Karnataka Politics: ಭಾರತ್ ಜೋಡೋ ಸಂಘ ಆರ್ಥಿಕ ಹೊರೆ: ಸಚಿವ ಜಾರಕಿಹೊಳಿ ಅಚ್ಚರಿ ಹೇಳಿಕೆ!

Kannadaprabha News   | Kannada Prabha
Published : Jun 05, 2026, 05:08 AM IST
Minister satish jarkiholi statement about bharat jodo youth Association rav

ಸಾರಾಂಶ

ಸಚಿವ ಸತೀಶ್ ಜಾರಕಿಹೊಳಿ ಅವರು, ಭಾರತ್ ಜೋಡೋ ಯುವ ಸಂಘ ಸ್ಥಾಪನೆಯಿಂದ ಸರ್ಕಾರಕ್ಕೆ ಆರ್ಥಿಕ ಹೊರೆ, ಆದರೂ ಅನುದಾನ ಹೊಂದಿಸಿ ಅನುಷ್ಠಾನಗೊಳಿಸುವುದಾಗಿ ಹೇಳಿದ್ದಾರೆ. ಜೊತೆಗೆ, ಕಾಂಗ್ರೆಸ್‌ನ 'ಒಬ್ಬರಿಗೆ ಒಂದೇ ಹುದ್ದೆ' ನಿಯಮದಿಂದ ತಮಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗಲಿಲ್ಲವೆಂದು ಸ್ಪಷ್ಟಪಡಿಸಿದ್ರು

ಬೆಂಗಳೂರು (ಜೂ.5): ಸಚಿವ ಸಂಪುಟದಲ್ಲಿ ತೆಗೆದುಕೊಂಡ ನಿರ್ಧಾರಗಳ ಪೈಕಿ ಭಾರತ್‌ ಜೋಡೋ ಯುವ ಸಂಘ(Bharat Jodo Youth Association) ಸ್ಥಾಪನೆಗೆ ಹೆಚ್ಚಿನ ಅನುದಾನ ಬೇಕಾಗುತ್ತದೆ. ಆದರೂ, ಅನುದಾನ ಹೊಂದಾಣಿಕೆ ಮಾಡಿಕೊಂಡು ಸಚಿವ ಸಂಪುಟ ನಿರ್ಧಾರಗಳನ್ನು ಅನುಷ್ಠಾನಗೊಳಿಸುತ್ತೇವೆ ಎಂದು ಸಚಿವ ಸತೀಶ್‌ ಜಾರಕಿಹೊಳಿ(Satish Jarkiholi) ಹೇಳಿದ್ದಾರೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌(DK Shivakumar) ಅಧ್ಯಕ್ಷತೆಯ ಮೊದಲ ಸಚಿವ ಸಂಪುಟ ಸಭೆ ನಿರ್ಧಾರಗಳ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್‌ ಜಾರಕಿಹೊಳಿ, ನೂತನ ಮುಖ್ಯಮಂತ್ರಿ ಅವರ ಮೊದಲ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳು ಒಂದಷ್ಟು ಆರ್ಥಿಕ ಹೊರೆಯಾಗುತ್ತದೆ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್‌ ವಿತರಿಸಲು ಹೆಚ್ಚಿನ ಅನುದಾನ ಬೇಕಿಲ್ಲ. ವಿದ್ಯುತ್‌ ಸಂಪರ್ಕಕ್ಕೆ ಒಸಿ-ಸಿಸಿ ನೀಡುವಲ್ಲಿ ವಿನಾಯಿತಿ ಸೇರಿ ಇನ್ನಿತರ ನಿರ್ಧಾರಗಳಿಗೆ ಹಣದ ಅಗತ್ಯವಿಲ್ಲ. ಆದರೆ, ಭಾರತ್‌ ಜೋಡೋ ಯುವ ಸಂಘ ಸ್ಥಾಪನೆಗೆ ಹೆಚ್ಚಿನ ಅನುದಾನ ಬೇಕಾಗುತ್ತದೆ. ಅದಕ್ಕೆ ಅನುದಾನ ಹೊಂದಿಸಿಕೊಂಡು ಅನುಷ್ಠಾನ ಮಾಡುತ್ತೇವೆ ಎಂದರು.

ಒಂದೇ ಹುದ್ದೆ ನಿಯಮದಿಂದ ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ:

ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿರುವ ಕುರಿತು ಮಾತನಾಡಿದ ಸತೀಶ್‌ ಜಾರಕಿಹೊಳಿ, ಕಾಂಗ್ರೆಸ್‌ನಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮವಿದೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿಲ್ಲ. ಹಾಗೆಂದ ಮಾತ್ರಕ್ಕೆ ನನಗೆ ಕೈ ತಪ್ಪಿದೆ ಎಂದಲ್ಲ. ನನಗೆ ಮೊದಲೇ ಅದು ತಿಳಿದಿತ್ತು. ಆದರೂ ಸಚಿವ ಸ್ಥಾನದ ಜತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮನವಿ ಮಾಡಿದ್ದೆ. ಅಂತಿಮವಾಗಿ ಹೈಕಮಾಂಡ್‌ ಸಚಿವ ಸ್ಥಾನ ನೀಡಿದೆ ಎಂದರು.

ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧೆಯಾಗುತ್ತೀರಿ ಎಂದು ನೀಡಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧಿ ಎಂದು ತೋರಿಸಲು ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೇಳಲಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗುವುದಕ್ಕೆ ಮುಂಚೆ ಕೆಪಿಸಿಸಿ ಅಧ್ಯಕ್ಷರಾಗಿರಲಿಲ್ಲ. ಮುಖ್ಯಮಂತ್ರಿಯಾಗುವುದಕ್ಕೆ ಅಧ್ಯಕ್ಷರಾಗಿರಬೇಕು ಅಂತೇನಿಲ್ಲ. ನನಗೆ ಅಧ್ಯಕ್ಷ ಸ್ಥಾನದ ಜತೆಗೆ ಸಚಿವ ಸ್ಥಾನವನ್ನೂ ನೀಡಿ ಎಂದು ಕೇಳಿದ್ದೆ ಎಂದು ತಿಳಿಸಿದರು.

ಬಿ.ಕೆ.ಹರಿಪ್ರಸಾದ್‌ ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧಿಯೇ ಎಂಬುದಕ್ಕೆ ಮಾತನಾಡಿ, ಯಾಕಾಗಬಾರದು? ಅವರೂ ಹಿರಿಯ ನಾಯಕರು. ಇನ್ನೂ ಎರಡು ವರ್ಷಗಳಿವೆ ಎಂದರು.

ಸರ್ಕಾರದಲ್ಲಿ ಏನು ಮಾಡಿದ್ರೂ ಅದು ಆರ್ಥಿಕ ಹೊರೆಯೇ: ಸಿಎಂ

ಇದು, ಗ್ರಾಪಂಗೊಂದು ಭಾರತ್‌ ಜೋಡೋ ಯುವಕರ ಸಂಘ ಮಾಡಲು ಹೊರಟಿರುವ ಸರ್ಕಾರದ ನಿರ್ಧಾರದಿಂದ ಸ್ವಲ್ಪ ಆರ್ಥಿಕ ಹೊರೆಯಾಗುತ್ತದೆ ಎಂಬ ಸಚಿವ ಸತೀಶ್‌ ಜಾರಕಿಹೊಳಿ ಹೇಳಿಕೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನೀಡಿದ ಪ್ರತಿಕ್ರಿಯೆ.

ಗುರುವಾರ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಸತೀಶ್‌ ಜಾರಕಿಹೊಳಿ ಅವರ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಅವರು, ಸರ್ಕಾರದಲ್ಲಿ ಏನು ಕೆಲಸ ಮಾಡಿದರೂ ಆರ್ಥಿಕ ಹೊರೆಯೇ ಆಗುತ್ತದೆ. ಪತ್ರಿಕಾ ಗೋಷ್ಠಿ ಮಾಡಿದರೂ ಕಾಫಿ, ತಿಂಡಿ ಕೊಡುವುದು ಕೂಡ ಆರ್ಥಿಕ ಹೊರೆಯೇ ತಾನೆ ಎಂದು ಹಾಸ್ಯ ಮಾಡಿದರು. ಆಗ ಕೆಲ ಮಾಧ್ಯಮ ಪ್ರತಿನಿಧಿಗಳು ಅದಕ್ಕೇ ಏನೋ ಇವತ್ತು ಕನಿಷ್ಠ ನೀರು, ಬಿಸ್ಕೆಟ್‌ ಕೂಡ ಕೊಟ್ಟಿಲ್ಲ ಎಂದು ಚಟಾಕಿ ಹಾರಿಸಿದ್ದು ಸಭೆಯನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು.

ಕಾಫಿ, ತಿಂಡಿ ಕೂಡ ಆರ್ಥಿಕ ಹೊರೆ!

ಸರ್ಕಾರದಲ್ಲಿ ಏನೇ ಮಾಡಿದರೂ ಅದರಿಂದ ಆರ್ಥಿಕ ಹೊರೆ ಆಗುತ್ತದೆ. ಮಾಧ್ಯಮದವರಿಗೆ ಪತ್ರಿಕಾಗೋಷ್ಠಿ ಏರ್ಪಡಿಸಿ ಕಾಫಿ, ತಿಂಡಿ ಕೊಡುವುದು ಕೂಡ ಆರ್ಥಿಕ ಹೊರೆಯೇ ತಾನೆ?

- ಡಿ.ಕೆ.ಶಿವಕುಮಾರ್‌, ಸಿಎಂ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಧಿಕಾರ ಬೇಕಾದರೆ ಡಿಕೆ ಜೊತೆ ಹೋಗಿ; ಪಕ್ಷ ಕಟ್ಟಬೇಕೆನ್ನುವವರು ನನ್ನ ಜೊತೆ ಬನ್ನಿ: ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಖಡಕ್ ಹೇಳಿಕೆ!
ಮೈಸೂರು ಅಳಿಯ ಎಲ್ಲವನ್ನೂ ಸರಿಪಡಿಸಬೇಕು: ಡಿಕೆಶಿ ಆಡಳಿತಕ್ಕೆ ಎಚ್‌.ವಿಶ್ವನಾಥ್‌ ಸಲಹೆಯೇನು?