ಡ್ರಗ್ಸ್‌ ಮಾಫಿಯಾ: ಆರೋಪಿ ಜೊತೆಗಿನ ಫೋಟೋಗೆ ಸ್ಪಷ್ಟನೆ ಕೊಟ್ಟ ಸಚಿವ ಅಶೋಕ್

By Suvarna NewsFirst Published Sep 14, 2020, 3:49 PM IST
Highlights

ಡ್ರಗ್ಸ್​ ಕೇಸ್​ನಲ್ಲಿ ಸ್ಯಾಂಡಲ್​ವುಡ್​ನ ನಟಿಯರಿಬ್ಬರು ಸೇರಿ ಅವರ ಆಪ್ತರನ್ನು ಸಿಸಿಬಿ ಬಂಧಿಸುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಡ್ರಗ್ಸ್​ ಮಾಫಿಯಾದಲ್ಲಿ ರಾಜಕಾರಣಿಗಳ ನಂಟಿನ ಬಗ್ಗೆಯೂ ಗುಮಾನಿ ಇದ್ದು, ಡ್ರಗ್ಸ್​ ಪೆಡ್ಲರ್​ಗಳ ಜತೆಗೆ ಪ್ರಮುಖ ನಾಯಕರು ಇರುವ ಫೋಟೋಗಳು ಒಂದೊಂದೇ ವೈರಲ್​ ಆಗುತ್ತಿವೆ.

ಬೆಂಗಳೂರು, (ಸೆ.14): ಕಂದಾಯ ಸಚಿವ ಆರ್. ಅಶೋಕ್ ಜೊತೆ ಡ್ರಗ್ಸ್ ಮಾಫಿಯಾ ಆರೋಪಿ ರಾಹುಲ್ ಇರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ತಮ್ಮ ಫೋಟೋ ಬಗ್ಗೆ ಇಂದು (ಸೋಮವಾರ) ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್.‌ ಅಶೋಕ್, ನನಗೂ ರಾಹುಲ್ ಗೂ ಯಾವುದೇ ಸಂಬಂಧವಿಲ್ಲ. ಕಾರ್ಯಕರ್ತನ ಮನೆಯಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಹೋದಾಗ ಆತ ತೆಗೆಸಿಕೊಂಡ ಫೋಟೋ ಅದು ಎಂದು ಸ್ಪಷ್ಟಪಡಿಸಿದರು.

'ಈ ಫೋಟೋ ಏನನ್ನು ಹೇಳುತ್ತೆ? ಜನ್ಮಜನ್ಮಾಂತರದ ಸಂಬಂಧ ಅನ್ನುತ್ತೆ' 

ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ರಾಹುಲ್ ಗೆ ರಾಜಕೀಯ ಹಾಗೂ ಪೊಲೀಸ್ ಅಧಿಕಾರಿಗಳ ಜತೆ ನಿಕಟ ಸಂಬಂಧವಿದೆ ಎಂಬ ಅಂಶ ಬಯಲಾಗಿದೆ. ಇದರ ಬೆನ್ನಲ್ಲೇ ರಾಹುಲ್ ಜೊತೆಗೆ ಆರ್. ಅಶೋಕ್, ಬೆಂಗಳೂರು ಮಾಜಿ ಕಮೀಷನರ್ ಭಾಸ್ಕರ್ ರಾವ್ ಇರುವ ಫೋಟೋಗಳು ಭಾರಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಕಂದಾಯ ಸಚಿವರು, ಫೋಟೋ ಇದ್ದ ಮಾತ್ರಕ್ಕೆ ಅಪರಾಧಿನಾ? ಎಂದು ಪ್ರಶ್ನಿಸಿದರು.

ಭಾಸ್ಕರ್ ರಾವ್ ಜತೆಗೂ ರಾಹುಲ್ ಇರುವ ಫೋಟೋ ಇದೆ. ಪ್ರಶಾಂತ್ ಸಂಬರಗಿ ಜತೆಯೂ ರಾಹುಲ್ ಫೋಟೋ ತೆಗೆಸಿಕೊಂಡಿದ್ದಾನೆ. ಇನ್ನು ಮಾಸ್ಕ್ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ರಾಗಿಣಿ ಬಂದಿದ್ದರು. ಅವರ ಜತೆಗೂ ನಮ್ಮ ಫೋಟೋ ಇದೆ. ಸಿಎಂ ಯಡಿಯೂರಪ್ಪ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಜತೆಯೂ ರಾಗಿಣಿ ಫೋಟೋ ತೆಗೆಸಿಕೊಂಡಿದ್ದಾರೆ ಹಾಗಂದ ಮಾತ್ರಕ್ಕೆ ಎಲ್ಲರೂ ಅಪರಾಧಿಗಳೇ? ಸಾರ್ವಜನಿಕ ಬದುಕಿನಲ್ಲಿದ್ದಾಗ ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯ. ಫೋಟೋ ತೆಗೆಸಿಕೊಂಡಿಲ್ಲ ಎಂದರೆ ಗರ್ವ ಅಂತಾರೆ ಎಂದು ಹೇಳಿದರು.

click me!