ಗ್ಯಾರಂಟಿ ಬಿಟ್ಟು ಸಿದ್ದರಾಮಯ್ಯ ಸರ್ಕಾರ ಏನ್ಮಾಡಿದೆ: ಮುಖಾಮುಖಿಯಲ್ಲಿ ವಿಜಯೇಂದ್ರ ಹೇಳಿದ್ದೇನು?

By Kannadaprabha News  |  First Published Apr 17, 2024, 4:38 AM IST

ಐದು ತಿಂಗಳ ಹಿಂದೆ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಂಡ ವಿಜಯೇಂದ್ರ ಅವರು ಈಗ ಸತತವಾಗಿ ರಾಜ್ಯವನ್ನು ಸುತ್ತಿ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರು ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾಗಿ ವಿಶೇಷ ಸಂದರ್ಶನ ನೀಡಿದರು.


ವಿಜಯ್ ಮಲಗಿಹಾಳ

ಬೆಂಗಳೂರು (ಏ.17): ಕಳೆದ 2019ರ ಲೋಕಸಭಾ ಚುನಾವಣೆಗೆ ರಾಜ್ಯ ಬಿಜೆಪಿಯ ನೇತೃತ್ವ ವಹಿಸಿಕೊಂಡಿದ್ದು ಅಂದಿನ ರಾಜ್ಯಾಧ್ಯಕ್ಷರಾಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು. ಈಗಿನ 2024ರ ಲೋಕಸಭಾ ಚುನಾವಣೆಗೆ ರಾಜ್ಯ ಬಿಜೆಪಿಯ ಚುಕ್ಕಾಣಿ ಹಿಡಿದಿದ್ದು ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ. ಅಂದು ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ರಾಜ್ಯದಲ್ಲಿ ದಾಖಲೆ ಎಂಬಂತೆ 25 ಲೋಕಸಭಾ ಸ್ಥಾನಗಳನ್ನು ಗಳಿಸಿತ್ತು. ಈಗ ಆ ದಾಖಲೆ ಮುರಿಯುವ ಸಂಕಲ್ಪದೊಂದಿಗೆ ವಿಜಯೇಂದ್ರ ಹೆಜ್ಜೆ ಹಾಕುತ್ತಿದ್ದಾರೆ. ಕಿರಿಯ ವಯಸ್ಸಿಗೆ ಕಳೆದ ಐದು ತಿಂಗಳ ಹಿಂದೆ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಂಡ ವಿಜಯೇಂದ್ರ ಅವರು ಈಗ ಸತತವಾಗಿ ರಾಜ್ಯವನ್ನು ಸುತ್ತಿ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರು ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾಗಿ ವಿಶೇಷ ಸಂದರ್ಶನ ನೀಡಿದರು.

Tap to resize

Latest Videos

*ಕಳೆದ ವಿಧಾನಸಭಾ ಚುನಾವಣೆಯಲ್ಲಿನ ಹೀನಾಯ ಸೋಲಿನ ಹತ್ತು ತಿಂಗಳ ನಂತರ ಈಗ ಲೋಕಸಭಾ ಚುನಾವಣೆ ಎದುರಿಸುತ್ತಿದ್ದೀರಿ. ಮತದಾರರಿಗೆ ಹೇಗೆ ಮನವರಿಕೆ ಮಾಡಿಕೊಡುತ್ತೀರಿ?
-ಮತದಾರರಿಗೆ ಮನವರಿಕೆ ಮಾಡಿಕೊಡುವುದು ಒಂದು ಭಾಗ. ಮತದಾರರಿಗೇ ಮನವರಿಕೆಯಾಗುವುದು ಮತ್ತೊಂದು ಭಾಗ. ಕಳೆದ ಚುನಾವಣೆಯಲ್ಲಿನ ವಿಷಯ, ಮಾನದಂಡಗಳೇ ಬೇರೆ. ಅದರಲ್ಲಿ ಪ್ರಾದೇಶಿಕ ವಿಷಯಗಳು ಹೆಚ್ಚಿಗೆ ಇರುತ್ತವೆ. ನಮ್ಮ ಆಗಿನ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆ ಇದ್ದಿರಬಹುದು. ಹೀಗಾಗಿ ಹಿನ್ನಡೆ ಆಗಿದೆ. ಇದನ್ನು ಹೇಳುವುದಕ್ಕೆ ನನಗೇನೂ ಮುಜುಗರವಿಲ್ಲ. ಆದರೆ, ಲೋಕಸಭಾ ಚುನಾವಣೆ ಬಂದಾಗ ಜನರ ಚಿಂತನೆ, ಮಾನದಂಡಗಳೇ ಬೇರೆಯಾಗುತ್ತವೆ. ಜನರ ಮನಸ್ಸಿನಲ್ಲಿ ಪ್ರಧಾನಿ ಮೋದಿ ಅವರ ಆಡಳಿತ ವೈಖರಿ ಬಗ್ಗೆ ಸ್ಪಷ್ಟವಾದ ಕಲ್ಪನೆಯಿದೆ.

ರಾಮನಗರವೇ ಕಣ್ಣಂದವರು ಜಿಲ್ಲೆಯೇ ಬಿಟ್ಟು ಹೋದರಲ್ಲ: ಎಚ್‌ಡಿಕೆ ವಿರುದ್ಧ ಡಿ.ಕೆ.ಸುರೇಶ್ ಪರೋಕ್ಷ ವಾಗ್ದಾಳಿ

*ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಿಜೆಪಿಗೆ ದೊಡ್ಡ ಬಂಡೆಯಾಗಿ ನಿಂತಿಲ್ಲವೇ? ಅವುಗಳನ್ನು ಹೇಗೆ ಎದುರಿಸುವಿರಿ?
-ಗ್ಯಾರಂಟಿ ಯೋಜನೆಗಳ ಸರಿ ತಪ್ಪುಗಳ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಆದರೆ, ಗ್ಯಾರಂಟಿ ಯೋಜನೆಗಳನ್ನು ಹೊರತುಪಡಿಸಿ ಕಳೆದ ಹತ್ತು ತಿಂಗಳಲ್ಲಿ ರಾಜ್ಯ ಸರ್ಕಾರ ಏನು ಮಾಡಿದೆ ಎನ್ನುವುದನ್ನು ಕಾಂಗ್ರೆಸ್ ಹೇಳಲಿ. ಬರಿ ಗ್ಯಾರಂಟಿ ಗ್ಯಾರಂಟಿ ಎಂದರೆ ಅಭಿವೃದ್ಧಿ ಹೇಗಾಗುತ್ತದೆ. ಜನಪ್ರತಿನಿಧಿಗಳು ಹೇಗೆ ತಮ್ಮ ಕ್ಷೇತ್ರಗಳಲ್ಲಿ ತಲೆ ಎತ್ತಿಕೊಂಡು ಓಡಾಡಬೇಕು. ಗ್ಯಾರಂಟಿ ಜತೆಗೆ ತಮ್ಮ ಬದುಕನ್ನು ಕಟ್ಟಿಕೊಡುವುದಕ್ಕೆ ಈ ಸರ್ಕಾರ ಏನು ಮಾಡಿದೆ ಎಂಬುದನ್ನೂ ಯೋಚನೆ ಮಾಡುತ್ತಾರೆ.

*ರಾಜ್ಯದ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿಕೊಂಡು ಬಂದ ನಿಮಗೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಿಗೂ ಕೇಂದ್ರದ ಬಿಜೆಪಿ ಸರ್ಕಾರದ ಮೋದಿ ಗ್ಯಾರಂಟಿಗಳಿಗೂ ವ್ಯತ್ಯಾಸವಿದೆಯೇ?
-ಮೋದಿ ಗ್ಯಾರಂಟಿ ಎಂದರೆ ಕಳೆದ 10 ವರ್ಷಗಳಲ್ಲಿ ನಡೆದ 2 ಲೋಕಸಭಾ ಚುನಾವಣೆಯ ಪ್ರಣಾಳಿಕೆಗಳಲ್ಲಿ ನೀಡಿದ ಭರವಸೆಗಳನ್ನು ಮೋದಿ ಸರ್ಕಾರದ ಅವಧಿಯಲ್ಲಿ ಈಡೇರಿಸಿದ್ದೇವೆ ಎಂಬುದು. ಮೋದಿ ಗ್ಯಾರಂಟಿ ಎಂದರೆ ಕಾಂಗ್ರೆಸ್ ನಾಯಕರು ಹೇಳುವಂತೆ ಅವರ ಗ್ಯಾರಂಟಿಗಳನ್ನು ಕದ್ದಿದ್ದು ಅಲ್ಲ. ಕಾಂಗ್ರೆಸ್ ಗ್ಯಾರಂಟಿ ಎಂದರೆ ತಾತ್ಕಾಲಿಕ ಗ್ಯಾರಂಟಿ. ಮೋದಿ ಗ್ಯಾರಂಟಿ ಎಂದರೆ ಶಾಶ್ವತ.

*ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನ ಬರದಿದ್ದರೆ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಲಿದ್ದಾರೆ ಎಂಬ ಚರ್ಚೆ ಆರಂಭವಾಗಿದೆಯಲ್ಲ?
-ಕಾಂಗ್ರೆಸ್‌ ಪಕ್ಷದ ಕೆಲವು ಶಾಸಕರೇ ಈ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಶಾಸಕರು ಹೇಳುತ್ತಿದ್ದಾರೆ ಎಂದರೆ ಅದು ಅವರ ಮಾತುಗಳಲ್ಲ. ಅವರ ಬಾಯಿಂದ ಹೇಳಿಸುತ್ತಿದ್ದಾರೆ. ಪರೋಕ್ಷವಾಗಿ ಮತದಾರರನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ.

*ಮೋದಿಯ ಗ್ಯಾರಂಟಿ ಎನ್ನುವ ಬದಲು ಬಿಜೆಪಿಯ ಗ್ಯಾರಂಟಿ ಎಂದೂ ಹೇಳಬಹುದಿತ್ತಲ್ಲವೇ? ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬುದು ಇಲ್ಲಿ ತಿರುಗುಮುರುಗು ಆದಂತಿದೆ?
-ಮೋದಿ ಎಂದರೆ ಕೇವಲ ಪ್ರಧಾನಿ ಅಷ್ಟೇ ಅಲ್ಲ. ಮೋದಿ ಎಂದರೆ ಅಭಿವೃದ್ಧಿ. ಮೋದಿ ಎಂದರೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವವರು. ಮೋದಿ ಎಂದರೆ ತಮ್ಮ ಕುಟುಂಬವನ್ನು ಮರೆತು ದೇಶಕ್ಕಾಗಿ ದುಡಿಯುತ್ತಿರುವಂಥವರು. ಮೋದಿ ಎಂದರೆ ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಹೆಸರು. ಮೋದಿ ಅವರ ಪ್ರತಿಯೊಂದು ನಿರ್ಧಾರ, ಆಲೋಚನೆ ಪಕ್ಷಕ್ಕೆ ಪೂರಕವಾಗಿಯೇ ಇದೆ. ಹೀಗಾಗಿ, ಮೋದಿ ಗ್ಯಾರಂಟಿ ಎನ್ನುವುದರಲ್ಲಿ ತಪ್ಪೇನಿಲ್ಲ.

*ರಾಜ್ಯಾಧ್ಯಕ್ಷರಾದ ಬಳಿಕ ನಿಮ್ಮ ನೇತೃತ್ವದಲ್ಲಿ ನಡೆಯುತ್ತಿರುವ ಮೊದಲ ಸಾರ್ವತ್ರಿಕ ಚುನಾವಣೆ ಇದು. ಹೀಗಾಗಿ, ನಿಮ್ಮ ನಾಯಕತ್ವದ ಯಶಸ್ಸಿಗೆ ಈ ಚುನಾವಣೆ ಅಳತೆಗೋಲು ಆಗಲಿದೆಯೇ?
-ಈ ಚುನಾವಣೆ ನನಗೆ ಮುಖ್ಯ ಎನ್ನುವುದಕ್ಕಿಂತ ದೇಶದ ಜನತೆಗೆ ಮುಖ್ಯ. ರಾಷ್ಟ್ರೀಯ ನಾಯಕರು ನನಗೆ ಇಷ್ಟು ಸಣ್ಣ ವಯಸ್ಸಿಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೆಚ್ಚು ಸ್ಥಾನ ಗೆಲ್ಲಬೇಕು ಮತ್ತು ಪಕ್ಷದ ಸಂಘಟನೆಯನ್ನು ಬಲಪಡಿಸಬೇಕು ಎಂಬ ಗುರಿಯನ್ನು ನೇಮಕ ವೇಳೆಯೇ ರಾಷ್ಟ್ರೀಯ ನಾಯಕರು ನನಗೆ ನೀಡಿದ್ದರು. ಅದರಲ್ಲಿ ನಾನು ಯಶಸ್ವಿಯಾಗುತ್ತೇನೆ ಎಂಬ ವಿಶ್ವಾಸವಿದೆ.

*ಈ ಚುನಾವಣೆಯ ಫಲಿತಾಂಶದಿಂದ ನಿಮ್ಮ ನಾಯಕತ್ವದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲವೇ?
-ರಾಜ್ಯದ 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನೂ ಬಿಜೆಪಿ ಗೆಲ್ಲಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ನಾನು ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ಮಾಡುತ್ತಿದ್ದೇನೆ. ಕಾರ್ಯಕರ್ತರಲ್ಲಿನ ವಿಶ್ವಾಸದ ಆಧಾರದ ಮೇಲೆ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಇದು ಉತ್ಪ್ರೇಕ್ಷೆ ಎನಿಸಬಹುದು. ಆದರೆ, ವಾಸ್ತವ.

*ನೀವು 28 ಲೋಕಸಭಾ ಕ್ಷೇತ್ರಗಳನ್ನೂ ಗೆಲ್ಲುತ್ತೇವೆ ಎನ್ನುತ್ತೀರಿ. ನಿಮ್ಮ ಮಿತ್ರ ಪಕ್ಷ ಜೆಡಿಎಸ್‌ನ ವರಿಷ್ಠ ನಾಯಕ ಎಚ್.ಡಿ.ದೇವೇಗೌಡರು ಪ್ರಧಾನಿ ಮೋದಿ ಪಕ್ಕದಲ್ಲೇ ಕುಳಿತು 24 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದಿದ್ದಾರಲ್ಲ?
-ದೇವೇಗೌಡರು ಮಾಜಿ ಪ್ರಧಾನಿಗಳು. ಅವರದೇ ಆದ ಅಭಿಪ್ರಾಯ ಇರುತ್ತದೆ. ನಾನು ಅದನ್ನು ಗೌರವಿಸುತ್ತೇನೆ. ಆದರೆ, 28 ಕ್ಷೇತ್ರಗಳಲ್ಲೂ ಗೆಲುವು ಸಾಧಿಸುವ ವಿಶ್ವಾಸ ನನಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿಯೇ ಮುನ್ನಡೆ ಸಾಗಿದೆ.

*ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದ್ದೀರಿ. ಈ ಮೈತ್ರಿಯಿಂದ ನಿಮಗೆ ಅನುಕೂಲವಾಗಲಿದೆಯೇ ಅಥವಾ ಜೆಡಿಎಸ್‌ಗೆ ಲಾಭವಾಗುತ್ತಾ?
-ನಮ್ಮಿಂದ ಅವರಿಗೆ ಸಹಾಯವಾಗುತ್ತೆ. ಅವರಿಂದ ನಮಗೂ ಅನುಕೂಲವಾಗುತ್ತಿದೆ. ಇದು ಇಬ್ಬರಿಗೂ ಗೆಲುವು ತಂದು ಕೊಡಲಿದೆ.

*ಉಭಯ ಪಕ್ಷಗಳ ನಡುವಿನ ಲೋಕಸಭಾ ಕ್ಷೇತ್ರಗಳ ಹಂಚಿಕೆ ಬಗ್ಗೆ ಬಿಜೆಪಿ ವರಿಷ್ಠರು ಕೊನೆವರೆಗೂ ‘ರಹಸ್ಯ’ ಕಾಪಾಡಿಕೊಂಡಿದ್ದು ಯಾಕೆ? ಅಂತಿಮ ಹಂತದಲ್ಲೂ ಅಧಿಕೃತ ಮಾಹಿತಿಯೇ ಹೊರಬೀಳಲಿಲ್ಲವಲ್ಲ?
-ಈ ವಿಷಯದಲ್ಲಿ ವಿಳಂಬವಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಹಾಗಂತ ಬಹಳಷ್ಟು ಗೊಂದಲ ಇತ್ತು ಎಂದಲ್ಲ. ಜೆಡಿಎಸ್‌ ಪಕ್ಷದವರು ಕೋಲಾರ ಕೇಳಿದ್ದರು. ಅಲ್ಲಿ ಹಾಲಿ ಸಂಸದ ಬಿಜೆಪಿಯವರೇ ಇದ್ದುದರಿಂದ ಕೊಡಬಾರದು ಎಂಬ ನಿಲುವು ನಮ್ಮದಾಗಿತ್ತು. ಇದೊಂದು ಬಿಟ್ಟರೆ ಬೇರೆ ಯಾವುದೇ ವ್ಯತ್ಯಾಸ ಇರಲಿಲ್ಲ.

*ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿ ತಾತ್ಕಾಲಿಕವೇ ಅಥವಾ ಮುಂದಿನ ವಿಧಾನಸಭಾ ಚುನಾವಣೆವರೆಗೂ ಮುಂದುವರೆಯಲಿದೆಯೇ?
-ಉಭಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಆ ರೀತಿ ಅಪೇಕ್ಷೆಯಿದೆ. ಅಂತಿಮವಾಗಿ ವರಿಷ್ಠರ ಮಟ್ಟದಲ್ಲಿ ಏನು ಚರ್ಚೆಯಾಗಿದೆ ಎಂಬುದು ಗೊತ್ತಿಲ್ಲ. ಇದು ತಾತ್ಕಾಲಿಕ ಎನ್ನುವುದನ್ನು ನಾನು ಒಪ್ಪುವುದಿಲ್ಲ. ದೂರದೃಷ್ಟಿ ಇಟ್ಟುಕೊಂಡು ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಭಾವಿಸಿದ್ದೇನೆ.

*ರಾಜಕಾರಣದಲ್ಲಿ ಸ್ನೇಹ ಮತ್ತು ದ್ವೇಷ ಆಕಸ್ಮಿಕವೇ ಅಥವಾ ಅನಿವಾರ್ಯವೇ?
-ಕೆಲವೊಂದು ಸಂದರ್ಭದಲ್ಲಿ ಆಕಸ್ಮಿಕವೂ ಆಗಬಹುದು. ಅನಿವಾರ್ಯವೂ ಆಗಬಹುದು. ಹೀಗೆಯೇ ಎಂದು ನಿರ್ದಿಷ್ಟವಾಗಿ ಹೇಳುವುದಕ್ಕೆ ಆಗುವುದಿಲ್ಲ. ನೀವು ಕೆ.ಎಸ್‌.ಈಶ್ವರಪ್ಪ ಅವರನ್ನು ಉದ್ದೇಶವಾಗಿಟ್ಟುಕೊಂಡು ಪ್ರಸ್ತಾಪಿಸಿರಬಹುದು. ಕೆಲವರಿಗೆ ತಪ್ಪು ಮಾಹಿತಿ ಯಾರಿಂದ ತಲುಪಿದೆಯೋ ಎಂಬುದು ಅವರಿಗೇ ಗೊತ್ತು.

*ಹಿರಿಯ ನಾಯಕ ಈಶ್ವರಪ್ಪ ಅವರು ಏಕಾಏಕಿ ಈ ಮಟ್ಟದಲ್ಲಿ ನಿಮ್ಮ ಕುಟುಂಬದ ವಿರುದ್ಧ ಹರಿಹಾಯುತ್ತಿರುವುದು ಯಾಕೆ?
-ನೋಡಿ ಈಶ್ವರಪ್ಪ ಅವರ ವಿಚಾರದಲ್ಲಿ ಪಕ್ಷದ ವರಿಷ್ಠರಿಗೆ ಸ್ಪಷ್ಟತೆಯಿತ್ತು. ಉದಾಹರಣೆಗೆ, ಯಲಹಂಕದ ಶಾಸಕ ವಿಶ್ವನಾಥ್ ಅವರು ಪುತ್ರನನ್ನು ಕಣಕ್ಕಿಳಿಸುವ ಸಂಬಂಧ ಆರೇಳು ತಿಂಗಳಿಂದ ಪ್ರಯತ್ನ ನಡೆಸುತ್ತಿದ್ದರು. ಸಿಗಲಿಲ್ಲ. ಹೊಳಲ್ಕೆರೆ ಶಾಸಕ ಚಂದ್ರಪ್ಪ ಅವರು ತಮ್ಮ ಮಗನಿಗೆ ಟಿಕೆಟ್ ಕೇಳಿದರು. ಕೊಡಲಿಲ್ಲ. ಈಶ್ವರಪ್ಪ ಅವರ ಪುತ್ರ ಒಂದೂವರೆ ಎರಡು ವರ್ಷದಿಂದ ಹಾವೇರಿಯಲ್ಲಿ ಓಡಾಡುತ್ತಿದ್ದರು. ಆದರೆ, ವರಿಷ್ಠರು ಒಪ್ಪಲಿಲ್ಲ. ಯಡಿಯೂರಪ್ಪ ಅವರ ಒಬ್ಬ ಮಗ ಸಂಸದ. ಮತ್ತೊಬ್ಬ ಮಗ ಶಾಸಕರೂ ಆಗಿದ್ದಾರೆ. ಜತೆಗೆ ರಾಜ್ಯಾಧ್ಯಕ್ಷರೂ ಆಗಿದ್ದಾರೆ. ಹೀಗಾಗಿ, ನಮ್ಮ ಮಕ್ಕಳಿಗೂ ಟಿಕೆಟ್ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಹಲವರು ಇದ್ದರು.

*ಹಾಗಿರುವಾಗ ಈಶ್ವರಪ್ಪ ಅವರ ಮಗನಿಗೆ ಟಿಕೆಟ್ ತಪ್ಪಿದ್ದು ಹೇಗೆ?
-ನಾನು ಇದನ್ನು ದೆಹಲಿ ಮಟ್ಟದಲ್ಲಿ ಚರ್ಚೆ ಮಾಡಿದೆ. ‘ಸನ್ ಆಫ್’ ಎಂಬ ಒಂದೇ ಒಂದು ಮಾನದಂಡ ಇಟ್ಟುಕೊಂಡು ಟಿಕೆಟ್ ಕೊಡುವುದಿಲ್ಲ ಎಂದು ವರಿಷ್ಠರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಶಾಸಕನಾಗಬೇಕು ಸಂಸದನಾಗಬೇಕು ಎಂದರೆ ಪಕ್ಷಕ್ಕೆ ಅವರ ಕೊಡುಗೆ ಏನಿದೆ ಎಂಬುದನ್ನು ಪರಿಗಣಿಸಿ ತೀರ್ಮಾನ ಮಾಡುತ್ತಾರೆ. ಹೀಗಾಗಿಯೇ ಈಶ್ವರಪ್ಪ ಪುತ್ರ ಸೇರಿದಂತೆ ಹಲವರಿಗೆ ಟಿಕೆಟ್ ನೀಡಿಲ್ಲ. ನೀವು 10-12 ವರ್ಷಗಳಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೀರಿ. ನಿಮ್ಮನ್ನು ಯಡಿಯೂರಪ್ಪ ಅವರ ಮಗ ಎಂಬ ಕಾರಣಕ್ಕಾಗಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿಲ್ಲ. ನಿಮ್ಮ ಸಾಧನೆಯನ್ನು ನೋಡಿ ಯುವಕರಿಗೆ ಒಂದು ಅವಕಾಶ ನೀಡಬೇಕು ಎಂಬ ಮಾನದಂಡ ಆಧಾರದ ಮೇಲೆ ರಾಜ್ಯಾಧ್ಯಕ್ಷ ಹುದ್ದೆ ನೀಡಲಾಗಿದೆ ಎಂಬ ಮಾತನ್ನು ವರಿಷ್ಠರು ನನಗೆ ಹೇಳಿದರು.

*ಬಿಜೆಪಿಯ ಟಿಕೆಟ್ ಹಂಚಿಕೆಯಲ್ಲಿ ಯಡಿಯೂರಪ್ಪ ಅವರ ಮಾತೇ ನಡೆದಿದೆಯಂತೆ? ಅವರು ಹೇಳಿದವರಿಗೇ ಟಿಕೆಟ್ ನೀಡಲಾಗಿದೆಯಂತೆ?
-ವಾಸ್ತವ ಹಾಗಿಲ್ಲ. ಶೋಭಾ ಕರಂದ್ಲಾಜೆ ಅವರಿಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದಲೇ ಟಿಕೆಟ್ ಸಿಗಲಿದೆ ಎಂಬ ಮಾತನ್ನು ಯಡಿಯೂರಪ್ಪ ಅವರು ಬಹಿರಂಗವಾಗಿಯೇ ಹೇಳಿದ್ದರು. ಶೋಭಾಗೆ ಅಲ್ಲಿ ಟಿಕೆಟ್ ಸಿಕ್ಕಿತಾ? ಜಗದೀಶ್ ಶೆಟ್ಟರ್ ಅವರಿಗೆ ಹಾವೇರಿ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಯಡಿಯೂರಪ್ಪ ವಾದ ಮಂಡಿಸಿದ್ದರು. ಅಲ್ಲಿ ಶೆಟ್ಟರ್‌ಗೆ ಸಿಕ್ಕಿತಾ? ಕೇವಲ ರಾಜ್ಯ ನಾಯಕರ ಮಾತು ಕೇಳಿ ವರಿಷ್ಠರು ಟಿಕೆಟ್ ನಿರ್ಧಾರ ಕೈಗೊಂಡಿಲ್ಲ. ಲೋಕಸಭಾ ಚುನಾವಣೆಗೆ ಟಿಕೆಟ್ ನಿರ್ಧಾರ ಮಾಡುವುದು ಪಕ್ಷದ ವರಿಷ್ಠರ ಪರಮಾಧಿಕಾರ.

*ರಾಜ್ಯದ ಹಲವು ಕ್ಷೇತ್ರಗಳಲ್ಲಿನ ಬಂಡಾಯ ಶಮನಗೊಳಿಸಿದ ಯಡಿಯೂರಪ್ಪ ಮತ್ತು ನಿಮಗೆ ತವರು ಜಿಲ್ಲೆ ಶಿವಮೊಗ್ಗದಲ್ಲಿನ ಈಶ್ವರಪ್ಪ ಅವರ ಬಂಡಾಯ ತಣಿಸುವುದು ಕಷ್ಟವಾಯಿತೆ?
-ಈಶ್ವರಪ್ಪ ಅವರನ್ನು ಹಲವು ಬಾರಿ ಮನವೊಲಿಸುವ ಪ್ರಯತ್ನವಾಗಿದೆ. ಅದರ ಬಗ್ಗೆ ಈಗ ಹೆಚ್ಚು ಮಾತನಾಡುವುದಿಲ್ಲ. ಇದೇ ಈಶ್ವರಪ್ಪ ಅವರನ್ನು ಶಿವಮೊಗ್ಗದಿಂದ ಎಂಎಲ್‌ಎ ಟಿಕೆಟ್‌ ಕೊಟ್ಟು ಶಾಸಕರಾಗಿ ಮಾಡಿದ್ದು, ಪಕ್ಷದ ರಾಜ್ಯಾಧ್ಯಕ್ಷ ಮಾಡಿದ್ದು, ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಮಾಡಿದ್ದು, ನಂತರ ಉಪಮುಖ್ಯಮಂತ್ರಿ ಮಾಡಿದ್ದು ಇದೇ ಯಡಿಯೂರಪ್ಪ. ಆಗ ಹೈಕಮಾಂಡ್‌ ಯಡಿಯೂರಪ್ಪ ಅವರಿಗೆ ಫ್ರೀ ಹ್ಯಾಂಡ್‌ ಕೊಟ್ಟಿತ್ತು. ಯಾರೂ ಪಕ್ಷದಲ್ಲಿ ಮೂಗು ತೂರಿಸುತ್ತಿರಲಿಲ್ಲ. ಹೀಗಾಗಿ ಎಲ್ಲ ಹಂತಗಳಲ್ಲಿ ಯಡಿಯೂರಪ್ಪ ತೀರ್ಮಾನ ಮಾಡುತ್ತಿದ್ದರು. ಯಡಿಯೂರಪ್ಪ ಅವರಿಗೆ ಅಧಿಕಾರ, ಜವಾಬ್ದಾರಿ ಇದ್ದಾಗ ಎಲ್ಲರಿಗೂ ಅವಕಾಶ ನೀಡಿದ್ದಾರೆ. ಅವಕಾಶ ನೀಡಿಲ್ಲ ಎಂದು ಈಶ್ವರಪ್ಪ ಬಹಿರಂಗವಾಗಿ ಹೇಳಲಿ. ಎಂಎಲ್‌ಎ ಟಿಕೆಟ್‌ ಕೊಟ್ಟಿದ್ದು, ಡಿಸಿಎಂ ಮಾಡಿದ್ದು, ರಾಜ್ಯಾಧ್ಯಕ್ಷ ಮಾಡಿದ್ದು, ಶಿವಮೊಗ್ಗ ಉಸ್ತುವಾರಿ ಸಚಿವರು ಮಾಡಿದ್ದು ಯಡಿಯೂರಪ್ಪ ಅಲ್ಲ ಎಂದು ಈಶ್ವರಪ್ಪ ಹೇಳಲಿ. ಅವರಿಗೆ ಒಳ್ಳೆಯದು ಆದಾಗ ಯಡಿಯೂರಪ್ಪ ಒಳ್ಳೆಯವರು. ಈಗ ಮಗನಿಗೆ ಟಿಕೆಟ್‌ ಸಿಗಲಿಲ್ಲ ಎಂದು ಯಡಿಯೂರಪ್ಪ ಮತ್ತು ಅವರ ಕುಟುಂಬವನ್ನು ದೂರುತ್ತಿದ್ದಾರೆ. ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದಾರೆ.

*ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಉತ್ತಮ ಸಂಬಂಧವಿತ್ತು. ಖುದ್ದು ಯಡಿಯೂರಪ್ಪ ಅವರೇ ಈಶ್ವರಪ್ಪ ಮನೆಗೆ ತೆರಳಿ ಮನವೊಲಿಸಬಹುದಿತ್ತಲ್ಲವೇ?
-ಎಲ್ಲ ಪ್ರಯತ್ನವೂ ಮುಗಿದು ಆ ಹಂತಕ್ಕೆ ಬರೋದಿಲ್ಲ ಎಂದಾಗ ಕೈಬಿಡಲಾಗಿದೆ. ನಾನು ಖುದ್ದು ನಮ್ಮ ಡಾಲರ್ಸ್‌ ಕಾಲೋನಿಯ ಮನೆಯಲ್ಲಿ ಈಶ್ವರಪ್ಪ ಅವರ ಜತೆಗೆ ಮಾತನಾಡಿದ್ದೆ. ಹಾವೇರಿಯಿಂದ ನಿಮ್ಮ ಮಗನಿಗೆ ಟಿಕೆಟ್‌ ಸಿಗದ್ದರೆ, ನೀವೇ ಸ್ಪರ್ಧಿಸಿ ಎಂದು ಸಲಹೆ ನೀಡಿದ್ದೆ. ಇದಕ್ಕೆ ಅವರು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಕುಟುಂಬ ಒಡೆದು ಹೋಗುತ್ತದೆ. ಹೀಗಾಗಿ ನನ್ನ ಮಗನಿಗೆ ಟಿಕೆಟ್‌ ಕೊಡಿಸಬೇಕು. ಆ ಜವಾಬ್ದಾರಿ ನಿನ್ನದು ಎಂದಿದ್ದರು. ಇದಕ್ಕೆ ನಾನು ಪ್ರಯತ್ನಿಸುವೆ ಸಾರ್‌ ಎಂದಿದ್ದೆ. ನಾನು ಹೇಳಿದ ತಕ್ಷಣ ಹೈಕಮಾಂಡ್‌ ಒಪ್ಪುವುದಿಲ್ಲ.

*ಬಿಜೆಪಿ ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಸಮುದಾಯದ ವಚನಾನಂದ ಸ್ವಾಮೀಜಿ ನೇರವಾಗಿ ಆರೋಪಿಸಿದ್ದಾರಲ್ಲ?
-ವಚನಾನಂದ ಸ್ವಾಮೀಜಿಗಳ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಎಲ್ಲಾ ಸಮುದಾಯಗಳಿಗೆ ನ್ಯಾಯ ಕೊಡುವ ಕೆಲಸ ಮಾಡಿದ್ದಾರೆ. ಪಂಚಮಸಾಲಿಗಳಿಗೆ 3 ಬಿ ಮೀಸಲಾತಿ ನೀಡಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಸಮುದಾಯಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಪಂಚಮಸಾಲಿ ಪೀಠ ಸೇರಿದಂತೆ ಎಲ್ಲ ಸಮುದಾಯಗಳಿಗೆ ಕೋಟಿ ಕೋಟಿ ರು. ಅನುದಾನ ನೀಡಿದ್ದಾರೆ.

*ನಿಮ್ಮ ಪಕ್ಷದ ಕಟ್ಟರ್ ಹಿಂದುತ್ವವಾದಿ ನಾಯಕರಾದ ಅನಂತಕುಮಾರ್‌ ಹೆಗಡೆ, ನಳಿನ್‌ ಕುಮಾರ್‌ ಕಟೀಲ್‌, ಸಿ.ಟಿ.ರವಿ, ಪ್ರತಾಪ್ ಸಿಂಹ ಮೊದಲಾದವರು ಈ ಬಾರಿ ಅವರು ತೆರೆಮರೆಗೆ ಸರಿದಿರುವುದು ಯಾಕೆ?
-ಚುನಾವಣೆಯಲ್ಲಿ ಯಾರಿಗೆ ಟಿಕೆಟ್‌ ಕೊಡಬೇಕು, ಯಾರಿಗೆ ಕೊಡಬಾರದು, ಏಕೆ ಕೊಡಬೇಕು ಎಂಬುದನ್ನು ದೆಹಲಿ ನಾಯಕರು ತೀರ್ಮಾನ ಮಾಡುತ್ತಾರೆ. ಇದರಲ್ಲಿ ವಿಜಯೇಂದ್ರನ ತೀರ್ಮಾನ ಇಲ್ಲ. ಟಿಕೆಟ್‌ ಸಿಗದಿರುವುದಕ್ಕೆ ಸಾಕಷ್ಟು ಕಾರಣಗಳು ಇರುತ್ತವೆ. ಟಿಕೆಟ್‌ ಸಿಗಲಿಲ್ಲ ಎಂದರೆ ನಳಿನ್‌ ಕುಮಾರ್‌, ಸಿ.ಟಿ.ರವಿ, ಪ್ರತಾಪ್‌ ಸಿಂಹ ಅವರ ರಾಜಕೀಯ ಜೀವನ ಮುಗಿಯುವುದಿಲ್ಲ.

*ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶದ ಪರಿಣಾಮ ಈ ಬಾರಿ ಬಿಜೆಪಿ ನಾಯಕರು ಹಿಂದುತ್ವದ ಬಗೆಗಿನ ಮಾತು ಕಡಿಮೆ ಮಾಡಿದ್ದಾರಂತೆ?
-ಅಯೋಧ್ಯೆ ರಾಮಮಂದಿರದ ಬಗ್ಗೆ ಮಾತನಾಡಿದರೆ ಹಿಂದುತ್ವ ಎನುತ್ತಾರೆ. ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ರಾಮಮಂದಿರ ವಿಚಾರ ಪ್ರಸ್ತಾಪಿಸಿದ್ದೆವು. ಈಗ ಅದನ್ನು ಈಡೇರಿಸಿದ್ದೇವೆ. ಬಿಜೆಪಿಯ ಅಜೆಂಡಾ ಬಹಳ ಸ್ಪಷ್ಟವಾಗಿದೆ. ಹಿಂದುತ್ವ ಎನ್ನುವುದು ರಕ್ತಗತವಾಗಿದೆ. ಯಾರೋ ಒಬ್ಬರು-ಮೂವರ ಹೇಳಿಕೆ ಪ್ರಶ್ನೆ ಇಲ್ಲಿ ಬರುವುದಿಲ್ಲ.

*ಯಡಿಯೂರಪ್ಪ ಅವರು ಹಿಂದುತ್ವದ ಪ್ರಖರವಾದಿಯಲ್ಲ. ನೀವು ಅದೇ ದಾರಿಯಲ್ಲಿ ಮುಂದುವರೆಯುತ್ತಿದ್ದೀರಾ?
-ಹೌದು ಯಡಿಯೂರಪ್ಪ ಪ್ರಖರ ಹಿಂದುತ್ವವಾದಿಯಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಮೊದಲ ಬಾರಿಗೆ ಅವರು ಮುಖ್ಯಮಂತ್ರಿ ಆದಾಗ ಹಜ್‌ ಭವನ, ಚರ್ಚ್‌ಗಳಿಗೂ ಅನುದಾನ ನೀಡಿದ್ದರು. ಇದರಲ್ಲಿ ರಾಜಕೀಯ ಇಲ್ಲ. ಜನಪ್ರತಿನಿಧಿ, ಮುಖ್ಯಮಂತ್ರಿ ಆದವರ ಕರ್ತವ್ಯ ಇದು. ಅದರಂತೆ ಹಿಂದೂ ಮಠ, ದೇವಸ್ಥಾನ ಸೇರಿದಂತೆ ಎಲ್ಲರಿಗೂ ಅನುದಾನ ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ತ್ರಿಬಲ್‌ ತಲಾಕ್‌ ಬಗ್ಗೆ ಏಕೆ ತಲೆಕೆಡಿಸಿಕೊಂಡರು? ಆದರೂ ಕಾಂಗ್ರೆಸ್‌ನವರು ಅವರನ್ನು ಕೋಮುವಾದಿ ಎನ್ನುತ್ತಾರೆ.

*ಯಡಿಯೂರಪ್ಪ ಅವರ ನೆರಳಿನಿಂದ ಹೊರಬಂದು ಕೆಲಸ ಮಾಡಲು ನಿಮಗೆ ಇನ್ನು ಎಷ್ಟು ಸಮಯ ಬೇಕು?
-ಆ ನೆರಳಿನಿಂದ ಹೊರಬಂದಿರುವ ಕಾರಣಕ್ಕಾಗಿಯೇ ನನ್ನನ್ನು ಪಕ್ಷದ ರಾಜ್ಯಾಧ್ಯಕ್ಷನ್ನಾಗಿ ಮಾಡಿದ್ದಾರೆ. ರಾಜ್ಯದ ಕಾರ್ಯಕರ್ತರು ಉತ್ಸಾಹದಿಂದ ನನ್ನ ಜತೆಗೆ ಕೈಜೋಡಿಸುತ್ತಿದ್ದಾರೆ.

*ಬಿಜೆಪಿ ಹೈಕಮಾಂಡ್‌ ರಾಜ್ಯ ನಾಯಕತ್ವವನ್ನು ಸಂಪೂರ್ಣವಾಗಿ ಕಡೆಗಣಿಸಿದೆಯೇ? ನಾವು ಹೇಳಿದ್ದನ್ನು ನೀವು ಮಾಡಿ ಎಂಬ ಆದೇಶ ನೀಡುತ್ತದಂತೆ?
-ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ಹಗಲು-ರಾತ್ರಿ ಶ್ರಮಹಾಕುತ್ತಿದ್ದಾರೆ. ನಾನೂ ಸೇರಿದಂತೆ ಎಲ್ಲರನ್ನೂ ಗಮನಿಸುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹತ್ತಾರು ಬಾರಿ ಪ್ರಧಾನಿ ರಾಜ್ಯ ಪ್ರವಾಸ ಮಾಡಿದ್ದರು. ಆದರೂ ನಾವು ಗೆದ್ದದ್ದು 66 ಸ್ಥಾನ ಮಾತ್ರ. ಕಾರಣ ಏನು? ನಮ್ಮ ನಡವಳಿಕೆಯಲ್ಲಿ ಸೇರಿಕೊಂಡಿದೆ. ವರಿಷ್ಠರು ಬೇಜಾರಾಗಿದ್ದಾರೆ ಎಂದರೆ, ನನ್ನನ್ನು ಸೇರಿಸಿ ಎಲ್ಲರ ಕರ್ತವ್ಯವೂ ಇದೆ. ಪಕ್ಷ ಸಂಘಟನೆಯಲ್ಲಿ ಎಷ್ಟು ತೊಡಗಿಸಿಕೊಳ್ಳುತ್ತೇವೆ? ಎಷ್ಟು ಪ್ರವಾಸ ಮಾಡುತ್ತೇವೆ? ಕಾರ್ಯಕರ್ತರ ಜತೆಗೆ ಎಷ್ಟು ಆತ್ಮೀಯತೆಯಿಂದ ನಡೆದುಕೊಳ್ಳುತ್ತೇವೆ? ಅಧಿಕಾರ ಇದ್ದಾಗ ಹೇಗೆ ನಡೆದುಕೊಳ್ಳುತ್ತೇವೆ ಎಂಬುದನ್ನು ವರಿಷ್ಠರು ಗಮನಿಸುತ್ತಿದ್ದಾರೆ.

*ರಾಜ್ಯ ಬಿಜೆಪಿಯಲ್ಲಿ ಶುದ್ಧೀಕರಣ ಕೈಗೊಳ್ಳುವ ಅಗತ್ಯವಿದೆ ಎಂಬ ಅಭಿಪ್ರಾಯ ಪಕ್ಷದ ಹಲವು ಹಿರಿಯರಿಂದ ವ್ಯಕ್ತವಾಗುತ್ತಿದೆ?
-ಕೆಲವರು ಪಕ್ಷದಲ್ಲಿ ಶುದ್ಧೀಕರಣದ ಬಗ್ಗೆ ಮಾತನಾಡುತ್ತಿದ್ದಾರೆ. ಈ ಶುದ್ಧೀಕರಣದ ಭಾಗವಾಗಿಯೇ ವಿಜಯೇಂದ್ರನನ್ನು ಪಕ್ಷದ ರಾಜ್ಯಾಧ್ಯಕ್ಷನ್ನಾಗಿ ಮಾಡಿರುವುದು. ಇದು ಮೊದಲ ಹಂತದ ಶುದ್ಧೀಕರಣ. ಯುವಕರಿಗೆ ಹೆಚ್ಚು ಅವಕಾಶ ನೀಡಬೇಕು. ಯುವಕರು ಮುನ್ನುಗ್ಗಬೇಕು, ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಯುವಕರನ್ನು ಹೆಚ್ಚೆಚ್ಚು ಆಕರ್ಷಣೆ ಮಾಡಬೇಕು. ಪಕ್ಷದಲ್ಲಿ ಶುದ್ಧೀಕರಣ ಆಗಬೇಕು. ಈ ಎಲ್ಲಾ ಕಾರಣಗಳಿಂದ ವಿಜಯೇಂದ್ರನನ್ನು ರಾಜ್ಯಾಧ್ಯಕ್ಷನಾಗಿ ಮಾಡಲಾಗಿದೆ.

*ಲೋಕಸಭಾ ಚುನಾವಣೆ ಮುಗಿದ ಬಳಿಕ ವಿಜಯೇಂದ್ರ ಮತ್ತು ಯಡಿಯೂರಪ್ಪ ತಮ್ಮ ಸ್ಥಾನ ಕಳೆದುಕೊಳ್ಳುತ್ತಾರೆ ಎಂದು ನಿಮ್ಮದೇ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಪದೇ ಪದೇ ಹೇಳುತ್ತಿದ್ದಾರೆ?
-ಕೆಲವು ತಿಂಗಳುಗಳ ಹಿಂದೆ ದೆಹಲಿಯ ವರಿಷ್ಠರು ಯತ್ನಾಳ್‌ ಅವರ ವಿರುದ್ಧ ಬಿಗಿ ಕ್ರಮ ಕೈಗೊಳ್ಳುವ ನಿರ್ಧಾರದ ಹಂತದಲ್ಲಿ ನಾನು ಮಧ್ಯಪ್ರವೇಶಿಸಿ ತಿದ್ದುಕೊಳ್ಳಲು ಕೊನೆಯ ಅವಕಾಶ ನೀಡುವಂತೆ ಕೇಳಿಕೊಂಡಿದ್ದೆ. ಈಗ ಕ್ರಮ ತೆಗೆದುಕೊಂಡರೆ, ನಾನು ರಾಜ್ಯಾಧ್ಯಕ್ಷನಾಗಿ ಎರಡು ತಿಂಗಳಾಗಿದೆ. ವಿಜಯೇಂದ್ರ ಕ್ರಮ ತೆಗೆದುಕೊಂಡರು ಎಂದು ಗೂಬೆ ಕೂರಿಸುತ್ತಾರೆ. ಇದು ಪಕ್ಷದ ಹಿತದೃಷ್ಟಿಯಿಂದ ಒಳ್ಳೇಯದಲ್ಲ. ತಿದ್ದುಕೊಳ್ಳಲು ಅವರಿಗೆ ಕಡೆಯ ಅವಕಾಶ ಕೊಡಿ ಎಂದು ಹೇಳಿದ್ದೆ. ತಿದ್ದುಕೊಳ್ಳುವುದು ಅವರಿಗೆ ಬಿಟ್ಟಿದ್ದು. ಅವರಿಗೆ ಒಂದು ಅವಕಾಶ ನೀಡಿದ್ದಾರೆ. ಎಲ್ಲದ್ದಕ್ಕೂ ಕಾಲವೇ ಉತ್ತರ ನೀಡಲಿದೆ. ಎಲ್ಲವೂ ಹೀಗೆ ನಡೆದುಕೊಂಡು ಹೊಗಲಿದೆ ಎಂದು ಯಾರೂ ಒಪ್ಪುವುದಿಲ್ಲ. ಸಮಯ, ಸಂದರ್ಭ ಬಂದಾಗ ತೀರ್ಮಾನವಾಗಲಿದೆ.

ಮುನಿರತ್ನ ತರ ನಾನು ಹೇಡಿಯೂ ಅಲ್ಲ, ಕೇಡಿಯೂ ಅಲ್ಲ: ಡಿ.ಕೆ.ಸುರೇಶ್ ವಾಗ್ದಾಳಿ

*ಲೋಕಸಭಾ ಚುನಾವಣೆ ಬಳಿಕ ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳಿಸುವ ಗುರಿ ಹೊಂದಿದ್ದೀರಂತೆ?
-ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಡಿ.ಕೆ.ಶಿವಕುಮಾರ್‌ ಮನಸಿನಲ್ಲಿ ಏನಾಗುತ್ತದೆ ಎಂಬುದನ್ನು ನಾನು ಊಹೆ ಮಾಡಲು ಸಾಧ್ಯವಿಲ್ಲ. ಬಿಜೆಪಿಗೆ ಸರ್ಕಾರ ಬೀಳಿಸುವ ಉದ್ದೇಶವಿಲ್ಲ. ನಾವು ವಿರೋಧ ಪಕ್ಷದಲ್ಲಿ ಸಂತೋಷದಿಂದ ಕುಳಿತಿದ್ದೇವೆ. ನಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ಮಾಡುತ್ತಿದ್ದೇವೆ.

click me!