟೀಕಿಸಿದರು.

ರಾಮರಾಜ್ಯದ ಪರಿಕಲ್ಪನೆಯಡಿಯಲ್ಲಿ ಸರ್ಕಾರದ ಕೆಲಸ: ಸಚಿವ ದಿನೇಶ್ ಗುಂಡೂರಾವ್

ನೇಮಕ - ಅನ್ಯಾಯ ಇಲ್ಲ: ನಿಗಮ ಮಂಡಳಿ ನೇಮಕದ ಬಗ್ಗೆ ಪಕ್ಷದ ಅಧ್ಯಕ್ಷರು ಮುಖ್ಯಮಂತ್ರಿಗಳು ಹೈಕಮಾಂಡ್ ತೀರ್ಮಾನ ಮಾಡುತ್ತದೆ, ನೇಮಕ ಮಾಡುವಾಗ ಸಮನಾಗಿ ಜಿಲ್ಲಾವಾರು ಹಂಚಬೇಕಾಗುತ್ತದೆ. ಕಾಂಗ್ರೆಸ್ ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಆದ್ದರಿಂದ ಯಾರಿಗೂ ಅನ್ಯಯಾವಾಗದಂತೆ ಶೀಘ್ರ ನೇಮಕ ಮಾಡುತ್ತಾರೆ ಎಂಬ ಭರವಸೆಯನ್ನು ಸಚಿವರು ವ್ಯಕ್ತಪಡಿಸಿದರು. ಅಕಾಡೆಮಿ ಅಧ್ಯಕ್ಷರು ಸದಸ್ಯರು ನೇಮಕಕ್ಕೆ ಈಗಾಗಲೇ ಎರಡು ಸುತ್ತಿನ ಮಾತುಕತೆಯಾಗಿದೆ. ಆದಷ್ಟು ಬೇಗ ನೇಮಕ, ಜವಾಬ್ದಾರಿ ಹಂಚಿಕೆಯಾಗಲಿದೆ. ಸದ್ಯ ಅಕಾಡೆಮಿಗಳಿಗೆ ನಾನೇ ಅಧ್ಯಕ್ಷ ಇದ್ದೇನೆ, ಆದ್ದರಿಂದ ಅಕಾಡೆಮಿಗಳು ಏನೇನು ಕೆಲಸ ಮಾಡಬೇಕೋ, ಮಾಡುತ್ತಿವೆ ಎಂದರು.

click me!