
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಸೆ.29): ಇಲ್ಲದ ವಿಷಯಗಳನ್ನು ಸುಮ್ಮನೇ ಹೇಳಿ ಇಡೀ ವ್ಯವಸ್ಥೆಯನ್ನು ಹಾಳು ಮಾಡುವಂತಹ ಹಿಟ್ ಅಂಡ್ ರನ್ ಸಂಸ್ಕೃತಿ ಬಿಜೆಪಿ ಹಾಗೂ ಜೆಡಿಎಸ್ ಗಳಿಂದ ಇತ್ತೀಚೆಗೆ ಶುರುವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ ಅವರು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿರುವ ಅವರು ನನ್ನ ಬಳಿ ಇರುವ ದಾಖಲೆಗಳನ್ನು ಬಿಡುಗಡೆ ಮಾಡಿದರೆ 7 ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ ಎಂಬ ಕೇಂದ್ರ ಸಚಿವ ಕುಮಾರ ಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಹಿಂದೇ ಈ ರಾಜಕಾರಣಿ ಇಲ್ಲೇ ಜೇಬಲ್ಲೇ ಇದೆ ತೆಗೆಯುತ್ತೇನೆ ತೆಗೆಯುತ್ತೇನೆ ಎನ್ನುತ್ತಿದ್ದವರು. ಅದೆಲ್ಲ ನಿಮಗೂ ಗೊತ್ತಿದೆ, ಅದರ ಬಗ್ಗೆ ನಾನೇನು ಹೇಳುವುದಿಲ್ಲ ಎಂದು ವ್ಯಂಗ್ಯವಾಡಿದರು. ಇಲ್ಲದ ವಿಷಯಗಳನ್ನು ಸುಮ್ಮನೆ ಹೇಳಿ ಇಡೀ ವ್ಯವಸ್ಥೆಯನ್ನು ಹಾಳುಮಾಡಬಾರದು. ಏನೇ ಕೆಲಸ ಮಾಡಿದರೂ ಅದು ಸರಿಯಿಲ್ಲ ಎನ್ನುವಂತ ಸ್ಥಿತಿ ಇರಬಾರದು. ಅದಕ್ಕೆ ಶಾಸಕರು ಸಚಿವರು ಇಲ್ಲ ನಾನು ಒಳ್ಳೆಯ ಕೆಲಸವನ್ನೇ ಮಾಡಿದ್ದೇನೆ ಎನ್ನುತ್ತಾರೆ. ಈ ರೀತಿಯ ಹಿಟ್ ಅಂಡ್ ರನ್ ಕೆಲಸ ಮಾಡಬಾರದು. ಪ್ರತಿಯೊಂದು ವಿಷಯದಲ್ಲೂ ಅಕ್ರಮವಾಗಿದೆ ಅಂತ ಸುಮ್ಮನೇ ಆರೋಪಿಸಬಾರದು. ಇಂತಹ ರಾಜಕೀಯ ರಾಜ್ಯಕ್ಕೂ ಒಳ್ಳೆಯದಲ್ಲ, ದೇಶ, ಸಾರ್ವಜನಿಕರಿಗೂ ಒಳ್ಳೆಯದಲ್ಲ.
ನೀವು ಗಾಜಿನ ಮನೆಯಲ್ಲಿ ಕುಳಿತ್ತಿದ್ದೀರಿ, ಬೇರೆಯವರ ಮನೆಗೆ ಕಲ್ಲು ಹೊಡೆಯುವ ಮೊದಲು ಯೋಚಿಸಿ ಎಂದು ಕೇಂದ್ರ ಸಚಿವ ಹೆಚ್ ಡಿಕೆ ಗೆ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ತಿರುಗೇಟು ನೀಡಿದರು. ಇದೇ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಪೊನ್ನಣ್ಣ, ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂಬ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸಲಹೆಯನ್ನು ನಾವು ಗೌರವಿಸುತ್ತೇವೆ. ಆದರೆ ಅದನ್ನು ಒಪ್ಪಬೇಕೆಂದೇನು ಇಲ್ಲ ಎಂದು ಸಿಎಂ ಕಾನೂನು ಸಲಹೆಗಾರರ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್, ಜೆ.ಪಿ.ನಡ್ಡಾ ಸೇರಿ ಕೇಂದ್ರ ಸಚಿವರುಗಳು ರಾಜೀನಾಮೆ ಕೊಡಲಿ: ಸಚಿವ ಶರಣ ಪ್ರಕಾಶ್ ಪಾಟೀಲ್
ಮಡಿಕೇರಿಯಲ್ಲಿ ಮಾತನಾಡಿದ ಅವರು ಸಂತೋಷ್ ಹೆಗ್ಡೆಯವರು ನಿವೃತ್ತ ನ್ಯಾಯಮೂರ್ತಿಗಳು, ಅವರು ಹೇಳುತ್ತಾರೆ. ಆದರೆ ಬ್ಯಾನ್ ಆಗಿರುವ ಕಂಪೆನಿಗಳ ಹೆದರಿ, ಬೆದರಿಸಿ ಚುನಾವಣಾ ಬಾಂಡ್ ಸ್ವೀಕರಿಸಿದ್ದಾರೆ. ಅವರು ಕೇಂದ್ರ ವಿತ್ತ ಸಚಿವರು. ಇಬ್ಬರು ಕೇಂದ್ರದ ಸಚಿವರಿದ್ದಾರೆ ಅವರು ರಾಜೀನಾಮೆ ಕೊಡ್ತಾರಾ.? ಮುಡಾ ಪ್ರಕರಣದಲ್ಲಿ ಸಿಎಂ ಅವರ ಕೈವಾಡ ಒಂದಿನಿತು ಏನೇನು ಇಲ್ಲ. ಒಂದಿನಿತು ಏನಾದರೂ ತಪ್ಪಿದ್ದರೆ, ಅದನ್ನು ತೋರಿಸಲಿ, ರಾಜೀನಾಮೆ ಕೊಡೋಣ ಎಂದು ಪೊನ್ನಣ್ಣ ಸವಾಲು ಹಾಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.