ಬೆಳಕು ಎಂಬುದು ಜ್ಞಾನದ ಸಂಕೇತ. ಗೃಹಜ್ಯೋತಿ ಮೂಲಕ ಮನೆ ಮನೆಯನ್ನು ಬೆಳಗುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ನಮ್ಮ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಅಬಕಾರಿ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರು ಹೇಳಿದರು.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ (ಆ.05): ಬೆಳಕು ಎಂಬುದು ಜ್ಞಾನದ ಸಂಕೇತ. ಗೃಹಜ್ಯೋತಿ ಮೂಲಕ ಮನೆ ಮನೆಯನ್ನು ಬೆಳಗುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ನಮ್ಮ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಅಬಕಾರಿ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರು ಹೇಳಿದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಜ್ಯೋತಿ ಯೋಜನೆಗೆ ಬಾಗಲಕೋಟೆ ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಸಚಿವ ಆರ್ ಬಿ ತಿಮ್ಮಾಪೂರ ಅವರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಆರ್ ಬಿ ತಿಮ್ಮಾಪೂರ ಅವರು, ನಾವೆಲ್ಲಾ ಚಿಕ್ಕವರಾಗಿದ್ದಾಗ ಚಿಮಣಿ ಹಚ್ಚಿ ಬೆಳಕು ಪಡೆಯಬೇಕಾಗಿತ್ತು. ನಾವು ಮೂರ್ನಾಲ್ಕನೇ ತರಗತಿಯಲ್ಲಿದ್ದಾಗ ಊರಿಗೆ ವಿದ್ಯುತ್ ಬರುತ್ತೆ ಎಂದು ನಾವೆಲ್ಲಾ ಸಂಭ್ರಮಿಸಿದ್ವಿ. ಕಂಬದ ಬೆಳಕಲ್ಲಿ ನಿಂತು ಓದಿದ್ದೇವೆ ಎಂದು ಬಾಲ್ಯದ ನೆನಪನ್ನು ಎಂದು ಮೆಲುಕು ಹಾಕಿದರು.
ಕೊಡಗಿನಲ್ಲಿ ಮಳೆಗೆ ಮುರಿದು ಬಿದ್ದ 1638 ವಿದ್ಯುತ್ ಕಂಬಗಳು: 2 ಕೋಟಿ ನಷ್ಟ!
83% ರಷ್ಟು ಜನರು ಗೃಹಜ್ಯೋತಿ ಯೋಜನೆಯಲ್ಲಿ ನೋಂದಣಿ: ಗೃಹಜ್ಯೋತಿ ಯೋಜನೆಯೂ ಒಂದು ಅದ್ಭುತ ಕಾರ್ಯಕ್ರಮವಾಗಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಜಾರಿಗೆ ತರಲಾಗಿದೆ ಎಂದ ಸಚಿವ ತಿಮ್ಮಾಪೂರ, ನಾವು ಶಾಸಕರಾಗಿದ್ದಾಗ ಭಾಗ್ಯಜ್ಯೋತಿ ಯೋಜನೆ ನೀಡಿ ಬಡವರ ಮುಖದಲ್ಲಿನ ಸಂತೋಷ ನೋಡಿದ್ವಿ. ಬಡವರ ಸಂಕಷ್ಟ ನೋಡಿ ನಮ್ಮ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, 200 ಯೂನಿಟ್ ವರೆಗೂ ಎಲ್ಲರಿಗೂ ಖಚಿತವಾಗಿ ವಿದ್ಯುತ್ ನೀಡುತ್ತಿದೆ. ಬಾಗಲಕೋಟೆ ಜಿಲ್ಲೆಯಲ್ಲಿ 83% ರಷ್ಟು ಜನರು ಗೃಹಜ್ಯೋತಿ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಸಚಿವ ತಿಮ್ಮಾಪೂರ ಅವರು ಹೇಳಿದರು.
ಸ್ವಾಭಿಮಾನದ ಬದುಕು ನಡೆಸಲು ನಮ್ಮ ಸರ್ಕಾರ ಅವಕಾಶ ಕಲ್ಪಿಸಿದೆ: ಯಾರದಾದರೂ ಮನೆಯ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಾರೆ ಎಂದರೇ ಅದು ಮಾನಸಿಕ ಹಿಂಸೆ. ಕೆಲವರು ತಿಂಗಳಾದ್ರೇ ಬಿಲ್ ಕಟ್ಟಬೇಕು ಎಂದು ಆತಂಕದಿಂದ ಇರುತ್ತಿದ್ದರು. ಆ ದುಗುಡವನ್ಮು ದೂರ ಮಾಡುತ್ತಿರೋದು ನಮ್ಮ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಇದರಲ್ಲಿ ಉಳಿತಾಯ ಆಗುವ ಹಣದಿಂದ ಮಕ್ಕಳ ಪಠ್ಯ ಪುಸ್ತಕ ಖರೀದಿ, ಮನೆಯ ನಿರ್ವಹಣೆಗೆ ಅನುಕೂಲ ಆಗಲಿದೆ ಎಂದು ಸಚಿವ ತಿಮ್ಮಾಪೂರ ಹೇಳಿದರು.
ಹಸಿವದವರಿಗೆ ಮಾತ್ರ ಅನ್ನಭಾಗ್ಯದ ಯೋಜನೆ ಬಗ್ಗೆ ಅರ್ಥ ಆಗುತ್ತೆ. ಅಂತದ್ರಲ್ಲೂ ರಾಜಕೀಯ ಯಾಕ್ ಮಾಡ್ತಾರೋ ಗೊತ್ತಿಲ್ಲ. ಶಕ್ತಿ ಯೋಜನೆ ಕೂಡ ಮಹಿಳೆಯರಿಗೆ ಅನುಕೂಲ ಆಗಿದೆ. ಮನೆಯಲ್ಲಿ ದುಡ್ಡು ಕೊಡಲಿ ಬಿಡ್ಲಿ, ನೆಮ್ಮದಿಯಾಗಿ ಧೈರ್ಯದಿಂದ ಓಡಾಡ್ತಿದ್ದಾರೆ. ನಮ್ಮ ಸಿದ್ದರಾಮಯ್ಯ ಸರ್ಕಾರ ಉಚಿತ ಬಸ್ ಕೊಟೈತೆ ಹೋಗ್ತೀವಿ ಅಂತಾ ಸ್ವಾಭಿಮಾನದಿಂದ ಓಡಾಡ್ತಿದ್ದಾರೆ. ಇದೇ 17 ನೇ ತಾರೀಖಿನ ನಂತರ ಗೃಹಲಕ್ಷ್ಮಿ ಯೋಜನೆ ಮೂಲಕ ಮನೆ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ಕೊಡಲಾಗುತ್ತದೆ. ಇದರಿಂದ ಮನೆ ಒಡತಿಯರು ನೆಮ್ಮದಿಯಾಗಿ ಮನೆ ನಿರ್ವಹಿಸಲು ಸಹಕಾರಿ ಆಗಲಿದೆ ಎಂದು ಸಚಿವ ತಿಮ್ಮಾಪೂರ ಅವರು ತಿಳಿಸಿದರು.
ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆಯ ನಿಯಮಾವಳಿಗಳನ್ನು ಮೀರಿಲ್ಲ: ಸಚಿವ ಮಹದೇವಪ್ಪ
ಇದು ನನ್ನ ಸರ್ಕಾರ, ಜನ ಸಾಮನ್ಯರ ಸರ್ಕಾರ ಅಂತಾ ಹೇಳಬೇಕು. ಬದುಕಿನಲ್ಲಿ ಏನೇ ಕಷ್ಟಗಳು ಬಂದರೂ ನಮ್ಮ ಸರ್ಕಾರ ಇದೇ ಅನ್ನೋ ನಂಬಿಕೆ ಬರಬೇಕು ಅನ್ನೋ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಅವರು ಹಲವು ಜನರಪರ ಯೋಜನೆಗಳನ್ನು ರೂಪಿಸಿದ್ದಾರೆ. ನಮ್ಮ ಸರ್ಕಾರ ನೀಡಿರುವ ಐದು ಗ್ಯಾರಂಟಿಗಳು ಜನರು ಸ್ವಾಭಿಮಾನದ ಬದುಕು ನಡೆಸಲು ನೆರವಾಗಲಿದೆ ಎಂದು ಸಚಿವ ತಿಮ್ಮಾಪೂರ ಅವರು ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಬಾಗಲಕೋಟೆ ಶಾಸಕ ಹೆಚ್ ವೈ ಮೇಟಿ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನರ್, ಜಿಲ್ಲಾಧಿಕಾರಿ ಜಾನಕಿ, ಸಿಇಓ ಶಶಿಧರ್ ಕುರೇರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.