
ಬೆಂಗಳೂರು(ಅ.18): ಆರ್.ಆರ್.ನಗರ ಕ್ಷೇತ್ರದಲ್ಲಿ ಜಾತಿ ಆಧಾರಿತ ರಾಜಕೀಯ ಇಲ್ಲ. ನಾನೂ ಒಕ್ಕಲಿಗನೇ, ಕ್ಷೇತ್ರದಲ್ಲಿ ಒಕ್ಕಲಿಗರ ಪಾಳೆಗಾರನಾಗಲು ಯಾರಿಂದಲೂ ಸಾಧ್ಯವಿಲ್ಲ. ಇಲ್ಲಿ ಕಾಂಗ್ರೆಸ್‌ಗೆ ತಳವೇ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಆರ್.ಆರ್.ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಶನಿವಾರ ಪ್ರಚಾರ ನಡೆಸಿ ಮಾತನಾಡಿದ ಅವರು, ಆರ್.ಆರ್.ನಗರದಲ್ಲಿ ಬಂಡೆ ಆಟ, ಕನಕಪುರ ಆಟ ನಡೆಯುವುದಿಲ್ಲ. ಇಲ್ಲಿ ರಾಜರಾಜೇಶ್ವರಿ ನಗರದ ಆಟನೇ ನಡೆಯುವುದು. ಬಂಡೆ ಸಂಸ್ಕೃತಿಗೆ ಈ ಕ್ಷೇತ್ರದ ಜನ ಬೆಲೆ ಕೊಡುವುದಿಲ್ಲ. ಆರ್.ಆರ್.ನಗರದ ಜನ ಸಂಸ್ಕೃತರು, ಪ್ರಜ್ಞಾವಂತರು. ಇಲ್ಲಿನ ಜನ ವಿನಯಕ್ಕೆ, ಸಂಸ್ಕೃತಿಗೆ ಬೆಲೆ ಕೊಡುತ್ತಾರೆ. ದಾದಾಗಿರಿ, ಗೂಂಡಾಗಿರಿಗೆ ಬೆಲೆ ಕೊಡುವುದಿಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್‌ನ ಅಭ್ಯರ್ಥಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಿದ್ದು ಚುನಾವಣಾ ಆಯೋಗವೇ ಹೊರತು ಸರ್ಕಾರವಲ್ಲ. ಕಾಂಗ್ರೆಸ್‌ಗೆ ಅಷ್ಟೂಸಾಮಾನ್ಯ ಜ್ಞಾನ ಇಲ್ಲವೇ? ನಾಮಪತ್ರ ಸಲ್ಲಿಸುವ ವೇಳೆ ಎಷ್ಟುಜನ ಇರಬೇಕು ಎಂದು ಆಯೋಗವು ಸೂಚನೆ ನೀಡಿದೆ. ಅದನ್ನು ಪಾಲನೆ ಮಾಡಬೇಕು. ಅದು ಬಿಟ್ಟು ಎಷ್ಟುಜನ ಬೇಕಾದರೂ ಹೋಗಿ ನಾಮಪತ್ರ ಸಲ್ಲಿಸಬಹುದಾ? ನಾವೆಲ್ಲಾ ಮೂರು ಜನ ಮಾತ್ರ ಹೋಗಿ ನಾಮಪತ್ರ ಸಲ್ಲಿಸಿದ್ದೇವೆ. ಕಾನೂನು ನಮಗೊಂದು, ಅವರಿಗೊಂದಾ? ಅವರಿಗಾಗಿ ಸಂವಿಧಾನ ಬದಲಿಸಬೇಕಾ? ಎಂದು ಖಾರವಾಗಿ ಪ್ರಶ್ನಿಸಿದರು.
200 ಜೆಡಿಎಸ್ ಮುಖಂಡರು ಕಾಂಗ್ರೆಸ್‌ಗೆ : ಇದೇ ನನ್ನ ರಾಜಕೀಯ ಎಂದ ಡಿಕೆಶಿ
ಆರ್.ಆರ್.ನಗರದ ಜನತೆ ಮುನಿರತ್ನ ಮುಖ ನೋಡಿ ಕಾಂಗ್ರೆಸ್ ಗೆಲ್ಲಿಸಿದ್ದರೆ ವಿನಃ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಮುಖ ನೋಡಿ ಕಾಂಗ್ರೆಸ್ ಗೆಲ್ಲಿಸಿರಲಿಲ್ಲ. ಬಿಜೆಪಿಗೆ ಜನ ಬೆಂಬಲ ನೀಡಿದ್ದು, ಇಲ್ಲಿ ನಮಗೂ, ಜೆಡಿಎಸ್‌ಗೂ ಸ್ಪರ್ಧೆ. ಕಾಂಗ್ರೆಸ್‌ನವರು ಜೆಡಿಎಸ್ ಸೇರುತ್ತಿದ್ದಾರೆ. ಇಲ್ಲಿ ಬಿಜೆಪಿ-ಜೆಡಿಎಸ್‌ಗೆ ಹೋರಾಟ ಇದೆ. ಆರ್.ಆರ್.ನಗರ ಕ್ಷೇತ್ರದ ಉಸ್ತುವಾರಿಯನ್ನು ಪಕ್ಷದ ಮುಖಂಡರು ನನಗೆ ವಹಿಸಿರುವುದರಿಂದ ಮುನಿರತ್ನ ಅವರನ್ನು ಗೆಲ್ಲಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದರು.
‘ಕಾಂಗ್ರೆಸ್‌ನವರು ಬಂದೇ ಇಲ್ಲ’
ಪ್ರವಾಹ ಪೀಡಿತ ಕಲಬುರಗಿಯಲ್ಲಿ ಸತತ 8-10 ಗಂಟೆಗಳ ಕಾಲ ನೆರೆ ಪರಿಶೀಲನೆ ನಡೆಸಿದ್ದು, ಕಾಂಗ್ರೆಸ್‌ನ ದೊಡ್ಡ ನಾಯಕರು ಎನಿಸಿಕೊಂಡವರು ಯಾರೂ ಬಂದೇ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.
ನಾಮಕಾವಸ್ತೆ ನೆರೆ ಪರಿಶೀಲನೆ ನಡೆಸಲಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಶನಿವಾರ ಪ್ರತಿಕ್ರಿಯೆ ನೀಡಿದ ಅವರು, ಕಲಬುರಗಿ, ಯಾದಗಿರಿ ಜಿಲ್ಲೆಯಲ್ಲಿಯೂ ಚುನಾವಣಾ ನೀತಿ ಸಂಹಿತೆ ಇದೆ. ಅಲ್ಲಿ ವಾಸ್ತವ್ಯ ಹೂಡಲು ಸಾಧ್ಯವಿಲ್ಲ. ಪ್ರವಾಹ ಮತ್ತು ಕೊರೋನಾ ಹಿನ್ನೆಲೆಯಲ್ಲಿ ಜಿಲ್ಲೆಗಳಿಗೆ ಭೇಟಿ ನೀಡಬಹುದು. ಸೋಮವಾರ ಬೆಳಗಾವಿ ಜಿಲ್ಲೆಯ ನೆರೆ ಪರಿಶೀಲನೆ ಮಾಡುತ್ತೇನೆ. ಪ್ರತಿಪಕ್ಷದವರು ಆರೋಪ ಮಾಡುತ್ತಾರಲ್ಲ, ಅವರು ಯಾರು ಕಲಬುರಗಿ, ಯಾದಗಿರಿಗೆ ಬಂದಿರಲಿಲ್ಲ. ನಾವೇ ಮೊದಲು ಅಲ್ಲಿಗೆ ಹೋದವರು. ನಮ್ಮ ಪಕ್ಷದ ಶಾಸಕರು ಬಂದಿದ್ದರು ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.