
ಚಿಕ್ಕಬಳ್ಳಾಪುರ (ಜು.30): ದುರಾಡಳಿತ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ರೈತರಿಗೆ ಸರಿಯಾಗಿ ರಸಗೊಬ್ಬರ ಪೂರೈಸಿಲ್ಲ. ಆದ್ದರಿಂದ ಕಾಳಸಂತೆಯಲ್ಲಿರುವ ಹಾಗೂ ದಾಸ್ತಾನಿರುವ ರಸಗೊಬ್ಬರವನ್ನು ರೈತರಿಗೆ ತಲುಪುವಂತೆ ಮಾಡಲು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಬೇಕೆಂದು ಸಂಸತ್ ಅಧಿವೇಶನದಲ್ಲಿ ಸಂಸದ ಡಾ.ಕೆ.ಸುಧಾಕರ್ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.
ಲೋಕಸಭೆಯ ಶೂನ್ಯ ವೇಳೆಯಲ್ಲಿ ಕನ್ನಡದಲ್ಲೇ ಮಾತು ಆರಂಭಿಸಿ, ಮುಂಗಾರು ಖಾರಿಫ್ ಋತುಮಾನವು ಕೃಷಿಗೆ ನಿರ್ಣಾಯಕ ಅವಧಿಯಾಗಿದೆ. ಈ ಸಮಯದಲ್ಲಿ ರೈತರು ಭತ್ತ, ಜೋಳ, ರಾಗಿ, ನೆಲಗಡಲೆ, ಸೋಯಾಬೀನ್, ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ. ದುರದೃಷ್ಟವಶಾತ್ ಜಾಗತಿಕ ಮಟ್ಟದಲ್ಲಿ ದೇಶಗಳ ನಡುವೆ ಸಂಘರ್ಷ ನಡೆಯುತ್ತಿದೆ. ಆದರೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 8.13 ಲಕ್ಷ ಟನ್‌ಗಳಷ್ಟು ಯೂರಿಯಾವನ್ನು ಕರ್ನಾಟಕ ರಾಜ್ಯಕ್ಕೆ ಕಳುಹಿಸಿಕೊಟ್ಟಿದೆ.
ಭ್ರಷ್ಟಾಚಾರದಲ್ಲಿ ಮುಳುಗಿರುವ, ಸೊರಗಿ ಹೋಗಿರುವ, ದುರಾಡಳಿತ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಅಸಮರ್ಪಕ ಆಡಳಿತದಿಂದಾಗಿ ದಾಸ್ತಾನಿರುವ ರಸಗೊಬ್ಬರವನ್ನು ಸರಿಯಾಗಿ ಹಂಚಿಕೆ ಮಾಡಲು ಸಾಧ್ಯವಾಗಿಲ್ಲ. ಈ ಮೂಲಕ ರಾಜ್ಯ ಸರ್ಕಾರ ರೈತರಿಗೆ ಅನ್ಯಾಯ ಮಾಡಿದೆ ಎಂದು ದೂರಿದರು. ಕರ್ನಾಟಕದಲ್ಲಿ 258 ರು. ಗೆ ಸಬ್ಸಿಡಿ ದರದಲ್ಲಿ ಯೂರಿಯಾ ಸಿಗಬೇಕಿದ್ದರೂ, ಕಾಳಸಂತೆಯಲ್ಲಿ 500 ರು. ಗೆ ದೊರೆಯುತ್ತಿದೆ. ಡಿಎಪಿ 1,200 ರು. ಸಿಗಬೇಕಿದ್ದರೂ, 2,000 ರು. ಗೆ ಸಿಗುತ್ತಿದೆ.
ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿಯವರ ನೇತೃತ್ವದಲ್ಲಿ ಎಲ್ಲ ಸಂಸದರು ಹಾಗೂ ರಾಜ್ಯಸಭಾ ಸದಸ್ಯರ ನಿಯೋಗದೊಂದಿಗೆ ರಸಗೊಬ್ಬರ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಈ ಸಮಸ್ಯೆಯ ಬಗ್ಗೆ ಚರ್ಚಿಸಿದ್ದೇವೆ ಎಂದು ತಿಳಿಸಿದರು. ಆದ್ದರಿಂದ ಈಗಾಗಲೇ ಕಾಳಸಂತೆಯಲ್ಲಿರುವ ಹಾಗೂ ದಾಸ್ತಾನಿನಲ್ಲಿರುವ ರಸಗೊಬ್ಬರ ಸರಿಯಾದ ದರದಲ್ಲಿ ಸಮರ್ಪಕವಾಗಿ ರೈತರನ್ನು ತಲುಪುವಂತೆ ಮಾಡಬೇಕಿದೆ. ಅದಕ್ಕಾಗಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕೇಂದ್ರ ಸರ್ಕಾರದಿಂದ ಮಾಹಿತಿ ಹಾಗೂ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.