ಹಿಜಾಬ್ ವಿಷಯವನ್ನು ಬಿಜೆಪಿಗರು ಚುನಾವಣಾ ಗಿಮಿಕ್ ಮಾಡಿಕೊಳ್ಳುತ್ತಾರೆ. ಊಟ ಮಾಡುವುದು, ಬಟ್ಟೆ ಧರಿಸುವ ವಿಷಯದಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಇದೆ. ಜಾತ್ಯತೀತ ದೇಶದಲ್ಲಿ ಬಿಜೆಪಿಗರು ಜಾತಿ ಜಗಳ ಹಚ್ಚುವ ಕೆಲಸ ಮಾಡುತ್ತಾರೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಕಾರಟಗಿ (ಡಿ.24): ಹಿಜಾಬ್ ವಿಷಯವನ್ನು ಬಿಜೆಪಿಗರು ಚುನಾವಣಾ ಗಿಮಿಕ್ ಮಾಡಿಕೊಳ್ಳುತ್ತಾರೆ. ಊಟ ಮಾಡುವುದು, ಬಟ್ಟೆ ಧರಿಸುವ ವಿಷಯದಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಇದೆ. ಜಾತ್ಯತೀತ ದೇಶದಲ್ಲಿ ಬಿಜೆಪಿಗರು ಜಾತಿ ಜಗಳ ಹಚ್ಚುವ ಕೆಲಸ ಮಾಡುತ್ತಾರೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು. ಪಟ್ಟಣದಲ್ಲಿ ಶನಿವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಸಿಎಂ ಸಿದ್ದರಾಮಯ್ಯ ಹಿಜಾಬ್ ಕುರಿತು ನೀಡಿದ್ದ ಹೇಳಿಕೆ ಸಮರ್ಥಿಸಿಕೊಂಡು, ಹಿಂದೆ ಒಂದು ಧರ್ಮದ ವಿದ್ಯಾರ್ಥಿನಿಯರು ಶಾಲೆಯಲ್ಲಿ ಹಿಜಾಬ್ ಧರಿಸಿಕೊಂಡು ಹೋಗುವುದನ್ನೆ ದೊಡ್ಡದಾಗಿ ಬಿಂಬಿಸಿದ ಬಿಜೆಪಿ ನಾಯಕರಿಗೆ ಚುನಾವಣೆಯಲ್ಲಿ ಜನತೇ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಶಾಲಾ, ಕಾಲೇಜಿಗೆ ಮುಸ್ಲಿಂ ವಿದ್ಯಾರ್ಥಿನಿಯರು ಸಮವಸ್ತ್ರದ ಜೊತೆಗೆ ಅವರ ಧಾರ್ಮಿಕ ಸಂಪ್ರದಾಯದಂತೆ ಮುಖ ಮುಚ್ಚಿಕೊಳ್ಳುವ ಹಿಜಾಬ್‌ನ್ನು ಧರಿಸುವುದು ರೂಢಿ. ಆದರೆ, ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಹಿಜಾಬ್ ವಿಷಯವನ್ನು ದೊಡ್ಡ ರಾದ್ಧಾಂತವನ್ನಾಗಿ ಬಿಂಬಿಸಿತ್ತು. ಹಿಜಾಬ್ ನಿಷೇಧಿಸಿ ಸರ್ಕಾರ ಆದೇಶಿಸಿತ್ತು. ಇದರ ವಿರುದ್ಧ ಹಿಜಾಬ್ ಧರಿಸುವ ವಿದ್ಯಾರ್ಥಿನಿಯರು ಹೈಕೋರ್ಟ್‌ಗೆ ಹೋದರು. ನಂತರ ಸುಪ್ರೀಂಕೋರ್ಟ್‌ನಲ್ಲಿ ತಮ್ಮ ಹಕ್ಕಿಗಾಗಿ ಕೇಸ್ ದಾಖಲಿಸಿದ್ದಾರೆ. ಕೋರ್ಟ್‌ನಲ್ಲಿ ಈ ವಿಷಯ ಕುರಿತು ವಿಚಾರಣೆ ನಡೆಯುತ್ತಿದೆ. ಆದರೆ, ಸಿಎಂ ಜಾತ್ಯತೀತವಾಗಿ ಯೋಚನೆ ಮಾಡುವ ನಾಯಕರಾಗಿದ್ದಾರೆ. ಯಾರಿಗೂ ಅನ್ಯಾಯವಾಗದಂತೆ ಸರ್ಕಾರ ನಡೆದುಕೊಳ್ಳಬೇಕೆಂಬ ಉದ್ದೇಶದಿಂದ ಹಿಂದಿನ ಸರ್ಕಾರ ಜಾರಿ ಮಾಡಿದ್ದ ಹಿಜಾಬ್ ನಿಷೇಧವನ್ನು ಮರು ಪರಿಶೀಲಿಸಿ ಸಾಧ್ಯವಾದರೆ ಆದೇಶ ಹಿಂದಕ್ಕೆ ಪಡೆಯುವುದಾಗಿ ಹೇಳಿದ್ದಾರೆ ಎಂದರು.
undefined
ಪ್ರತಾಪ ಸಿಂಹ ಗುಹೆ ಸೇರಿದ್ರಾ ಅಬ್ಬರಿಸುತ್ತಿದ್ದ ಸಿ.ಟಿ.ರವಿ ಎಲ್ಲಿ: ಸಚಿವ ತಂಗಡಗಿ ಪ್ರಶ್ನೆ
ಹಿಜಾಬ್ ನಿಷೇಧ ವಾಪಸ್ ಕ್ರಮ ಸರಿ ಇದೆ: ಹಿಜಾಬ್ ವಿಷಯವನ್ನು ತಣ್ಣಗಾಗಿಸುವ ಪ್ರಯತ್ನವನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ಹಿಜಾಬ್ ನಿಷೇಧ ವಾಪಸ್ ಪಡೆದಿರುವುದು ಸರಿಯಾಗಿಯೇ ಇದೆ ಎಂದು ಸಿಎಂ ಹೇಳಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪು ಮತ್ತು ಊಟ ಪ್ರತಿಯೊಬ್ಬರ ಹಕ್ಕು. ಅದರಲ್ಲಿ ಹಸ್ತಕ್ಷೇಪ ಸರಿಯಲ್ಲ. ಧರ್ಮ ಎಳೆದು ತಂದು ಶಾಂತಿ ಕದುಡುವುದು ಸರಿಯಲ್ಲ. ಅದು ಅವರವರ ಹಕ್ಕು ಎನ್ನುವುದನ್ನು ಸಿಎಂ ಹೇಳಿದ್ದಾರೆ ಎಂದರು.
ಆರೆಸ್ಸೆಸ್ಸಿಗರು ಈ ಹಿಂದೆ ಚಡ್ಡಿ ಹಾಕುತ್ತಿದ್ದರು. ಈಗ ಪ್ಯಾಂಟ್ ಹಾಕುತ್ತಿದ್ದಾರೆ. ಅದ್ಯಾವುದನ್ನೂ ನಾವು ಪ್ರಶ್ನಿಸುವುದಿಲ್ಲ. ಉಡುಪು ಅವರವರ ಹಕ್ಕಾಗಿರುವುದರಿಂದ ಅದನ್ನು ವಿವಾದ ಮಾಡಿ, ರಾಜಕಾರಣ ಮಾಡುವುದಕ್ಕೆ ನಮ್ಮ ವಿರೋಧವಿದೆ ಎಂದರು. ಬರದ ಕುರಿತು ಮಾತನಾಡುವುದಕ್ಕೆ ಕೇಂದ್ರ ಸರ್ಕಾರಕ್ಕೆ ಯಾವುದೇ ನೈತಿಕತೆ ಇಲ್ಲ. ರಾಜ್ಯವೇ ಬರದಿಂದ ತತ್ತರಿಸಿದರೂ ಕೇಂದ್ರ ನೈಯಾಪೈಸೆ ನೀಡುತ್ತಿಲ್ಲ. ಆದರೂ ರಾಜ್ಯ ಸರ್ಕಾರ ರಾಜ್ಯದ ರೈತರಿಗೆ ತೊಂದರೆ ಆಗಬಾರದೆಂದು ಮಧ್ಯಂತರ ಪರಿಹಾರ ನೀಡಿದೆ. ರಾಜ್ಯದ ಬರ ಕುರಿತು ಸ್ಪಂದಿಸುವುದಕ್ಕೆ ಕೇಂದ್ರಕ್ಕೆ ಮನಸ್ಸೇ ಇಲ್ಲ ಎಂದರು.
ಹೊಗೆ ಬಾಂಬ್ ಬಗ್ಗೆ ಪ್ರಧಾನಿ ಮಾತನಾಡದಿರುವುದು ದುರಂತ: ಸಚಿವ ಶಿವರಾಜ ತಂಗಡಗಿ
ರಾಜ್ಯದ ಕೃಷಿ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ನರೇಗಾ ಯೋಜನೆಯಲ್ಲಿ ಮಾನವ ದಿನಗಳ ನಿಗದಿಯನ್ನು 150ಕ್ಕೆ ಹೆಚ್ಚಳ ಮಾಡವಂತೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಸಿದ್ದರಾಮಯ್ಯ ವಿಮಾನದಲ್ಲಿ ಸುತ್ತಾಡುವುದನ್ನು ಬಿಜೆಪಿ ವಿವಾದ ಮಾಡುತ್ತಿದೆ. ಇದರಲ್ಲಿಯೂ ರಾಜಕೀಯ ಮಾಡುವುದು ಸರಿಯಲ್ಲ ಎಂದರು.