ಜನರಿಗೆ ಸುಳ್ಳು ಆಶ್ವಾಸನೆ ನೀಡುವ ಬಿಜೆಪಿ ಸರ್ಕಾರ ಕಿತ್ತೆಸೆಯಬೇಕು: ಸಚಿವ ಸಂತೋಷ್ ಲಾಡ್

By Govindaraj SFirst Published Apr 12, 2024, 4:23 PM IST
Highlights

ಜನರಿಗೆ ಸುಳ್ಳು ಆಶ್ವಾಸನೆ ನೀಡುವ ಕೇಂದ್ರ ಬಿಜೆಪಿ ಸರ್ಕಾರವನ್ನು ಈ ಬಾರಿ ಜನರು ಕಿತ್ತೆಸೆಯಬೇಕು ಎಂದು ಸಚಿವ ಸಂತೋಷ್ ಲಾಡ್ ಕರೆ ನೀಡಿದರು. 

ಕಲಘಟಗಿ (ಏ.12): ಜನರಿಗೆ ಸುಳ್ಳು ಆಶ್ವಾಸನೆ ನೀಡುವ ಕೇಂದ್ರ ಬಿಜೆಪಿ ಸರ್ಕಾರವನ್ನು ಈ ಬಾರಿ ಜನರು ಕಿತ್ತೆಸೆಯಬೇಕು ಎಂದು ಸಚಿವ ಸಂತೋಷ್ ಲಾಡ್ ಕರೆ ನೀಡಿದರು. ಪಟ್ಟಣದಲ್ಲಿ ಹಮ್ಮಿಕೊಂಡ ಧಾರವಾಡ ಲೋಕಸಭಾ ಚುನಾವಣೆ ಅಭ್ಯರ್ಥಿ ವಿನೋದ ಅಸೂಟಿ ಅವರ ಬಹಿರಂಗ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದರು. ಪ್ರಚಾರಕ್ಕೆ ಹೋದಲ್ಲಿ ಪ್ರಹ್ಲಾದ ಜೋಶಿ ಸಾಹೆಬ್ರು ನಾನು ಮೋದಿ ಹಾಗೂ ಅವರನ್ನು ಬೈಯುತ್ತೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಯಾರನ್ನು ಕೂಡಾ ವೈಯಕ್ತಿಕವಾಗಿ ಟೀಕೆ ಮಾಡಿಲ್ಲ ಎಂದು ಹೇಳಿದರು.

2014ರ ಮೊದಲು ಬಿಜೆಪಿ ಸರ್ಕಾರ ಆಡಳಿತಕ್ಕೆ ಬರುವ ಮುಂಚೆ ಸ್ವೀಸ್ ಬ್ಯಾಂಕ್‌ನಿಂದ ಹಣ ತಂದು ಪ್ರತಿಯೊಬ್ಬರ ಖಾತೆಗೆ ₹ 15 ಲಕ್ಷ, ಪ್ರತಿ ವರ್ಷ ಯುವಕರಿಗೆ 2 ಕೋಟಿ ಉದ್ಯೋಗ ನೀಡುತ್ತೇನೆ. ರೈತರ ಸಾಲ ಮನ್ನಾ ಹಾಗೂ ರೈತರ ಆದಾಯ ದ್ವಿಗುಣಗೊಳ್ಳಿಸುತ್ತೇನೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದ ಬಿಜೆಪಿ ಈ ವರೆಗೂ ಈಡೇರಿಸಿಲ್ಲ. ಅಧಿಕಾರಕ್ಕೆ ಬಂದ ನಂತರ ಪ್ರತಿ ವಸ್ತುಗಳ ಬೆಲೆ ಏರಿಕೆಯಾಗಿ ಬಡವರು, ಕೂಲಿಕಾರ್ಮಿಕರು ಬದುಕುವುದು ಕಷ್ಟವಾಗಿದೆ. 2016ರಲ್ಲಿ ನರೇಂದ್ರ ಮೋದಿ ಅವರು ಕಪ್ಪು ಹಣ ವೈಟ್ ಮಾಡುತ್ತೇನೆ ಎಂದು ರಾತ್ರೋರಾತ್ರಿ ನೋಟು ಬ್ಯಾನ್ ಮಾಡಿದಾಗ ಬಡವರು, ರೈತರು ಬ್ಯಾಂಕ್ ಮುಂದೆ ಸಾಲುಗಟ್ಟಿ ನಿಂತು ನೋಟು ಬದಲಾವಣೆ ಮಾಡುವಾಗ ಎಷ್ಟು ಜನರು ಪ್ರಾಣ ಕಳೆದುಕೊಂಡರು. 

ಆದರೆ, ಶ್ರೀಮಂತರು ಯಾರು ಕೂಡಾ ಬ್ಯಾಂಕ್ ಮುಂದೆ ನಿಂತು ಪ್ರಾಣ ಕಳೆದುಕೊಳ್ಳಲಿಲ್ಲ. ಈ ಕುರಿತು ಪ್ರಶ್ನಿಸಿದರೆ ನಾನು ಬೈಯುತ್ತೇನೆ ಎಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದೇಶದ ಸಾಲ ₹ 55 ಲಕ್ಷ ಕೋಟಿ ಸಾಲವಿತ್ತು. ಇದೀಗ ಅದು ₹ 183 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದ ಅವರು, ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಿ ನುಡಿದಂತೆ ನಡೆದಿದ್ದು ಕಾಂಗ್ರೆಸ್ ಸರ್ಕಾರ ಬೆಂಬಲಿಸಿ ಎಂದು ಮತದಾರರಿಗೆ ಕರೆ ನೀಡಿದರು. ಅಭ್ಯರ್ಥಿ ವಿನೋದ ಅಸೂಟಿ ಮಾತನಾಡಿ, ಬಿಜೆಪಿ ಚುನಾವಣೆ ಬಂದಾಗ ಜಾತಿ-ಧರ್ಮದ ನಡುವೆ ಭಿನ್ನಾಭಿಪ್ರಾಯ ಹುಟ್ಟಿಸಿ ಒಡೆದು ಅಳುವ ನೀತಿ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.

ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದಲ್ಲಿ ಸಿದ್ದರಾಮಯ್ಯ ತಂತ್ರ, ಕುತಂತ್ರ‌ ನಡೆಯಲ್ಲ: ಬೊಮ್ಮಾಯಿ

ಮಾಜಿ ಶಾಸಕ ಎಂ.ಎಸ್. ಅಕ್ಕಿ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷ ಎಸ್‌.ಆರ್. ಪಾಟೀಲ, ಮಯೂರ ಮೊರೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ, ಅಳ್ಳಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಕರಿಗೌಡರ, ಸೋಮಶೇಖರ ಬೆನ್ನೂರ, ಗುರು ಕಂಪ್ಲಿ, ಮಲ್ಲನಗೌಡರ, ವಿಜಯ ಗೌಡರ, ಗಿರಿಜಾ ಹೂಗಾರ, ಬಿ.ವೈ. ಪಾಟೀಲ್, ಕವಿತಾ ರಡ್ಡಿ, ನರೇಶ ಮಲೆನಾಡು, ಅಜ್ಮತ ಜಾಗೀರದಾರ, ಗಂಗಾಧರ ಚಿಕ್ಕಮಠ, ಬಾಬು ಅಂಚಟಗೇರಿ ಸೇರಿದಂತೆ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

click me!