ಈ ಬಾರಿ ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಶಹಾಪುರ ಮತಕ್ಷೇತ್ರದಿಂದ ಲೀಡ್ (ಹೆಚ್ಚಿನ ಮತಗಳು) ಕೊಡದಿದ್ದರೆ, ನಾನು ಆ ಕುರ್ಚಿ (ಸಚಿವ ಸ್ಥಾನ) ಬಿಟ್ಟು ಬಿಡಬೇಕಾಗುತ್ತದೆ. ಲೀಡ್ ಕೊಡಲಿಲ್ಲಾಂದ್ರ ಅಲ್ಲೆ (ಹೈಕಮಾಂಡ್) ಮುಖ ಹೇಗೆ ತೋರಿಸಬೇಕು..?
ಯಾದಗಿರಿ (ಏ.17): ಈ ಬಾರಿ ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಶಹಾಪುರ ಮತಕ್ಷೇತ್ರದಿಂದ ಲೀಡ್ (ಹೆಚ್ಚಿನ ಮತಗಳು) ಕೊಡದಿದ್ದರೆ, ನಾನು ಆ ಕುರ್ಚಿ (ಸಚಿವ ಸ್ಥಾನ) ಬಿಟ್ಟು ಬಿಡಬೇಕಾಗುತ್ತದೆ. ಲೀಡ್ ಕೊಡಲಿಲ್ಲಾಂದ್ರ ಅಲ್ಲೆ (ಹೈಕಮಾಂಡ್) ಮುಖ ಹೇಗೆ ತೋರಿಸಬೇಕು..? ಜಿಲ್ಲೆಯ ಸುರಪುರ ತಾಲೂಕಿನ, ಶಹಾಪುರ ಮತಕ್ಷೇತ್ರದ ಕೆಂಭಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರದ ಬಹಿರಂಗ ಸಭೆಯಲ್ಲಿ ರಾಜ್ಯ ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರ ಮೇಲಿನಂತಹ ಮಾತುಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.
ಸಚಿವರುಗಳಿಗೆ ಆಯಾ ಲೋಕಸಭೆ ಚುನಾವಣೆಯ ಉಸ್ತುವಾರಿ ನೀಡಿದ್ದು, ಪಕ್ಷದ ಅಭ್ಯರ್ಥಿಗಳ ಗೆಲ್ಲಿಸದೇ ಹೋದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯುವ ಮೂಲಕ ಹೈಕಮಾಂಡ್ ಅವರ (ಸಚಿವರ) ತಲೆದಂಡ ಪಡೆಯಲಿದೆಯೇ ಅನ್ನೋ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಚರ್ಚೆಗೊಳಗಾಗುತ್ತಿವೆ. ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಶಹಾಪುರ ವಿಧಾನಸಭೆ ಸಚಿವರ ತವರು ಕ್ಷೇತ್ರ. ವಿಧಾನಸಭೆ ಚುನಾವಣೆಯಲ್ಲಿ ಕೆಂಭಾವಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತಗಳ (ಲೀಡ್) ಕೊಡುತ್ತಿದ್ದರೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅಭ್ಯರ್ಥಿಗೆ ಲೀಡ್ ಕೊಟ್ಟಿದ್ದಾರೆ.
ತಮ್ಮ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬರುವ ಮತಗಳು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೇಗೆ ಲೀಡ್ ಆಗುತ್ತವೆ ಅನ್ನೋದು ದರ್ಶನಾಪುರ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಪ್ರಶ್ನೆಯಿಂದ ಮುಜುಗರದ ಸನ್ನಿವೇಶ ಎದುರಾಗಿತ್ತು. ಹೀಗಾಗಿ, ಕೆಂಭಾವಿಯಲ್ಲಿ ಅವರು ಮಾತನಾಡುವ ವೇಳೆ ಕೊಂಚ ಭಾವುಕರಾದಂತಿದ್ದರು. ಲೋಕಸಭೆ ಚುನಾವಣೆ ಫಲಿತಾಂಶ ತಮ್ಮ ಕುರ್ಚಿ (ಮಂತ್ರಿಸ್ಥಾನ) ಉಳಿವಿಕೆ ಹಾಗೂ ಪ್ರತಿಷ್ಠೆಯ ಪ್ರಶ್ನೆಯಾಗಿ ಅವರಿಗೆ ಕಾಡಿದಂತಿತ್ತು. ಕೆಂಭಾವಿಯಲ್ಲಿ ಮಾತನಾಡುತ್ತಿದ್ದ ಸಚಿವ ದರ್ಶನಾಪುರ, ಲೀಡ್ ಬರಲಿಲ್ಲಾಂದ್ರ ಆ ಕುರ್ಚಿ ಅವ್ಟ್ಗೆ ಬಿಟ್ಬಿಡಬೇಬೇಕಾಗ್ತದ.
ಗ್ಯಾರಂಟಿ ಬಿಟ್ಟು ಸಿದ್ದರಾಮಯ್ಯ ಸರ್ಕಾರ ಏನ್ಮಾಡಿದೆ: ಮುಖಾಮುಖಿಯಲ್ಲಿ ವಿಜಯೇಂದ್ರ ಹೇಳಿದ್ದೇನು?
ನಾವೇ ಲೀಡ್ ಕೊಡಲಿಲ್ಲಾಂದ್ರ ಅಲ್ಲೆ ಹೋಗಿ ಏನ್ ಮಾರಿ (ಮುಖ) ತೋರಿಸ್ಬೇಕು? ಖರೇ ಹೇಳಬೇಕಂದ್ರ ಈ ಬಾರಿ ನನಗೆ ಮಂತ್ರಿ ಸ್ಥಾನ ಕೊಡಬಾರ್ದಿತ್ತು. ಹೋದ ಸಲ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 19 ಸಾವಿರ ಮತಗಳು ಲೀಡ್ ಬಂದಿದ್ದವು. ಅದಕ್ಕಾಗಿ, ಕೈಮಗಿದು ಕೇಳುತ್ತೇನೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಲೀಡ್ ಕೊಡಿ. ರಾಯಚೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಮಾರ ನಾಯಕ್ ಅವರಿಗೆ ಹಾಗೂ ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಅವರಿಗೆ ಭಾರಿ ಲೀಡ್‌ನಿಂದ ಗೆಲ್ಲಿಸುವಂತೆ ಮನವಿ ಮಾಡಿದರು.